ಅಥವಾ

ಒಟ್ಟು 23 ಕಡೆಗಳಲ್ಲಿ , 12 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ. ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ. ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು ? ಉಂಬಡೆ ಒಡಲಿಲ್ಲ ಲಿಂಗಾರ್ಚನೆಯಿಲ್ಲ, ಅಂಗಭೋಗಕ್ಕೆ ಕರಚರಣಂಗಳಿಲ್ಲ. ಅಂಗವಿಲ್ಲೆಂಬ ಮಾತು ನಿಮಗೇಕೆ ? ಸುಡು, ಭಂಗ. ಲಿಂಗ ನಿರಾಳ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ. ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ. ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು. ರೂಪು ರುಚಿ ದೃಷ್ಟವಾಗಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ದೀಪದ ಕೊನೆಯ ಮೊನೆಯ ಮೇಲಿದ್ದುದು, ತಮವೋ, ಬೆಳಗೋ ? ಮನದ ಕೊನೆಯ ಮೇಲಿದ್ದುದು, ಅರಿವೊ, ಮರವೆಯೋ ? ಬೀಜದ ಕೊನೆಯ ಮೊನೆಯ ಮೇಲಿದ್ದುದು, ಮುಂದಕ್ಕದು ಬೀಜವೋ, ಸಂದೇಹವೋ ? ಅರಿವುದಕ್ಕೆ ತೆರಹಿಲ್ಲ, ಮರೆವುದಕ್ಕೆ ಒಡಲಿಲ್ಲ. ಅದರ ಹೂ ಮುಡಿಯಲ್ಲಿದ್ದು ಬಿಡುಗಡೆಯಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ ದಗ್ಧಪಟನ್ಯಾಯವಾಗಿ. ಉಂಡಡೆ ಉಪಾಧಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ ಯಥಾಲಾಭಸಂತುಷ್ಟನಾಗಿ. ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ. ಇದಕ್ಕೆ ಶ್ರುತಿ: ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ ಪ್ರಾಣಲಿಂಗದ್ವಯೋರ್ಭೇದೋ ನ ಭೇದಶ್ಚ ನ ಸಂಶಯಃ ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ಲಿಂಗಪ್ರಾಣಿಗಳಾಗಿ ಅಂಗವ ಮರೆಗೊಂಡು ಎಂತಿರ್ದಡಂ ಎಂತು ನಡೆದಡಂತೆ ಸಂತ.
--------------
ಆದಯ್ಯ
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಇಡಾಪಿಂಗಳ ಮಧ್ಯದಲ್ಲಿ ಅನಿಲ ತುಂಬಿ, ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು. ಅರಿವಡೆ ತಲೆಯಿಲ್ಲ, ಹಿಡಿವಡೆ ಒಡಲಿಲ್ಲ, ಕೂಡಲಸಂಗಮದೇವಾ, ನಿಮ್ಮ ಶರಣನ ಪರಿ ಇಂತುಟು, ಅರಿದರಿದು.
--------------
ಬಸವಣ್ಣ
ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ, ಸಂದೇಹಪದದಲ್ಲಿ ಅರಿವುದಿನ್ನೇನೋ? ಒಂದನರಿತು, ಒಂದ ಮರೆತು, ಬೇರೊಂದ ಕಂಡಹೆನೆನುವ ಒಡಲದೇನೋ? ಆ ದ್ವಂದ್ವವಳಿದು, ನಿಂದ ನಿಜವೆ ಸಂದೇಹಕ್ಕೆ ಒಡಲಿಲ್ಲ ನಿಂದುದು, ಷಡುಸ್ಥಲಭರಿತ ಪರಿಪೂರ್ಣ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾಮ ಘಟ್ಟಿಸಿಯಲ್ಲದೆ ಕರೆದಡೆ ನುಡಿಯಬಾರದು. ಕ್ರೀ ಶುದ್ಧತೆಯಾಗಿ ನಿಂದಲ್ಲದೆ ಅರಿಯಬಾರದು. ಅರಿವಿಂಗೆ ಆಶ್ರಯಿಸುವುದಕ್ಕೆ ಒಡಲಿಲ್ಲ. ಅರಿವು ಕುರುಹಿನಲ್ಲಿ ವಿಶ್ರಮಿಸಿ ಹಣ್ಣಿನ ಸಿಪ್ಪೆಯ ಮರೆಯಲ್ಲಿ ಭಿನ್ನರುಚಿ ನಿಂದು ಸವಿದಾಗ ಸಿಪ್ಪೆ ನಿಂದು ರಸವೊಪ್ಪಿತ್ತು. ಆ ಚಿತ್ತವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಂಗಳಿಂದ ಕಂಡೆಹೆನೆಂದಡೆ, ಅಲ್ಲಿಗೆ ಪರಿಪೂರ್ಣ ನೀನು. ಚಿತ್ತದಿಂದ ನೆನೆದೆಹೆನೆಂದಡೆ, ಅಲ್ಲಿಗೆ ಅಚ್ಚೊತ್ತಿದಂತಿಹೆ. ನಾ ನೀನೆಂಬ ಭಾವ ಬೇರಾದಲ್ಲಿ ನೆನಹಿಂಗೆ ಒಡಲಿಲ್ಲ. ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ, ನಡೆದಡೆ ಗಮನವಿಲ್ಲ, ನುಡಿದಡೆ ಶಬ್ದವಿಲ್ಲ. ದಗ್ಧಪಟನ್ಯಾಯದ ಹಾಗೆ, ಉಂಡಡೆ ಉಪಾಧಿಯಿಲ್ಲ ಉಣ್ಣದಿದ್ದಡೆ ಕಾಂಕ್ಷೆಯಿಲ್ಲ. ಯಥಾಲಾಭ ಸಂತುಷ್ಟನಾಗಿ ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ ಅರಿವಿಲ್ಲ ಮರಹಿಲ್ಲ ತಾನೆಂಬ ನೆನಹಿಲ್ಲವಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಮುಂದೆ ಏನೂ ಎನಲಿಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ; ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ. ನಾಕಡಿಯನೈದೂದು, ಲೋಕದ ಕಡೆಯನೆ ಕಾಬುದು, ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೆ ಒಡಲಿಲ್ಲ. ಅಹಮೆಂಬ ಗಾರುಡಿಗನ ನುಂಗಿತ್ತು ಕೂಡಲಸಂಗನ ಶರಣರಲ್ಲದುಳಿದವರ.
--------------
ಬಸವಣ್ಣ
ಲಿಂಗದಿಂದ ಅರಿವನರಿದೆಹೆನೆಂದಡೆ, ಆತ್ಮಂಗೆ ಸೂತಕ. ಅರಿವಿನಿಂದ ಉಭಯವ ಕಂಡೆಹೆನೆಂದಡೆ, ಅರಿವಿಂಗೆ ಸೂತಕ. ಅರಿದ ಅರಿವು, ಆ ಅರಿವುದಕ್ಕೆ ಮುನ್ನವೆ ಕುರುಹುಗೊಂಡ ಮತ್ತೆ ಅರಿವುದಕ್ಕೆ ಒಡಲಿಲ್ಲ, ಮರೆವುದಕ್ಕೆ ತೆರಹಿಲ್ಲ. ಆದಿಶೂನ್ಯಕ್ಕೆ ಮೊದಲೆ, ನಾದಶೂನ್ಯವಾದ ಮತ್ತೆ ಕಾಮಧೂಮ ಧೂಳೇಶ್ವರನೆಂದೆನಲಿಲ್ಲ.
--------------
ಮಾದಾರ ಧೂಳಯ್ಯ
ಮನ ಸಂದಲ್ಲಿ ಬೇರೊಂದು ನೆನಹುಂಟೆ ? ನೆನಹು ನಿಷ್ಪತಿಯಾದಲ್ಲಿ ಉಭಯವೆಂಬುದಕ್ಕೆ ಒಡಲಿಲ್ಲ, ಅದು ಸಲ್ಲದ ನೇಮ. ಗುಹೇಶ್ವರಲಿಂಗ ಅಲ್ಲಿ ಇಲ್ಲವೆಂಬುದಕ್ಕೆ ಅದೇ ಕುರುಹು.
--------------
ಅಲ್ಲಮಪ್ರಭುದೇವರು
ಜಪವೇಕೊ ಅಪ್ರಮಾಣಂಗೆ ? ತಪವೇಕೊ ಚತುರ್ವಿಧಪ[ಥೆ]ಕ್ಕೆ ಹೊರಗಾದಾತಂಗೆ ? ನೇಮವೇಕೊ ನಿತ್ಯತೃಪ್ತಂಗೆ ? ನಿತ್ಯವೇಕೊ ಅಷ್ಟವಿಧಾರ್ಚನೆ ಷೋಡಶೋಪಚಾರಭರಿತಂಗೆ ? ಜಪಕ್ಕೊಳಗಾದ ರುದ್ರ, ತಪಕ್ಕೊಳಗಾದ ವಿಷ್ಣು, ನೇಮಕ್ಕೊಳಗಾದ ಬ್ರಹ್ಮ, ನಿತ್ಯಕ್ಕೊಳಗಾದ ಈಶ್ವರ, ಉಪಚರಣೆಗೊಳಗಾದ ಸದಾಶಿವ. ಇಂತಿವರೆಲ್ಲರೂ ಸೃಷ್ಟಿಯ ಮೇಲಣ ತಪ್ಪಲಿಲ್ಲಿರ್ದರೇಕೆ, ಎಲ್ಲಾ ಬೆಟ್ಟವನೇರಿ ? ಇಂತಿವರ ಬಟ್ಟೆಯ ಮೆಟ್ಟದೆ ನಿಶ್ಚಯವಾದ ಶರಣ, ಇಹದವನಲ್ಲ, ಪರದವನಲ್ಲ. ಆ ಶರಣ ಉಡುವಲ್ಲಿಯೂ ತಾನೆ, ತೊಡುವಲ್ಲಿಯೂ ತಾನೆ, ಕೊಡುವಲ್ಲಿಯೂ ತಾನೆ, ಮುಟ್ಟುವಲ್ಲಿಯೂ ತಾನೆ, ತಟ್ಟುವಲ್ಲಿಯೂ ತಾನೆ ಬೇರೊಂದಿಲ್ಲವಾಗಿ. ಕ್ಷೀರವ ಕೂಡಿದ ಜಲವ ಭೇದಿಸಬಹುದೆ ಅಯ್ಯಾ ? ವಾರಿಧಿಯ ಕೂಡಿದ ಸಾರವ ಬೇರೆ ರುಚಿಸಲುಂಟೆ ಅಯ್ಯಾ ? ಆರಡಿ ಕೊಂಡ ಗಂಧವ ಬೇರು ಮಾಡಿ ಮುಡಿಯಲಿಲ್ಲ. ತೋರಲಿಲ್ಲದ ರೂಪಿಂಗೆ ಆರಾಧಿಸುವುದಕ್ಕೆ ಬೇರೆ ಒಡಲಿಲ್ಲ. ಸಾಕಾರಕ್ಕೆ ಆರೈಕೆಯಿಲ್ಲದೆ ಸತ್ತು ರೂಪಾದಲ್ಲಿಯೆ, ಇ[ಹದ]ಲ್ಲಿ ಪರದಲ್ಲಿ ಪರಿಣಾಮಿಗಳಾಗಲಿ, ಇಂತಿವಕ್ಕೆ ದೂರವಾಗಿ ಬಾಳುಗೆಟ್ಟು ಜಾಳಾದೆ, ಹೇಳಹೆಸರಿಲ್ಲದಂತಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->