ಅಥವಾ

ಒಟ್ಟು 1059 ಕಡೆಗಳಲ್ಲಿ , 103 ವಚನಕಾರರು , 721 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ. ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ- ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ ದ್ವಾದಶಮಂತ್ರವ ಕಲಿಸಿದ. ಒಂದು ಮಂತ್ರದಿಂದ ಮತ್ರ್ಯಲೋಕವ ಸುಟ್ಟೆ. ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ. ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ. ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ. ಆರು ಮಂತ್ರದಿಂದ ಆರು ವರ್ಣವ ಸುಟ್ಟೆ. ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕÀರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಈಶ್ವರನ ಕಾಬುದೊಂದಾಸೆಯುಳ್ಳೊಡೆ ಪರದೇಶಕ್ಕೆ ಹೋಗಿ ಬಳಲದಿರು, ಕಾಶಿಯಲ್ಲಿ ಕಾಯವ ವಿನಾಶವ ಮಾಡಲುಬೇಡ. ನಿನ್ನಲ್ಲಿ ನೀ ತಿಳಿದು ನೋಡಾ, ಸರ್ವೇಶ ಮುಳ್ಳಗುತ್ತ ತೆರಹಿಲ್ಲೆಂದಡೆ, ಒಂದು ಗೋಂಟ ಸಾರಿರ್ದನೆ ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ! ಕುಂದು-ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ, ಕೂಡಲಸಂಗನ ಶರಣರ ಎನ್ನಾಳ್ದರೆಂಬೆ. 256
--------------
ಬಸವಣ್ಣ
ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚÀಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ ತನ್ನ ನೆಳಲಿಂಗೆ ತಾನೆ ಹೋರಿ ಸಾವಂತೆ ಆನೆಯ ಗತಿ ಆನೆಯ ಮತಿ. ಆನೆಯಹುದು, ಆನೆಯಲ್ಲ, ಅದನೇನೆಂಬೆ ? ನೀನೆನ್ನ ಕರಸ್ಥಲದಲ್ಲಿ ಸಿಲ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ ? ನಾನು ನೀನಲ್ಲದ ತೆರಹಿಲ್ಲ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ, ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ. ಸುವರ್ಣ ಒಂದು ಆಭರಣ ಹಲವಾದಂತೆ. ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಮತ್ತಿದಿರು ದೈವವುಂಟೆಂದು ಗದಿಯಬೇಡ. ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.
--------------
ಅರಿವಿನ ಮಾರಿತಂದೆ
ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->