ಅಥವಾ

ಒಟ್ಟು 70 ಕಡೆಗಳಲ್ಲಿ , 21 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ. ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು. ಅವರ ಸಂಗದಲ್ಲಿರಲೊಲ್ಲದೆ ಒಬ್ಬಳ ಬ್ರಹ್ಮಂಗೆ ಕೊಟ್ಟೆ, ಒಬ್ಬಳ ವಿಷ್ಣುವಿಂಗೆ ಕೊಟ್ಟೆ, ಒಬ್ಬಳ ರುದ್ರಂಗೆ ಕೊಟ್ಟೆ, ಒಬ್ಬಳ ಈಶ್ವರಂಗೆ ಕೊಟ್ಟೆ, ಮತ್ತೊಬ್ಬಳ ಸದಾಶಿವಂಗೆ ಕೊಟ್ಟು ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರೊಳಗಣ ದೇವಾಲಯದಲ್ಲಿ ಐವರು ಹೊಲೆಯರು ಹೊಕ್ಕು, ದೇವರ ಪೂಜಿಸುತ್ತೈದಾರೆ. ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು, ದೇವರೊಳಗದೆ. ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಒಬ್ಬ ಕನ್ನೆಯ ಮನೆಯೊಳಗೆ ಐವರು ಪುರುಷರ ಕಂಡೆನಯ್ಯ. ಆ ಐವರು ಪುರುಷರ ಒಂದು ಇರುವೆ ನುಂಗಿತ್ತು ನೋಡಾ. ಆ ಇರುವೆಯ ನಿರ್ವಯಲು ನುಂಗಿ ನಿಃಶಬ್ದವಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು ಪರಿಯಂತರ ಸತಿಯರುಂಟು. ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ? ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು ಮೂರಾರು ಗಂಡರ ಮದುವೆ ಮಾಡಿ ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ ಎನಗೆ ಕೊಟ್ಟರು. ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ, ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ, ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ, ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ, ಇಂತೀ ಪುರುಷರ ಕೂಡಿ ಒಗತನವ ಮಾಡಿ, ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು ನಾಯೆತ್ತ ಹೋದೆನೆಂದರಿಯನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದ ಅಡವಿಯಲ್ಲಿ, ಬೇರೊಂದು ಮನೆಯ ಮಾಡಿ ಐವರು ಹಾರುವರು ಕೂಡಿ, ಮೂವರು ಗೆಯ್ವರು ಕೂಡಿ ಆರಂಬಗೆಯ್ಯುತ್ತಿರಲಾಗಿ ಬೆಳೆ ಬೆಳೆಯಿತ್ತು. ಮೃಗ ಫಲವಾಗಲೀಸವು. ಬೇಡರ [ಅ]ಗಡ ಘನವೆಂದು ಬೀಡ ಬಿಟ್ಟಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಹೇಳಿಹೆನೆಂದು.
--------------
ಬಿಬ್ಬಿ ಬಾಚಯ್ಯ
ಐವರು ನಾರಿಯರು ತ್ರಿಕೂಟದ ಗಿರಿಯನೇರಿ ಚಿದಂಗನೆಯ ಸಂಗದಿಂದ ನಿಶ್ಚಿಂತ ನಿರಾಕುಳ ನಿರ್ಭರಿತವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ : ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು. ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ. ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು. ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ. ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು. ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ. ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ. ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ. ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಒಂಬತ್ತು ಮನೆಯೊಳಗೆ ಸುಳಿದಾಡುವ ಮಾನವಂಗೆ ಐವರು ಮಕ್ಕಳು ಹುಟ್ಟಿದರು ನೋಡಾ ! ಮೇಲಿಂದ ಒಬ್ಬ ಸತಿಯಳು ಐವರು ಮಕ್ಕಳ ಕೂಡಿಕೊಂಡು ಆ ಮಾನವನ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವರು ಅಂಗನೆಯರು ಒಂ¨ತ್ತು ಮನೆಯ ಬಾಗಿಲವ ಮಾಡಿಕೊಂಡು ಕುಂಭಿನಿಯ ಶಿವಾಲಯಕ್ಕೆ ಹೋಗಿ ಶಂಭುಲಿಂಗಾರ್ಚನೆಯ ಮಾಡಿ ಗಗನಂಬರಗಿತ್ತಿಯರಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಿಮಾಚಲದ ತಳದಲ್ಲಿ, ಮಹೀತಳದ ಮಧ್ಯದಲ್ಲಿ, ಹುಟ್ಟಿದಳೊಬ್ಬ ರಾಕ್ಷಸಿ. ಮುಂದೆ ಮೂವರು ಮಕ್ಕಳು, ಹಿಂದೆ ಐವರು ಒಡಹುಟ್ಟಿದವರು. ತಂದೆ ಎಡದಲ್ಲಿ, ತಾಯಿ ಬಲದಲ್ಲಿ, ಬಂಧುಗಳೆಲ್ಲರು ಹಿಂದೆ ಮುಂದೆ ಸುತ್ತಿ, ರಾಕ್ಷಸಿ ಮುಂದಳ ಹಿಂದಳ ಸುತ್ತಿಪ್ಪ ಬಂಧುಗಳ ಒಂದೆ ಬಾರಿ ನುಂಗಿದಳು. ಕೈಗೆ ಮೈಯವಳಲ್ಲ, ಮನಕ್ಕೆ ಸಂಶಯದವಳಲ್ಲ. ಇವಳ ಕೊಂದಡೆ ಸಂಹಾರಕ್ಕೆ ಇಲ್ಲ. ಇವಳಿದ್ದಡೆ ಎನ್ನ ಮನಕ್ಕೆ ಭಯಂಕರ. ಈ ಭೀತಿಯ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಉದಯಕಾಲದಲ್ಲಿ ಒಬ್ಬ ಮದಲಿಂಗನು ಹಸೆಯ ಜಗುಲಿಯ ಮೇಲೆ ಕುಳಿತು ಐವರು ಸತಿಯರ ಕೂಡಿಕೊಂಡು, ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು, ಪರಕೆ ಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಜ್ಞೇಯಚಕ್ರದೊಳಗೆ ಗಂಭೀರನಿಪ್ಪ ಬೆಡಗ ನೋಡಾ. ಆ ಗಂಭೀರನು ಐವರು ಶಕ್ತಿಯರ ಕೂಡಿಕೊಂಡು ನಿರಾಲಂಬಲಿಂಗವನಾಚರಿಸುವುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದಬಿಂದುಕಲೆಗಳಿಂದತ್ತತ್ತ ಮಹಾಪುರುಷನ ಕಂಡೆನಯ್ಯ. ಆ ಪರುಷನ ಸಂಗದಿಂದ ಒಬ್ಬ ಸತಿಯಳು ಹುಟ್ಟಿದಳು ನೋಡಾ. ಆ ಸತಿಯಳ ಸಂಗದಲ್ಲಿ ಐವರು ಮಕ್ಕಳು ಹುಟ್ಟಿ, ಇಪ್ಪತ್ತೈದು ಗ್ರಾಮಗಳಲ್ಲಿ ಸುಳಿದಾಡುತಿಪ್ಪರು ನೋಡಾ. ಆ ಸುಳುವ ನಿಲವು ನುಂಗಿತು, ಆ ನಿಲವ ಇರುವೆ ನುಂಗಿತು, ಆ ಇರುವೆಯ ಧೂಮ್ರ ನುಂಗಿತು, ಆ ಧೂಮ್ರವ ನಿರ್ವಯಲು ನುಂಗಿತು, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ; ನಾಲ್ಕು ಕೋಲ ವಿಷ್ಣುವಿಂಗೆ ಆಳದು ಕೊಟ್ಟೆ; ಐದು ಕೋಲ ರುದ್ರಂಗೆ ಅಳದು ಕೊಟ್ಟೆ; ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ; ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ. ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ ಅಳಲುತ್ತ ಬಳಲುತ್ತ ಒಳಗಾದರು. ಇಂತೀ ಒಳ ಹೊರಗ ಸೋಧಿಸಿಕೊಂಡು ಅಳಿವು ಉಳಿವಿನ ವಿವರವನರಿಯಬೇಕು, ಧಾರೇಶ್ವರಲಿಂಗವನರಿವುದಕ್ಕೆ.
--------------
ಕಾಮಾಟದ ಭೀಮಣ್ಣ
ಇನ್ನಷ್ಟು ... -->