ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ. ಅರುವತ್ತನಾಲ್ಕು ಶೀಲವ್ರತ. ಮೂವತ್ತಾರು ಆಚಾರವ್ರತ. ತ್ರಿವಿಧ ಕ್ರೀಭಾವ ನೇಮವ್ರತ. ಇಂತಿವರಲ್ಲಿ ಶುದ್ಧಾತ್ಮನಾಗಿ ಅರಿದುದೇ ಜೀವನ್ಮುಕ್ತವ್ರತ. ಐಘಟದೂರ ರಾಮೇಶ್ವರಲಿಂಗದಲ್ಲಿ ಸರ್ವ ಅವಧಾನಿಯ ಕ್ರೀ ಶುದ್ಧತೆ.
--------------
ಮೆರೆಮಿಂಡಯ್ಯ
ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳ ತನ್ನೊಳಗುಳ್ಳ ಭಕ್ತಿಯಲ್ಲರಿದರ್ಚಿಸಬಲ್ಲರೆ ಶರಣ. ಆ ಶರಣ ಶಿವನಂತಿಪ್ಪ ನೋಡಿರೆ. ಕಾಲತ್ರಿಪುರವ ಸುಟ್ಟು ಬೂದಿಯನು ಸರ್ವಾಂಗದಲ್ಲಿ ಧರಿಸಿರ್ದ ನೋಡಿರೆ. ಸರ್ಪಾಭರಣಭೂಸಿತನಾಗಿ ಚಂದ್ರನ ಮಸ್ತಕದಲ್ಲಿ ತಳೆದುಕೊಂಡಿರ್ದ ನೋಡಿರೆ. ಬ್ರಹ್ಮಕಪಾಲ ಕೈಯಲ್ಲಿ ಪಿಡಿದು, ಮಾಯೆಯ ಗೆಲಿದ ನೋಡಿರೆ. ನಾರಾಯಣನ ಕಣ್ಣ ಪಾದದಲ್ಲಿರಿಸಿ, ಗಂಗೆ ಗೌರಿಯ ಸಂಪರ್ಕ ಒಳಹೊರಗೆ ಪರಿಪೂರ್ಣ ನೋಡಿರೆ, ತನ್ನೊಲುಮೆಯ ಇರವೆಯಲ್ಲಿ ಕೈಲಾಸಮಧ್ಯಪೀಠ ಪ್ರಕಾಶದೊಳಗು ನೋಡಿರೆ ಹುಟ್ಟಿ ಬೆಳೆದುದ ಸವರಿಬಿಟ್ಟು ಕಟ್ಟಾಳುಯೆನಿಸಿ ಕಾಣುವ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಕಾಶಿ, ರಾಮೇಶ್ವರ, ಕೇದಾರ, ಗೋಕರ್ಣ, ಶ್ರೀಶೈಲಪರ್ವತ, ಹಂಪೆ, ಅಮರಗುಂಡ, ಕಲ್ಯಾಣ, ಸೊನ್ನಲಾಪುರ, ಗಯ, ಪ್ರಯಾಗ, ಕೊಲ್ಲಿಪಾಕ, ಗಂಗಾಕ್ಷೇತ್ರ, ಶಿವಗಂಗೆ, ನಂಜನಗೂಡು, ಉಳುವೆ, ಶಂಭುಲಿಂಗನ ಬೆಟ್ಟ, ಕುಂಭಕೋಣೆ, ಕಂಚಿ, ಕಾಳಹಸ್ತಿ, ನವನಂದಿಮಂಡಲ, ಕುಮಾರಪರ್ವತ ಮೊದಲಾದ ಕ್ಷೇತ್ರಂಗಳಲ್ಲಿ, ಕುಂತಣದೇಶ ಮೊದಲಾದ ಐವತ್ತಾರು ದೇಶಂಗಳಲ್ಲಿ ನಿಮ್ಮ ಚರಣಕಮಲವ ಕಂಡು ಸದ್ಭಕ್ತಿಯ ಮಾಡದೆ, ವೃಥಾ ಭ್ರಾಂತಿನಿಂದ ಕಲ್ಲು ಮುಳ್ಳು ಮಣ್ಣಿನಲ್ಲಿ ತಿರಿಗಿ ತಿರಿಗಿ ಕೆಟ್ಟಿತಯ್ಯ ಎನ್ನ ಪಾದೇಂದ್ರಿಯವು. ಇಂತು ಕೆಡಗುಡದೆ ನಿಮ್ಮ ಸದ್ಭಕ್ತ ಹರಳಯ್ಯಗಳ ಮನೆಯ ಬಾಗಿಲ ಕಾಯ್ವಂತೆ ಮಾಡಯ್ಯ. ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರಿಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಇನ್ನು ಆ ಪಿಂಡಮಧ್ಯದಲ್ಲಿಹ ಷಡುಚಕ್ರಂಗಳೊಳು ಸಪ್ತಕೋಟಿ ಮಹಾಮಂತ್ರಂಗಳ ಸಾರವಾದ ಏಕಾದಶಮಂತ್ರಂಗಳು, ತೊಂಬತ್ನಾಲ್ಕು ವ್ಯೋಮವ್ಯಾಪಿ ಪದಂಗಳು, ಪ್ರಣವ ಪಂಚಾಕ್ಷರಂ, ಅಕಾರಾದಿ ಕ್ಷಕಾರಾಂತವಾದ ಐವತ್ತಾರು ವರ್ಣಂಗಳು, ಇನ್ನೂರಿಪ್ಪತ್ನಾಲ್ಕು ಭುವನಂಗಳು, ಮೂವತ್ತಾರು ತತ್ವಂಗಳು ಪಂಚಕಲೆಗಳು ಮೊದಲಾದ ಕಲೆ ಜ್ಞಾನಂಗಳೆಲ್ಲ ಆ ಪಿಂಡಮಧ್ಯದಲ್ಲಿಹ ಚಕ್ರಂಗಳಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾನಾ ವ್ರತ ನೇಮ ಭೇದಂಗಳಲ್ಲಿ ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ, ಮೂವತ್ತೆರಡು ನೇಮ, ನಿತ್ಯಕೃತ್ಯ ಲೆಕ್ಕಕ್ಕವಧಿಯಿಲ್ಲ, ಅಗೋಚರ. ಆಚಾರವಾರಿಗೂ ಅಪ್ರಮಾಣ, ನೀತಿಯ ಮಾತಿಂಗೆ ಆಚಾರ, ಶಿವಾಚಾರವೆ ಸರ್ವಮಯಲಿಂಗ, ಪಂಚಾಚಾರಶುದ್ಧಭರಿತ, ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು.
--------------
ಅಕ್ಕಮ್ಮ
ಆರೆತ್ತಿನ ಹರದಂಗೆ ನೂರೊಂದು ಬಗೆಯಲ್ಲಿ ಕೊಳುತಿರ್ದನೊಬ್ಬ ರಾಜ. ಐವತ್ತಾರು ದೇಶದೊಳಗೆ ಹೆಂಡರ ಕುಶಲತ್ವದಿಂದೆ ಹರದ ಬಾಳಿ, ಹಿರಿಯ ಮನೆಯೊಳಗೆ ಚರಣಗಳನೂರಿ ನೆರೆಯಲು ಸಂಬಂಧವಾಯಿತ್ತು ಪ್ರಾಣಲಿಂಗ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಒಂದು ಅನಾದಿ ಮೂಲಪ್ರಣಮವೆ ಸಾಕಾರಲೀಲೆಯಧರಿಸಿ, ಚಿದಂಗ-ಚಿದ್ಘನಲಿಂಗವಾಗಿ, ಆ ಒಂದಂಗ-ಲಿಂಗವೆ ತ್ರಿವಿಧಾಂಗ ತ್ರಿವಿಧಲಿಂಗವಾಗಿ, ಆ ತ್ರಿವಿಧಲಿಂಗಾಂಗವೆ ಷಡ್ವಿಧಲಿಂಗಾಂಗವಾಗಿ, ಆ ಷಡ್ವಿಧಲಿಂಗಾಂಗವೆ ಛತ್ತೀಸಲಿಂಗಾಂಗವಾಗಿ, ಆ ಛತ್ತೀಸ ಲಿಂಗಂಗಳನೆ ಶ್ರದ್ಧಾದಿ ಛತ್ತೀಸಭಕ್ತಿಗಳಲ್ಲಿ ಕೂಟವ ಮಾಡಿ, ಇಂತು ಲಿಂಗಾಂಗ ಭಕ್ತಿಗಳನೆ ಸತ್ಕ್ರಿಯಾ, ಸಮ್ಯಜ್ಞಾನ, ಸತ್ಕಾಯಕ, ಸತ್ಪಾತ್ರಭಿಕ್ಷದಲ್ಲಿ ಸಮರಸವ ಮಾಡಿ, ಆ ಮಹಾಜ್ಞಾನವ ಸಾಧಿಸಿ, ಆ ಮಹಾಜ್ಞಾನದ ಬಲದಿಂದ ಪೃಥ್ವೀಸಂಬಂಧವಾದ ಕರ್ಮೇಂದ್ರಿಯಂಗಳು, ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಯಂಗಳು, ಅಗ್ನಿತತ್ವಸಂಬಂಧವಾದ ವಿಷಯಂಗಳು. ವಾಯುತತ್ವಸಂಬಂಧವಾದ ಪ್ರಾಣವಾಯುಗಳು, ಆಕಾಶತತ್ವಸಂಬಂಧವಾದ ಕರಣಂಗಳು, ಭಾನುತತ್ವÀಸಂಬಂಧವಾದ ಉದರವೆಂಬ ಭುತಂಗಳು, ಶಶಿತತ್ವಸಂಬಂಧವಾದ ಶ್ವೇತವರ್ಣ ಮೊದಲಾದ ವರ್ಣಂಗಳು, ಆತ್ಮತತ್ವಸಂಬಂಧವಾದ ಸಮಸ್ತನಾದಂಗಳು ಇಂತು ಸಮಸ್ತತತ್ವಂಗಳು ಕೂಡಲಾಗಿ ನಾಲ್ವತ್ತುತತ್ವವೆನಿಸುವವು. ಈ ತತ್ವಂಗಳ ಶಿವತತ್ವ, ಅನಾದಿಶಿವತತ್ವ, ಅನಾದಿನಿಷ್ಕಲಪರಶಿವತತ್ವ, ಅನಾದಿ ನಿಷ್ಕಲಪರಾತ್ಪರಶಿವತತ್ವವೆಂಬ, ಚತುರ್ವಿಧ ತತ್ವಸ್ವರೂಪ ಗುರು-ಲಿಂಗ-ಜಂಗಮ-ಪ್ರಸಾದವ ಕೂಡಿಸಿ, ಆ ಮಹಾಜ್ಞಾನದಿಂ ನೋಡಿದಲ್ಲಿ ನಾಲ್ವತ್ತುನಾಲ್ಕು ತತ್ವಸ್ವರೂಪಿನಿಂದ ಒಂದು ಚಿದಂಗವೆನಿಸುವುದಯ್ಯ. ಆ ಚಿದಂಗದ ಷಟ್ಚಕ್ರಂಗಳಲ್ಲಿ ಶ್ರೀಗುರುಲಿಂಗಜಂಗಮ ಕೃಪೆಯಿಂದ ಮೂರ್ತಿಗೊಂಡಿರುವ ಐವತ್ತಾರು ಪ್ರಣಮಂಗಳೆ ಸಾಕಾರಲೀಲೆಯಧರಿಸಿ, ನವಕೃತಿಸಂಬಂಧವಾದ ಅನಾದಿಮೂಲಪ್ರಣಮವ ಕೂಡಿ ಏಕಸ್ವರೂಪಿನಿಂದ ಐವತ್ತೇಳುಲಿಂಗಸ್ವರೂಪಪ್ರಣಮವನೊಳಕೊಂಡು ಒಂದು ಚಿದ್ಘನಲಿಂಗವೆನಿಸುವುದಯ್ಯ. ಇಂತು ಅಂಗಲಿಂಗವೆಂಬ ನೂರೊಂದು ಸ್ಥಲಕುಳಂಗಳ ವಿಚಾರಿಸಿ, ಶರಣರೂಪಿನಿಂದ ತನ್ನಾದಿ ಮಧ್ಯಾವಸಾನವ ತಿಳಿದು, ಕರ್ತುಭೃತ್ಯತ್ವದ ಸದ್ಭಕ್ತಿಯ ವಿಚಾರವನರಿದು, ದ್ವಾದಶಾಚಾರದ ವರ್ಮವನರಿದು, ಕರ್ತುಭೃತ್ಯತ್ವಾಚಾರ ಸದ್ಭಕ್ತಿಯೆಂಬ ನಿಜಸಮಾಧಿಯಲ್ಲಿ ನಿಂದು, ನಿರವಯಲ ಕೂಡುವಂಥಾದೆ ತತ್ತ್ವದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಚೈತನ್ಯಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ, ಮೂವತ್ತೆರಡು ಕೃತ್ಯ ಇಂತಿವು ಕಟ್ಟಳೆಗೊಳಗಾದವು. ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು. ಅಣುವಿಂಗಣು, ಘನಕ್ಕೆಘನ, ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು. ಆರಾರ ಅನುವಿನಲ್ಲಿ ಅನುವ ಅನುಕರಿಸಿ, ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ?
--------------
ಅಕ್ಕಮ್ಮ
-->