ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಭಕ್ತಿಸ್ಥಲ ವರ್ತುಳರೂಪಾಗಿಹುದು. ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು. ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು. ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು. ಶರಣಸ್ಥಲ ಪಂಚಸೂತ್ರಪ್ರಕಾರವ ಕೂಡಿಕೊಂಡು ಪೀಠಿಕಾಸಂಬಂಧವಾಗಿ, ಗೋಳಕಾಕಾರಮೂರ್ತಿಯಾಗಿಹುದು. ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮಶೂನ್ಯವಾಗಿ ತಿಳಿವೆಡೆಯಲ್ಲಿ ಉಂಟಾಗಿ, ತಿಳಿದ ಮತ್ತೆ ಇದಿರೆಡೆಯಿಲ್ಲವಾಗಿ ಇಂತೀ ಪಂಚಬ್ರಹ್ಮಮೂರ್ತಿ ನೀವಾಗಿ ಲೀಲೆಗೆ ಉಮಾಪತಿಯಾಗಿ, ಲೀಲೆ ನಿಂದಲ್ಲಿ ಸ್ವಯಂಭುವಾಗಿ ಇಂತೀ ಐದರಲ್ಲಿ ಭೇದಿಸಿ ಆರರಲ್ಲಿ ವೇಧಿಸಿನಿಂದ ನಿಜಸಂಬಂಧಸೂತ್ರ ಆ ಭೇದನಿಂದಲ್ಲಿ ನಿರತಿಶಯ ಸ್ವಾನುಭಾವ. ಉಭಯದ ಭಾವ ನೀನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಒಂದರಲ್ಲಿ ಎರಡದೆ, ಎರಡರಲ್ಲಿ ಮೂರದೆ, ಮೂರರಲ್ಲಿ ನಾಲ್ಕದೆ, ನಾಲ್ಕರಲ್ಲಿ ಐದದೆ, ಐದರಲ್ಲಿ ಆರದೆ, ಆರರೊಳಗಾದವರ ಭೇದವ ತಿಳಿದು, ನೂರೊಂದರಲ್ಲಿ ಕಡೆಗಣಿಸಿ ಸಂದು, ನಿಂದುನೋಡಿ ನಿಮ್ಮಂಗವ ಕಂಡುಕೊಳ್ಳಿ, ಘನಲಿಂಗಸಂಗವ ಮಾಡಿಕೊಳ್ಳಿ, ಸಂಗನ ಬಸವಣ್ಣನ ಬಟ್ಟೆಯ ಹೋಹಂದವ ತಿಳಿದುಕೊಳ್ಳಿ. ಶಿವಲಿಂಗಾಂಗ ಶರಣರೆಲ್ಲರ ಸಾರುವ ತೊಂಡ ಮುಕ್ತಿ ಭಕ್ತನ ಮಾಡು, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ವೇಧಿಸಿ ಭೇದಿಸಿಕೊಳ್ಳಿ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ವರ್ತ[ನ] ಶುದ್ಧವಾದಲ್ಲಿ ಭಕ್ತಸ್ಥಲವಾಯಿತ್ತು. ಕ್ರೀಭಾವ ಶುದ್ಧವಾದಲ್ಲಿ ಮಾಹೇಶ್ವರಸ್ಥಲವಾಯಿತ್ತು. ನಡೆನುಡಿ ಶುದ್ಧವಾಗಲಾಗಿ ಪ್ರಸಾದಿಸ್ಥಲವಾಯಿತ್ತು. ಕಾಯ ಜೀವದ ಭೇದವನರಿಯಲಿಕ್ಕೆ ಪ್ರಾಣಲಿಂಗಿಸ್ಥಲವಾಯಿತ್ತು. ಸಕಲವನರಿದು ಹಿಡಿದು ಬಿಡುವಲ್ಲಿ ಶರಣಸ್ಥಲವಾಯಿತ್ತು. ಇಂತೀ ಐದರಲ್ಲಿ ಏರಿ ಭೇದವಿಲ್ಲದೆ ನಿರಾಕರಿಸಿ ನಿಂದಲ್ಲಿ ಐಕ್ಯಸ್ಥಲವಾಯಿತ್ತು. ಇಂತೀ ಆರುಸ್ಥಲವನರಿದು, ಮತ್ತಿವರೊಳಗಾದ ನಾನಾ ಸ್ಥಲಂಗಳ ತಿಳಿದು ನಿಂದ ಸಂಗನಬಸವಣ್ಣಂಗೆ, ಚೆನ್ನಬಸವಣ್ಣಂಗೆ, ಪ್ರಭು, ಮಡಿವಾಳಯ್ಯಂಗೆ, ನಮೋ ನಮೋ ಎನುತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಂಚಮುಖವ ಪೂಜಿಸುವಯ್ಯಗಳು ನೀವು ಕೇಳಿರಯ್ಯಾ; ಪಂಚಲಿಂಗವಾವುದೆಂಬುದ ನೀವು ಕೇಳಿರೆ ! ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಈ ಐದರಲ್ಲಿ ನೊಂದುಬೆಂದಯ್ಯಗಳು ನೀವು ಕೇಳಿರೆ ! ನಾನವನೊಲ್ಲೆ, ನಾನವನಂಗವಿಸುವನಲ್ಲ, ನಾನವ ಹಿಡಿವನಲ್ಲ, ಸನ್ಯಾಸದೊಳಗಾಡಿ ಸಮೀಪಕ್ಕೆ ಬಾಹಾತನಲ್ಲ, ಕ್ಷಪಣರೊಳಗಾಡಿ ಲಜ್ಜೆದೋರುವವನಲ್ಲ, ಲಿಂಗದೊಳಗಾಡಿ ಅಂಗವ ಬಿಡುವವನಲ್ಲ, ಸರ್ವದೊಳಗಾಡಿ ಅಧೋಗತಿಗಿಳಿವವನಲ್ಲ. ನಾನು ಜಂಗಮದಾಸೋಹದೊಳಗಾಡಿ ನಿಮ್ಮ ಕಂಡೆ ಕೂಡಲಸಂಗಮದೇವಾ.
--------------
ಬಸವಣ್ಣ
ಪಾಪ ಪುಣ್ಯವೆಂದು ಹೇಳುವ ಕೂಪರಪ್ಪ ಭಕ್ತರು ಕೇಳಿರಣ್ಣಾ, ಎನಗೆ ನಾ ಕಾಣದೆ ನಿಂದಿಸುವವನಲ್ಲ, ಕಂಡು ನುಡಿವವಲ್ಲ. ಅಂದಗಾರಿಕೆಯಲ್ಲಿ ನುಡಿವವನಲ್ಲ. ಉಂಬಾಗ ಜಂಗಮವೆಂದು, ಸಂಜೆಗೆ ಕಳ್ಳನೆಂದು ಹಿಂಗಿ ನುಡಿವನವನಲ್ಲ. ವಂದಿಸಿ ನಿಂದಿಸುವ ಸಂದೇಹದವನಲ್ಲ. ಎನಗೆ ಅಂದಂದಿಗೆ ನೂರಿಪ್ಪತ್ತು ಸಂದಿತ್ತು. ಎನ್ನ ನಿನ್ನ ಬಂಧವ ಹೇಳಿರಣ್ಣಾ. ದ್ವಿತೀಯ ಶಂಭು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳು, ನೀವು ಹೋದ ಹೊಲಬಿನ ಹಾದಿಯಲ್ಲದೆ ಎನಗೊಂದು ಹಾದಿಯಿಲ್ಲ. ಬೊಂಬೆಗೆ ಸ್ವತಂತ್ರವಿಲ್ಲ, ಆಡಿಸುವ ಸೂತ್ರಧಾರಿಗಲ್ಲದೆ. ಐದರಲ್ಲಿ ಹುದುಗಿದ, ಇಪ್ಪತ್ತೈದರಲ್ಲಿ ಕೂಡಿದ, ಒಂದರಲ್ಲಿ ಉಳಿದ, ನಿಜಸಂದಿಯಲ್ಲಿ ನಿಂದು ವಂದನೆಯ ಮಾಡುತ್ತ ಇದ್ದೇನೆ. ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು, ಅಷ್ಟತನುಮೂರ್ತಿಯಾತ್ಮನೆಂದು ಇಂತಿವರೊಳಗಾದ ಮರ್ಕಟ ವಿಹಂಗ ಪಿಪೀಲಿಕ ಜ್ಞಾನಂಗಳೆಂದು, ತ್ರಿಶಕ್ತಿಯೊಳಗಾದ ನಾನಾ ಶಕ್ತಿಭೇದಂಗಳೆಂದು, ಇಂದ್ರಿಯ ಐದರಲ್ಲಿ ಒದಗಿದ ನಾನಾ ಇಂದ್ರಿಯಂಗಳೆಂದು, ಷಡುವರ್ಣದೊಳಗಾದ ನಾನಾ ವರ್ಣಂಗಳೆಂದು, ಸಪ್ತಧಾತುವಿನೊಳಗಾದ ನಾನಾ ಧಾತುಗಳೆಂದು, ಅಷ್ಟಮದಂಗಳೊಳಗಾದ ನಾನಾ ಮದಂಗಳೆಂದು, ಇಂತೀ ನಾನಾ ವರ್ತನಂಗಳನರಿವ ಚಿತ್ತದ ಗೊತ್ತದಾವುದು ? ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುರಿದು ಸುಡಲೇತಕ್ಕೆ ? ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮಯ ಮೊನೆ ನಷ್ಟ. ಇದು ಪಿಂಡಜ್ಞಾನ, ಶುದ್ಧಜ್ಞಾನೋದಯಭೇದ, ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ. ಪ್ರಾಣಲಿಂಗಿ ಶರಣ ಐಕ್ಯ ಈ ಮೂರು ಜಂಗಮದಂಗ. ಮೂರಕ್ಕಾರು ಸತಿಪತಿಭೇದವನರಿವುದು. ಆ ಆರರ ಒದಗು ಇಪ್ಪತ್ತೈದರ ಬೀಜ. ಈ ಭೇದವನರಿದ ಮತ್ತೆ ನೂರೊಂದು ಆರರಲ್ಲಿ ಅಡಗಿ, ಆ ಆರು ಐದರಲ್ಲಿ ನಿಂದು, ಐದು ಮೂರರಲ್ಲಿ ನಿಂದು ಭೇದಿಸಿ, ಮೂರು ಒಂದರಲ್ಲಿ ನಿಂದು ಸಂದೇಹವಳಿಯಿತ್ತು. ಇಂತು ಎನ್ನ ಭ್ರಮೆ ಹಿಂಗಿತ್ತು. ಇಂತಿವರ ನಾನಾ ಸ್ಥಳ ಕುಳಂಗಳೆಲ್ಲವು ಆದಿಗತೀತವಾದ ಮತ್ತೆ ಭಾವದ ಗುರುವೆನಲೇಕೆ ? ಅವತಾರದ ಲಿಂಗವೆನಲೇಕೆ ? ಅರಿದು ಮರೆದವ ಜಂಗಮವೆನಲೇಕೆ ? ಇಂತಿವ ಕಂಡೂ ಕಾಣದ, ನಂಬಿಯೂ ನಂಬದ ಸಂದೇಹಿಗೇಕೆ, ಗುರು ಲಿಂಗ ಜಂಗಮ ? ಪ್ರಥಮ ಕ್ರಿಯೆಯಲ್ಲಿ ಮೋಸ, ಜ್ಞಾನಕ್ಕೆ ಲಾಭವೆ ? ಇದು ದೃಷ್ಟದ ದರ್ಪಣದ ಒಳಹೊರಗಿನಂತೆ ತಿಳಿದು ನೋಡೆ, ಉಭಯಸ್ಥಲವೈಕ್ಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->