ಗುರು ಭಕ್ತನಂಗ, ಲಿಂಗ ಮಹೇಶ್ವರನಂಗ, ಜಂಗಮ ಪ್ರಸಾದಿಯಂಗ.
ಇಂತೀ ತ್ರಿವಿಧಸ್ಥಲಂಗಳಲ್ಲಿ ತ್ರಿವಿಧವಡಗಿ,
ತ್ರಿವಿಧ ಇದಿರಿಟ್ಟು, ತ್ರಿವಿಧ ಐಕ್ಯವಾಗಿ,
ಬೆಳಗಿಂಗೆ ಕಳೆದೋರಿ, ಕಳೆಗೆ ಕಾಂತಿ ಪ್ರಜ್ವಲಿಸುವಂತೆ,
ಅರ್ಕನ ಕಿರಣದಂತೆ, ಸಾಕಾರ ರೂಪಿಂಗೆ ಉಭಯಚಕ್ಷುವಾಗಿ,
ಬೆಳಗಿನಿಂದ ಬೆಳಗ ಕಂಡಂತೆ,
ಸ್ಥಲವ ನೆಮ್ಮಿ, ಸ್ಥಲದಲ್ಲಿ ಒಲವರವಿಲ್ಲದೆ ನೋಡಲಿಕ್ಕೆ,
ಸ್ಥಲಭರಿತಮೆಲ್ಲಿಯೂ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.