ಅಥವಾ

ಒಟ್ಟು 13 ಕಡೆಗಳಲ್ಲಿ , 10 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ಗುಣ ಮುರಿಮುರಿದು ಮೂರಕ್ಕೆ ತಂದು ಮುರಿಟ್ಟಿತ್ತು ನೋಡಾ, ಮಾರಹರ ಪಾದಪದ್ಮಭ್ರಮರ. ಮೂರು ಗುಣದಂತಾಚರಿಸಬಾರದು; ಮೂರು ಗುಣ ಬಿಡಬಾರದು ನೋಡಾ. ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನಾ ತಾನೆ ನೋಡಾ, ಮಾರಯ್ಯಾ.
--------------
ಸಿದ್ಧರಾಮೇಶ್ವರ
ಸಕಲದಲ್ಲಿ ಸನ್ನಿಹಿತರಲ್ಲದವರು ನಿಷ್ಕಲದಲ್ಲಿ ನಿಜವನೈದುವ ಪರಿ ಎಂತಯ್ಯಾ ಲಿಂಗವ ಹೋಗಾಡಿದೆನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು ಲಿಂಗೈಕ್ಯವೆಂತಪ್ಪುದು ಹೇಳಾ ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು ಎನ್ನ ಮನ ತಾರ್ಕಣೆಯಲ್ಲಿಪ್ಪಂತೆ ನಿಮ್ಮಲ್ಲಿ ಐಕ್ಯವ ಮಾಡಾ ಕೂಡಲಸಂಗಮದೇವಪ್ರಭುವೆ.
--------------
ಬಸವಣ್ಣ
ನರಜನ್ಮಕ್ಕೊಮ್ಮೆ ಬಂದ ಬಳಿಕ, ಗುರುವಿನ ಕುರುಹ ಕಾಣಬೇಕು. ಗುರುವಿನ ಕುರುಹ ತಾ ಕಂಡ ಬಳಿಕ, ಶಿಷ್ಯನಾಗಿ ಗುರುಕರಜಾತನಾಗಬೇಕು. ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ, ಕಪಿಲಸಿದ್ಧಮಲ್ಲಿಕಾರ್ಜುನನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು, ಘಟ್ಟಿವಾಳಯ್ಯಾ.
--------------
ಸಿದ್ಧರಾಮೇಶ್ವರ
ಕೊಂಡವನ ಕೊಂದು, ಖಂಡವ ಕೊಯ್ದವ ಪ್ರಸಾದಿ. ಅದರ ಸಂದ ಮುರಿದವ ಪ್ರಾಣಲಿಂಗಿ. ಆನಂದಿಸಿದವನ ಕೊಂದು ಹಿಂಡೆಯ ಕೂಳನುಂಡವ ಶರಣೈಕ್ಯ. ಇದರಂದದ ಐಕ್ಯವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ : ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ ; ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ. ಅ[ದು] ಎಂತೆಂದಡೆ: ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು, ಶಿವಶಾಸ್ತ್ರ ಇದಕ್ಕೆ ಸಾಕ್ಷಿ : ಅಣೋರಣೀಯಾ[ನ್] ಮಹತೋ ಮಹೀಯಾ[ನ್] ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು ಸರ್ವಜೀವರಲ್ಲಿಯು ಆತ್ಮವುಂಟಾದಡೆಯು ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು ಹೇಳುವ ಮಾಯಾವಾದಿಗಳು ನೀವು ಕೇಳಿ ; ಅದು ಎಂತೆಂದಡೆ : ಎಲಾ ಎಲಾ, ಉಚ್ಫಿಷ್ಟದಲ್ಲಿಯು ಅರ್ಕನ ಪ್ರಭೆ ಬಿದ್ದು ರಸ ಬತ್ತುವದು. ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ ? ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು. ಅಲ್ಲಿ ವಹ್ನಿಯು ಪುಟ್ಟುವು]ದೆ?] ಇದರಂತೆ, ಸರ್ವ ಜೀವಜಂತುಗಳಲ್ಲಿ ಮಾಯಾವಾದಿಗಳಲ್ಲಿ ಆತ್ಮಪರೀಕ್ಷೆಯಿಲ್ಲದವರಲ್ಲಿ [ದು]ಷ್ಟ ದುರ್ಜನರಲ್ಲಿ ಶಿವಭಕ್ತರಾಗಿ ಲಿಂಗವ ಧರಿಸಿ ದೇವರಾದರು ಸರಿಯೆ, [ಬ್ರಾ]ಹ್ಮರಾಗಿ ಯಜ್ಞೋಪವೀತವ ಹಾಕಿಕೊಂಡಿದ್ದರು ಸರಿಯೆ, ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ, ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ ! ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ ಮಾಯಾವಾದಿ ಕೇಳಲಾ. ಅದು ಎಂತೆಂದಡೆ: ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ ಸರ್ವಕಾಷ*ವನು ಸುಡುವದು ಕಾಣೆಲಾ. ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ ಸರ್ವಕರ್ಮೇಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ ನಿರ್ಮಳಕಾಯರಾದರು. ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ ನಮಸ್ಕರಿಸಬಹುದು. ಇಂತಾ ಜೀವಾತ್ಮ ವೇದವ ತಿಳಿಯದೆ 'ನಾ ಬ್ರಾಹ್ಮಣ' 'ನಾ ಶಿವಭಕ್ತ'ನೆಂದು ಹೇಳಿಕೊಂಡು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ
--------------
ಕೂಡಲಸಂಗಮೇಶ್ವರ
ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು, ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ. ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು, ತದ್ರಕ್ಷಣಹೇತುವಾದುದೇ ಜಲವು, ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ, ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು. ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ ಅಭೇದಮಾಗಿರ್ಪ ಜೀವನೇ ವಾಯುವು, ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ, ಮನವು ಸಂಸಾರಬದ್ಧಮಾಗಿರ್ಪುದು. ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ, ಜೀವನು ಶರೀರದಲ್ಲಿ ಬದ್ಧಮಾಗಿರ್ಪನು. ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು. ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು, ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು. ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ, ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘÀಜಲವರ್ಷವಂ ನಿರ್ಮಿಸಿ, ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ, ಜೀವನಿಂದ ಪ್ರಕಾಶಮಾಗುತ್ತಿರ್ಪುದು. ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು. ಇವು ಒಂದಕ್ಕೊಂದು ಕಾರಣಮಾಗಿ, ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ ಈ ದಂದುಗವಿನ್ನೆಂದಿಗೆ ಪೋಪುದು ಎಂದು ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ, ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ ಗುರು ಲಿಂಗ ಜಂಗಮ ಸ್ವರೂಪಿಯಾಗಿ, ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ, ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು. ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು, ಅದೇ ಕಾರಣಮಾಯಿತ್ತು. ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು, ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು. ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು, ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು, ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು, ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು. ಅಂತಪ್ಪ ಗುರುಲಿಂಗಮಾಗಿರ್ಪ ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು. ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ, ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ, ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು. ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ, ಪ್ರಾಣವು ಭಾವದೊಳಗೆ ಬೆರೆದು, ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂಬ ಶ್ರುತಿಮತವಿಡಿದು ಏಕಲಿಂಗನಿಷಾ*ಪರನಾದನು ಮಾಹೇಶ್ವರನು. `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಎಂಬ ಶ್ರುತಿ ಮತವಿಡಿದು ಅನ್ಯದೈವಂಗಳಂ ಬಿಟ್ಟು ನಿಮ್ಮನೇ ಧ್ಯಾನಿಸುವನಯ್ಯಾ, ನಿರಂತರ ನಿಮ್ಮ ಮಾಹೇಶ್ವರನು. `ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್' ಎಂಬ ಶ್ರುತಿಮತವಿಡಿದು ನಿಮ್ಮನೆ ಉಪಾಸ್ತಿಯ ಮಾಡಿ ಲಿಂಗಾರ್ಚನೆಯ ಮಾಡುವರಯ್ಯಾ ನಿಮ್ಮ ಮಾಹೇಶ್ವರರು. ಅದು ಕಾರಣ ನಿಮ್ಮ ಐಕ್ಯವ ನಿಮ್ಮ ಮಾಹೇಶ್ವರನೆ ಬಲ್ಲ. ನಿಮ್ಮ ಮಾಹೇಶ್ವರಾಧಿಕ್ಯವ ನೀವೇ ಬಲ್ಲಿರಿ. ಉಳಿದ ದೇವ ದಾನವ ಮಾನವಾದಿಗಳು ಅರಿಯಬಹುದೆ ? ನಿಮ್ಮ ಘನವನು, ನಿಮ್ಮ ಮಾಹೇಶ್ವರರ ಘನವನು ಶಿವನೆ ಬಲ್ಲ, ಶಿವನ ಮೀರುವ ಪದವುಂಟೆ ? ಸಕಲಬ್ರಹ್ಮಾಂಡವನೂ ಅವಗ್ರಹಿಸಿಕೊಂಡಿಪ್ಪನಾಗಿ ಶಿವನು, ಆ ಶಿವನನವಗ್ರಹಿಸಿಕೊಂಡಿಪ್ಪರು ಮಾಹೇಶ್ವರರು ಅಣುಮಹತ್ತಿನೊಳಗೆ ಸಂಪೂರ್ಣರಪ್ಪರು. 'ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ, `ಯಥಾ ಶಿವಸ್ತಥಾ ಭಕ್ತಃ' ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣರ ಮೀರಿದ ಪದ ಉಂಟಾದರೆ ಬಲ್ಲರೆ ಹೇಳ ?
--------------
ಉರಿಲಿಂಗಪೆದ್ದಿ
ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ || ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ. ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು. ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ ಉರಿಯಬಲ್ಲುದೆ ಹೇಳಿರಣ್ಣಾ ? ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ ಸಪ್ತಧಾತುಗಳುಳ್ಳ ಪರಿಯಂತರ ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು. ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು, ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ, ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ, ಆ ದ್ರೋಹ ತಮಗಲ್ಲದೆ ಆತಂಗಿಲ್ಲ. ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ. ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಮೆರೆಮಿಂಡಯ್ಯ
ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು ಎನಗೆ ಸಂಸಾರವಿಲ್ಲವೆಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು. ಆವ ರೂಪನೂ ನಂಬುವಳಲ್ಲ ನಾನು; ಆವ ಮಾತನೂ ನಂಬುವಳಲ್ಲ ನಾನು; ಆವಲ್ಲಿ ಹೊಂದುವಳಲ್ಲ ನಾನು. ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ.
--------------
ನೀಲಮ್ಮ
ಏನೆಂಬೆನೇನೆಂಬೆನಯ್ಯ? ಮತಿಗೆಟ್ಟು ಮಾನವಲೋಕಕ್ಕೆ ಬಂದೆ. ಬಂದ ಬರವಿನಲ್ಲಿಯೆ ಭವವೆಂಬ ಭೂಪತಿ ಎನ್ನ ಸೆರೆವಿಡಿದು ಕಾಲ-ಕಾಮರ ವಶಕ್ಕೆ ಕೊಟ್ಟನಯ್ಯ. ಕಾಲಂಗೆ ಕಾಯುವ ದಂಡವ ತೆತ್ತದ್ದು ಲೆಕ್ಕವಿಲ್ಲ. ಮನಸಿಜಂಗೆ ಮನವ ದಂಡವಿತ್ತುದ್ದು ಲೆಕ್ಕವಿಲ್ಲ. ಹೋದಹೆನೆಂದರೆ ಒಳಕಾವಲವರು, ಹೊರಕಾವಲವರು ಹೊಗಲೀಸರು. ನನ್ನ ಸೆರೆಯಲ್ಲಿ ನಾನು ಬಿಡಿಸಿಕೊಂಡು ಹೋದಹೆನೆಂದರೆ ನಾನು ದರಿದ್ರನಯ್ಯ. ಎನ್ನ ಸೆರೆಯ ಬಿಡಿಸಿಕೊಳ್ಳಿರಯ್ಯ ಬಸವಾದಿ ಪ್ರಮಥರೇ. ನಿಮ್ಮ ಸೆರಗೊಡ್ಡಿ ಬೇಡಿಕೊಂಬೆನಯ್ಯ. ಭಕ್ತಿಗೆ ಭಂಡಾರವಾಗಿಪ್ಪ ಸಂಗನ ಬಸವಣ್ಣ, ಎನಗೆ ಹಾಗತೂಕ ಭಕ್ತಿಯ ಕೊಡಯ್ಯ. ಪ್ರಸಾದವೆ ಚಿತ್ಪಿಂಡಸ್ವರೂಪವಾದ ಚೆನ್ನಬಸವಣ್ಣ, ಎನಗೆ ಹಾಗತೂಕ ಜ್ಞಾನವ ಕೊಡಯ್ಯ. ಮಾಯಾಕೋಲಾಹಲನಪ್ಪ ಅಲ್ಲಮಪ್ರಭುವೇ, ಎನಗೆ ಹಾಗತೂಕ ವೈರಾಗ್ಯವ ಕೊಡಯ್ಯ. ಬೆಟ್ಟದ ಗುಂಡತಂದು ಇಷ್ಟಲಿಂಗದಲ್ಲಿ ಐಕ್ಯವ ಮಾಡಿದ ಘಟ್ಟಿವಾಳಲಿಂಗವೇ, ಎನಗೆ ಹಾಗತೂಕ ಲಿಂಗವ ಕೊಡಯ್ಯ. ಈ ನಾಲ್ಕು ಹಾಗ ಕೂಡಿದಲ್ಲಿಯೆ ಮನಲಿಂಗದಲ್ಲಿ ಒಂದು ಹಣಮಪ್ಪುದು. ಮನಲಿಂಗದಲ್ಲಿ ಒಂದು ಹಣವಾದಲ್ಲಿಯೇ ಆ ಚಂದ್ರಾಯುಧ ದೊರಕೊಂಬುದು. ಎನಗೆ ಚಂದ್ರಾಯುಧವಂ ಪಿಡಿದು, ಒಳಕಾವಲ ನಾಲ್ವರ ಕೊರಳ ಕೊಯ್ದು, ಹೊರಕಾವಲೈವರ ಹರಿಹಂಚುಮಾಡಿ ಕೂಟದ ಕಾವಲವರ ಪಾಟಿಮಾಡದೆ, ಭವದ ಬಳ್ಳಿಯ ಕೊಯ್ದು, ಕಾಲ ಕಾಮರ ಕಣ್ಣ ಕಳೆದು, ಎಡಬಲದ ಹಾದಿಯ ಹೊದ್ದದೆ, ನಡುವಣ ಸಣ್ಣ ಬಟ್ಟೆಗೊಂಡು, ರತ್ನಾಚಲವನೇರಿ, ಅಲ್ಲಿಪ್ಪ ಲಿಂಗಮಂ ಬಲಗೊಂಡು, ನೀವಿದ್ದ ಉನ್ಮನಿಯ ಪುರಕ್ಕೆ ಬಂದು, ನಿಮ್ಮ ಪಡುಗ ಪಾದರಕ್ಷೆಯಿಂ ಪಿಡಿದು, ನಿಮ್ಮ ಬಾಗಿಲ ಕಾಯ್ದಿಪ್ಪುದೇ ಎನಗೆ ಭಾಷೆ. ಎನ್ನ ಬಿನ್ನಪವ ನೀವು ಮನವೊಲಿದು ಕರುಣಿಪುದಯ್ಯ ಇದಕೆ ನೀವೇ ಸಾಕ್ಷಿಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಘನಲಿಂಗಿದೇವ
ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ. ಅರ್ಪಿತದಲ್ಲಿ ನಿರಾಭಾರಿಯಾದ ಬಸವಾ, ಆನು ಸುಖಸಂಯೋಗಿಯಾದೆ ನಿಮ್ಮಲ್ಲಿ ಬಸವಾ. ಎನಗೆ ಹೆಸರಳಿಯಿತ್ತು ಕುರುಹಳಿಯಿತ್ತು ಬಸವಾ. ಸಂಗಯ್ಯ ನಿನ್ನೊಳಡಗಿ ನೀನೆನ್ನೊಳಡಗಲು.
--------------
ನೀಲಮ್ಮ
-->