ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು. ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು. ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು. ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು. ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು. ಐಕ್ಯನಾದಡೆ ಬ್ಥಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು. ಅದೆಂತೆಂದೊಡೆ : ``ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ | ಸಮ್ಯಗ್‍ಜ್ಞಾನಮಿತಿ ಪ್ರಾಜ್ಞೆ ೈಃ ಸ್ಥಲಷಟ್ಕಮುದಾಹೃತಮ್ ||'' ಎಂದುದಾಗಿ, ಇಂತಪ್ಪ ಷಟ್‍ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು. ವೀರಮಾಹೇಶ್ವರನಾದಡೆ ಷೋಡಶಜ್ಞಾನವ ತಿಳಿಯಬೇಕು. ಪರಮವಿರಕ್ತನಾದಡೆ ಷೋಡಶಾವರಣವ ತಿಳಿಯಬೇಕು. ಶರಣನಾದಡೆ ಅಷ್ಟಾವಧಾನವ ತಿಳಿಯಬೇಕು. ಐಕ್ಯನಾದಡೆ ತನ್ನಾದಿಮದ್ಯಾವಸಾನವ ತಿಳಿಯಬೇಕು. ಲಿಂಗಾನುಭಾವಿಯಾದಡೆ ಸರ್ವಾಚಾರಸಂಪತ್ತಿನಾಚರಣೆಯ ತಿಳಿಯಬೇಕು. ಈ ವಿಚಾರವನರಿಯದೆ ಬರಿದೆ ಷಟ್ಸ್ಥಲವ ಬೊಗಳುವ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭಕ್ತನಾದಡೆ ನಿರ್ವಂಚಕಭಾವದಿಂದೆ ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು. ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು. ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು. ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು. ಶರಣನಾದಡೆ ಸಕಲ ಭೋಗೋಪಭೋಗಂಗಳನು ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು. ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು ಸರ್ವರೊಳಗೆಲ್ಲ ತನ್ನನೆ ಕಾಣಬೇಕು. ಇಂತೀ ಷಟ್‍ಸ್ಥಲದ ಅನುವನರಿದು ಆಚರಿಸುವ ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನಾದಡೆ ಬಸವಣ್ಣನಂತಾಗಬೇಕು. ಜಂಗಮವಾದಡೆ ಪ್ರಭುದೇವರಂತಾಗಬೇಕು. ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು. ಐಕ್ಯನಾದಡೆ ಅಜಗಣ್ಣನಂತಾಗಬೇಕು. ಇಂತಿವರ ಕಾರುಣ್ಯಪ್ರಸಾದವ ಕೊಂಡು ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ ದಾಸಯ್ಯಪ್ರಿಯ ರಾಮನಾಥಾ ?
--------------
ದುಗ್ಗಳೆ
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು. ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು. ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು. ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ ಮುಂತಾಗಿ ಸ್ವಾದಿಸಬೇಕು. ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು. ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ, ಸರ್ವವಾದ್ಯದಲ್ಲಿ ಅಡಗಿದ ನಾದದಂತೆ, ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ. ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ.
--------------
ಅವಸರದ ರೇಕಣ್ಣ
-->