ಅಥವಾ

ಒಟ್ಟು 171 ಕಡೆಗಳಲ್ಲಿ , 41 ವಚನಕಾರರು , 138 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಏನೂ ಏನೂ ಎನಲಿಲ್ಲದಂದು ಮಹಾಘನಕ್ಕೆ ಘನವಾದ ಮಹಾಘನ ನಿರಂಜನಾತೀತಪ್ರಣವದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನಿರ್ದೇಶ ಸ್ಥಲದ ವಚನವೆಂತೆಂದಡೆ : ಅವಾಚ್ಯಪ್ರಣವ ಕಲಾಪ್ರಣವ ಉತ್ಪತ್ಯವಾಗದತ್ತತ್ತ , ಪ್ರಣವನಾದ ಪ್ರಣವಬಿಂದು ಪ್ರಣವಕಲೆಗಳುತ್ಪತ್ಯವಾಗದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಯಲಿಂಗಾರ್ಪಿತವಾಯಿತ್ತಾಗಿ ಕರ್ಮ ನಿರ್ಮೂಲ್ಯವಾಗಿ ನಿರ್ಮಲಾಂಗಿಯಾದೆನು ನೋಡಾ. ಜೀವ ಲಿಂಗಾರ್ಪಿತವಾಯಿತ್ತಾಗಿ ಜೀವ ಪರಮರೆಂಬ ಉಭಯವಳಿದು ಚಿತ್ಪರಮಲಿಂಗವಾದೆನು ನೋಡಾ. ಪ್ರಾಣಲಿಂಗಾರ್ಪಿತವಾಯಿತ್ತಾಗಿ ಇಹಪರವನರಿಯೆನು ನೋಡಾ. ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ ಶರಣ ಲಿಂಗವೆಂಬ ಕುರುಹಿಲ್ಲ ನೋಡಾ. ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ ಅಪ್ರತಿಮ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ. ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ; ಇದ ನಾನೊಲ್ಲೆ. ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ. ಎನ್ನ ಬಡತನಕ್ಕ ಬೇಡುವಡೆ ಏನೂ ಇಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ, ಅನಾದಿಶಕ್ತಿವಿಡಿದಾಡುವರೆಲ್ಲರು ಜ್ಞಾನಿಗಳಲ್ಲ, ಆದಿ ಅನಾದಿಯೆಂಬೀ ಎರಡ ಭೇದಿಸಿ ದಾಂಟಿ, ಇಚ್ಛಾಶಕ್ತಿಯ ಇಚ್ಛೆಯ ಮರೆದು, ಕ್ರಿಯಾಶಕ್ತಿಯ ಭಾವವ ಬಿಟ್ಟು, ಜ್ಞಾನಶಕ್ತಿಯ ಠಾವವನೊಲ್ಲದೆ, ತಾನು ತಾನಾದವಂಗೆ ಏನೂ ಇದಿರಿಲ್ಲಾ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯಾ ಏನೂ ಏನೂ ಇಲ್ಲದಂದು, ಆದಿಕುಳದುತ್ಪತ್ಯವಾಗದಂದು, ಚಂದ್ರಧರ ವೃಷಭವಾಹನರಿಲ್ಲದಂದು, ಕಾಲಸಂಹರ ತ್ರಿಪುರಸಂಹರರಿಲ್ಲದಂದು, ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು, ಹರಿಯ ಹತ್ತವತಾರದಲ್ಲಿ ತಾರದಂದು, ಬ್ರಹ್ಮನ ಶಿರವ ಹರಿಯದಂದು, ಇವಾವ ಲೀಲೆಯದೋರದಂದು, ನಿಮಗನಂತನಾಮಂಗಳಿಲ್ಲದಂದು, ಅಂದು ನಿಮ್ಮ ಹೆಸರೇನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಏನು ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹುಮಾತ್ರದಲ್ಲಿಯೆ ನವಪದ್ಮ ನವಶಕ್ತಿಗಳುತ್ಪತ್ಯ ಲಯವು. ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿಯೆ ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯ ಲಯವು. ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ, ಸಮಸ್ತವು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಉತ್ಪತ್ಯ ಲಯವೆಂದು ಬೋದ್ಥಿಸಿ ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತನ್ನ ಮರೆದಲ್ಲಿ ಲಿಂಗವ ಮರೆಯಬೇಕು. ತನ್ನನರಿತಲ್ಲಿ ಲಿಂಗವನರಿಯಬೇಕು. ಉಭಯಭಾವ ಅಳವಟ್ಟಲ್ಲಿ ಮುಂದಕ್ಕೊಂದು ಕುರುಹು ಏನೂ ಎನಲಿಲ್ಲ. ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ ಕುರುಹಾಗುತ್ತಿದ್ದಿಹಿತ್ತು.
--------------
ಬಿಬ್ಬಿ ಬಾಚಯ್ಯ
ಇಂದ್ರಪದ ಬ್ರಹ್ಮಪದ ವಿಷ್ಣುಪದವಿಲ್ಲದಂದು, ಸುರಾಲಯ ರುದ್ರಲೋಕ ಉತ್ಪತ್ಯವಾಗದಂದು, ಅಷ್ಟವಸುಗಳು, ದ್ವಾದಶಾದಿತ್ಯರು, ಏಕಾದಶ ರುದ್ರರುತ್ಪತ್ಯವಾಗದಂದು, ದ್ವಾದಶ ರಾಸಿ ನಕ್ಷತ್ರ ನವಗ್ರಹಂಗಳುತ್ಪತ್ಯವಾಗದಂದು, ಅಗ್ನಿಮಂಡಲ ಆದಿತ್ಯಮಂಡಲ ಉತ್ಪತ್ಯವಾಗದಂದು, ಚಂದ್ರಮಂಡಲ ತಾರಾಮಂಡಲ ಉತ್ಪತ್ಯವಾಗದಂದು, ಇವೇನೂ ಏನೂ ಎನಲಿಲ್ಲದಂದು ಚಿತ್ಕಲಾಪ್ರಣವವಾಗಿದ್ದನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕದಿರು ಮುರಿಯೆ ಏನೂ ಇಲ್ಲ. ವ್ರತಹೀನನ ನೆರೆಯಲಿಲ್ಲ, ಗುಮ್ಮೇಶ್ವರಾ.
--------------
ಕದಿರಕಾಯಕದ ಕಾಳವ್ವೆ
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ನೋಡುವಂಗೆ ಚೋದ್ಯವಪ್ಪಂತೆ, ಈ ಉಭಯವನೊಡಗೂಡಿದ ಭೇದವ ನೋಡಾ. ಕೈಯಲ್ಲಿ ಅಡಗುವಾಗ ಕಲ್ಲಲ್ಲ. ಮನದಲ್ಲಿ ಒಡಗೂಡಿ ಸುಳಿವಾಗ ಗಾಳಿಯಲ್ಲ. ಏನೂ ಎನ್ನದೆ ಇಹಾಗ ಬಯಲಲ್ಲ. ಎಲ್ಲಿ ತನ್ನನರಿದಲ್ಲಿಯೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ, ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ, ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ, ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ, ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ, ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು. ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ, ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->