ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹುಮಾತ್ರದಲ್ಲಿಯೆ ನವಪದ್ಮ ನವಶಕ್ತಿಗಳುತ್ಪತ್ಯ ಲಯವು. ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿಯೆ ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯ ಲಯವು. ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ, ಸಮಸ್ತವು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಉತ್ಪತ್ಯ ಲಯವೆಂದು ಬೋದ್ಥಿಸಿ ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ, ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು.
--------------
ನೀಲಮ್ಮ
ನಂದೀಶ್ವರ, ಭೃಂಗೀಶ್ವರ, ವೀರಭದ್ರ, ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ, ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ, ಸದಾಶಿವ, ಈಶ್ವರ, ಮಹೇಶ್ವರ, ರುದ್ರ, ಘಂಟಾಕರ್ಣ, ಗಜಕರ್ಣ, ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ ಗಣಾಧೀಶ್ವರರು ಇವರು, ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ ಶುದ್ಧ ಚಿದ್ರೂಪರಪ್ಪ ಪ್ರಮಥರು. ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ. ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ, ಅವರಾಗಮವಂತಿರಲಿ. ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಇಪ್ಪತ್ತೆ ೈದಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾತೃವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ದಶಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಏಕಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞೇಯದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತ್ರಿವಿಧವನು ಸಿದ್ಧೇಶ್ವರನು ಇಷ್ಟಲಿಂಗದಲ್ಲಿ ಸಂಬಂಧಿಸಿಕೊಟ್ಟ ಕಾರಣ ಎನ್ನ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧವರತು, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಮೇರೆದಪ್ಪಿದ ಸಮುದ್ರದಲ್ಲಿ ಅದ್ದಿದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ, ಹವಣಿಸಬಾರದ ತೇಜ, ಏಕಾಕ್ಷರ, ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ, ನಿರ್ಭಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ. ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು. ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನಯ್ಯಾ, ಪ್ರಭುವೆ.
--------------
ಸಂಗಮೇಶ್ವರದ ಅಪ್ಪಣ್ಣ
ವ್ಯಾಪಕಾಕ್ಷರದಲ್ಲಿ ನಾಲ್ಕಕ್ಷರ, ಸ್ಪರ್ಶನಾಕ್ಷರದಲ್ಲಿ ಏಕಾಕ್ಷರ, ಇಂತೀ ಪಂಚಾಕ್ಷರವೆ ಪಂಚಬ್ರಹ್ಮಸ್ವರೂಪವು ಶಿವಜ್ಞಾನಕ್ಕೆ ಮೂಲವೆಂದರಿತು, ಮೂಲಪಂಚಾಕ್ಷರ, ಸ್ಥೂಲಪಂಚಾಕ್ಷರ, ಸೂಕ್ಷ್ಮಪಂಚಾಕ್ಷರ ಮಾಯಾಖ್ಯಪಂಚಾಕ್ಷರ, ಪ್ರಸಾದಪಂಚಾಕ್ಷರವೆಂಬ ಪಂಚಪಂಚಾಕ್ಷರದ ಸ್ವರೂಪನರಿತು ಪಂಚಾಕ್ಷರವ ಜಪಿಸಲು ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ.
--------------
ಆದಯ್ಯ
ಏಕಾಕ್ಷರ ದ್ವ್ಯಕ್ಷರ ತ್ರ್ಯಕ್ಷರ ಪಂಚಾಕ್ಷರ. ಅಕಾರವೇ ಬೀಜ, ಆಕಾರವೇ ಮೂರ್ತಿ. ಕಕಾ ಕಿಕೀ ಕುಕೂ ಧಾಂ ಧೀಂ ಧೋಂ zsõ್ಞಂ ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ. ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು, ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ?
--------------
ಅನಾಮಿಕ ನಾಚಯ್ಯ
ಏಕಬೀಜಂ ಸಮಾವೃಕ್ಷಂ ಲೋಕ ಲಿಂಗಂತು ಪೂಜನಂ ಸಾಕಾರಂ ಚ ಗುರೋರ್ಲಿಂಗಂ ಏಕಲಿಂಗಂತು ಪೂಜನಂ ಏಕಧ್ಯಾನ ಸಮಂ ಚಿತ್ತಂ ಊಧ್ರ್ವಲಿಂಗಂತು ಪೂಜನಂ ಏಕಾಕ್ಷರಂ ತುಷಂ ಜನಂ ಮಹಾಲಿಂಗಂತು ದರುಶನಂ || ಇಂತೆಂದುದಾಗಿ, ಇದು ಕಾರಣ, ನಿಮ್ಮ ಶರಣ ಬಸವಣ್ಣನನು ಲೋಕದವರು ಮತ್ರ್ಯರೆಂದಡೆ, ಅಘೋರ [ನರಕ ]ತಪ್ಪದು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ. ನಿಮ್ಮ ಶರಣ ಬಸವಣ್ಣನ ಪರಿಯ, ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇನ್ನು ಸಹಸ್ರಾಕ್ಷರ ತ್ರಯಾಕ್ಷರ ಏಕಾಕ್ಷರ ನಿವೃತ್ತಿ ಅದೆಂತೆಂದಡೆ : ಸಹಸ್ರಾಕ್ಷರ ತ್ರಯಾಕ್ಷರದಲ್ಲಿ ಅಡಗಿತ್ತು . ಆ ತ್ರಯಾಕ್ಷರ ಏಕಾಕ್ಷರದಲ್ಲಿ ಅಡಗಿತ್ತು. ಆ ಏಕಾಕ್ಷರ `ನಿಃಶಬ್ದಂ ಬ್ರಹ್ಮ ಉಚ್ಯತೇ'-ಎಂಬ ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->