ಅಥವಾ

ಒಟ್ಟು 34 ಕಡೆಗಳಲ್ಲಿ , 18 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮತ್ತಮಾ, ಸಹಸ್ರಕಮಲದ ವಿಭಾಗೆಯಂ ಋಗ್ವೇದದಲ್ಲಿ ತೋರ್ದಪೆನೆಂತೆನೆ- `ಆಪ್ಮಾನಂ ತೀರ್ಥಂ ಕ ಇಹ ಪ್ರಾಚಥ್ಯೇನಪಥಾ ಪ್ರಪಿಬಂತಿಸುತಸ್ಯ ವದ್ಯಾವಾಪೃಥುವೀ ತಾವದಿತ್ತತ್ ಸಹಸ್ರಥಾ ಪಂಚದಶಾನ್ಯುಕ್ಥೌ ಯಾ- ಸಹಸ್ರಥಾ ಮಹಿಮಾನಃ ಸಹಸ್ರಃ ಯಾವದ್ಬ ್ರಹ್ಮಾದ್ಥಿಷ್ಠಿತಂ ತಾವತೀ ವಾಕ್' ಟೀಕೆ|| ಸಹಸ್ರಥಾ- ಸಾವಿರ ಪ್ರಕಾರವಾದ ಮಹಿಮಾನಃ- ಮಹಿಮರೂಪರಾದ ಚಿದಾನಂದಾತ್ಮರುಗಳು ಬ್ರಹ್ಮಾದ್ಥಿಷ್ಠಿತಂ- `ಬ್ರಹ್ಮಾತ್ಮನಾಂ ಬ್ರಹ್ಮಮಹದ್ಯೋನಿರಹಂ ಬೀಜಪ್ರದಃ ಪಿತಾ' ಎಂದುಂಟಾಗಿ, ಬ್ರಹ್ಮವೆಂದು ಪ್ರಕೃತಿ- ಆ ಪ್ರಕೃತಿಯಿಂದೆ ಅದ್ಥಿಷ್ಠಿತಂ- ಅದ್ಥಿಷ್ಠಿಸಲ್ಪಟ್ಟುದಾಗಿ ಸಹಸ್ರಃ- ಸಾವಿರಗಣನೆಯನುಳ್ಳುದಾಗಿ ಇತ್- ಲಯಾದ್ಥಿಷ್ಠಾನ ರೂಪವಾದ ತತ್- ಆ ಬ್ರಹ್ಮವು, ಯಾವತ್- ಎಷ್ಟು ಪ್ರಮಾಣವುಳ್ಳುದು ತಾವತ್- ಅಷ್ಟು ಪ್ರಮಾಣವಾಗಿ ಆಪ್ಮಾನಂ- ಪಾದೋದಕರೂಪವಾದ, ತೀರ್ಥಂ- ತೀರ್ಥವನು ಯೇನ ಪಥಾ- ಆವಮಾರ್ಗದಿಂದೆ, ಸು- ಚೆನ್ನಾಗಿ ಪ್ರ ಪಿಬಂತಿ- ಪಾನವ ಮಾಡುವರು ತಸ್ಯ- ಆ ಮಾರ್ಗದ, ಉಕ್ಥಾ- ನಿಲುಕಡೆಯಾದ ವಾಕ್- ಶಬ್ದಬ್ರಹ್ಮವು ಸಹಸ್ರಥಾ- ಸಾವಿರ ಪ್ರಕಾರವುಳ್ಳದಾಗಿ ದ್ಯಾವಾ ಪೃಥಿವೀ- ದ್ಯಾವಾಪೃಥುಗಳ ವ್ಯಾಪಿಸಿಕೊಂಡುದಾಗಿ ಪಂಚ ದಶಾನಿ- ಐವತ್ತು ವರ್ಣಂಗಳಾಕಾರವುಳ್ಳುದಾಗಿ ತಾವತಿ- ಅಷ್ಟಾಗಿಹುದೆಂದು, ಕಃ- ಚತುರ್ಮುಖದ ಬ್ರಹ್ಮನು ಇಹ- ಈರ್ಣಾಧ್ರ್ವದಲ್ಲಿ ಪ್ರಾವೋಚತ್- ನುಡಿದನೆಂದು- ನಿರವಿಸಿದೆಯಯ್ಯಾ ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಒಂದೆಂದಡೆ ಬೆಸ, ಎರಡೆಂದಡೆ ಸರಿ ಎಂಬ ಭೇದದಂತೆ ದ್ವೈತ ಅದ್ವೈತಗಳ ವಿವರ : ಎಷ್ಟು ಲೆಖ್ಖದಲ್ಲಿ ಸಮಗಂಡು ಬಪ್ಪಲ್ಲಿ ದ್ವೈತ. ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದ್ವೈತ. ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಕಷ್ಟಜೀವನ ಮನುಜರಿರಾ, ನೀವು ಹುಟ್ಟಿದ ಮೊದಲು, ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ ನಷ್ಟವಾಗಿ ಹೋದುದ ಕಂಡು ಕಂಡೂ ಹೆಂಡಿರು ತನ್ನವರೆಂಬೆನೆ? ಮಿಂಡಿಯಾಗಿ ಹಲವರ ಬಯಸುವವಳ ಮಕ್ಕಳ ತನ್ನವರೆಂಬೆನೆ? ಕೂಡುವಾಗ ದುಃಖ, ಕೂಡಿದ ಒಡವೆಯ ಮಡಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ, ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ, ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ, ಸಟೆಯಂ ಬಿಡಿ, ದಿಟವಂ ಹಿಡಿ, ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ, ಬಹಿರಂಗದಲ್ಲಿ ಅಂಗದ ಮೇಲೆ ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ. ಎಷ್ಟು ಅರುಹಾದರೂ ಅಂಗದಮೇಲೆ ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ; ಅದು ನಮ್ಮ ಪುರಾತನರ ಮತವಲ್ಲ. ಸಾಕ್ಷಾತ್ ಪರಮೇಶ್ವರನಾದರೂ ಆಗಲಿ, ಅಂಗದಮೇಲೆ ಲಿಂಗಧಾರಣವಿಲ್ಲದಿದ್ದರೆ, ಅವನ ಮುಖವ ನೋಡಲಾಗದು ಕಾಣ. ಅದೇನು ಕಾರಣವೆಂದರೆ: ಅದು ಶಿವಾಚಾರದ ಪಥವಲ್ಲದ ಕಾರಣ. ಗುರುಕರುಣದಿಂದ ಪಡೆದ ಲಿಂಗವ ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೈಷಿ*ಕಭಾವ ನಂಬುಗೆ ಇಲ್ಲದ ಬಳಿಕ, ಎಷ್ಟು ಓದಿದಡೇನು ? ಎಷ್ಟು ಕೇಳಿದಡೇನು ? ಎಷ್ಟು ಪೂಜೆಯ ಮಾಡಿದಡೇನು ? ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ. ಇದು ಕಾರಣ, ನೈಷೆ* ಬಲಿದು ಭಾವತುಂಬಿ ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ. ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ.
--------------
ಷಣ್ಮುಖಸ್ವಾಮಿ
ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ, ಮಾತಿನ ಮಾಲೆಯ ಬೋಧೆ, ತೂತ ಜ್ಞಾನಿಗಳ ಸಂಸರ್ಗ. ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆ ಅದು ಎಷ್ಟು ದಿವಸ ಇರಲಾಪುದು ? ಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕು ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಶರಣ ತನ್ನ ಪ್ರಾರಬ್ಧಕರ್ಮ ತೀರಿದ ವಿಸ್ತಾರವನರಿದು, ಪ್ರಕಾಶಿಸುತ್ತಿದ ಕಾರಣ, ಶ್ವಾನ ಜಂಗಮರೂಪೆನಬೇಕಾಯಿತ್ತು. ಗಜ ಮಲೆಯಿಂದ ಪುರದಲ್ಲಿಗೆ ಬಂದು, ಆ ಪುರದಲ್ಲಿ ಎಷ್ಟು ಸುಖವಾಗಿದ್ದರೂ ಮಿಗೆಮಿಗೆ ತನ್ನ ಮತಿಯನೆ ನೆನೆವುತಿಪ್ಪುದು. ಆ ಜಂಗಮ ಮೊದಲು ಪರಬ್ರಹ್ಮದಿಂದ ದೇಹವಿಡಿದನಾಗಿ, ಆ ದೇಹದಲ್ಲಿ ಎಷ್ಟು ಸುಖವಾಗಿದ್ದರೆಯೂ ಮಿಗೆಮಿಗೆ ಆ ಪರಬ್ರಹ್ಮವನೆ ನೆನೆವುತಿಹನು, ಇದು ಕಾರಣ, ಶ್ವಾನ ಗಜ ಇವೆರಡೂ ಶರಣಂಗೆ ಜಂಗಮಸ್ವರೂಪೆನಬೇಕಾಯಿತ್ತು. ಮನವೆ ಮರ್ಕಟ, ಅರಿವೆ ಪಿಪೀಲಿಕ, ಮಹಾಜ್ಞಾನವೆ ವಿಹಂಗ, ನಿತ್ಯ ಎಚ್ಚರವೆ ಕುಕ್ಕುಟ, ತನ್ನ ತಾನರಿವುದೆ ಶ್ವಾನ, ತನ್ನ ಬುದ್ಧಿಯೆ ಗಜ. ಇಂತೀ ಷಡ್ವಿಧವ ಬಲ್ಲಾತನೆ ಬ್ರಹ್ಮಜ್ಞಾನಿ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಗೊಹೇಶ್ವರಪ್ರಿಯ ಬಂಕಣ್ಣ ನಿಟ್ಟ ಮುಂಡಿಗೆಯನೆತ್ತುವರಿಲ್ಲ, ಬಸವಪ್ರಿಯ ಮಹಾಪ್ರಭುವೆ.
--------------
ಜಗಳಗಂಟ ಕಾಮಣ್ಣ
ಸದ್ಭಕ್ತಿಯಿಲ್ಲದ ವಿಶ್ವಾಸಹೀನನು ವಾಚಾರಚನೆಗಳಿಂದ ಮಾತಿನ ಮಾಲೆಯ ಎಷ್ಟು ನುಡಿದಡೇನು ? ಹೆಂಡದಂತೆ, ಮೃತ ಘಟದಂತೆ, ಶಿಥಿಲ ಫಳದಂತೆ ಅದಾರಿಗೆ ಯೋಗ್ಯ? ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವು ಅವರಲ್ಲಿ ನಿಲ್ಲನಾಗಿ.
--------------
ಬಾಹೂರ ಬೊಮ್ಮಣ್ಣ
ಅಯ್ಯ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ. ಅನುಭಾವವಿಲ್ಲದ ಷಟ್‍ಸ್ಥಲವು ಕಣ್ಣಿಲ್ಲದ ಕುರುಡನಂತೆ. ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ. ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆಬಾರದು. ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ. ಇದು ಕಾರಣ: ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು. ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ_ಪ್ರಸಾದವ ಕೊಳಲಾಗದು. ಅನುಭಾವವುಳ್ಳ ಆಚಾರಸಂಪನ್ನನಾದ ಸದ್ಭಕ್ತನಲ್ಲಿ ಅನಾದಿ ಪಾದೋದಕ_ಪ್ರಸಾದವ ಕೊಂಡವರು ಪರಮಮುಕ್ತರಾದರಯ್ಯಾ ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ. ಲಿಂಗಕ್ಕೆ ಜಂಗಮ ವಿಶೇಷವೆಂದು, ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು, ಪ್ರಸಾದದಿಂದ ಸಮರ್ಪಣವ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಲಿಂಗ ಪ್ರಾಣ ಜಂಗಮವೆಂದು ಮಾಡಿ, ಮತ್ತಾ ಜಂಗಮ ಮನೆಗೆ ಬಂದಡೆ ಸಂದೇಹವ ಮಾಡಲೇಕೆ? ತನ್ನ ಪ್ರಾಣ ಲಿಂಗವೆಂದರಿದು, ಲಿಂಗದ ಪ್ರಾಣ ಜಂಗಮವೆಂದರಿದು, ಉಭಯಪ್ರಾಣ ತತ್ಪ್ರಾಣವಾದ ಮತ್ತೆ, ಭಕ್ತಿಗೆ ಅವಿಶ್ವಾಸವಾಗಲೇಕೆ ? ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು, ಮಣ್ಣ ಬೇಡಿದಡೆ ಬದ್ಧನೆಂದು, ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ, ಭಕ್ತಿಯ ವಾಸಿಗೆ ಹೋರಲೇಕೆ ? ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ. ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು. ದಿಟಪುಟವನರಿದಡೂ ಗುರು ಕೊಟ್ಟ ನಿಟಿಲಲೋಚನನ ಘಟಿಸಬೇಕು. ಭಿತ್ತಿಯ ಮೇಲೆ ಚಿತ್ತಾರ ಒಪ್ಪವಿಟ್ಟಂತಿರಬೇಕು. ಗುರು ಕೊಟ್ಟ ಇಷ್ಟದ ಬೆಂಬಳಿಯ ದೃಷ್ಟವನರಿಯಬೇಕು. ಮೆಟ್ಟಿದುದು ಜಾರಿ, ಹಿಡಿದುದ ಮುರಿದ ಮತ್ತೆ, ಎರಡುಗೆಟ್ಟವಂಗೆ ಇನ್ನೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->