ಅಥವಾ

ಒಟ್ಟು 62 ಕಡೆಗಳಲ್ಲಿ , 25 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ?. ಒಡೆದ ಮಡಕೆಗೆ ಒತ್ತುಮಣ್ಣಕೊಟ್ಟರೆ ನಿಲಬಲ್ಲುದೇ ಅಯ್ಯ?. ಮುತ್ತೊಡೆದರೆ ಹತ್ತಬಲ್ಲುದೇ?. ಸುರಚಾಪ ನಿರ್ಧರವಾಗಬಲ್ಲುದೇ ಅಯ್ಯ?. ಚಿತ್ತವೊಡೆದರೆ ಭಕ್ತಿ ನೆಲೆಗೊಳ್ಳದು. ಭಕ್ತಿ ಬೀಸರವಾದರೆ, ಮುಕ್ತಿಯೆಂಬುದು ಎಂದಿಗೂ ಇಲ್ಲ ಕಾಣಾ. ಇದು ಕಾರಣ, ಚಿತ್ತ ಲಿಂಗವನಪ್ಪಿ ಒಡೆಯದೆ, ಭಕ್ತಿ ಬೀಸರವೊಗದೆ, ನಿಮ್ಮ ಕೂಡಿ, ನಿತ್ಯ ನಿರ್ಮುಕ್ತನಾದೆನು ಕಾಣಾ. ಎಲ್ಲರ ಪರಿಯಲ್ಲ, ಎನ್ನ ಪರಿ ಬೇರೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ, ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ. ಕೂಡಲಸಂಗಮದೇವ ಕೇಳಯ್ಯಾ, ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
--------------
ಬಸವಣ್ಣ
ಎಲ್ಲಾ ಪುರಾತರ ಚರಣಕೆ ಇಲ್ಲಿರ್ದೆ ಶರಣೆಂದಡೆ ಸಾಲದೆ ? ಬಸವಾ, ಬಸವಪ್ಪ, ಬಸವಯ್ಯ ಶರಣೆಂದಡೆ ಸಾಲದೆ ? ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತಿಪ್ಪ ಮಹಾಮಹಿಮ ನೀನಾಗಿ, ಎನಗಿದೇ ದಿವ್ಯಮಂತ್ರ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಬಸವಾ, ಬಸವಾ, ಬಸವಾ ಶರಣೆಂದ[ಡೆ]ಸಾಲದೆ ?
--------------
ಸಂಗಮೇಶ್ವರದ ಅಪ್ಪಣ್ಣ
ಎಲ್ಲರ ನೆನಹಿನ ಆಯುಷ್ಯದ ಪುಂಜವೆ, ಅವಧಾರು ಅವಧಾರು; ಅಯ್ಯಾ ಎನ್ನ ನೆನಹಿನ ಮಂಗಳನೆ, ಅವಧಾರು ಅವಧಾರು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕುರುಹುಳ್ಳನ್ನಕ್ಕ ಸಮಯದ ಹಂಗು, ಅರಿದಹೆನೆಂಬನ್ನಕ್ಕ ಆತ್ಮದ ಹಂಗು, `ಅಲ್ಲ' `ಅಹುದು' ಎಂಬನ್ನಕ್ಕ ಎಲ್ಲರ ಹಂಗು, ಗುಹೇಶ್ವರನೆಂಬನ್ನಕ್ಕ ಲಿಂಗದ ಹಂಗು ಬೇಕು ಘಟ್ಟಿವಾಳಣ್ಣಾ.
--------------
ಅಲ್ಲಮಪ್ರಭುದೇವರು
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಭಕ್ತಿಯ ಬಯಸುವಡೆ ನಿತ್ಯನಿತ್ಯ ನೆನೆಯಾ, ನಿಸ್ತಾರ ನಿಸ್ತಾರವೆಂದು ಮುಂದೆ ಬಂದಾಡೌ ಆತ ಶುದ್ಧದೇವ ಎಲ್ಲರ ಪರಿಯಂತಲ್ಲ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಲ್ಲಮನ ಸಂಗ, ಅಜಗಣ್ಣನ ಸಂಗ, ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ, ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ, ಮಾನ್ಯರ ಸಂಗ, ಮುಖ್ಯರ ಸಂಗ. ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.
--------------
ನೀಲಮ್ಮ
ಆನು ಶುದ್ಧಧವಳಿತನು ಎನಗೆ ಅನಾದಿ ಬಂದು ಹೊದ್ದಿದ ಕಾರಣವೇನಯ್ಯಾ ? ಜಲವ ಮೊಗೆಯೆ ಬಂದೆನೇಕಯ್ಯಾ ? ಗಿಡುವ ಹರಿಯ ಬಂದೆನೇಕಯ್ಯಾ ? ಎಲ್ಲರ ನಡುವೆ ಕುಳ್ಳಿರ್ದು ಗೀತವ ಹಾಡಬಂದೆನೇಕಯ್ಯಾ ? ಬಸವಣ್ಣ ಚೆನ್ನಬಸವಣ್ಣಯೆಂಬೆರಡು ಶಬ್ದವೇಕಾದವು ಹೇಳಾ, ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಕಲ್ಲಿನಲ್ಲಿ ಕಠಿಣ, ಖುಲ್ಲರಲ್ಲಿ ದುರ್ಗುಣ, ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು. ಇಂತೀ ಇವು ಎಲ್ಲರ ಗುಣ. ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬಂಗಾರದ ರೂಪಿದ್ದಲ್ಲದೆ ಬಣ್ಣ ವನವಗವಿಸದು. ಬಣ್ಣ ರಂಜನೆಯಾಗಿ ರಂಜಿಸುತ್ತಿರೆ ಎಲ್ಲರ ಕಣ್ಣಿಗೆ ಮಂಗಲ. ಇಂತೀ ಕಾಯ ಜೀವ ಜ್ಞಾನದ ಬೆಳಗು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಒದಗು.
--------------
ಶಿವಲೆಂಕ ಮಂಚಣ್ಣ
ಎಲ್ಲರ ಪ್ರಾಣವಂಗೈಯಲದೆ; ಎನ್ನ ಪ್ರಾಣ ಜಂಗಮದಲದೆ. ಎಲ್ಲರ ಆಯುಷ್ಯ ಶಿರದಲ್ಲಿ ಬರೆದಿದೆ; ಎನ್ನ ಆಯುಷ್ಯ ನಿಮ್ಮಲ್ಲಿ ಸಂದಿದೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಶರಣರೆನ್ನ ಪ್ರಾಣಲಿಂಗವೆಂದು ಧರಿಸಿದೆನು.
--------------
ಅಕ್ಕಮಹಾದೇವಿ
ಎಲ್ಲರ ದೀಕ್ಷೆಯ ಪರಿಯಂತಲ್ಲ ಎಮ್ಮಯ್ಯನ ದೀಕ್ಷೆ. ನಡೆ ನುಡಿ ಶುದ್ಧವಾದವರಿಗಲ್ಲದೆ ಅನುಗ್ರಹಿಸ ನೋಡಾ. ಪರಮಾರ್ಥಕಲ್ಲದ ಜಡ ನರರನೊಲ್ಲನೊಲ್ಲ, ದೀಕ್ಷೆಯ ಕೊಡ, ಭವಭಾರಿಗಳ ಮುಖದತ್ತ ನೋಡನಯ್ಯಾ ಕೂಡಲಚೆನ್ನಸಂಗಯ್ಯನೆಂಬ ಜ್ಞಾನಗುರು.
--------------
ಚನ್ನಬಸವಣ್ಣ
ಇನ್ನಷ್ಟು ... -->