ಅಥವಾ

ಒಟ್ಟು 37 ಕಡೆಗಳಲ್ಲಿ , 15 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ, ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ? ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ, ಆರಾರೆಂದಂತೆ ಆರೈಕೆಯಲ್ಲಿದ್ದು ; ತಾನು ತಾನಾದವಂಗೆ ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ತನ್ನ ಮರೆದಲ್ಲಿ ಲಿಂಗವ ಮರೆಯಬೇಕು. ತನ್ನನರಿತಲ್ಲಿ ಲಿಂಗವನರಿಯಬೇಕು. ಉಭಯಭಾವ ಅಳವಟ್ಟಲ್ಲಿ ಮುಂದಕ್ಕೊಂದು ಕುರುಹು ಏನೂ ಎನಲಿಲ್ಲ. ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ ಕುರುಹಾಗುತ್ತಿದ್ದಿಹಿತ್ತು.
--------------
ಬಿಬ್ಬಿ ಬಾಚಯ್ಯ
ಭಟಂಗೆ ಬ್ಥೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ? ಬಲ್ಲವ ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ಹೋರುವನ್ನಬರ ಬಲ್ಲವನಹನೆ? ಅರಿದು ನುಡಿಯಲಿಲ್ಲ, ಮರೆದು ಸುಮ್ಮನಿರಲಿಲ್ಲ. ಆರು ಎಂದಂತೆ ಎನಲಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೈ ಬಾಯಾಡುವಲ್ಲಿ ಕುರುಹಿನ ಭೇದವನರಿದು ಒಡಗೂಡಬೇಕು. ಆ ಗುಣವಡಗೆ, ಬೇರೊಂದಿದಿರೆಡೆಯಿಲ್ಲದಿರೆ ಏನೂ ಎನಲಿಲ್ಲ. ಕುರುಹಿಂಗೆ ಕುರುಹ ತೋರಿ, ಅರಿವಿಂಗೆ ಅರಿವ ಕೊಟ್ಟು ನಿಜವೆ ತಾನಾಗಿದ್ದಲ್ಲಿ ಉಭಯನಾಮವಡಗಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಯೋಗಿ ಎನಲಿಲ್ಲ, ಭೋಗಿ ಎನಲಿಲ್ಲ, ಕಾಮಿ ಎನಲಿಲ್ಲ, ನಿಃಕಾಮಿಯೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಯ್ಯ. ದೇವ ಎನಲಿಲ್ಲ, ಭಕ್ತ ಎನಲಿಲ್ಲ, ಭಾವವೆನಲಿಲ್ಲ, ನಿರ್ಭಾವವೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಣ್ಣಾ. ಭವಭಯಂಗಳೆಲ್ಲವ ಪರಿಹರಿಸಿ ಕಳೆದನು. ನಿಭ್ರಾಂತಿ ನಿರುತನು, ನಿಮ್ಮ ಶರಣ, ಅಪ್ರತಿಗೆ ಪ್ರತಿವುಂಟೆ? ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ. ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ. ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ. ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ. ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ. ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿರ್ಲೇಪವಾದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ.
--------------
ಆದಯ್ಯ
ನಾದ ಗುರುವಾದಲ್ಲಿ , ಬಿಂದು ಲಿಂಗವಾದಲ್ಲಿ, ಕಳೆ ಜಂಗಮವಾದಲ್ಲಿ, ಉತ್ಪತ್ಯಕ್ಕೆ ಹೊರಗು. ನಾದ ವಿಸರ್ಜನವಾದಲ್ಲಿ ಸ್ಥಿತಿಗೆ ಹೊರಗು. ಬಿಂದು ವಿಸರ್ಜನವಾದಲ್ಲಿ ಪ್ರಳಯಕ್ಕೆ ಹೊರಗು. ಸರ್ವಚೇತನಕ್ಕೆ ವಿಸರ್ಜನವಾದಲ್ಲಿ ಇಂತೀ ತ್ರಿವಿಧನಾಮ ನಷ್ಟ. ಅರಿದು ಅರುಹಿಸಿಕೊಂಬ ಉಭಯಲೇಪ ಏನೂ ಎನಲಿಲ್ಲ. ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ, ಇಲ್ಲಿಗೆ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಪೂಜನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಇಂತೀ ಉಭಯದೊಳಗಾದ ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು, ಇಲ್ಲ, ಇಂತೀ ನೇಮ ಹುಸಿ, ನಿಲ್ಲು. ಇಂತೀ ನೇಮಕ್ಕೆ ಒಳಗಾದಡೆ, ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥ, ತನಗೆ ದೃಷ್ಟದಲ್ಲಿ ಆದುದಿಲ್ಲ. [ಇಹ]ದಲ್ಲಿ ಕಾಣದೆ, ಪರದಲ್ಲಿ ಕಂಡೆನೆಂಬುದು, ಹುಸಿ, ಸಾಕು ನಿಲ್ಲು. ಕುರುಹಿನಿಂದ ಕಾಬಡೆ, ತನ್ನಿಂದಲೋ, ಕುರುಹಿನಿಂದಲೋ ? ಅರಿವಿನಿಂದಲೋ, ಕುರುಹಿನಿಂದಲೋ ? ಕುರುಹಿನಿಂದಲರಿದೆಹೆನೆಂದಡೆ, ಆ ಅರಿವಿನಿಂದ ಬೇರೊಂದು ಕಂಡೆಹೆನೆಂದಡೆ, ಕಾಣಿಸಿಕೊಂಡುದು ನೀನೋ, ನಾನೋ ? ಇಂತುಭಯವೇನೆಂದರಿಯದಿಪ್ಪುದೆ ಬೆಳಗಿನ ಕಳೆಯ ಕಾಂತಿಯೊಳಗಣ ನಿಶ್ಚಯ ತಾನಾದ ಮತ್ತೆ ಏನೂ ಎನಲಿಲ್ಲ, ಅದು ತಾನೇ. ಅದು ತಾ[ನೇನೂ] ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೂಜೆ ಅರತಲ್ಲಿ, ಎಲೆ ಉದುರಿದ ವೃಕ್ಷ ಉಲುಹಡಗಿದಂತಿರಬೇಕು. ಜಲವಿಲ್ಲದ ತಟಾಕದ ಕೆಳೆಯಲ್ಲಿ, ಬೆಳೆಯ ಬಿತ್ತಿದಂತಿರಬೇಕು. ವಾರಣಸಿದ ಕುಂಭದಲ್ಲಿ, ವಾರಿಯ ತುಂಬಿಸಿದಂತಿರಬೇಕು. ಬಯಲ ಬಡಿವಡೆದ ಪಾಣಿ ಅಸಿಯಂತಿರಬೇಕು. ಸುರಚಾಪದಂತೆ, ಮಾರುತ ಧ್ವನಿಯಂತೆ, ನಾಮರೂಪಿಂಗೆ ಹೊರಗಾದ ಮತ್ತೆ, ಏನೂ ಎನಲಿಲ್ಲ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂದೆನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ, ನಡೆದಡೆ ಗಮನವಿಲ್ಲ, ನುಡಿದಡೆ ಶಬ್ದವಿಲ್ಲ. ದಗ್ಧಪಟನ್ಯಾಯದ ಹಾಗೆ, ಉಂಡಡೆ ಉಪಾಧಿಯಿಲ್ಲ ಉಣ್ಣದಿದ್ದಡೆ ಕಾಂಕ್ಷೆಯಿಲ್ಲ. ಯಥಾಲಾಭ ಸಂತುಷ್ಟನಾಗಿ ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ ಅರಿವಿಲ್ಲ ಮರಹಿಲ್ಲ ತಾನೆಂಬ ನೆನಹಿಲ್ಲವಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಮುಂದೆ ಏನೂ ಎನಲಿಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ, ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ ! ತನ್ನಲ್ಲಿ ತಾನೆಯಾಗಿತ್ತು ! ನೆನಹಳಿದ ನಿರಾಳವ ಕಂಡು ಬೆರಗಾದೆ ! ಅಂತು ಇಂತು ಎನಲಿಲ್ಲ. ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->