ಅಥವಾ

ಒಟ್ಟು 100 ಕಡೆಗಳಲ್ಲಿ , 29 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ? ಅಂದಿಗೆ ಜಾÕನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
--------------
ಅವಸರದ ರೇಕಣ್ಣ
ಮುನ್ನ ಮಾಡಿದ ದೇಹ ನಿರ್ವಯಲಾದಡೆ, ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ? ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು. ಇವೆಲ್ಲ ಭಾವಸಂಕಲ್ಪವಿಕಲ್ಪವು. ಅಂಗ ಲಿಂಗವೆಂಬುದು ಪಳಮಾತು. `ಲಿಂಗಮಧ್ಯೇ ಜಗತ್ಸರ್ವಂ' ಎಂಬುದು ಅಖಂಡಲಿಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
`ಸರ್ವಂ ಶಿವಮಯಂ ಜಗತ್' ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ. `ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗು ಮನವೆ. ಪಿಂಡ ಬ್ರಹ್ಮಾಂಡಕ್ಕೆ `ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು. ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, `ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂದರಿದು ಬಂದಿತ್ತು ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಕ್ರೋಧ ಬಂದಲ್ಲಿ ಕೊಲ್ಲೆಂಬುದು, ದಯೆ ಬಂದಲ್ಲಿ ಬೇಡಾ ಎಂಬುದು, ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ? ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು, ಅದನರಿವುದು ಅದೇನು ಹೇಳಾ? ಆತ್ಮನರಿವೊ ಅದೇನು ಮರವೆಯೊ? ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ ಪುಸಿಯಹುದೊಂದೊ ಎರಡೊ? ಅರಿದಡೆ ತಾನೆಂಬ ಮರೆದಡೆ ಜಗವೆಂಬ ಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭೀಮ ಜೀವಧನದೊಡೆಯನ.
--------------
ಒಕ್ಕಲಿಗ ಮುದ್ದಣ್ಣ
ಜಾಗ್ರದಲ್ಲಿಹ ಮನುಷ್ಯಂಗೆ ಸ್ವಪ್ನ ಸುಷುಪ್ತಿ ಮಿಥ್ಯವೆಂಬುದು ಪ್ರಸಿದ್ಧ. ಸ್ವಪ್ನದಲ್ಲಿಹ ಮನುಷ್ಯಂಗೆ [ಜಾಗ್ರ] ಸುಷುಪ್ತಿ ಎಂಬುದು ತೋರಬಾರದು, ಸುಷುಪ್ತಿಯಲ್ಲಿ ಜಾಗ್ರ ಸ್ವಪ್ನವೆಂಬುದು ತಿಲಮಾತ್ರ ತಿಳಿಯಬಾರದು, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು, ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು, ಅರಿವು ಹಿಂಗಲಿಕೆ ಒಂದೆಂಬುದು, ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು, ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು, ಉಭಯಭಾವದಲ್ಲಿ ತೋರಿ ಹರಿದಾಡುವುದು, ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ? ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ.
--------------
ಮಾದಾರ ಧೂಳಯ್ಯ
ಮತ್ತಂ, ಗುಹ್ಯಮಂ ತ್ರಯೋದಶಾಂತದೊಳ್ಬೆರಸಿ ಪರಾಪರದೊಳೊಂದಿಸೆ ಹೌಂ ಎಂಬಾದಿಬೀಜಮಾಯ್ತು. ಮರಲ್ದುಂ, ಹ್ ಎಂಬ ಜೀವಮಂ ವರ್ಗಾದಿಯಾದಕಾರದೊಳ್ಮೋಳ್ಮೇಳಿಸಿ ಶಕ್ತಿಸಂಜ್ಞಿತ ಬಿಂದುವಂ ಬೆರಸೆ ಹಂ ಎನಿಸಿತ್ತು. ಬಳಿಕ್ಕಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನಮಂ ಕಲಾಸಂಜ್ಞಿತವಾದ ಕಾರಣದೊಳ್ಪುದುಗೆ ಸ ಎನಿಸಿತ್ತು. ಮತ್ತೆಯುಂ, ವ್ಯಂಜನಶಕ್ತಿ ಬೀಜವಾದ ಸ್ ಎಂಬುದು ಮಾತ್ರಾದಿ ಸಂಜ್ಞಿತಕಾರಮನೊಂದೆ ಎಂದಿನಂತೆ ಸ ಎನಿ[ಸಿ] ತ್ತು. ಬಳಿಕಂ, ವರುಣವರ್ಗದ ನಾಲ್ಕನೆ ಯ ಎಂಬಕ್ಕರವುಂ ಮೂರನೆಯ ಸ್ವರಮನಸ್ಥಿ ಸಂಜ್ಞಿತಮಾದ ಶ್ ಎಂಬಕ್ಕರದೊಡನೆ ಕೂಡಿಸೆ ಶಿ ಎನಿಸಿತ್ತು. ಸೋಮಾಂತ ಸಂಜ್ಞಿತವಾದ ವಕಾರಮಂ ದ್ವಿಕಲಾಸಂಜ್ಞಿತವಾದಾಕಾರಮ ನೊಂದಿಸೆ ವಾ ಎನಿಸಿತ್ತು. ವಾಯುಬೀಜವಾದ ಯ್ ಎಂಬಕ್ಕರವನಾದಿಕಲಾಸಂಜ್ಞಿತ- ಮಾದಕಾರದೊಡನೆ ಕೂಡಿಸೆ ಯ ಎನಿಸಿತ್ತಿಂತು `ಹೌಂ ಹಂ ಸ ಸದಾಶಿವಾಯ' ಎಂಬಷ್ಟಾಕ್ಷರಮಂತ್ರಮಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು !
--------------
ಅಲ್ಲಮಪ್ರಭುದೇವರು
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ. ಇಂತಪ್ಪವರ ಬ್ಥಿನ್ನಕ್ರಿಯಾಚಾರವನು ಸುಜ್ಞಾನೋದಯವಾದ ಜ್ಞಾನಕಲಾತ್ಮನು ತನ್ನ ಪರಮಜ್ಞಾನದಿಂ ನಷ್ಟವ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂದ್ಥಿಯಾಗಿ, ಸರ್ವಾಂಗಲಿಂಗಮಯ ತಾನೆಂದು ತಿಳಿದು, ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ ಗುರುಲಿಂಗಜಂಗಮವನ್ನು ತನ್ನ ತನುಮನದಲ್ಲಿ ಸ್ವಾಯತವಮಾಡಿದ ಶಿವಶರಣಂಗೆ ಭವ ಹಿಂಗಿ, ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
``ಪಾಕಾರಂ ಪಾವನಂ ಜ್ಞಾನಂ ದೋಕಾರಂ ದೋಷನಾಶನಂ ದಕಾರಂ ತು ದಯಾಕಾರಂ ಕಕಾರಂ ಕರ್ಮನಾಶನಂ||' ಎಂಬುದು ಪುಸಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ. ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ. ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
--------------
ಅಕ್ಕಮ್ಮ
ಕಿರಿಯರಾದಡೇನು ? ಹಿರಿಯರಾದಡೇನು ? ಅರಿವಿಂಗೆ ಹಿರಿದು ಕಿರಿದುಂಟೆ ? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು. ಅದ್ವೈತವೆಂದಡೆ ಕಾಣಬಾರದುದ ಕಂಡೆಹೆನೆಂಬುದು. ಇಂತು ದ್ವೈತ ಅದ್ವೈತಂಗಳಿಂದ ಕಂಡೆ ಕಾಣಿಸಿಕೊಳ್ಳೆನೆಂಬ ಬಂಧವಿಲ್ಲದೆ ನಿಜಸಂಗವೆಂಬುದು ತಲೆದೋರದೆ, ಉರಿಕೊಂಡ ಕರ್ಪುರದ ಗಂಧದಂತೆ ಅಲ್ಲಿಯೆ ಸ್ಥಲಲೇಪ ಲೋಪ, ಸದ್ಯೋಜಾತಲಿಂಗ ಬಟ್ಟಬಯಲು.
--------------
ಅವಸರದ ರೇಕಣ್ಣ
ಇನ್ನಷ್ಟು ... -->