ಅಥವಾ

ಒಟ್ಟು 144 ಕಡೆಗಳಲ್ಲಿ , 36 ವಚನಕಾರರು , 117 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು, ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇಧಿಸಬಾರದು ?) ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜಾÕನ. ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ, ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರುಪ್ರಕಾರ. ಸ್ವರಾಕ್ಷರವೆಲ್ಲ ನಾದಸಂಬಂಧ. ವಿಕಲಾಕ್ಷರವೆಲ್ಲ ಬಿಂದುಸಂಬಂಧ. ವ್ಯಾಪಕಾಕ್ಷರವೆಲ್ಲ ಕಳಾಸಂಬಂಧ. ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ. ಈ ನಾದ ಬಿಂದು ಕಳೆಗಳ ಗಬ್ರ್ಥೀಕರಿಸಿಕೊಂಡಿರ್ಪುದು ಚಿತ್ತು. ಆ ಚಿತ್ ಪ್ರಣಮಸ್ವರೂಪವೆ, ಅದ್ವೆ ೈತಾನಂದದಿಂದ ಸಂಪೂರ್ಣವನುಳ್ಳ ಆದಿಮಹಾಲಿಂಗವು, ಅನುಪಮಲಿಂಗವು, ಅನಾಮಯಲಿಂಗವು, ಅದ್ವಯಲಿಂಗವು, ಪರಮಲಿಂಗವು, ಪರಾಪರಲಿಂಗವು, ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೋಹಂ ಎಂದಡೆ ಅಂತರಂಗದ ಗರ್ವ; ಶಿವೋಹಂ ಎಂದಡೆ ಬಹಿರಂಗದ ಅಹಂಕಾರ ; ಈ ಉಭಯವನಳಿದು ದಾಸೋಹಂ ಎಂದಡೆ ಪರಮಪದವು. ಇದು ಕಾರಣ, ಎನಗೆ ದಾಸೋಹಂ ಭಾವವನೆ ಕರುಣಿಸಿ ಬದುಕಿಸಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದೃಶ್ಯವ ಕಾಬ ದೃಷ್ಟನಾರೋ ಎಂದಡೆ ದೃಶ್ಯ ದೃಷ್ಟಗಳನರಿವ ಅರಿವದು ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ. ಅದೃಶ್ಯಭಾವ ದೃಷ್ಟಿ ಚಿನ್ಮಯ ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ, ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ, ಹೃದಯನಾಬ್ಥಿಯಲ್ಲಿ ಸಕಲನಿಃಕಲನಾಗಿ, ಸ್ವಾದ್ಥಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ, ಆ ಸಕಲಕ್ಕೆ ಎರಡು ಪಾದವನಿತ್ತು, ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ, ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು, ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ, ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು, ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ, ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು. ಆ ನಂದೀಶ್ವರಂಗೆ ಚಿತ್‍ಶಕ್ತಿಯೆ ಅಂಗ, ಪರಶಕ್ತಿಯೆ ಮುಖ. ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ ಹೊತ್ತಿಪ್ಪನಲಾಯೆಂದರಿದು, ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು. ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು, ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು, ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು. ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು. ಆ ಸಕಲವೆಂದರೆ ಅನಂತತತ್ತ್ವ. ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು ದೇವದಾನವ ಮಾನವರು ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು. ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು. ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ ದೇವನಾವನುಂಟೆಂದು ಆಹ್ವಾನಿಸಿ ನೋಡಲು, ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು, ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ, ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು, ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು, ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು, ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು, ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು, ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ, ಅಡಿಮುಡಿಗೆ ತಾನೆ ಆದಿಯಾಗಲು, ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು. ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು ಮುಕ್ಕುಳಿಸಿ ಉಗುಳುವ ಪಡುಗ, ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ, ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಸಂಗಮೇಶ್ವರದ ಅಪ್ಪಣ್ಣ
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು ಹರಿಗೆ ಹತ್ತು ಪ್ರಳಯ, ಬ್ರಹ್ಮಂಗನಂತ ಪ್ರಳಯ, ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ ಪ್ರಳಯ ಪ್ರಳಯ ಅಂದಂದಿಂಗೆ ಹಳೆಯ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ತಿಳಿ ನೀರೆಂಬೆ ತಿಳಿನೀರೆಂಬೆ, ತಿಳಿ ನೀ ಎಂದು ಒಂದು ದಿನ ಅಂದಿಲ್ಲೆಲೆ ಮಾನವಾ. ಕ್ಷಣಕ್ಕೆ ಕ್ಷಣಕ್ಕೆ ತಿಳಿ ನೀ ಎಂದಡೆ, ತಳುಹುದೆ ತನ್ನ ನಿಜವ ಕೊಡನೆ ಕಪಿಲಸಿದ್ಧ ಮಲ್ಲೇಂದ್ರ ?
--------------
ಸಿದ್ಧರಾಮೇಶ್ವರ
ಭವವಿಲ್ಲದಡೇನು, ಬಂಧನವಿಲ್ಲದಡೇನು, ಶಿವಗಣಂಗಳೆಲ್ಲರ ಮನಕ್ಕೆ ಬಾರದುದೆ ಭವಬಂಧನ ನೋಡಾ. ಪರಹಿತಾರ್ಥವಾಗಬೇಕೆಂದು ಲಿಂಗವ ಕೊಟ್ಟಡೆ ನಿಮ್ಮ ಪ್ರಮಥರ ಮುಂದೆ ಶಿವ ಮುನಿದು ಮತ್ರ್ಯಲೋಕಕ್ಕೆ ಕಳುಹಿಸಿದನು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದು ನಂಬಿದಲ್ಲಿ ನಿಮ್ಮ ಪ್ರಮಥರೆನ್ನನೊಳಗಿಟ್ಟುಕೊಂಡರು. ಜಂಗಮಮುಖದಲ್ಲಿ ಲಿಂಗವನರಿಸಿಕೋ ಎಂದಡೆ ದಾಸೋಹವೆಂಬ ಪಸರವನಿಕ್ಕಿದೆನು. ಕೂಡಲಸಂಗಮದೇವರ ಮುಂದೆ ಜಂಗಮಮುಖದಲ್ಲಿ ಎಂದು ಸುಖಿಯಪ್ಪೆನು ಹೇಳಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಆಗುವ ಭೋಗಂಗಳಿಗೆ ಮೈಗೊಟ್ಟುದು ಎಂದಡೆ, ಮೈಗೊಡೆದು ನೋಡಾ, ಲಿಂಗಾರ್ಚನಾಫಲ. ಆಗಬಾರದ ಕಾರ್ಯ ಮಾಡೆನೆಂದಡೆ, ಮೈಗೊಡುವುದು ನೋಡಾ, ಲಿಂಗಾರ್ಚನಾಫಲ. ದೃಢವಿರಬೇಕು ಲಿಂಗಾರ್ಚನೆಯಲ್ಲಿ! ದೃಢವಿಲ್ಲದವನ ಹೆಡಗುಡಿಯ ಕಟ್ಟಿ ಎಡಹಿಬಿಡುವ ಭವದಡಿಗೆ, ಎಮ್ಮ ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
--------------
ಸಿದ್ಧರಾಮೇಶ್ವರ
ಸಾಧನೆಯ ಬಲ್ಲೆನೆಂದು ಹಾದಿಹೋಕರಕೂಡೆ ಹೋರದಿರಬೇಕು. ಬೀದಿಯಲ್ಲಿ ನಿಂದು ಬೀರದಿರಬೇಕು. ಬಲ್ಲೆಯಾ ಎಂದಡೆ ಬಲುಗೈಯನರಿಯೆನೆನಬೇಕು. ನೆಟ್ಟನೆ ನಿಂದು ಪಟ್ಟಕ್ಕೊಡೆಯರಾದವರೆಂಬೆ ಅಮುಗೇಶ್ವರಲಿಂಗಕ್ಕೆ ಅಧಿಕರೆಂಬೆ.
--------------
ಅಮುಗೆ ರಾಯಮ್ಮ
ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ ಕಾಯವು ಭೂತಕಾಯವು. ವಾಯುಪ್ರಾಣಿಗೆ ಉತ್ಪತ್ತಿಸ್ಥಿತಿಲಯ ಕಾರಣಕಾಯವು. ಈ ಪರಿಯ ಉತ್ಪತ್ತಿಯು ದೇವದಾನವ ಮಾನವರಿಗೆಯೂ ಒಂದೇ ಪರಿ. ಶ್ರೀಗುರುವಿನ ಸೃಷ್ಟಿಯಿಂದಲೂ, ಮಹಾಪ್ರಸಾದದಿಂದಲೂ ಮಹಾಮಂತ್ರಸಮ್ಮಿಶ್ರದಿಂದಾದ ಕಾಯವು ಪ್ರಸಾದಕಾಯವು. ಮಹಾಮಂತ್ರಪಿಂಡವು ಭಕ್ತಿಕಾಯವು. ಲಿಂಗಪ್ರಾಣಿಗೆ ಉತ್ಪತ್ತಿಸ್ಥಿತಿಲಯವಿಲ್ಲ. ಸತ್ಯನು ಸದ್ಯೋನ್ಮುಕ್ತನು. ಈ ಪರಿಯ ಶ್ರೀಗುರುಕಾರುಣ್ಯವ ಪಡೆದ ಮಹಾತ್ಮರಿಗೆ ಒಂದೇ ಪರಿ. ಶ್ರೀಗುರುವಿನ ಕಾರುಣ್ಯದ ಪರಿ ಶಿವಭಕ್ತನ ಇರವಿನ ಪರಿ ಇಂತುಟಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರಿಗೆ ಲೋಕದ ಮಾನವರು ಸರಿ ಎಂದಡೆ ನಾಯಕನರಕ ತಪ್ಪದು.
--------------
ಉರಿಲಿಂಗಪೆದ್ದಿ
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ವಿದ್ಯೆ ಎಂದಡೆ ಭಾರತ-ರಾಮಾಯಣವಲ್ಲ. ಭಾರತವೆಂದಡೆ ಭರತದೇಶದಲ್ಲಿ ಜನಿಸಿ, ಕಾಮಿನಿಯರ ಸೋಗುಹಾಕಿ, ಆ ದೇಶಕ್ಕದ್ಥಿಪ್ಕಯಾದ ಕಥೆಯೆ ಭಾರತವಯ್ಯಾ. ರಾಮಾಯಣವೆಂದಡೆ, ಆದಿನಾರಾಯಣನು ಪೃಥ್ವಿಯೊಳು ಹುಟ್ಟಿ, ರಾಮನೆಂಭಧಾನವ ಧರಿಸಿ, ಸರ್ವರಂತೆ ಪ್ರಪಂಚವ ಮಾಡಿ, ರಾಕ್ಷಸರ ಗರ್ವವನಳಿದುದೆ ರಾಮಾಯಣ. ಮಾಡಿ ಉದ್ಧಟವಾದಲ್ಲಿ ಕಾಲಾಂತರದಲಾದರೂ ಕುರುಹಿನೊಳಗಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->