ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ, ಸಂಗ ಮಹಾಸಂಗದ ವರ್ಮದಾಸೋಹ ಹೃದಯಕ್ಕೆ ಸಾಹಿತ್ಯವಾದ ಭಕ್ತಂಗೆ ಅರ್ಪಿತ ಅನರ್ಪಿತವೆಂಬ ಸಂಕಲ್ಪ ವಿಕಲ್ಪವಿರಹಿತ, ಮತ್ತೆ ಅರ್ಪಿಸಬಲ್ಲನಾಗಿ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯವೆಂಬ ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು, ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮ ಇಂತೀ ಅಷ್ಟತನುವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿಹ ಲಿಂಗಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.
--------------
ಚನ್ನಬಸವಣ್ಣ
ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ, ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ. ಆ ವಾಯುವನಧೋಮುಖಕ್ಕೆ ತರಬಾರದೆಂದು, ಊಧ್ರ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ ಅಷ್ಟಾಂಗಕರ್ಮಿಗಳು ಕೇಳಿರೊ. ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ? ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ? ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ? ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ? ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ? ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ? ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ, ಕಂಡೆಹೆನೆಂಬ ಭ್ರಾಂತೆಲ್ಲಿಯದೊ? ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ ಕೆಟ್ಟರಲ್ಲ ಕರ್ಮಯೋಗಿಗಳು. ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ.
--------------
ಮೋಳಿಗೆ ಮಾರಯ್ಯ
ಗುದ ಲಿಂಗ ನಾಭಿಮಂಡಲದಿಂದ ಮೇಲೆ ಷಡಂಗುಲವ ಹತ್ತಿ, ಅಧೋಮುಖಕಮಲವನು ಊಧ್ರ್ವಮುಖಕ್ಕೆ ತಂದು, `ನಾಭ್ಯಾ ಆಸೀದಂತರಿಕ್ಷಂ ಎಂಬ ಅಂತರಿಕ್ಷದೊಳಗಿಪ್ಪ ಚಿದಾತ್ಮನಪ್ಪಂತಹ ಆದಿತ್ಯನ ಕಿರಣಂಗು ಹೋಗಿ ತಾಗಲ್ಕೆ, ಆ ಪದ್ಮ ವಿಕಸಿತವಾಗಿ, ಅನೇಕ ರತ್ನಸಂಕೀರ್ಣವಪ್ಪಂತಹ ಹೃದಯದೀಪ್ತಿಯ ಪ್ರಕಾಶವ ಕಂಡು ಶಿವಜ್ಞಾನದೊಳಿಡಿದು, ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬೀ ಅಷ್ಟಾಂಗಯೋಗದೊಳ್ವಿಡಿದು ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳಕಮಲದ ಮೇಲೆ ಇಪ್ಪ ಜೀವ ಪರಮನ ಭೇದವೆಂತಿರ್ದುದೆಂದಡೆ; ಜೀವಾತ್ಮಪರಮಾತ್ಮೇತಿ ಭೇದಂ ತ್ಯಕ್ತ್ವಾ ಪರಾಂ ಗತಿಂ ಅಭ್ಯೇತಿ ಪುರುಷಃ ಸಾಕ್ಷೀ ಕ್ಷೇತ್ರಜ್ಞೋ[s]ಕ್ಷಯಮಶ್ನುತೇ ಎಂದುದಾಗಿ ಜೀವಪರಮರಿಬ್ಬರನು ಏಕಾರ್ಥವ ಮಾಡಲ್ಕೆ, ದ್ವಾಸುಪರ್ಣಾ ಸಯುಜಾ ಸಾಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ[s]ಭಿಚಾಕಶೀತಿ ಎಂದುದಾಗಿ ಬ್ರಹ್ಮನಾ?ದ ಮೇಲೆ ಪ್ರಯೋಗಿಸಿ ಕವಾಟದ್ವಾರವ ತೆಗೆದು ತೆರಹಿಲ್ಲದ ಬಯಲು-ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಊರ ಬಾಗಿಲ ಕಂಬದಲ್ಲಿ ಮೂರು ಮುಖದ ಕೋಡಗ ಬಂದವನಿವನಾರೆಂದು ನೋಡುತ್ತ, ಮತ್ತೊಂದು ಮುಖ ನಿಂದವನ ಏಡಿಸುತ್ತ ಮತ್ತೊಂದು ಮುಖ ಹಿಂದೆ ಒಂದಿದವನ ನೆನೆವುತ್ತ, ಇಂತೀ ಮೂರು ಚಂದ, ಹಿಂದಳ ಅಧೋಮುಖಕ್ಕೆ, ನಡುವಳ ಅಭಿಮುಖಕ್ಕೆ, ಕಡೆಯ ಊಧ್ರ್ವಮುಖಕ್ಕೆ ಕುಂಡಲಿಯ ಹಾವೆದ್ದು ಕೋಡಗವ ಒಂದೆ ಬಾರಿ ನುಂಗಿತ್ತು. ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಅಡಿಗಡಿಗೆ ಸ್ಥೂಲಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ, ಸಂಗ-ಮಹಾಸಂಗ-ಸಂಕಲ್ಪವಿರಹಿತನು. ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನವೆಂಬ ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮ ಇಂತೀ ಅಷ್ಟಮೂರ್ತಿಮದವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿ ಲಿಂಗಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.
--------------
ಚನ್ನಬಸವಣ್ಣ
-->