ಅಥವಾ

ಒಟ್ಟು 112 ಕಡೆಗಳಲ್ಲಿ , 44 ವಚನಕಾರರು , 101 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ, ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ, ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ, ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ ಬೆರೆಸಿದೆನಯ್ಯಾ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ
ಶಿಲೆಯೊಳಗಣ ಉರಿ ಅಡಗಿಪ್ಪಂತೆ, ಬಲುಗೈಯನ ಕೋಲೆ ಉಡುಗಿಪ್ಪಂತೆ, ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ, ಅರ್ಕೇಶ್ವರಲಿಂಗನ ತೊಡಿಗೆ ಹೀಗಾಗಬೇಕು.
--------------
ಮಧುವಯ್ಯ
ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ, ವಾಳುಕ ಸಂಬಂದ್ಥಿಯಾದ ಜಲದ ಇರವಿನಂತೆ, ಶಿಲೆ ತೈಲದ ಒಲುಮೆಯಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಉರಿ ಆತ್ಮಸ್ಥಾವರಂಗಳಲ್ಲಿ ನಂದದಿಹನ್ನಕ್ಕ, ನೀರು ಒಂದರಲ್ಲಿಯೆ ಇಂಗದಿಹನ್ನಕ್ಕ, ಲಿಂಗವೆಂಬುದೊಂದು ಪ್ರಮಾಣವುಂಟು ಆ ಪ್ರಮಾಣು ಅಪ್ರಮಾಣಹನ್ನಕ್ಕ, ಭಾವ ಮೂರು, ನಿರ್ಭಾವ ಮೂರು, ಸ್ಥೂಲವಾರು, ತತ್ತ್ವವೈದು, ಇಂತಿವು ಕೂಡೆ, ಅಳೆದು ಮರಳಲಿಕ್ಕೆ ಹಲವು ಸ್ಥಲ ಕುಳ ಬೇರಾಯಿತ್ತು. ಬಂಗಾರವೊಂದು ಹಲವು ತೊಡಿಗೆಯ ಹೊಲಬಾದಂತೆ, ತನ್ನಷ್ಟೇ ತದ್ದøಷ್ಟವುಭಯವ ಕೂಡುವನ್ನಬರ, ನಿಃಕಳಂಕ ಮಲ್ಲಿಕಾರ್ಜುನನೆಂದೆನುತ್ತಿರಬೇಕು.
--------------
ಮೋಳಿಗೆ ಮಾರಯ್ಯ
ಉಪ್ಪು ಅಪ್ಪು ಕೂಡಿದಂತೆ, ಉರಿ ಕರ್ಪುರ ಕೂಡಿದಂತೆ, ಮಾರುತ ಪರಿಮಳವ ಕೂಡಿದಂತೆ, ಆಕಾಶ ಬಯಲ ಕೂಡಿದಂತೆ, ತಾನು ತಾನಾದುದ ತಾನೇ ಕೂಡಿದಂತೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕನ್ನವನ್ನಿಕ್ಕಿ ಚಿನ್ನವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಹಾದರವಮಾಡಿ ಹಾಗವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಗಾಣವ ಹಾಕಿ ಮೀನ ಹಿಡಿದು ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಇಂತಿವರೆಲ್ಲರು ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ ಸದಾಚಾರಕ್ಕೊಳಗಾಗಿ ಮುಕ್ತಿವಡೆದರು. ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ ವ್ರತನೇಮಗಳ ಹಿಡಿದು ಬಿಟ್ಟವಂಗೆ ಮುಂದು ಹಿಂದಾಯಿತು, ಆತ ವ್ರತಗೇಡಿ. ಅದು ಹೇಗೆಂದೊಡೆ ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ ಕರ್ಮತ್ರಯಂಗಳು ಬೆನ್ನ ಬಿಡವೆಂದು ಶರಣರ ವಚನಂಗಳು ಸಾರುತ್ತಿವೆ. || ಗ್ರಂಥ || `ಸ್ಥಾವರಂ ಬ್ಥಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ| ಉಭಯೋಬ್ರ್ಥಿನ್ನಭಾವೇನ ನಾರ್ಚನಂ ನ ಚ ವಂದನಂ||' ಇಂತೆಂದುದಾಗಿ ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ? ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ? ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ? ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ. ಉರಿ ಕರ್ಪೂರವ ಹಿಡಿದಂತೆ ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ ಶರಣಸ್ಥಲದ ಮತವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಜ ಹರಿ ಸುರರಿಗೆ ಶರೀರವ ತೊಡಿಸಿ ಕರಣದೋಕುಳಿಯಾಡಿ ವಿಷಯದ ಮಳೆಯ ಕರೆವುತ್ತಿದ್ದಾಳೆ ನೋಡಾ. ಹರಣದ ಮಧ್ಯದಲ್ಲಿ ನಿಂದು, ಹೆಣ್ಣು ಹೊನ್ನು ಮಣ್ಣು ತೋರಿ, ಕಣ್ಣ ಕಟ್ಟಿದಳು ನೋಡಾ, ನಿಮ್ಮ ಕಾಣಲೀಯದೆ. ತಾನು ತಲೆಕೆಳಗಾಗಿ ಕಾಲುಮೇಲಾಗಿ ನಡೆವಳು. ಕರಿಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಸುಡುತಿಪ್ಪಳು ನೋಡಾ. ಕರಿಯ ಶಿರದಲ್ಲಿ ಉರಿ ಹುಟ್ಟಲು ಕರಿ ಬೆಂದಿತ್ತು, ಹರಿ ನಿಂದಿತ್ತು, ಉರಿ ಕೆಟ್ಟಿತ್ತು. ಶರೀರಗುಣವಳಿದು ಸದ್ಭಕ್ತಿಸಾಮ್ರಾಜ್ಯವನಾಳುತ್ತಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲಿ ಹೆಬ್ಬುಲಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವ. ಇಂತಿವೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು, ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರ್ಯವೇ ಔಷಧವು. ಹೇಳಿದರೆ ಕೇಳರು, ತಾವು ತಿಳಿಯರು, ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು. ಇಂತಹ ಗೊಡ್ಡು ಮೂಳ ಹೊಲೆಯರಿಗೆ ಕರ್ಮವೆಂಬ ಶರದ್ಥಿಯಲ್ಲಿ ಬಿದ್ದು ಉರುಳಾಡುವುದೆ ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಮರದಲ್ಲಿ ಉರಿ ಹುಟ್ಟಿ, ಅಡಗಿ ಸುಡದ ಭೇದವ ಬಲ್ಲಡೆ, ಕಾಯದ ಲಿಂಗದ ಸೂತಕವಿಲ್ಲ. ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ, ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ, ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ. ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು, ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇದ್ಥಿಸಿದಂತಿರಬೇಕು. ಆ ಚರಪರ ಒಡಗೂಡಿದಂತಿರಬೇಕು. ಜಲ ಜಲವ ಕೂಡಿದಂತೆ ಹೆರೆಹಿಂಗುವುದಕ್ಕೊಡಲಿಲ್ಲ. ವಾರಿಯ ಶಿಲೆ ಬಲಿದು ನೋಡ ನೋಡ ನೀರಾದಂತಿರಬೇಕು. ಇಷ್ಟಲಿಂಗಸಂಬಂಧದ ನಿಷ್ಠೆ, ಪ್ರಾಣಕೂಟ ಉಭಯ ಮೋಸವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ. ಒಂದು ಧರೆಯ ಕಣ್ಣು, ಒಂದು ಸಿರಿಯ ಕಣ್ಣು, ಒಂದು ಉರಿಯ ಕಣ್ಣು. ಉರಿ ಸಿರಿಯ ನುಂಗಿ, ಸಿರಿ ಧರೆಯ ನುಂಗಿ, ಧರೆ ಅರುಹಿರಿಯರ ನುಂಗಿತ್ತು. ಆ ಗುಣವನರಿಯಬೇಕು, ಸದಾಶಿವಮೂರ್ತಿಲಿಂಗವ ಭೇದಿಸಬೇಕು
--------------
ಅರಿವಿನ ಮಾರಿತಂದೆ
ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ, ಕುಸುಮ, ಫಲ ಮೈದೋರದಂತೆ, ಕಾಷ್ಠದೊಳಗಣ ಅಗ್ನಿ ಉರಿ ಉಷ್ಣದೋರದಂತೆ, ಪತಂಗನ ಕರದೊಳಗಡಗಿಪ್ಪ ಮರೀಚಿ ಪ್ರವಾಹಿಸದಂತೆ, ಬಿಂದುವಿನೊಳಡಗಿಪ್ಪ ನಾದ ದನಿದೋರದಂತೆ, ಪಿಂಡ ಬ್ರಹ್ಮಾಂಡಗಳ ಕೂಡಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗವನಾರೂ ಬೆರಸಬಾರದಯ್ಯಾ.
--------------
ಆದಯ್ಯ
ಇನ್ನಷ್ಟು ... -->