ಅಥವಾ

ಒಟ್ಟು 31 ಕಡೆಗಳಲ್ಲಿ , 16 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು, ಗುರುವಾಗಬಹುದೆ ಅಯ್ಯಾ? ಬೀಜವಿಲ್ಲದೆ ಅಂಕುರವಾಗಬಲ್ಲುದೆ? ಗಂಡನಿಲ್ಲದ ಮುಂಡೆಗೆ ಗರ್ಭನಿಂದಡೆ ಅವಳಾರಿಗೆ ಯೋಗ್ಯ? ಉಭಯವು ಕೇಡಾಯಿತ್ತು. ಇದನರಿತು ಮಾಡಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ನೀರೊಳಗಣ ನೆಯಿದಲು ತಾವರೆಯಂತೆ, ಅದಾರಿಗೆ ಸುಖ ಅದಾರಿಗೆ ದುಃಖವೆಂಬುದ ಆರೈದಲ್ಲಿ, ಆ ಉಭಯವು ನೀರಿನ ಆರೈಕೆಯಿಂದ ಲೇಸೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮಂಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ. ವಿಷ್ಣುವಿಂಗೆ ಲಕ್ಷ್ಮಿಯಾಗಿ ಕಾಡಿತ್ತು ಮಾಯೆ. ರುದ್ರಂಗೆ ಉಮಾದೇವಿಯಾಗಿ ಕಾಡಿತ್ತು ಮಾಯೆ. ಎನಗೆ ನಿಮ್ಮನರಿವ ಬಯಕೆ ಭವಮಾಯೆಯಾಗಿ ಕಾಡುತ್ತದೆ. ನೀನಾನುಳ್ಳನ್ನಕ್ಕ ಉಭಯವು ಮಾಯೆಯಾಗಿದೆ, ಸದಾಶಿವಮೂರ್ತಿಲಿಂಗವು ನಾ ನೀನೆಂಬುದೆ ಮಾಯೆ.
--------------
ಅರಿವಿನ ಮಾರಿತಂದೆ
ಕಾಲದೊಳು ತನುದಂಡಣೆ, ಜೀವಭವ ಸಂಭವ. ಈ ಉಭಯವು ಪ್ರಕೃತಿಯೊಳಗಾದಲ್ಲಿ, ಅರಿವು ಹೋಯಿತ್ತು ಸುಂಕಕ್ಕೆ, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಎಸುವರ ಬಲ್ಲೆ; ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ. ಪೂಜಿಸುವವರ ಬಲ್ಲೆ ಪೂಜಿಸಿದ ಲಿಂಗ ಅಭಿಮುಖವಾಗಿ ಸರ್ವಾಂಗದಲ್ಲಿ ವೇಧಿಸುವರ ಕಾಣೆ. ನುಡಿಗೆ ನಡೆ, ಆ ನಡೆಗೆ ನುಡಿ ಉಭಯವ ವೇಧಿಸುವರ ಕಾಣೆ. ಈ ಉಭಯವು ಸಿದ್ಧಿಯಾಗಿ ಸಿದ್ಧಾಂತವಾದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಕ್ರೀಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ.
--------------
ಮೋಳಿಗೆ ಮಹಾದೇವಿ
ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ, ಹಿಂದು ಮುಂದಳ ಸಂದೇಹವ ಮರೆಯಬೇಕು. ಅಂಗವರತಲ್ಲಿಯೆ ಲಿಂಗವ ಮರೆಯಿತ್ತು. ಸೆಲೆಯಿಲ್ಲದ ಬಾವಿಯ ತೋಡಿ ಸಂದೇಹಕ್ಕೊಳಗಾಹನಂತಾಗಬೇಡ. ಉಭಯವು ರೂಪಾಗಿದ್ದಲ್ಲಿ ಅರಿ ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ಶಿವ ಭಕ್ತನಾಗಿ ಮುಂದೆ ಬಂದು ಮಂದಿರವ ಕಟ್ಟಿದ, ಶಿವ ಜಂಗಮವಾಗಿ ಕರ್ತುರೂಪ ತಾಳಿ ಹಿಂದುಳಿದು ಬಂದ, ಉಭಯವು ಒಂದಾಗಿ ಜಗಹಿತಾರ್ಥವಾಗಿ ಬಂದ ಅಂದ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅಂಗ ಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ; ಈ ಉಭಯವು ಮರೆದಲ್ಲಿ ಮಹಾಶರಣರ ಸಂಗದೊಲುಮೆ, ಒಲುಮೆಯ ಒಲವರವ ನಿನ್ನಿ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಪ್ಪುವಿನಿಂದ ಸಕಲ ಮಯವೆಲ್ಲವು ಕಲ್ಪಿಸಿ, ಅಪ್ಪುವಿನಿಂದ ಮಲ ನಿರ್ಮಲವೆಂಬುದಾಯಿತ್ತು. ವಸ್ತುವಿನಿಂದ ರೂಪು ನಿರೂಪೆಂಬುದಾಯಿತ್ತು. ಜಲದಿಂದಾದ ಪಂಕವ ಜಲ ತೊಳೆದು ನಿರ್ಮಲವಾದಂತೆ, ನಿರೂಪು ಸ್ವರೂಪನಾಗಿ ಸ್ವರೂಪು ನಿರೂಪನಾಗಿ ಉಭಯವು ನೀನಾಗಿ, ನಾ ಕಂಡು ನುಡಿವುದಕ್ಕೆ ಎನಗೊಂದೆಡೆಯಿಲ್ಲ, ಕಾಲಾಂತಕ ಭೀಮೇಶ್ವರಲಿಂಗವು ನೀನೆಯಾಗಿ.
--------------
ಡಕ್ಕೆಯ ಬೊಮ್ಮಣ್ಣ
ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು ಸಾಯದಕಿನ್ನ ಮುನ್ನವೆ ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವ ಮಂತ್ರವನು ಸಂಬಂಧಿಸಿಕೊಳ್ಳಬೇಕಲ್ಲದೆ, ಸತ್ತ ಶವಕ್ಕೆ ಭುಜಪತ್ರದ ಮೇಲೆ ಪ್ರಣಮವ ಬರದು ಆ ದೇಹಕ್ಕೆ ಹಚ್ಚಿದರೆ ಆ ದೇಹವು ಮಂತ್ರದೇಹವಾಗಬಲ್ಲದೆ? ಆಗಲರಿಯದು. ಅದೆಂತೆಂದಡೆ: ಚಿತ್ರಕನು ಕಾಗದದ ಮೇಲೊಂದು ಚಿತ್ರವ ಬರೆದು ಗೋಡೆಗೆ ಹಚ್ಚಿದರೆ ಆ ಗೋಡೆಯು ಚಿತ್ರವಾಗಲರಿಯದು ಎಂಬ ಹಾಗೆ. ಉಭಯವು ಒಂದೇ ಆದ ಕಾರಣ; ಅಂತಪ್ಪ ಮೂಢಾತ್ಮರ ಮೇಳಾಪವ ವಿಸರ್ಜಿಸಿದ ಶಿವಶರಣನು ದೇಹದಲ್ಲಿರುವ ಪರಿಯಂತರದಲ್ಲಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವಮಂತ್ರವನು ಮುಳ್ಳೂರಲಿಕ್ಕೆ ಇಂಬಿಲ್ಲದ ಹಾಗೆ ಸ್ವಾಯತವ ಮಾಡಿಕೊಂಡು ಆ ಮಂತ್ರದಲ್ಲಿ ಲೀಯವಾಗಿ ಪ್ರಪಂಚವನಾಚರಿಸುತ್ತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಫಲವ ಸಲಿಸುವನ್ನಬರ ಬಿತ್ತು ಸಿಪ್ಪೆ ಉಭಯವು ಇರಬೇಕು. ಸಾರವ ಸಲಿಸಿದಲ್ಲಿ ಸಮಯ ಉಳಿಯಿತ್ತು. ನಮ್ಮ ಕೂಡಲಸಂಗಮದೇವರಲ್ಲಿ ಹಾಗರಿಯಬೇಕು, ಎಲೆ ಘಟ್ಟಿವಾಳಯ್ಯಗಳೆ.
--------------
ಬಸವಣ್ಣ
ಜಗದ ವರ್ತಕದ ಇರವು ಎಂತೆಂದಡೆ: ಶೈವ ನೇಮಸ್ಥ ಎರಡೆ ಭೇದ. ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ, ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ, ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ, ಭಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗದ ಭಾವಸಂಬಂಧ.
--------------
ಅರಿವಿನ ಮಾರಿತಂದೆ
ಗುರುಸೇವೆಯ ಮಾಡುವಲ್ಲಿ ಇಹದಲ್ಲಿ ಸುಖ; ಲಿಂಗಸೇವೆಯ ಮಾಡುವಲ್ಲಿ ಪರದಲ್ಲಿ ಸುಖ; ಜಂಗಮಸೇವೆಯ ಮಾಡುವಲ್ಲಿ ಇಹ-ಪರವೆಂಬ ಉಭಯವು ನಾಸ್ತಿ, ಚಂದೇಶ್ವರಲಿಂಗವ ಹಿಂಗದ ಭಾವ.
--------------
ನುಲಿಯ ಚಂದಯ್ಯ
ಇನ್ನಷ್ಟು ... -->