ಅಥವಾ

ಒಟ್ಟು 24 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಕವ ಮೆಟ್ಟಿದ ಅಡಿ, ಉಭಯಕ್ಕೆ ಶಂಕೆದೋರದಿಹುದೆ ? ತ್ರಿವಿಧವ ಕೂಡಿ ಆಡುವ ಮನ, ಅವರೊಳು ಒಡಗೂಡದಿಹುದೆ ? ಅದರ ತೊಡಿಗೆಯನರಿತಡೆ ಗಡಿಗೆಯನೊಡಗೂಡಿದ ಜಲದಂತಿರಬೇಕು. ಕಾರ್ಯ ಕೂಡಿದಲ್ಲಿ ಗಡಿಗೆಯಾಗಿ, ಮತ್ತೆ ವಾರಿಯ ಬೆರಸದಂತಿರಬೇಕು. ಇದು ಕರತಳಾಮಳಕ, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಪರ್ಣದ ಮರೆಯ ಫಲದಂತೆ, ಬಣ್ಣದ ಮರೆಯ ಬಂಗಾರದಂತೆ, ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ. ಕಾಯದಲ್ಲಿ ಸುಳುಹುದೋರುತ್ತ. ಭಾವದಲ್ಲಿ ಪರವನಾಚರಿಸುತ್ತ ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ ಕಾಲಾಂತಕ ಬ್ಥೀಮೇಶ್ವರಲಿಂಗವು ಅವರ ಬಾಗಿಲಲ್ಲಿಬಳಸಾಡುತಿಪ್ಪನು.
--------------
ಡಕ್ಕೆಯ ಬೊಮ್ಮಣ್ಣ
ವಿಹಂಗನ ತತ್ತಿಗೆ ಸ್ಪರ್ಶನದಿಂದ ಕೂರ್ಮನ ಶಿಶುವಿಂಗೆ ಕೂರ್ಮೆಯಿಂದ ಚತುಃಪಾದಿ ನರಕುಲಕ್ಕೆ ಕುಚಗಳಿಂದ ಮಿಕ್ಕಾದ ಜೀವಜಾತಿ ಲಕ್ಷಣಕ್ಕೆ ತಮ್ಮ ಸ್ಥಾನದಲ್ಲಿಯೆ ತೃಪ್ತಿ. ಆವ ಸ್ಥಲವ ನೆಮ್ಮಿದಲ್ಲಿಯೂ ಭಾವಶುದ್ಧವಾದಲ್ಲಿಯೆ ಮುಕ್ತಿ. ಉಭಯಕ್ಕೆ ಉಪಮಾತೀತನಾದಾಗಲೇ ನಿರ್ವೀಜ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ಕುಂಭದ ಮಳೆ ಹೊಯ್ಯಿತ್ತು. ಮೂರಂಗದ ನೇಗಿಲ ತರಿಯಬೇಕು. ಆರಂಗದ ಭೂಮಿಯಲ್ಲಿ ಅರಸಲಾಗಿ ಒಂದೆ ಮರ ಹುಟ್ಟಿತ್ತು. ಹುಟ್ಟುವಾಗ ಮರ ಮೂರು ಕವೆ, ಅಲ್ಲಿಂದತ್ತಾರು ಕವೆಯಾಯಿತ್ತು. ಆ ಆರರ ಮಧ್ಯದಲ್ಲಿ ಮೂವತ್ತಾರು ಕವೆಯಾಯಿತ್ತು. ಆ ಮೂವತ್ತಾರರ ಮಧ್ಯದಲ್ಲಿ ನೂರೊಂದು ಕೊಂಬೆ ಶಾಖೆಗೂಡಿತ್ತು. ಆ ಮರನನೇರಿ ಹಿಂದುಮುಂದಣ ಕೊಂಬೆ ಕಳೆದು ಕೊಡಲಿಯಾಡೋದಕ್ಕೆ ತೆರಪಮಾಡಿ, ನಡುವಣ ಕೊಂಬೆ ಕಡೆವುತ್ತಿರಲಾಗಿ, ಒಂದು ಹೊಯಿಲಿಗೆ ಇದರಂಗದ ತೊಪ್ಪೆ ಹರಿದು, ಉಭಯಕ್ಕೆ ದಿಂಡು ಹರಿದು, ತ್ರಿವಿಧಕ್ಕೆ ಗರ್ಭಗೆಚ್ಚು ಖಂಡಿತವಾಯಿತ್ತು. ಮರ ತಟ್ಟಾರಬೇಕೆಂದು ಇರಿಸಿ ಬಂದೆ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ
ಕುಸುಮ ಗಂಧ[ವ] ಉಪದೃಷ್ಟದಿಂದ ಹೊರೆವಂತೆ, ಕಿಸಲಯದ ಘೃತ, ಅದು ತನ್ನ ಎಸಳದಿಂದ ಬಂಧ ಬಿಡುವಂತೆ, ರಸಿಕರ ವಿವೇಕವ ಹೊಸ ನವನೀತದಲ್ಲಿ ನಿಶಿತ ಅಳಕವ ತೆಗೆದಂತೆ, ಆವಾವ ಸ್ಥಲವ ವೇಧಿಸಿದಲ್ಲಿ, ಭಾವಕ್ಕೆ ಭ್ರಮೆಯಿಲ್ಲದೆ, ಉಭಯಕ್ಕೆ ನೋವು ಇಲ್ಲದೆ, ಭಾವ ನಿರ್ಭಾವವಾಗಬೇಕು. ಆತ ಷಟ್ಸ್ಥಲವೇದಿ, ಉಭಯಸ್ಥಲಭರಿತ, ಸರ್ವಸ್ಥಲಸಂಪೂರ್ಣ, ಸರ್ವಭಾವ ಲೇಪ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಉಭಯಸ್ಥಲಲೇಪವಾದ ಶರಣ.
--------------
ಮೋಳಿಗೆ ಮಾರಯ್ಯ
ಲಿಂಗಕ್ಕೆ ಮಲಿನವಾದಲ್ಲಿ ಒರಸಿ ತೊಳೆದಡೆ ದೋಷವ ಕಟ್ಟಬಹುದೆ? ಗುರು ಚರ ಭಕ್ತರಲ್ಲಿ ಭ್ರಾಮಕದಿಂದ ಮರೆದಿರೆ ಅರುಪಲಿಕ್ಕೆ ದೂಷಣೆ ಉಂಟೆ? ತನ್ನಂಗದ ಕಲೆವ ತಾ ಹಿಂಗಿಸುವುದಕ್ಕೆ ನಿಂದೆ ಗುಣದೋಷಂಗಳುಂಟೆ? ಇದು ಕಾರಣದಲ್ಲಿ ಒಡೆಯನ ಹರವರಿ ಬಂಟಂಗೆ ಲಾಭವಹಂತೆ, ಉಭಯಕ್ಕೆ ಕೇಡಿಲ್ಲದಿರ್ಪ ಭಕ್ತಿಸತ್ಯ. ಕಾಲಾಂತಕ ಭೀಮೇಶ್ವರಲಿಂಗನು ಉಭಯದ ತಪ್ಪನೊಪ್ಪನಾಗಿ.
--------------
ಡಕ್ಕೆಯ ಬೊಮ್ಮಣ್ಣ
ಸಕಲ ಸ್ಥಾವರ ಸಕಲ ಬುದ್ಬುದಂಗಳಲ್ಲಿ ಸಕಲ ಚರಾದಿಗಳಲ್ಲಿ, ಸಕಲ ಅಂಡಪಿಂಡಗಳಲ್ಲಿ ತೋರುವ ತೋರಿಕೆ, ಕಾಣದ ಅಚ್ಚರಿಯ ಕಂಡೆ ಕಾಣೆನೆಂಬುದ ಒಂದೆ ಭಾವ. ಆ ಭಾವದ ಭ್ರಮೆಯಡಗಿ ಇಷ್ಟಲಿಂಗದಲ್ಲಿ ಆರ್ಚನೆ ಪೂಜನೆ ಭಾವಲಿಂಗದಲ್ಲಿ ಭ್ರಮೆಯಡಗಿ ಉಭಯಕ್ಕೆ ಠಾವಿಲ್ಲದೆ ತಲೆದೋರದೆ ನಿಂದುದು ಕಾಲಾಂತಕ ಭೀಮೇಶ್ವರಲಿಂಗವೆಂಬುದಕ್ಕೆ ಪ್ರಮಾಣವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ? ಎನ್ನ ಅಂಗ ಪ್ರಾಣಕ್ಕೆ ಲಿಂಗವಲ್ಲದೆ ಕರಣಂಗಳಿಗೆ ಬೇರೊಂದಂಗವುಂಟೆ? ಇದಕ್ಕೆ ಅಂಜುವಡೆ, ``ಗುರೋಃ ಪಾಪಂ ಶಿಷ್ಯಸ್ಯಾಪಿ ಶಿಷ್ಯಪಾಪಂ ಗುರೋರಪಿ' ಎಂಬುದ ಹುಸಿಯಾದಡೆ ಹೇಳಿಸಿಕೊಂಬುವ ಗುರು ಹೇಳುವಾತ ಶಿಷ್ಯನೆ? ಆತ ಹೇಳೂದಕ್ಕೆ ಮುನ್ನ ತಾನರಿಯಬೇಕು. ಈ ಉಭಯಕ್ಕೆ ಭಿನ್ನ ಭಾವವಿಲ್ಲ. ಜೂಳಿಯ ಕುಂಭದಂತೆ ಏತರಲ್ಲಿ ಒದಗಿದಡೂ ಸರಿ. ಸಗುಣನೀತಿಗೆ ಮುಕ್ತಿ ಉಭಯಸ್ಥಲ ಯುಕ್ತಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ? ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ ಅಸು ಘಟಿಸಿದುದುಂಟೆ, ಅಯ್ಯಾ? ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ? ಸೂಜಿಕಲ್ಲು ಸೂಜಿಯನರಸುವಂತೆ, ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ! ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ? ಅದರ ಮರೆಯ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಪ್ರಥಮ ಮೂಲದಲ್ಲಿ ನಿರಾಕಾರವಸ್ತು ಸಾಕಾರವಾಯಿತ್ತು. ಆಚಾರಕ್ಕೋಸ್ಕರವಾಗಿ ವಸ್ತು ಅನಾಚಾರಿಯಾದ. ಅನಾಹತ ಸಂಸಿದ್ಧ ಆಗಲಾಗಿ ವಿಚಾರಮುಖದಿಂದ ಆಚಾರ್ಯನಾದ. ಆ ಮರದ ಶಾಖೆಯ ತೊಡಪಿಂದ ಆ ಮರದ ಫಲದ ಕೈಗೆ ತಾಹಂತೆ ಈ ಗುಣ ಕ್ರೀ ನಿಃಕ್ರೀಯೆಂಬ ಉಭಯವಿವರದ ಭೇದ. ಉಭಯಕ್ಕೆ ಒಂದು ಶುದ್ಧವಾದಲ್ಲಿ ಒಂದಲ್ಲಿ ಒಂದು ಸಂದಿತ್ತು. ಈ ಗುಣ ಕ್ರೀ ನಿಃಕ್ರೀಲೇಪ, ಏಕಸ್ಥಲ ಐಕ್ಯನ ಕೂಟ ಗೋಪತಿನಾಥ ವಿಶ್ವೇಶ್ವರಲಿಂಗದ ಒಳಗಿನಾಟ.
--------------
ತುರುಗಾಹಿ ರಾಮಣ್ಣ
ರಾಜಸ ತಾಮಸ ಸಾತ್ವಿಕವನರಿದು ಪೂಜಿಸಿಕೊಂಬುದು ಗುರುಚರದ ಇರವು. ಕೊಟ್ಟಿಹರೆಂದು ಬೇಡದೆ, ಇಕ್ಕಿಹರೆಂದು ಉಣ್ಣದೆ, ಭಕ್ತನಲ್ಲಿ ಅರಿದು ಬಂದುದ ಅನುಕರಿಸಿ ಮರವೆಯಿಂದ ಬಂದುದ ತೆರದರಿಸಿನವ ಮಾಡಿ, ಉಭಯಕ್ಕೆ ಕೇಡಿಲ್ಲದಂತೆ ಇಪ್ಪುದು ಗುರುಚರದ ಇರವು, ಸದಾಶಿವಮೂರ್ತಿಲಿಂಗದ ಅರಿವು.
--------------
ಅರಿವಿನ ಮಾರಿತಂದೆ
ತಪ್ಪಿ ಇಷ್ಟ ನೆಲಕ್ಕೆ ಬಿದ್ದಲ್ಲಿ ದೃಷ್ಟದಿಂದ ತನ್ನ ತಾನೆ ಬಂದುದು ಅದು ಏಕಲಿಂಗನಿಷೆ*. ವ್ರತಗೆಟ್ಟೆನೆಂಬುದನರಿತು ಆಗವೆ ಪ್ರಾಣವ ಬಿಟ್ಟುದು ವ್ರತನಿಷೆ*ವಂತನ ಭಾವ. ಇಂತೀ ಉಭಯಕ್ಕೆ ತಟ್ಟುಮುಟ್ಟಿಲ್ಲ, ಹೀಗಲ್ಲದೆ ಇಷ್ಟವೆಂದೇನು? ವ್ರತಗೆಟ್ಟವನೆಂದೇನು? ಎಂದು ಘಟ್ಟಿಯತನದಲ್ಲಿ ಹೋರುವ ಮಿಟ್ಟೆಯ ಭಂಡಂಗೆ ಮತ್ತೆ ಸತ್ಯ ಸದಾಚಾರ ಭಕ್ತಿ ಉಂಟೆ? ಇಂತಿವರನು ನಾ ಕಂಡು ಗುರುವೆಂದು ವಂದಿಸಿದಡೆ, ಲಿಂಗವೆಂದು ಪೂಜಿಸಿದಡೆ, ಜಂಗಮವೆಂದು ಶರಣೆಂದಡೆ, ಎನಗದೆ ಭಂಗ, ಏಲೇಶ್ವರಲಿಂಗ ತಪ್ಪಿದಡೂ ಹೊರಗೆಂಬೆನು.
--------------
ಏಲೇಶ್ವರ ಕೇತಯ್ಯ
ಅಯ್ಯ ವಿಶ್ವತೋಚಕ್ಷುರುತ' ಎಂದುದಾಗಿ, ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು. ಜಗವೆಲ್ಲ ನೇತ್ರವಾಗಿದ್ದರೆ, ನೇತ್ರದೊಳಗುತ್ತಮ ಮಧ್ಯಮ ಕನಿಷ*ಂಗಳು ಏಕಾದವು ? ಎಂದಡೆ ಹೇಳಿಹೆವು ಕೇಳಿರಯ್ಯ: ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ, ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ ಇಷ್ಟಮಹಾಜ್ಯೋತಿರ್ಲಿಂಗವನು ನೋಡಿದ ನೇತ್ರವೆ ಲಿಂಗನೇತ್ರವು. ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು. ಅಯ್ಯಾ ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು ಉಭಯಕರ್ಮಕ್ಕೆ ಒಳಗಿಲ್ಲಾಗಿ ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು ಅಯ್ಯಾ ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ ಪಂಚಮಹಾಪಾತಕ ಸೂತಕಂಗಳಲ್ಲಿ ವರ್ತಿಸುವ ಅಪಾತ್ರಜೀವಿಗಳಾದ ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು ಮೀನುಗಳೆಂದು ವಿಷನೇತ್ರವೆಂದು ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲ ಬಾಣವೆಂದು, ತಾಮಸಾಗ್ನಿಯೆಂದು ಕುರೂಪದ ನೇತ್ರೇಂದ್ರಿಯವೆಂದು, ಶಿವಾಚಾರ ಸದ್ಧರ್ಮಿಗಳ ನಿಂದಿಸುವ ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು. ಇಷ್ಟಲಿಂಗವಿಲ್ಲಾದ ಕಾರಣ ಕನಿಷ*ಚಕ್ಷುವೆಂದುದು ನೋಡಾ ಅಯ್ಯ. ಅದರಿಂದ ಸದ್ಭಕ್ತ ಶರಣಗಣಂಗಳು ಅರ್ಚನೆ ಅರ್ಪಿತದ್ರವ್ಯವ ಕೊಡದೆ, ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಮಂತ್ರಸಂಸ್ಕಾರವಾದುದೆ ಲಿಂಗ, ಭಿನ್ನವಾದಡೆ ಲಿಂಗವಲ್ಲ. ವ್ರತಭ್ರಷ್ಟನಾಗಿ ಜಂಗಮವಾದಡೆ ಜಂಗಮವಲ್ಲ. ಅದೆಂತೆಂದಡೆ : ಸ್ಥಾವರಂ ಭಿನ್ನದೋಷೇಣ ವ್ರತಭ್ರಷ್ಟೇನ ಜಂಗಮಃ ಉಭಯೋಭಿನ್ನಭಾವೇನ ನಾರ್ಚನಂ ನ ಚ ವಂದನಮ್ || ಎಂದುದಾಗಿ, ಇದು ಕಾರಣ, ಉಭಯಕ್ಕೆ ಅರ್ಚನೆ ವಂದನೆಯಂ ಮಾಡಲಾಗದು, ಅವಕ್ಕೆ ಪ್ರಾಯಶ್ಚಿತ್ತವಿಲ್ಲದ ಕಾರಣ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->