ಅಥವಾ

ಒಟ್ಟು 28 ಕಡೆಗಳಲ್ಲಿ , 15 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ: ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು. ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು. ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು; ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು; ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು ಪುನರಪಿಯ ಮಾಡಿ ಪುನರ್ದೀಕ್ಷೆಯ ಮಾಡಬೇಕು. ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ. ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ನಿಜವಕೊಟ್ಟು ಗಜಬಜೆಯನೆಸಗಲುಂಟೆ ? ಒಡಲಕಿಚ್ಚಿನ ತುಡುಗು ಬೆಡಗಿನೊಳಗಿಲ್ಲ ಉಪದೇಶ. ನಿನ್ನ ಸಂಸಾರ ನಿನ್ನುದ್ದ, ನಿಃಸಂಸಾರಿಗಳ ತಗುಲಿಕೊಳ್ಳದಿರು. ಕೊಟ್ಟವರಾರು ಕೊಂಡವರಾರು ? ಹಮ್ಮು ಬಿಮ್ಮು ಹವಣಿಸಿಕೊ ಗುರುನಿರಂಜನ ಚನ್ನಬಸವಲಿಂಗಸಹಿತ ಗುರುವೆನಿಸುವರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ, ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ ಪಂಚಮಹಾಪಾತಕರು ನೀವು ಕೇಳಿ ಭೋ. ಅಂಡದೊಳಗೆ ಹುಟ್ಟಿದ ಉತ್ಪತ್ತಿಯೆಲ್ಲವೂ ಗುರುವಿಂದಾಯಿತ್ತು. ಮತ್ತೆ ಮಿಂಡ ಮೈಲಾರ ಬೀರ ಭೈರವ ಯಕ್ಕನಾತಿ ಕುಕ್ಕನೂರ ಬಸದಿ ಕೇತಧೂಳನೆಂಬ ಕಾಳುದೈವಕ್ಕೆರಗಿ, ಶಿವಭಕ್ತನೆನಿಸಿಕೊಂಬ ಚಂಡಿನಾಯಿಗಳ ಕಂಡು, ಎನ್ನ ಮನ ಹೇಸಿತ್ತು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ. ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು. ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ. ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ. ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು; ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ ? ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು. ಒಬ್ಬರಲ್ಲಿ ಒಂದು ಭಾವವುಂಟೆ ? ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊ?ಗಣ ಆವ್ಯಕ್ತಲಿಂಗ. ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನಂತರಂಗದ ಸುಜ್ಞಾನಲಿಂಗ. ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ, ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ. ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ ? ಕಾರ್ಯದಲ್ಲಿ ಗುರುವಾಗಿ, ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ ? ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಎನಗೆ ನೀವು ಉಪದೇಶವ ಮಾಡಿದಡೆ ಮರ್ತಲೋಕದ ಮಹಾಗಣಂಗ? ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಸಂಗನಬಸವಣ
--------------
ಚನ್ನಬಸವಣ್ಣ
ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ. ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ._ ಇಂತೀ ಚತುರ್ವಿಧದೊಳಗಿಲ್ಲ, ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!
--------------
ಅಲ್ಲಮಪ್ರಭುದೇವರು
ಎಂಜಲು ಮಾತು ನುಡಿವ ರಂಜಕರೆಲ್ಲರು ಮಿಗೆಮಿಗೆ ವಿೂಸಲ ತಾವೆತ್ತ ಬಲ್ಲರು? ವಿೂಸಲು ಎಂಜಲಹುದೆ ? ಎಂಜಲು ವಿೂಸಲಹುದೆ ? ಮಾತಿನ ಬಣಬೆಯ ಮೇದ ಪಶುಪ್ರಾಣಿಯಂತೆ ಎಂಜಲು ಮಾತನೆ ನುಡಿಯುತ್ತಿಹರು, ಲಿಂಗಸಕೀಲಸಂಯೋಗದ ವರ್ಮಸ್ಥ?ವನವರೆತ್ತ ಬಲ್ಲರು ! ಕೂಡಲಚೆನ್ನಸಂಗಯ್ಯಾ, ಉಪದೇಶ ಸೂತಕಿಗಳೆಲ್ಲರೂ ರೌರವನರಕಿಗಳು.
--------------
ಚನ್ನಬಸವಣ್ಣ
ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿಹ ಗುರುಲಿಂಗವನು ಕರ್ತೃತ್ವನಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದ ಸಮಸ್ತವಾದ ಉಪದೇಶ ವಿಧಾನ ಶಾಸ್ತ್ರಂಗಳಲ್ಲಿ ಮಾಡಲ್ಪಟ್ಟ ಆಸ್ಪದವನುಳ್ಳುದಾಗಿಯು, ಕಡೆಯಿಲ್ಲದ ಸುಖಸಮುದ್ರವನಾಗಿಯು, ಬುದ್ಧಿತತ್ವದಾಸ್ಥಾನದಲ್ಲಿ ಪ್ರತಿಷಿ*ತನಾಗಿಹ ಗುರುಲಿಂಗವಿಹುದು ನೋಡಾ, ಇದಕ್ಕೆ ಮಹಾವಾತುಲಾಗಮೇ :ವೃತ್ತ - ``ಸ್ವಜ್ಞಾನ ಶಕ್ತಿವಿಭವೋದಿತ ಕರ್ತೃತ್ವಂ | ಸರ್ವೋಪದೇಶವಿದಿತಂ ತತ್ರಕೃತಂ ಪ್ರತಿಷಿ*ತಂ,| ತೇಜೋನಿಧಿಂ ಪರಮಪಾಠ ಸುಖಾಂಬುರಾಸಿ ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಶ್ವಮೇಧಯಾಗವಂತಿರಲಿ, ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ ! ಗಾಯತ್ರಿಯ ಜಪವಂತಿರಲಿ, ಹೋ ! ಜನಮೋಹನ ಮಂತ್ರವಂತಿರಲಿ, ಹೋ ! ಕೂಡಲಸಂಗನ ಶರಣರ ನುಡಿಗಡಣ ಎಲ್ಲಕ್ಕಧಿಕ ನೋಡಾ.
--------------
ಬಸವಣ್ಣ
ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ, ಹಿಡಿವಾತನ ಯುಕ್ತಿ ಎಂತೆಂದಡೆ ಮನ, ವಚನ, ಕಾಯ, ತ್ರಿಕರಣಶುದ್ಧಾತ್ಮನಾಗಿ, ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ, ನಡೆವುದ ನಡೆಯದಿಹುದೆಂಬುದ ಸ್ಥಿರೀಕರಿಸಿ, ಶ್ರುತ, ದೃಷ್ಟ, ಅನುಮಾನ, ಮೂರನೊಂದುಮಾಡಿ ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು. ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ ; ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವಭೇದ. ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ ರಾಗವಿರಾಗಗಳೆಂಬ ಭಾವವ ವಿಚಾರಿಸಿ, ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ. ತೊಡಕಿನಂಬಿನ ಘಾಯ ತಪ್ಪಿದಡೆ ಇಹಪರದಲ್ಲಿ ಉಭಯದೋಷz ಹೀಗೆಂದು ಉಪದೇಶವಂ ಕೊಟ್ಟು ಸಂತೈಸುವುದು ಗುರುಸ್ಥಲ. ಆ ಗುಣಕ್ಕೆ ಮುಯ್ಯಾಂತು, ಪರಮಹರುಷಿತನಾಗಿ, ಗಣಸಮೂಹಂ ಕೂಡಿ, ಪರಮ ವಿರಕ್ತರಂ ಕರೆದು, ಮಹತ್ತು ನೆರಹಿ, ಗುರುಲಿಂಗಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ. ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ, ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ. ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು. ಇಂತೀ ಸರ್ವಗುಣಸಂಪನ್ನ ಮಾಡಿಸಿಕೊಂಬವನೂ ತಾನೆ, ಮಾಡುವಾತನೂ ತಾನೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಪರುಷಲೋಹದಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಉರಿಯುಂಡ ತೃಣದಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಕರ್ಪುರದ ಜ್ಯೋತಿಯಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಕೀಡಿ ಕುಂಡಲಿಯಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ವಾರಿಕಲ್ಲ ಪುತ್ಥಳಿ ಅಪ್ಪುವನೊಡಗೂಡಿದಂತೆ ಮಾಡಿತ್ತೆನ್ನ ಅಖಂಡೇಶ್ವರಾ, ನಿಮ್ಮ ವಚನೋಪದೇಶ.
--------------
ಷಣ್ಮುಖಸ್ವಾಮಿ
ಜಗದ ಜನವ ಹಿಡಿದು ಉಪದೇಶವ ಮಾಡಿದ ಗುರುವಿಂಗೆ, ಆ ಉಪದೇಶ ಕೊಟ್ಟುಕೊಂಡ ಮಾರಿಗೆ ಹೋಹುದಲ್ಲದೆ ಅಲ್ಲಿ ನಿಜವಳವಡುವುದೆ ? ತೆರನನರಿಯದ ಸಂಸಾರ ಜೀವಿಗಳು ಮಾಡಿದ ದೋಷ ತಮ್ಮನುಂಗಿ, ಆ ಗುರುವಿಂಗೆ ಉಪಹತಿಯ ಮಾಡುವುದು ನೋಡಾ. ಗುಹೇಶ್ವರಾ_ತಾನಿಟ್ಟ ಬೇತಾಳ ತನ್ನನೆ ತಿಂದಡೆ ಬೇಕು ಬೇಡ ಎನಲುಂಟೆ ?
--------------
ಅಲ್ಲಮಪ್ರಭುದೇವರು
ಎಲ್ಲರಿಗೂ ಬಲ್ಲತನವ ಹೇಳಿ ಬಲ್ಲವನೆಂದಡೆ ಅದು ಇಲ್ಲದ ಮಾತು. ಬಲ್ಲತನವನರಿವುದೆಂದು ಹೇಳುವ ಮಾತು ಅವರಿಗೊ ತನಗೊ? ಸಾಧನೆಯ ಮಾಡುವ ಭೇದಕ ಗಾಯದ ಆಗ ತೋರಿ ತಿವಿಯೆಂದಡೆ ಅದರ ಆಗು ಹೋಗು ಆರಿಗೆಂಬುದನರಿ. ತಂಬಿಗೆಯಲ್ಲಿ ತುಂಬಿದ ಉದಕವ ಕೊಂಬುದು ತಂಬಿಗೆಯೊ ಕೊಂಬುವ ತಾನೊ ಎಂಬುದನರಿ. ತನಗಾ ನಿರಂಗದ ಸಂಗ ನಿಬದ್ಧಿಯಾದಲ್ಲಿ, ಅಂತಾ ಇರವ ಇದಿರು ಕಂಡು ಪ್ರಮಾಣಿಸುವಲ್ಲಿ, ಅವರಿಗದೇ ನಿಂದ ಉಪದೇಶ. ಇದು ಅರಿಕೆವಿದರ ಇರವು. ಹಾಗಲ್ಲದೆ ಬೆಳೆಗೆ ನೀರನೆರೆದು ಫಲವ ಭೋಗಿಸುವಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಯ ಒಂದು, ಪ್ರಾಣ ಒಂದು, ಭಾವ ಒಂದು, ನಿರ್ಭಾವ ಒಂದು, ಒಂದಲ್ಲದೆ ಎರಡುಂಟೆ ? ಗುರು ಒಂದು, ಲಿಂಗ ಒಂದು, ಉಪದೇಶ ಒಂದು. ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ ಇಬ್ಬರಿಗೆಯೂ ಅಭ್ಯಾಸ ಒಂದೆ ಕಾಣಾ ಪ್ರಭುವೆ
--------------
ಚನ್ನಬಸವಣ್ಣ
ಇನ್ನಷ್ಟು ... -->