ಅಥವಾ

ಒಟ್ಟು 19 ಕಡೆಗಳಲ್ಲಿ , 15 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ರಶಿಖಾಮಂಡಲದಲ್ಲಿ ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ ಚಿತ್‍ಶಿಖಿಯೆಂಬ ಕಿಚ್ಚು ಹುಟ್ಟಿ ಮೃತ್ಯುಗಳ ಮೊತ್ತವ ಸಂಹರಿಸಿ ತತ್ ತ್ವಂ ಅಸಿಯೆಂಬ ಪದವ ನುಂಗಿ ಪರಾಪರವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರದಲ್ಲಿ ಶಿವಲಿಂಗ ಉದರದಲ್ಲಿ ಅಗ್ನಿ ಪರಿಯಂತೆ ಪ್ರಸಾದಲಿಂಗ ಭವಿಸಿ, ತನುಮಲತ್ರಯವನು, ಘನಪಾಶವರ್ಗವನು, ನೆನಹಿಂದ ಸುಟ್ಟುದದು ಪರಿಯಂತರವುಯೆಯ್ದಿ. ಸಕಲವನು ತೋರುವಾ ಅಪ್ರಮಾಣ ಪ್ರಸಾದಲಿಂಗ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ ಮೂವರು ಪುರೋಹಿತರು ಬಂದರು. ಒಬ್ಬ ಇಹದಲ್ಲಿ ಗುಣವ ಬಲ್ಲವ; ಒಬ್ಬ ಪರದಲ್ಲಿ ಗುಣವ ಬಲ್ಲವ; ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ ಮೂರ ನೆನೆದು ಅರಿಯ. ಅರಿಯದವನ ತೋಳಿನ ಕೊಡಗೂಸು, ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ, ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು ಕೊಡಗೂಸು ಕೊಡನೊಳಗಾದಳು. ಇಂತಿವರಡಿಯ ಭೇದವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಒಂದಾಡಿನ ಕಣ್ಣಿನಲ್ಲಿ ಬಂದವು ಮೂರು ಸಿಂಹ. ಆ ಸಿಂಹದ ಬಾಯ ಸೀಳಿ ಹುಟ್ಟಿದವೈದು ಮದಗಜ. ಗಜದೊಡಲೊಡೆದು ಬರಿ ಕೈಯಲ್ಲಿ ನರಿ ಹುಟ್ಟಿತ್ತು. ನರಿಯ ಉದರದಲ್ಲಿ ಮೊಲ ಹುಟ್ಟಿ, ಆ ಮೊಲ ಮೂವರ ಮೊಲೆಯ ತಿಂದಿತ್ತು. ಮೊಲೆ ಹಲುದಾಗಿ ಮೊಲೆ ಮೊದಲುಗೆಟ್ಟಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಜಗದೊಡಲು ತಾನಾದ ಕಾರಣ.
--------------
ಸಗರದ ಬೊಮ್ಮಣ್ಣ
ಲಿಂಗಾರ್ಚನೆಯಿಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ. ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚನ್ನನ ಮನೆಯಲ್ಲಿ. ಚಿತ್ರಗುಪ್ತರರಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ, ಬೈಚಿಟ್ಟಿರಿ ಕೈಲಾಸದಲ್ಲಿ. ನಿಮ್ಮ ಚಿಕ್ಕುಟ ಉದರದಲ್ಲಿ ಈರೇಳು ಭುವನಂಗಳೆಲ್ಲವು. ನಿಮ್ಮ ರೋಮಕೂಪದಲ್ಲಿ ಅಡಗಿದವು; ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಗಳು]_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ. ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು. ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸದಾಶಿವ ವಸ್ತುವ ಭೇದವಂಶದಲ್ಲಿ ಆದ ಮಹಾ ಅಂಧಕಾರದಲ್ಲಿ ಬಲಭದ್ರ ವೀರರುದ್ರನ ಸಂಬಂಧದಿಂದ ಆದ ಉಭಯ ಯುಗಳದಿಂದ ಆದ ಜಾತಿ ಉದ್ಭವ ಲಕ್ಷಣ. ಜಿಹ್ವೆಯಲ್ಲಿ ವೇದ, ಭುಜದಲ್ಲಿ ಶಸ್ತ್ರ, ಉದರದಲ್ಲಿ ವ್ಯವಹಾರ, ಜಂಘೆಯಲ್ಲಿ ಕೃಷಿ. ಇಂತೀ ಶೂದ್ರ ವೈಶ್ಯ ಕ್ಷತ್ರಿಯ ದ್ವಿಜ ಇಂತೀ ಮತಭೇದಂಗಳಲ್ಲಿ ಗೋತ್ರ ಹಲವಾಗಿ ವಾಸಿವಟ್ಟಕ್ಕೆ ಒಳಗಾದವು. ಇಂತಿವರ ಒಳಗು ಹೊರಗಲ್ಲ ಸಂತತ ಶರಣ ಶಿವಯೋಗಿ. ಕರಂಡದ ಗಂಧದಂತೆ, ಮೃತ್ತಿಕೆಯ ಹೇಮದಂತೆ ಶುಕ್ತಿಯ ಅಪ್ಪುವಿನಂತೆ, ಶಿಲೆಕುಲದ ರತಿಯಂತೆ ಮತ್ರ್ಯದ ಮತ್ತರ ಹೊದ್ದದ ಸ್ವಯಿಚ್ಫಾಪರ ಭಕ್ತ ಶಿವಯೋಗಿಗೆ ಮತ್ರ್ಯ ಕೈಲಾಸವೆಂಬ ಗೊತ್ತಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
--------------
ಪ್ರಸಾದಿ ಭೋಗಣ್ಣ
ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ, ಶಿವಭಕ್ತನಾಗಿದ್ದು, ಭವಿಯ ಸಂಗವ ಮಾಡಿದ ದೇಹ ಪಾಪ. ಆ ಭವಿಯ ಸಂಗಕಿಂದಲೂ ಸುರಾಪಾನಿಯ ಸಂಗ ಪಾಪ. ಆ ಸುರಾಪಾನಿಯ ಸಂಗಕಿಂದಲೂ ಮಾಂಸಾಹಾರಿಯ ಸಂಗ ಪಾಪ. ಆ ಮಾಂಸಾಹಾರಿಯ ಸಂಗಕಿಂದಲೂ ಭಂಗಿಭಕ್ಷಕನ ಸಂಗ ಪಾಪ. ಆ ಭಂಗಿಭಕ್ಷಕನ ಸಂಗಕಿಂದಲೂ ಶಿವಭಕ್ತನಾಗಿ ಅನ್ಯದೈವವ ಭಜಿಸುವವನ ಸಂಗ ಅಂದೇ ದೂರ, ಹಿರಿಯ ನರಕವೆಂದಾತ, ನಮ್ಮ ದಿಟ್ಟ ವೀರಾಧಿವೀರ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು ಹೇಳುವ ಅಣ್ಣಗಳು ನೀವು ಕೇಳಿರೊ. ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು, ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮತ್ರ್ಯ ಪಾತಾಳ ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ, ನೂರೊಂದು ಕುಲದವರಾದರು. ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ ನಕಾರ ಬ್ರಹ್ಮನೆ ಪೃಥ್ವಿತತ್ವವಾದ, ಮಕಾರ ವಷ್ಣುವೆ ಅಪ್ಪುತತ್ವವಾದ. ಶಿಕಾರ ರುದ್ರನೆ ತೇಜತತ್ವವಾದ, ವಕಾರ ಈಶ್ವರನೆ ವಾಯುತತ್ವವಾದ. ಯಕಾರ ಸದಾಶಿವನೆ ಆಕಾಶ ತತ್ವವಾದ ಅದು ಎಂತೆಂದರೆ : ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ. ಮೂವರು ತ್ರಿಮೂರ್ತಿಗಳು ಕೂಡಲಿಕೆ ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ. ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ. ಅವರ ಅಂಗದಲ್ಲಿ ಪ್ರಸಾದಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ. ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ, ಆತನ ಉದರದಲ್ಲಿ ವೈಶ್ಯ ಹುಟ್ಟಿದ ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ. ಆತನ ಪಾದದಲ್ಲಿ ಶೂದ್ರ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ. ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು ಅಂತರಂಗದ ಒಳಹೊರಗೆ ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು. ಅದು ಎಂತೆಂದರೆ : ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ ಅಕ್ಷಮೂರ್ತಿಯಾದ. ಆತ್ಮದೊಳಗೆ ಒಂಕಾರ ಪರಬ್ರಹ್ಮವೆಂಬ .....(ಒಂದು ಹಾಳೆ ಕಳೆದಿದೆ) ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರುಂಟೇನು, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಮಧುರವಾಣಿಯ ಉದರದಲ್ಲಿ, ಒಂದು ನಿಜಕುಕ್ಕುಟ ಕೂಗುತ್ತದೆ. ಮೂವರ ಮೊಲೆಯನುಂಡು, ಮರೆದೊರಗಬೇಡಾ ಎಂದು ಬೆಳಗಾಯಿತ್ತು. ಅರ್ಕೇಶ್ವರಲಿಂಗವ ನೋಡುವ ಬನ್ನಿ ಎಂದು ಕೂಗುತ್ತಿದ್ದಿತ್ತು.
--------------
ಮಧುವಯ್ಯ
ಅಲುಕುಮಲುಕಿನ ಅರಮನೆಯಲ್ಲಿ ಮೂರುಮುಖದ ಅಂಗನೆ ಇರ್ಪಳು. ಆ ಅಂಗನೆಯ ಮೂರುಮುಖದಲ್ಲಿ ಮೂರುರಾಜ್ಯಕ್ಕೆ ಒಡೆಯರಾದ ರಾಜರು ಇರ್ಪರು. ಆ ಅಂಗನೆಯ ಕಾಲೊಳಗೆ ಕೆಲಬರು ಎಡೆಯಾಡುತ್ತಿರ್ಪರು. ಆ ಅಂಗನೆಯ ಉದರದಲ್ಲಿ ಉರಿ ಉದ್ಭವಿಸಲು ಅಂಗನೆಯಳಿದು ಮುಖವಿಕಾರವಾಗಿ, ತ್ರಿಪುರ ಸುಟ್ಟು, ಅರಸು ಮಡಿದು, ಕಾಲು ಮುರಿದು, ಮನೆ ನಷ್ಟವಾದಲ್ಲದೆ ತನ್ನ ತಾನರಿಯಬಾರದು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನ್ಯಜಾತಿಯ ಮನೆಯ ಅನ್ನಪಾನಾದಿಗಳು ತನ್ನ ಉದರದಲ್ಲಿ ಇಕ್ಕುವವ ಶಿವದ್ರೋಹಿ, ಶಿವವಂಚಕನು. ಅವ ನಿಮ್ಮ ಓ ಎನಿಸಿದಡೆ ಎನಿಸಲಿ ಅವನ ಎನ್ನತ್ತ ತಾರದಿರಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಹಿತ್ತಾಳಿಯ ಭಾಂಡಕ್ಕೆ ಹೊನ್ನು ಕೊಟ್ಟು ಮೂರು ಕಳೆವೆ. ಕಂಚಿನ ಭಾಂಡಕ್ಕೆ ವರಹಕೊಟ್ಟು ಐದು ಕಳೆವೆ. ತಾಮ್ರಭಾಂಡಕ್ಕೆ ಮೋಹರಕೊಟ್ಟು ಹದಿನಾರು ಕಳೆವೆ. ಕಿರುಕಳಭಾಂಡಕ್ಕೆ ಮುತ್ತು ಮಾಣಿಕ ವಜ್ರದ ಕಿರಣಂಗಳ ಕೊಟ್ಟು ಪಂಚವಿಂಶತಿಯ ಕಳೆವೆ. ಇಂತಿಲ್ಲದೆ ಕಾಯಕವ ಮಾಡಿ ಕಾಳಮ್ಮನ ಉದರದಲ್ಲಿ ಸತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರಿಯ ಕಾಮಿನಿಯ ಉದರದಲ್ಲಿ ಧರೆ ಈರೇಳಿಪ್ಪವು ನೋಡಾ. ಹರಿ ಹತ್ತನು ಹೊತ್ತು ನಡೆವುತ್ತಿಪ್ಪಳು ನೋಡಾ. ಆಕೆಯ ಶಿರದಲ್ಲಿ ಸಿಂಹ, ಹೃದಯದಲ್ಲಿ ಕರಿ, ಸರ್ವಾಂಗದಲ್ಲಿ ಭಲ್ಲುಕ ನೋಡಾ. ಶಿರದಲ್ಲಿ ಶಿವಕಳೆ, ಹೃದಯದಲ್ಲಿ ಪರಮಕಳೆ, ಸರ್ವಾಂಗದಲ್ಲಿ ಸರ್ವಜ್ಞಾನವರ್ಮಕಳೆ ಉದಯವಾಗಲು ಶಿರದ ಸಿಂಹ ಸತ್ತು, ಹೃದಯದ ಕರಿಯಳಿದು ಸರ್ವಾಂಗದಲ್ಲಿ ತೊಡರಿದ ಭಲ್ಲೂಕ ಬಿಟ್ಟು ಸರ್ವಜ್ಞ ನಿನಗೆ ನಾನು ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->