ಅಥವಾ

ಒಟ್ಟು 102 ಕಡೆಗಳಲ್ಲಿ , 40 ವಚನಕಾರರು , 95 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿದ್ಥಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣವೆಂದೆನ್ನ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ. ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ. ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಂಡು ಕೊಟ್ಟೆಹೆನೆಂಬುದು ಖಂಡಿತಂಗಲ್ಲದೆ ಪರಿಪೂರ್ಣಂಗುಂಟೆ ? ಉಂಡು ತೇಗಿಹೆನೆಂಬುದು ನಿತ್ಯತೃಪ್ತಂಗುಂಟೆ ? ಒಂದನರಿದು ಒಂದ ಮರೆದೆನೆಂದು ಸಂದೇಹಕ್ಕೊಳಗಾದವಂಗೆ` ಲಿಂಗವಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ ನೋಡ ಬಂದವರನುವನವರೆತ್ತ ಬಲ್ಲರಯ್ಯಾ? ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ ಗುರುನಿರಂಜನ ಚನ್ನ ಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ. ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ ಉಂಡು ದಣಿದು, ಕಂಡು ದಣಿದು, ಸಂದೇಹವ ಬಿಟ್ಟು ದಣಿದು, ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ, ಆನಂದವೆಂಬುದ ಅಲಿಂಗನವ ಮಾಡಿ, ಆ ಕಂಗಳಂ ಮುಚ್ಚಿ, ಮತ್ತಮಾ ಕಂಗಳಂ ತೆರೆದು ನೋಡಲಾಗಿ, ಧಮೇಶ್ವರಲಿಂಗವು ಕಾಣಬಂದಿತ್ತು.
--------------
ಹೆಂಡದ ಮಾರಯ್ಯ
ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು. ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು. ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ. ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು.
--------------
ಅರಿವಿನ ಮಾರಿತಂದೆ
ಮಲೆಯ ಕಡಿದು ಒಂದು ವೃಕ್ಷವ ತಂದು, ಕೊರೆದು ಅನೇಕ ತೊಲಿ ಕಂಬ ಬೋದುಗೆಗಳು ಚಿಲುಕಿ ಮೊದಲಾದ ಎಲ್ಲವನು ಕೆತ್ತಿ ಉಣ್ಣದೆ ಉಂಡು, ಮನೆಯ ಕಟ್ಟಿ, ಒಗತನವಿಲ್ಲದೆ ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊರಗನೆ ಕೊಯ್ದು ಹೊರಗನೆ ಪೂಜಿಸಿದಡೆ, ಪರಿಣಾಮವಿಲ್ಲ, ಪ್ರಯೋಜನವಿಲ್ಲ ಸುಖ ದೊರೆಕೊಳ್ಳದು ನೋಡಾ ! ಅದೆಂತೆಂದಡೆ: ಸರ್ವಜೀವಂಗಳಲ್ಲಿ ಜೀವಹಿಂಸೆಯ ಮಾಡದಿರಬಲ್ಲಡೆ ಪ್ರಥಮಪುಷ್ಪ. ಸರ್ವೇಂದ್ರಿಯಂಗಳ ನಿಗ್ರಹಿಸಿಕೊಂಡಿರಬಲ್ಲಡೆ ದ್ವಿತೀಯಪುಷ್ಪ. ಸರ್ವಾಹಂಕಾರವರತು ಶಾಂತನಾಗಿರಬಲ್ಲಡೆ ತೃತೀಯಪುಷ್ಪ. ಸರ್ವವ್ಯಾಪಾರವಳಿದು ನಿವ್ರ್ಯಾಪಾರಿಯಾಗಿರಬಲ್ಲಡೆ ಚತುರ್ಥಪುಷ್ಪ. ದುರ್ಭಾವ ಪ್ರಕೃತಿಯಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಪಂಚಮಪುಷ್ಪ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಷಷ್ಠಪುಷ್ಪ. ಅನೃತವ ಮರೆದು ಸತ್ಯವ ನುಡಿಯಬಲ್ಲಡೆ ಸಪ್ತಮಪುಷ್ಪ. ಸಕಲಪ್ರಪಂಚವಳಿದು ಶಿವಜ್ಞಾನಸಂಪನ್ನರಾಗಿರಬಲ್ಲಡೆ ಅಷ್ಟಮಪುಷ್ಪ. ಇಂತೀ ಅಷ್ಟದಳಕಮಲದಲ್ಲಿ ಸಹಜಪೂಜೆಯ ಮಾಡಬಲ್ಲ ಶರಣರು ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ, ನೀವು ಕೇಳಿರೆ, ನೀವು ಕೇಳಿರೆ, ನಿಮ್ಮ ನಿಟಿಲದಲ್ಲಿ ಸಂಚಿತ ಪ್ರಾರಬ್ಧ ಆಗಾಮಿ ಎಂಬ ಲಿಖಿತವ ಬರೆದವಾರು ಹೇಳಿರೆ ? ನೀವೆ ಬ್ರಹ್ಮ, ಬೇರೆ ಈಶ್ವರನಿಲ್ಲೆಂದು ನುಡಿವಿರಿ. ತಪಸ್ಸು ತನ್ನಂತೆ, ಊಟ ಮನದಿಚ್ಛೆಯೆಂಬ ಲೋಕಗಾದೆಯ ಮಾತು ನಿಮಗಾಯಿತ್ತು. ಅಶನವನುಂಡು ವ್ಯಸನಕ್ಕೆ ಹರಿದು ವಿಷಯಂಗಳೆಂಬ ಹಿಡಿಮೊಲಕ್ಕೆ ಸಿಲ್ಕಿ ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು, ನಾಯಾಗಿ ಬಗುಳಿ ನಾಯ ಡೋಣಿಯಲ್ಲಿ ಉಂಡು ನಾಯ ಸಾವ ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ? ಬ್ರಹ್ಮ ವಿಷ್ಣ್ವಾದಿಗ?ು `ಬ್ರಹ್ಮೋಹಂ' ಎಂದು ಕೆಮ್ಮನೆ ಕೆಟ್ಟು ಹದ್ದು ಹೆಬ್ಬಂದಿಗಳಾದುದನರಿಯಿರೆ ? ಹಮ್ಮಿಂದ ಸನತ್ಕುಮಾರ ಒಂಟೆಯಾದುದನರಿಯಿರೆ ? ಕರ್ತನು ಭರ್ತನು ಹರ್ತನು ಶಿವನಲ್ಲದೆ ಬೇರೆ ಮತ್ತೊಬ್ಬ ಕಾವರಿಲ್ಲ ಕೊಲುವರಿಲ್ಲ, ಮತ್ತೊಬ್ಬರು?್ಳಡೆ ಹೇಳಿರೆ, ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಅಸತ್ಯಮಪ್ರತಿಷ್ಠಂ ಚ ಜಗದಾಹುರನೀಶ್ವರವರಿï ಎಂದುದಾಗಿ ಶಿವನೆ, ನಿಮ್ಮನಿಲ್ಲೆಂದು, ಬೊಮ್ಮವಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ ಬಾಯಲ್ಲಿ ಹುಡಿಯ ಹೊಯ್ಸಿ, ನರಕಾಗ್ನಿಯಲ್ಲಿ ಅನೇಕಕಾಲ ಇರಿಸದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವರು ?
--------------
ಚನ್ನಬಸವಣ್ಣ
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ, ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ. ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ? ಅದು ಮುನ್ನವೆ ಲಿಂಗಾರ್ಪಿತ. ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ, ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಪ್ರಥಮಕಾಲದಲ್ಲಿ ಅನಾದಿ ಜಂಗಮವು ಸಾವಿರೆಸಳಮಂಟಪದಲ್ಲಿ ನಿಂದು, ವಿಶ್ವತೋಮುಖವಾಗಿ ತೋರುತಿಪ್ಪನು ನೋಡಾ! ಆ ಜಂಗಮದ ಚಿದ್ವಿಲಾಸದಿಂದ, ಭಕ್ತಾಂಗನೆ ಉದಯವಾದಳು ನೋಡಾ! ಆ ಭಕ್ತಾಂಗನೆಯು ಒಂದಗಲನಿಡಲೊಡನೆ ಆ ಜಂಗಮ ಉಂಡು ಒಕ್ಕುದ ನಾನುಂಡು ಮಹಾಧನ್ಯನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ. ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ, ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು ನಡುರಂಗದಲ್ಲಿ ಕೊಡನೊಡೆಯಲೀಯದೆ; ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ ಉಂಡು ಸುಖಿಯಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ, ಬಸವಪ್ರಿಯ ಕೂಡಲಚನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->