ಅಥವಾ

ಒಟ್ಟು 19 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ನಾದದಿಂದಾದ ಸಂಗ ವಿನೋದಸಂಗ, ಬಿಂದುವಿನಿಂದಾದ ಸಂಗ ಬದ್ಧಕ್ರಿ. ದ್ವಯ, ಅದ್ವಯದಿಂದಾದ ಸಂಗ ಪರಿಭಾವ. ಗಮಿಸುವುದೆ ನಿರವಯವು, ಬಯಸದಿರಾ ! ಬೇರೆ ಮತ್ತಿಲ್ಲ, ಅನುಭಾವವೆಂಬ ಘನಮಹಿಮೆಯ ನೆಮ್ಮಿತ್ತೆ ಆಯಿತ್ತು; ಆ ನಾದದ ನಿಶ್ಚಿಂತನಿಲವನರಿಯಿತ್ತೆ ಆಯಿತ್ತು. ಇದು ನಿಮ್ಮ ಕಲ್ಪನೆ, ಆದಿ ಅಂತ್ಯವ ಬಲ್ಲಡೆ, ಬಲ್ಲನು. ಅವಚಿತ್ತದ ಅವಧಾನದ, ಅಹುದೆಂಬ ಅಲ್ಲವೆಂಬ, ಉಂಟೆಂಬ ಇಲ್ಲವೆಂಬ ಈ ಎರಡರ ಮಥನವಲ್ಲ ಕೇಳಿರಯ್ಯಾ. ಚೆಂದಗೆಡದ ಮುನ್ನ ಬೇಗಮಾಡಿ ತಿಳಿದಿರಾದಡೆ ಬಸವನಂತೆ ಭಾವ, ಬಸವನಂತೆ ಮನ, ಬಸವನ ಪದವಿಡಿದಡೆ ಇದೇ ಪಥ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ; ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ; ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ. ಇಂತೀ ತನು ಮನ ಜಾÐನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ, ಆವ ತನುವಿನ ಮೇಲೆ ಸ್ವಾಯತವ ಮಾಡುವೆ? ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ಅಸ್ತಿ ಭಾತಿಯೆಂಬ ಬ್ಥಿತ್ತಿಯ ಮೇಲೆ, ಕ್ರೀ ನಾಮ ರೂಪವೆಂಬ ಚಿತ್ರ ಬರೆಯಿತ್ತು. ಇಲ್ಲದ ಬ್ಥಿತ್ತಿಯ ಮೇಲೆ ಉಂಟೆಂಬ ಚಿತ್ರದಂತಿರ್ದಿತ್ತು. ಅದೆಂತೆಂದಡೆ; ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಂ ಆದ್ಯತ್ರಯಂ ಬ್ರಹ್ಮರೂಪಂ ಮಾಯಾರೂಪಂ ತತೋದ್ವಯಂ ಎಂದುದಾಗಿ- ಎನಗಿದೇ ಮಾಯೆಯಾಗಿ ಕಾಡಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ
ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು ಆಚಾರಕ್ಕಿಕ್ಕುವುದಿದು ಭಕ್ತಿಯೆ ? ಉಂಟೆಂಬ ಉದ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ. ಇದು ಕಾರಣ ಕೂಡಲಚೆನ್ನಸಂಗಾ. ಸಜ್ಜನ ಶುದ್ಧ ಶಿವಾಚಾರಿಗಲ್ಲದೆ ಲಿಂಗೈಕ್ಯವಳವಡದು.
--------------
ಚನ್ನಬಸವಣ್ಣ
ದಾಸಿಯ ಸಂಗ, ಭಂಗಿಯ ಸೇವನೆ, ವೇಶಿಯ ಸಂಗ, ಸುರೆಯ ಸೇವನೆ, ಮುಂಡೆಯ ಸಂಗ, ಅಮೇಧ್ಯದ ಸೇವನೆ, ಕನ್ನೆಯ ಸಂಗ, ರಕ್ತದ ಸೇವನೆ._ ಇಂತೀ ಐವರ ಸಂಗವ ಮಾಡುವ ದ್ರೋಹಿಗೆ ಕÀಠಪಾವಡ, ಧೂಳಪಾವಡ, ಸರ್ವಾಂಗಪಾವಡ ಉಂಟೆಂಬ ಪಂಚಮಹಾಪಾತಕರಿಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ ನಾ(ನಾಮ?) ಮೊದಲೇ ಇಲ್ಲ_ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ, ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ ! ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು; ಅಲ್ಲಿಯೆ ಜ್ಞಾನ ಉದಯಿಸಿತ್ತು ! ಎಲ್ಲಾ ಎಡೆಯಲ್ಲಿ ನಿಂದ ನಿಜಪದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ನಾನಾ ವೃಕ್ಷಂಗಳೊಳಗೆ ವಸ್ತು ತಾನೇ. ನಾನಾ ಗಿರಿಪರ್ವತಂಗಳಲ್ಲಿಯೂ ತಾನೇ. ಸಕಲ [ಸಮು]ದ್ರ ಆಕಾಶಾದಿ ಭುವನ ಬ್ರಹ್ಮಾಂಡ ಪಿಂಡಂಗಳೆಲ್ಲವು ತಾನೆಂದರಿಯದೆ, ಇದಿರಲ್ಲಿ ವಸ್ತು ಉಂಟೆಂಬ ಷಟ್‍ಸ್ಥಳಬ್ರಹ್ಮಿ ನೀ ಕೇಳಾ, ಗಿರಿ.... ನೆವುಂಟೆ? ಲಿಂಗವಾಗಿ ಸಂಗವನರಸಲುಂಟೆ? ಬೆಳಗೆಂಬ ಸಂದೇಹನ... ದ್ವಂದ್ವದ ಪ್ರಸಂಗವೆಲ್ಲಿಯದು ಹೇಳಾ. ನಿಂದ ನಿಲವೆ ತಾನಾದ ಅಬದ್ಧಂಗೆ ನಿರಾಳ ಸುರಾಳವೆಲ್ಲಿಯದು ಹೇಳಾ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ ಪ್ರಾಣಕ್ಕೆ ಕೈದುವಿನ ಹೆಚ್ಚುಗೆ ತಗ್ಗುಂಟೆ ? ನಿಶ್ಚಯಿಸಿ ನಿಜತತ್ವವನರಿದವಂಗೆ ಮತ್ತೆ ಹತ್ತುವ ಹಾವಸೆಯುಂಟೆ ? ಉಂಟೆಂಬ ಭಾವ, ಇಲ್ಲಾ ಎಂಬ ಶಂಕೆ ನಿಶ್ಶಂಕೆಯಾದಲ್ಲಿ, ಅರಿದೆ, ಮರೆದೆನೆಂಬ ಆ ತೆರದ ಸೂತಕವಿಲ್ಲ. ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಕಂಗಳಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಉಭಯ ಪ್ರತಿಷೆ*ಯ ಲಿಂಗ, ಬ್ರಹ್ಮರಂಧ್ರದಲ್ಲಿ ಅಮೃತಲಿಂಗ ಉಂಟೆಂಬ ತ್ರಿವಿಧ ಸಂದನಳಿಯಬೇಕು; ಸಿದ್ಧರಾಮಯ್ಯಾ, ಗುಹೇಶ್ವರಲಿಂಗವನರಿಯಬೇಕು
--------------
ಅಲ್ಲಮಪ್ರಭುದೇವರು
ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ ಶ್ರುತ್ಯಾಗಮ ಶಾಸ್ತ್ರಪ್ರಮಾಣ ಸಾಧನವೆಂಬ ಕರ್ಮವಾದಿಗಳಿಗೆ ನಿರುತ್ತರೋತ್ತರವ ಕೇಳಿರೆ : || ಶ್ರುತಿ || `ಜ್ಯೋತಿಷೊ*ೀಮೇನ ಸ್ವರ್ಗಕಾಮೋ ಯಜಜೇತ' ಎಂಬ ವೇದವಾಕ್ಯದ ಬಲುಮೆವಿಡಿದು ನುಡಿವರೆ, ಯಜ್ಞದಿಂದ ಸ್ವರ್ಗಾಪೇಕ್ಷಿತನು ಅಗ್ನಿಯನೆ ಪೂಜಿಸುವಯೆಂದು, ಕ್ರಿಯಾಕರ್ಮವೆ ದೈವವೆಂದು, ತಾನು ಮಾಡಿದ ಕರ್ಮ ಫಲವು ತನಗೆ ಅನುಭವಿಸಲುಳ್ಳದೆಂದು, ಕರ್ಮಕ್ಕೆ ಕರ್ತೃತ್ವವನ್ನು ಕೆಲಬರು ಕರ್ಮವಾದಿಗಳು ಹೇಳುತ್ತಿಹರು. ಅಹಂಗಲ್ಲ, ಕರ್ಮವೆ ಶರೀರದಿಂದನುಭವಿಸಲುಳ್ಳರಾಗಿ ವರ್ತಿಸುತ್ತಿಹುದೊ, ಅಲ್ಲ, ಮತ್ತಾ ಶರೀರಕ್ಕೆ ಕರ್ಮವೆ ಅನಾದಿಯಹುದೊ, ಈ ಕರ್ಮಕ್ಕೆ ಕಾಯಂಗಳೆರಡು ಜೀವಾತ್ಮನನು ಒಂದೆಬಾರಿಯಯಿದಿದೊ. ಈಹಿಂಗೆಂದು ಕೆಲಬರು ತರ್ಕಿಸುವರು. ಅದು ಹಂಗಾಗದಿಹುದಲ್ಲದೆ, ಆ ಕರ್ಮವು ಕ್ಷಣಿಕವಾಗಿಯೂ ಅಚೇತನವಾಗಿಯೂ ನಿರ್ಗುಣವಾಗಿಯೂ ಕಾಣಲುಳ್ಳದಾಗಿ, ಅದು ಮಾಡುವಾತನನುಯೆ ಹಾಂಗೆಯಿಹುದು. ಆಕರ್ತನು ಆವನೊಬ್ಬನು ಅಪರಾಧವ ಮಾಡಿದವ, ಮಾಡಿದ ಪುರುಷನು ಆ ಅಪರಾಧಕ್ಕೆ ತಕ್ಕುದಾದ ಶಿಕ್ಷೆಯನು ತನಗೆ ತಾನೆ ಮಾಡಿದನೊಯೇನು ಅಲ್ಲ. ಮತ್ತೆ ಆ ಅಪರಾಧವೆ ಸಂಕಲಿಯಾಗಿ, ಆ ಅಪರಾಧಿಯ ಕಾಲ ಬಂದಿಸುಹವನು. ಮಾಡೊದೊಯೇನು ಅಲ್ಲ. ಮತ್ತೆ ಆ ಅಪರಾಧಿಗೆ ಕರ್ಮಿಗೆ ಆ ಕರ್ಮವನು ಸಂಘಟಿಸಲು, ಕರ್ಮಾಧೀನನಲ್ಲದಾತನಾಗಿ, ಸ್ವತಂತ್ರನಾಗಿ, ಸರ್ವೇಶ್ವರ ಎಲ್ಲದಕ್ಕೂ ಒಡೆಯನಾಗಿ, ಸರ್ವಗತನಾಗಿ ಸರ್ವಗತನಾದ ಶಿವನು ಉಂಟಾಗಿ ಕರ್ಮಕ್ಕೆವೂ ಕರ್ಮಿಗೆವೂ ಕರ್ತೃತ್ವವಾಗದು. ಈಹಿಂಗಾಂಗದಿಹುದೆ ಪೂರ್ವಮೀಮಾಂಸವನು ಹೇಳುವ ಒಬ್ಬುಳಿಯ ಕರ್ಮಂಗಳು ಬೇರೆ ಬೇರೆ ಆರು ಕೆರಂಗಳಾಗುತಿಹವು. ಅವಾವೆನಲು, ಅಮಾವಾಸ್ಯೆ ಹುಣ್ಣಿಮೆಗಳಲಿ ಪಿತೃಕಾರ್ಯ ಮೊದಲಾದ ಕರ್ಮಂಗಳ ಮಾಡಬೇಕಾದುದರಿಂದ ಒಂದಾನೊಂದು ಸಂಸ್ಕಾರವನ್ನು ಸಂಘಟಿಸುತ್ತಿಹವು. ಆ ಸಂಸ್ಕಾರರೂಪಂಗಳಾದ ಆರು ಅಪೂರ್ವಂಗಳಾಗುತ್ತಿಹವು. ಅವು ಬೇರೊಂದು ಪ್ರಮಾಣದಿಂದ ಪೂರ್ವಮಾಗಿ ಉತ್ಕøಷ್ಟವಾದ ಅಪೂರ್ವವನ್ನು ಹುಟ್ಟಿಸುತ್ತಿಹವು. ಆ ಉತ್ಕøಷ್ಟವಾದ ಪೂರ್ವದಿಂದ ಮಾತಲುಳ್ಳ ಫಲದ ಕಡೆವು. ಅದೇ ದೈವವೆಂದು ಕಾಣಬಾರದೆಂದು, ಕರ್ಮವೆಂದು ನಾಮ ಮೂರಾರದವರಿಂದ ದೇಹಾಂತರ ಲೋಕಾಂತರ ದೇಶಾಂತರ ಕಾಲಾಂತರಗಳಲ್ಲಿ ಅದು ಆತಂಗೆ ಅನುಭವಿಸಬೇಕಾದ ಫಲಂಗಳನು ಕೊಡುತ್ತಿಹುದೆಂಬ ವಚನ ವ್ಯರ್ಥವು. ಅದು ಹೇಗೆಂದಡೆ, ಜಡಸ್ವರೂಪವಾದ ಕರ್ಮವು ದೇಹಾಂತರ ಮೊದಲಾದವರಲ್ಲಿ ಆ ಫಲವನು ಕೊಡಲು ಸಮರ್ಥವಲ್ಲದಿಹುದೆ. ಈಹಿಂಗಾಗಿ ಒಡೆಯನನು ತೊಲಗಿಸಿ, ಕರ್ಮಫಲವನು ಕೊಡವದಹುದೆ. ಅಹಂಗಾದಡೆ, ಜೈನ ಬೌದ್ಧ ಭಾಷಾದಿ (?) ಕರ್ಮವಾದಿಗಳ ಜಪತಪದಾನಧರ್ಮಫಲಂಗಳು ವ್ಯರ್ಥಂಗಳಾಗುತಿರಲು, ಅವು ಪುಷ್ಟಿವರ್ಧನಭೂತವಾದ ಭೋಜನಕ್ರಿಯೆಗಳಿಂದಯೆಹಾಹಂಗೆ ಮರಣವು ಆಯಿತ್ತು. ಅಹಂಗೆ ಒಂದೆ ಕರ್ಮವು ಫಲವು ಕೊಡಲು ಸಮರ್ಥವಲ್ಲ. ಅಹಂಗಾಗದಿಹುದೆ ಭೋಜನವ ಮಾಡಿದ ಮಾತ್ರವೆ ಪುಷ್ಟಿಯಾಗುತ್ತಿಹುದು ಮರಣವಿಲ್ಲದಿಹುದು. ಹಿಂಗಲ್ಲವೊ ಎಂದಡೆ, ಕೆಟ್ಟ ಕರ್ಮವುಯೆಯ್ದಿತ್ತು. ಉಂಡದರೊಳಗೆ ಸಿಲ್ಕಿದ ಅನ್ನವು ವಿಷವಹುದಲಾ. ಪುಷ್ಟಿಯ ತೊಲಗಿಸಿ ಮರಣವನು ಅಹಂಗೆ ಕೊಡುತ್ತಿರದು. ಇದು ಕಾರಣ, ಸರ್ವಗತನಾದ ಶಿವನು ಅರಿಕರ್ಮಕ್ಕೆ ತಕ್ಕ ಫಲವ ಕೊಡುವಾತನು. ಹಿಂಗಾಗಿರಲಿ, ಕರ್ಮಕ್ಕೆ ತಾನೆ ಕರ್ತೃತ್ವವಾಗುಹವು, ಆಗುತ್ತಿರದು. ಮತ್ತೆಯೂ ದೃಷ್ಟಾಂತರ ಸರಳು ಬಿಲ್ಲಕಾರನಿಲ್ಲದೆ ತಾನು ಗುರಿಯ ತಾಗೂದೆಯೇನು ? ಅಹಂಗೆ, ಕರ್ಮವು ಶಿವಪ್ರೇರಣೆಯಿಲ್ಲದೆ ಅಕರ್ಮಿಗೆ ಮೇಲುಕೀಳಾದ ಕರ್ಮಫಲವನು ತಾನೆ ಕೊಡಲು ಸಾಮಥ್ರ್ಯವಿಲ್ಲ, ತಪ್ಪದು. ವಾಯುವ್ಯದಲ್ಲಿ : ಅಜ್ಞೋ ಜಂತುರನೀಶೋಯಮಾತ್ಮನಃ ಸುಖದುಃಖಯೋಃ | ಈಶ್ವರಃ ಪ್ರೇರಿತೋ ಗಚ್ಛೇತ್ಸ್ವರ್ಗಂ ವಾ ಶ್ವಭ್ರಮೇವ ವಾ || ಅದು ಕಾರಣ, ಅರಿಯದವನಾಗಲಿ ಅಯಂ ಜಂತು-ಈ ಪ್ರಾಣಿ, ಆತ್ಮನಃ-ತನ್ನ, ಸುಖದುಃಖಯೋಃ-ಸುಖದುಃಖಂಗಳಿಗೆ, ಅನಿಶಃ-ಒಡೆಯನಲ್ಲ. ಈಶ್ವರ ಪ್ರೇರಿತ ಶಿವನು ಪ್ರೇರಿಸಲುಳ್ಳವನಾಗಿ, ಸ್ವರ್ಗವನಾದಡೂ ನರಕವನಾದಡೂ ಎಯ್ದುವನು. ನಾಭುಕ್ತ ಕ್ರಿಯತೇ ಕರ್ಮ ಕಲ್ಪಕೋಟಿಶತೈರಪಿ | ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ || ಇವು ಮೊದಲಾದ ವಚನ ಪ್ರಮಾಣದಿಂದ ಕರ್ಮವು ಕಲ್ಪಕೋಟಿ ಶತಂಗಳಿಂದಡಾ ಅನುಭವಿ.....ತಿರದು. ಮಾಡಲುಳ್ಳದಾಗಿ ಮೇಲು ಕೀಳಾದವು. ಏನ ಮಾಡಿಯೂ ಅನುಭವಿಸಬೇಕಾದುದು, ಈಹಿಂಗೆಂಬ ವಚನವು ವ್ಯರ್ಥ ಪೋಗುತ್ತಿಹುದು. ಅದು ಹೇಂಗೆಯಾಯೆಂದಡೆ :ವಾಯವ್ಯದಲ್ಲಿ- ಅಹೋವಿಪರ್ಯಾಸಶ್ಚೇ ಮೇದೋ ಯಾವದ್ವರಂ ಯಜಮಾನ ಸ್ವಯಂ ದಕ್ಷಃ | ಬ್ರಹ್ಮಪುತ್ರ ಪ್ರಜಾಪತಿಃ ಧರ್ಮಾದಯಃ ಸದಸ್ಯಾಶ್ಚ ರಕ್ಷಿತಾ ಗರುಡಧ್ವಜಃ ಭಾನಾಶ್ಯಪ್ರತಿಗ್ರುಣ್ವಂಕ್ತಿ ಸಾಕ್ಷಾದಿಂದ್ರಾದಯಸ್ವರಾಃ ತಥಾಪಿ ಯಜಮಾಸ್ಯದಕ್ಷಸ್ಯಾ ದಾಹಂರ್ತಿಜಃ ಸದ್ಯಯೇವ ಶಿರಶ್ಛೇದ ಸಾದುಸಂಪದ್ಯತೇ ಫಲಂ ಕೃತ್ವಾತು ಸಮಹತ್ಪುರಣ್ಯಾಮಿಷ್ಟ ಯಶಶತೈರಪಿ ನ ತತ್ಫಲಮವಾಪ್ನೋತಿ ಭಕ್ತಿಹೀನೋ ಯದೀಶ್ವರೇ | ಈ ಅರ್ಥದಲ್ಲಿ ಸತ್ಪುರುಷರ ವೇದದಿಂದರಿಯಲು, ತಕ್ಕುದಾದ ಆಚಾರವನು ಬಿಟ್ಟು ಒಡನೆ ಹುಟ್ಟಿದುದಾದ ತನ್ನವರೆಂಬ ಸ್ನೇಹದಲ್ಲಿ ಹುಟ್ಟಿದುದಾ[ದ] ಚರಣವನ್ನು ಬಿಟ್ಟು, ಅಪಾಯರಹಿತವಾಗಿ ಪ್ರಮಥಪದವಿಯನು ಎಯ್ದಿದನು. ಈಹಿಂಗಾಗಿಯೇ, ಬರಿಯ ಕರ್ಮಕ್ಕೆ ಕರ್ತೃತ್ವವುಂಟಾಗುತಿಹುದೆ ? ಚಂಡೇಶ್ವರನಿಂದ ತನ್ನ ತಂದೆಯಾದ ಬ್ರಾಹ್ಮಣನ ಕಾಲುಗಳ ತರಿದಲ್ಲಿ, ಆ ದೋಷಫಲವುಯಹಂಗೆ ಇಲ್ಲವಾಯಿತ್ತು. ಮಾಮನಾದೃತ್ಯ ಪುಣ್ಯಂ ವಸ್ಯಾಂತ್ಪ್ರತಿಪಾದಿನಃ | ಮನ್ನಿ ಮಿತ್ತಕೃತಂ ಪಾಪಂ ಪುಣ್ಯಂ ತದಪಿ ಜಾಯತೇ || ಇದು ಶಿವನ ನುಡಿ, ಮಾರಿಯೆನ್ನನು ಕೈಕೊಳ್ಳದ ಪುಣ್ಯವಾದಡೆಯು, ಮಾಡುವವಂಗೆ ಪಾಪವು ಅಹುದು. ನಾನು ನಿಮಿತ್ತ ಮಾಡಿದ ಪಾಪವಾಯಿತ್ತಾದಡೆಯು ಸುಕೃತವಾಗುತ್ತಿಹುದು. `ಉಪಕ್ರಮ್ಯ ಕರ್ಮಾದಿ ಪತಿತ್ವ ವಿರುಪಾಕ್ರೋಸ್ಥಿತಿ ಸರ್ವಕರ್ಮಾದಿ ಪತಿಃ' ಮತ್ತೆ ಉಪಕ್ರಮಿಸಿ ಕರ್ಮಂಗಳಿಗೊಡೆಯನು ಪರಮೇಶ್ವರನು ಉಂಟೆಂಬ ವೇದವು ಮೊದಲಾದ ವಾಕ್ಯಪ್ರಮಾಣದಿಂದ, ನಾನಾ ಪುರಾಣ ವಚನ ಪ್ರಮಾಣದಿಂದ ಸಮಸ್ತ ಕರ್ಮಂಗಳಿಗೊಡೆಯನು ಶಿವನು. ಆ ಶಿವನ ತೊಲಗಿಸಿ, ಬರಿಯ ಕರ್ಮಕ್ಕೆ ಕರ್ತನಾಗುಹವು ಇಲ್ಲದಿರುತ್ತಿಹುದು. ಇದನರಿದು, ಎಲೆ ಕರ್ಮವಾದಿಗಳಿರಾ, ಸಕಲಕರ್ಮಕ್ಕೆ ಶಿವನೆ ಕರ್ತುವೆಂದರಿದಿರಾದಡೆ, ಬಸವಪ್ರಿಯ ಕೂಡಲಚೆನ್ನಸಂಗ ನಿಮಗೆ ಸುಕರ್ಮ ಫಲವನು ಕೊಡುವ ಕಂಡಿರೆ.
--------------
ಸಂಗಮೇಶ್ವರದ ಅಪ್ಪಣ್ಣ
ಭಜಿಸಲಿಲ್ಲ, ಗತಿಮತಿ ಫಲವಿರಹಿತನಾಗಿ, ಉಂಟೆಂಬ ಕುಳವಲ್ಲ, ಇಲ್ಲೆಂಬ ನಿಸ್ಸಾರನಲ್ಲ. ಕೂಡಲಚೆನ್ನಸಂಗಾ ನಿಮ್ಮ ಶರಣ ಲಿಂಗೈಕ್ಯನಾಗಿ.
--------------
ಚನ್ನಬಸವಣ್ಣ
ಉಂಟೆಂಬ ದೃಢ, ಇಲ್ಲಾ ಎಂಬ ಸಂದೇಹ ತಾನಲ್ಲಿಯೇ ತೋರಿ ಅಳಿವುತ್ತಿಪ್ಪ ಭೇದವನರಿತಾಗ ಮಲತ್ರಯ ನಾಸ್ತಿ, ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ದಯದಿಂದ ನೋಡಿ ಬಹು ವಿಚಾರವುಂಟು. ಷಟ್ಸ ್ಥಲಬ್ರಹ್ಮಚಾರಿ ತಾನು ಸಂಕಲ್ಪವನೇತಕ್ಕೆ ಮಾಡುವದು? ಗುರುವು ಹಿಡಿದು ಲಿಂಗವಾಯಿತ್ತು. ಲಿಂಗ ಹಿಡಿದು ಜಂಗವಾಯಿತ್ತು. ಜಂಗಮವು ಹಿಡಿದು ಪಾದೋದಕ ಪ್ರಸಾದವಾಯಿತ್ತು. ಇದನರಿಯದೆ ಭಿನ್ನಭೇದವ ಮಾಡಲಾಗದು. ಜಂಗಮನ ಕೊಂದವನಾದರು, ಲಿಂಗವ ಭಿನ್ನವ ಮಾಡಿದವನಾದರು, ಅವನ ಕಂಡು ಮನಸ್ಸಿನಲ್ಲಿ ನಿಂದಿಸಿದರೆ ವಿರಕ್ತನೆಂಬ ಭಾವನೆಯಿಲ್ಲ. ಭಕ್ತನ ಮಠವೆಂದು ಹೋದಲ್ಲಿ, ಆ ಭಕ್ತನು ಎದ್ದು ನಮಸ್ಕರಿಸಿ, ತನ್ನ ದಾಸಿಯರ ಕರದು `ಪಾದಾರ್ಚನೆಯ ಮಾಡು' ಎಂದರೆ ಆ ಪಾದಾರ್ಚನೆಯ ಮಾಡಿದ ಫಲವು ಅರಿಗೆ ಮೋಕ್ಷವಾಗುವದು? ಆ ತೊತ್ತಿನ ಬಸುರಲ್ಲಿ ಬಪ್ಪುದು ತಪ್ಪದು. ತಾನು ವಿರಕ್ತನಾದ ಮೇಲೆ, ಲಿಂಗವಿದ್ದವರಲ್ಲಿ ಲಿಂಗಾರ್ಪಿತವ ಬೇಡಲೇತಕ್ಕೆ? ತಾ ಬಿರಿದ ಕಟ್ಟಿ ಆಚರಿಸುವ ಶರಣನು ತನಗೆ ಸಮಾಚಾರ ಸಮನಾಗದಲ್ಲಿ ಹೊನ್ನ ಹಿಡಿದು ಬಡ್ಡಿ ವ್ಯವಹಾರವ ಮಾಡಿದ ಜಂಗಮದಲ್ಲಿ ತೆಗೆದುಕೊಳ್ಳಲಾಗದು. ಆ ಜಂಗಮವು ತ್ರಿವಿಧ ಪದಾರ್ಥದಲ್ಲಿದ್ದರೇನು? ವಂಚನೆಯಿಲ್ಲದೆ ಸವದರೆ ಆತ ಮುಟ್ಟಿದರೊಳಗಿಲ್ಲ. ಆತನ ಅಂತು ಇಂತು ಎನ್ನಲಾಗದು ಶರಣರಾಚರಣೆ. ಶರಣ ತಾ ಬಿರಿದ ಕಟ್ಟಿ ಆಚರಿಸಿದಲ್ಲಿ ತನ್ನಾಚರಣೆಗೆ ಕೊರತೆ ಬಂದರೆ ಬಂದಿತ್ತೆಂಬ ಹೇಹ ಬೇಡ. ಬಂದಾಗ ನರಳಿ, ಬಾರದಾಗ ಸದಾಚಾರದಲ್ಲಿರ್ಪುದೆ ಶರಣನಾಚರಣೆ. ಗುರು ಮೋಕ್ಷವಾಗಿಯಿಪ್ಪಾತನು ಪಾಪಕ್ಕೆ ಸಂಬಂಧವಾಗಲು ಆತನ ಕಂಡು ಮನದಲ್ಲಿವ ದ್ರೋಹಿಯೆಂದರೆ ನನ್ನ ಬಿರಿದಿಂಗೆ ಕೊರತೆಯದಾಗುವುದಲ್ಲದೆ ವಿರಕ್ತನೆಂಬ ಭಾವವೆನಗಿಲ್ಲ ನೋಡಾ. ಮುಂದೆ ಕ್ರಿಯಾಚರಣೆ. ವಿರಕ್ತನ ನಡೆಯೆಂತೆಂದೊಡೆ ಭಕ್ತಿಸ್ಥಲ ಸಂಬಂಧವಾದ ಭಕ್ತಂಗೆ ಕ್ರೀಯವ ಕೊಡುವ ಆಚರಣೆಯೆಂತೆಂದೊಡೆ ಆತ ತೆಗೆದು ಕೊಂಬ ಆಚರಣೆಯೆಂತೆಂದೊಡೆ ಪಾದಾರ್ಚನೆಯ ಮಾಡಿದಲ್ಲಿ ಪಾದತೀರ್ಥ ಕೊಡುವರು. ಅನ್ನವ ನೀಡಿದ ಹಂಗಿನಲ್ಲಿ ಪ್ರಸಾದವಂ ಕೊಡುವವರು. ಮುಯ್ಯಿಂಗೆ ಮುಯ್ಯನಿತ್ತುದಲ್ಲದೆ ಮುಕ್ತಿಯೆಂಬುದು ಅವುದು ಹೇಳ? ಭಕ್ತನಾಚಾರಣೆಯೆಂತೆಂದೊಡೆ- ಆ ಗೃಹಕ್ಕೆ ಹೋದಲ್ಲಿ ತಾ ಲಿಂಗಪೂಜೆಯ ಮಾಡುತ್ತಿರ್ದರಾದರು ತಾಯೆದ್ದು ಬಂದು ನಮಸ್ಕರಿಸುವದೆ ಭಕ್ತನ ಮಾರ್ಗ. ಎನ್ನೊಳಗೆ ಲಿಂಗವು ಜಂಗಮವು ಉಂಟೆಂಬ ಅವಿಚಾರದ ನುಡಿಯ ಕೇಳಲಾಗದು. ಮುಂದೆ ಭಕ್ತನು ಜಂಗಮದ ಪಾದವ ಹಿಡಿದಲ್ಲಿ ಪುಷ್ಪ ವಿಭೂತಿಯಿರಲು ಅಗ್ಛಣಿಯಿಲ್ಲದಿರಲು ಮರ್ಲೆದ್ವು ವ್ರತಸ್ಥಪಾದವ ಬಿಡಲಾಗದು. ಬಿಟ್ಟನಾದರೆ ಪಾದತೀರ್ಥಕ್ಕೆ ದೂರವಾಯಿತ್ತು. ಲೋಕಾಚಾರದ ಭಕ್ತರು ಪಾದವ ಹಿಡಿಯಲು, ಪುಷ್ಪ ವಿಭೂತಿಯಿರಲು ಅಗ್ಘಣಿಯಿಲ್ಲದಿರಲು ಆ ಪಾದಕ್ಕೆ ನಮಸ್ಕಾರವ ಮಾಡಿ ಪಾದವಂ ಬಿಟ್ಟು ಮತ್ತೆ ಹೋಗಿ ಅಗ್ಘಣಿಯಂ ತಂದು ಪಾದತೀರ್ಥವಂ ಪಡೆದು ಸಲಿಸುವುದು ಭಕ್ತನಾಚರಣೆ. ಜಂಗಮದೇವರ ಕರತಂದು ವ್ರತಸ್ಥನ ಪಾದತೀರ್ಥವಂ ಪಡೆದಲ್ಲಿ ಆ ಆ ದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ದೇವರು ಮಜ್ಜನವ ನೀಡಿದ ಸ್ಥಾನ ಅವರು ಮೂರ್ತಿಮಾಡಿರ್ದ ಸ್ಥಾನವ ನೋಡಿ ಆ ವ್ರತಸ್ಥನು ಪ್ರಾಣವ ಕೊಡುವುದು. ಭಕ್ತನು ಜಂಗಮವ ಕರಕೊಂಡು ಬಂದು ಪಾದತೀರ್ಥಮಂ ಪಡೆದು ಆ ಜಂಗಮದೇವನ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಅವರು ಮಜ್ಜನವ ನೀಡಿದ ಸ್ಥಾನದಲ್ಲಿ ಮೂರ್ತಿಗೊಂಡಿರ್ದ ಸ್ಥಾನದಲ್ಲಿ ಪರಾಂಬರಿಸಿ ಆ ಲಿಂಗವು ಸಿಕ್ಕಿದರೆ ಕ್ರೀಯವ ಜಂಗಮವು ಭಕ್ತರು ಸಲಿಸುವುದು, ಇಲ್ಲದಿದ್ದರೆ ಆ ಭಕ್ತರು ತೆಗೆದು ಕೊಂಬುದು. ಆ ಜಂಗಮವು ತೆಗೆದು ಕೊಳಲಾಗದು. ಇದು ಸಕಲ ಶರಣರಿಗೆ ಸನ್ಮತ. ಸಂಕಲ್ಪವ ಮಾಡಲಾಗದು ಮುಂದೆ ಮಾರ್ಗಕ್ಕೆ ತಾನು ನಡೆದಲ್ಲಿ ತನಗೆ ಮಾರ್ಗ ತಪ್ಪದು. ತನಗೆವೊ[ಂ]ದು ವೇಳೆ ಲಿಂಗವು ಭಿನ್ನ ಭಿನ್ನವಾಗಲು ಅದನು ಸಕಲ ಸಮಸ್ತಮೂರ್ತಿಗಳು ತಿಳಿದು ನೋಡಲು ಅದರಲ್ಲಿ ಭಿನ್ನ ಭಿನ್ನವಾಗದೆಯಿರಲು ಪರಾಂಬರಿಸಿ ಎಲ್ಲಾ ಮಾಹೇಶ್ವರರು ಎದ್ದು ಬಂದು ಅದರೊಳಗೆ ಸಂಕಲ್ಪವಿಲ್ಲವೆಂದು ನಮಸ್ಕಾರವ ಮಾಡುವುದು. ಲಿಂಗವು ಭಿನ್ನವಾಗಲು `ನಿಮ್ಮ ಗುರುಮಠಪೂರ್ವಕ್ಕೆ ಹೋಗಿ'ಯೆಂದು ಹೇಳಲು, `ನಾನೊಲ್ಲೆ, ನಿಮ್ಮ ಪಾದದಲ್ಲಿಯೇಕಾರ್ಥವ ಮಾಡಿಕೊಳ್ಳಿ'ಯೆಂದು ಹೇಳಲು, ಆ ದೇವರ ಅಡ್ಡಬೀಳಿಸಿಕೊಂಡು ವಸ್ತು ಹೋಗುವ ಪರಿಯಂತರದಲ್ಲಿ ಕಾದಿರುವುದು. ಅಥ[ವ] ಒಂದು ವೇಳೆ ಮೋಸ ಬಂದರೆ ಅಲ್ಲಿರ್ಪ ಭಕ್ತ ಮಾಹೇಶ್ವರರ ಬಿಡುವುದು. ಧರ್ಮಾಧರ್ಮದಲ್ಲಿ ವಿಚಾರಿಸದೆ ಆ ಭಕ್ತನು ಜಂಗಮ ಮುಟ್ಟಿದ ಗದ್ದುಗೆಯಲ್ಲಿ ಮೂರ್ತಿಮಾಡಿ `ಪ್ರಸಾದಕ್ಕೆ ಶರಣಾರ್ಥಿ'ಯೆನಲು ನೀಡಲಾಗದೆಂಬುದು ಆಚರಣೆ. ಆದ ನೀಡಿಯಿಟ್ಟರು ಮುಗಿವಲ್ಲಿ ಭಕ್ತನ ಪ್ರಸಾದ ಹೆಚ್ಚಾದರೆ `ಅಯ್ಯೋ ನನ್ನ ಪ್ರಸಾದ ಹೆಚ್ಚಾಯಿ'ತೆಂದು ಹೇಳಿದರೆ ಆ ಪ್ರಸಾದವನು ನೀಡಿಸಿ ಕೊಂಬ ಜಂಗಮಕ್ಕೆ ಆಚರಣೆ ಸಲ್ಲದು. ವ್ಯಾಪಾರವ ಕೊಟ್ಟು ವ್ಯಾಪಾರವನೊಪ್ಪಿಸಿಕೊಂಡರೆ ನಾವು ಪ್ರಸಾದವ ತೆಗೆದುಕೊಂಬುದು ಆಚರಣೆ. ಹೊನ್ನು ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಪ್ರಸಾದವನು ತೆಗೆದುಕೊಂಬುದು ಇದು ಜಂಗಮದಾಚರಣೆ. ಗುರುದೀಕ್ಷೆಯಿಲ್ಲದವನು ಲಿಂಗಪೂಜೆಯ ಮಾಡಿದರೆ ಪಾದೋದಕ ಪ್ರಸಾದವ ಕೊಂಡರೆ ಸಹಜವಲ್ಲದೆ ಸಾಧ್ಯವಾಗದು. ಬಿಟ್ಟರಾದರೆ ಅವರಿಗೆ ಮೋಕ್ಷವಿಲ್ಲವು. ಜಂಗಮವು ಆವ ವರ್ತನೆಯಲ್ಲಿ ನಡಕೊಂಡರು [ಆಸ]ತ್ತು `ಬೇಡ ಹೋಗಿ'ಯೆಂದರೆ `ನಾನು ಅರಿಯದೆ ಮಾಡಿದೆ'ನೆಂದರೆ ಅವನನೊಪ್ಪಿಕೊಂಬುದು ಇದಕ್ಕೆ ಕಲ್ಪಿತ ಪಾಪಪುಣ್ಯಕ್ಕೆ ಒಳಗಾದವರು ಷಟ್ಸ ್ಥಲಕ್ಕೆ ಮಾತ್ರ ಆಗದು. ಭಕ್ತಂಗೆ ಪ್ರಸಾದವ ಕೊಡುವ ಆಚರಣೆಯೆಂತೆಂದೊಡೆ- ದೀಕ್ಷೆಯಿಲ್ಲದೆ ಶಿವಭಕ್ತನ ಗೃಹಕ್ಕೆ ಹೋಗಿ `ಭಿಕ್ಷೆ'ಯೆಂದೆನಾದರೆ, ಜಿಹ್ವೆಯ ಮುಕ್ಕುಳಿಸಿದರೆ ಪಾತಕ ನೋಡ. ಗುರುವಚನ ಪ್ರಮಾಣದಲ್ಲಿ ನಾನು ಗುರುಮುಖವ ಹಿಡಿದಲ್ಲಿ ಶಿವಮಂತ್ರಸ್ಮರಣೆಯನು ಶಿವಾನುಭಾವಿಗಳ ಸ್ಥಾನದಲ್ಲಿ ಬೆಸಗೊಂಬುದೆ ಶುದ್ಧವಾಯಿತ್ತು. ಇಲ್ಲದಿದ್ದರೆ ಶುದ್ಧವಿಲ್ಲವು. ಶಿವಶರಣನ ಜ್ಞಾನವೆಂತೆಂದೊಡೆ ನೀರಮೇಲಣ ತೆಪ್ಪದಂತಿರಬೇಕು, ಕ್ಷೀರದೊಳಗಣ ಘೃತದಂತಿರಬೇಕು, ಕೆಸರಿನೊಳಗಣ ತಾವರೆ ಪ್ರಜ್ವಲಿಸಿದಂತಿರಬೇಕು. ಲಿಂಗದೊಳಗೊಡವೆರದರೆ ಆರು ಆರಿಗೆಯು ಕಾಣದಂತೆ ನೋಡಾ. ಅಂದಳದೊಳಗೆ ಹೋಗುವನ ಹಜ್ಜೆಯ ಕಂಡವರಾರು ಹೇಳ? ಮಾತಿನಲ್ಲಿ ಮಹಾಜ್ಞಾನಿಗಳೆಂದರೊಪ್ಪುವರೆ? ಮಹಾಲಿಂಗದ ಬೆಳಗಿನಲ್ಲಿ, ತನ್ನ ನಡೆಯನೊಡವೆರದಿಪ್ಪ ಮಹಿಮಂಗೆ ದುಃಖವಿಲ್ಲ ನೋಡ ಭಕ್ತಿಸ್ಥಲವಾದುದು. ಭಕ್ತನ ಮಾರ್ಗವೆಂತೆಂದೊಡೆ- ತನ್ನ ಗೃಹಕ್ಕೆ ಜಂಗಮವು ಹೋದಲ್ಲಿ ಶುದ್ಧವಲ್ಲದೆ ಇದನರಿಯದೆ ಕಾಡದೈವಕ್ಕೆಲ್ಲ ಹರಕೆಯ ಮಾಡಿ ಆ ದೈವದ ಹೆಸರಿನಲ್ಲಿ ಜಂಗಮವ ಕರೆತಂದು ಉಣಲಿಕ್ಕಿದೆನಾದರೆ ಕಾರಿದ ಕೂಳಿಗಿಂದ ಕನಿಷ* ಕಾಣಾ. ಅನ್ಯ ದೈವದ ಪೂಜೆಯಿಲ್ಲದಾತನೆ ಶಿವಭಕ್ತ ನೋಡಾ. ತನ್ನ ಗುರುವು ಹಸ್ತಕ ಸಂಯೋಗವ ಮಾಡಿ, ಲಿಂಗವ ಧರಿಸಿದ ಬಳಿಕ ಲಿಂಗವಲ್ಲದೆ ಅನ್ಯಪೂಜೆಯೇತಕ್ಕೆ? ಇದನ್ಲರ್ವಿದರಿದು ಮಾಡಿದನಾದರೆ ಪಾತಕವಲ್ಲದೆ ಮತ್ತಿಲ್ಲ ನೋಡಾ. ಮೋಕ್ಷವೆಂಬುದೆಂದಿಗೂ ಇಲ್ಲ ನೋಡಾ. ಹುಟ್ಟುಗೆಟ್ಟು ಬಟ್ಟಬಯಲಾದವನಿಗೆ ದುಃಖವುಂಟೆ?. ಲಿಂಗದಲ್ಲಿ ನಿರ್ಭಯಲಾದವಂಗೆ ಸಂಕಲ್ಪವುಂಟೆ?. ಮಹಾಜ್ಞಾನಿಗೆ ಕತ್ತಲೆಯುಂಟೆ?. ಮಹಾಪ್ರಸಾದಿಗೆ ಸಂಕಲ್ಪಮುಂಟೆ?. ಜ್ಞಾನಿಗಳಿಗೆನ್ನವರು ತನ್ನವರೆಂಬ ಭೇದಮುಂಟೆ?. ಸದ್ಭಕ್ತಿಯುಳ್ಳಾತನು ತನ್ನ ಲಿಂಗವ ಪೂಜಿಸಿ ಅನ್ಯರಮನೆಯಲ್ಲಿ ಭೋಗದಲ್ಲಿದ್ದನಾದರೆ ಶ್ವಾನನ ಬಸುರಲ್ಲಿ ಬರುವು[ದು] ತಪ್ಪದು, ಅರೆಭಕ್ತರಾದವರ ಗೃಹದಲ್ಲಿ ಹೋಗಿ ಅನ್ನವ ಮುಟ್ಟಿದರಾದರೆ, ಅವನಿಗೆ ಗುರುವಿಲ್ಲ. ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->