ಅಥವಾ

ಒಟ್ಟು 38 ಕಡೆಗಳಲ್ಲಿ , 21 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈದ ಪಶುವಿನ ಮೊಲೆಯಲ್ಲಿ ಕೈಯನಿಕ್ಕಿದಡೆ ಕ್ಷೀರವಲ್ಲದೆ, ಬಂಜೆಯಾವಿನ [ಮೊಲೆಯಲ್ಲಿ] ಉಂಟೆ? ಇದರಂದವ ತಿಳಿವುದು ಲಿಂಗಾಂಗಿಗಳು. ಹೊತ್ತು ತುಂಬಿದವಳು ಬಲ್ಲಳು ತನ್ನ ನಿತ್ತರಿಸುವ ಬೇನೆಯ. ಭಕ್ತಿಯುಳ್ಳವರು ಬಲ್ಲರು ನಿಶ್ಚಟದ ಲಿಂಗಾಂಗಿಗಳ. ಇಂತೀ ಸತ್ಯವನರಿಯದೆ ಹೊತ್ತು ಹೋಕನಾಗಿ ನುಡಿವ ಮತ್ರ್ಯರಿಗೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಾಜ್ಯ ಹೋದಲ್ಲಿ ರಾಯತನ ಉಂಟೆ? ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ? ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ? ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ? ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ ಮತ್ತೆ ನೀ ನೀವೊಪ್ಪಿ ಕೊಟ್ಟಿರಿ. ಎನ್ನಂಗದಲ್ಲಿ ಮತ್ರ್ಯರೂಪನ ರೂಪ ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಕಧ್ಯಾನಿ ಜಪಧ್ಯಾನ ಉಂಟೆ? ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ ಶಿವಮೂರ್ತಿಧ್ಯಾನ ಉಂಟೆ? ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ. ಇಂತೀ ಜಾತಿಮತ್ತರ ಲಕ್ಷಣಭೇದ. ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ ಕುಕ್ಕುರನಿಂದತ್ತಳ ಕಡೆ. ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ, ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು. ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ, ಅದು ನಿಮ್ಮ ಚಿತ್ತದ ಎಚ್ಚರಿಕೆ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ ಡಿಂಡೆಯ ಮತದ ಹಿರಿಯರುಗಳೆಲ್ಲಾ ನೀವು ಕೇಳಿರೊ. ಬಲೆಯೊಳಗಾದ ಹುಲಿಗೆ ಬಲಾತ್ಕಾರವುಂಟೆ? ಲಲನೆಯರ ಸಂಸರ್ಗದಲ್ಲಿ ಚಲನೆಯಿಲ್ಲದೆ ಬಿಂದುವುಂಟೆ? ಶಿಲೆಯೊಳಗಣ ಬೆಂಕಿಗೆ ಅಲಂಕಾರ ಉಂಟೆ? ಸಲಿಲದೊಳಗಣ ತೃಷ್ಣೆಗೆ ಅಪ್ಯಾಯನ ಉಂಟೆ? ಅರಿವನರಿದಂಗಕ್ಕೆ, ಮರವೆಗೆ ತೆರನುಂಟೆ? ತೆರನನರಿದು, ಹರಿದಲ್ಲಿಯೆ ಅರಿಕೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಈಗರಸುವ ನುಡಿವಿರಹಿತ ಂಗವ ನಿಲುಕಡೆ ಬೇರೆ ಉಂಟೆ? ಮುಕುಳದಲ್ಲಿ ಪರಿಮಳ ತೋರುವ ಕಾಲಕ್ಕೆ ತೋರದಿಪ್ಪುದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸದ್ಗತಿಯ ತೋರುವ ಗುರುವಿಂಗೆ ರಾಜಸ ತಾಮಸವುಂಟೆ? ಕೆಡದ ಜ್ಯೋತಿಗೆ ಪಡಿಕುಡಿಗೆ ಎಣ್ಣೆ ಉಂಟೆ? ಆ ಬಿಡುಮುಡಿಯ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪುಷ್ಪವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ? ವ್ರತಗೆಟ್ಟವಂಗೆ, ಆಚಾರಭ್ರಷ್ಟಂಗೆ, ಪರಸತಿ ಪರಧನ ದುರ್ಭಿಕ್ಷಂಗೆ, ಪರ ಅಪರವನರಿಯದ ಪಾತಕಂಗೆ ಅಘೋರನರಕಕ್ಕೆಡೆಯಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗಜಂಗಮ ಒಂದೆಂದರಿಯದೆ ಲಿಂಗಜಂಗಮವ ಭಿನ್ನವಿಟ್ಟು ಅರ್ಚಿಸುವರು. ಅದೆಂತೆಂದಡೆ: ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೆ? ಬೀಜ ವೃಕ್ಷಕ್ಕೆ ಭೇದವುಂಟೆ? ಜ್ಯೋತಿ ಪ್ರಭೆಗೆ ಭೇದ ಉಂಟೆ? ಹಾಗೆ ಲಿಂಗಜಂಗಮಕ್ಕೆ ಭೇದವಿಲ್ಲ. ಅದೇನು ಕಾರಣವೆಂದಡೆ: ಲಿಂಗವೇ ಅಂಗ, ಜಂಗಮವೇ ಪ್ರಾಣ. ಲಿಂಗವೇ ಬೀಜ, ಜಂಗಮವೇ ವೃಕ್ಷ. ಲಿಂಗವೇ ಜ್ಯೋತಿ, ಜಂಗಮವೇ ಪ್ರಕಾಶ. ಇಂತೀ ನಿರ್ಣಯವ ತಿಳಿದರೆ ಪ್ರಾಣಲಿಂಗಿ, ತಿಳಿಯದಿದ್ದರೆ ಜಡಲಿಂಗಿಗಳೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉರಿ ಕರ್ಪುರಸಂಗದಿಂದೆ ಉರಿಕರ್ಪುರ ಉಂಟೆ? ಭ್ರಮರ ಕಾಪುಳಸಂಗದಿಂದೆ ಭ್ರಮರಕಾಪುಳ ಉಂಟೆ? ಪರುಷ ಲೋಹಸಂಗದಿಂದೆ ಪರುಷಲೋಹವುಂಟೆ? ಶರಣ ಸಂಸಾರಸಂಗದಿಂದೆ ಶರಣಸಂಸಾರವುಂಟೆ? ಇದು ಕಾರಣ ನಾ ಮುಟ್ಟಿ ನೀನುಂಟು ನೀ ಮುಟ್ಟಿ ನಾಮುಂಟೆ ಹೇಳಾ ಗುರುನಿರಂಜನ ಚನ್ನಬಸವಲಿಂಗಾ?
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯ ಹಲವು ಭೇದಗಳಾಗಿ ಆತ್ಮನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
--------------
ಏಕಾಂತರಾಮಿತಂದೆ
ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ? ವಿಶ್ವಾಸದಲ್ಲಿ ಪೂಜಿಸುವಾತಂಗೆ ಉತ್ತಮ ಕನಿಷ* ಮಧ್ಯಮವೆಂದು ಲಕ್ಷಿಸಲುಂಟೆ? ಮಾಹೇಶ್ವರ ಅರ್ಚನೆಯ ಮಾಡುವಲ್ಲಿ ಮಹಾದೇವ ತಪ್ಪದೆಯಿಪ್ಪ, ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಲಿಂಗಕ್ಕೆ ಮಲಿನವಾದಲ್ಲಿ ಒರಸಿ ತೊಳೆದಡೆ ದೋಷವ ಕಟ್ಟಬಹುದೆ? ಗುರು ಚರ ಭಕ್ತರಲ್ಲಿ ಭ್ರಾಮಕದಿಂದ ಮರೆದಿರೆ ಅರುಪಲಿಕ್ಕೆ ದೂಷಣೆ ಉಂಟೆ? ತನ್ನಂಗದ ಕಲೆವ ತಾ ಹಿಂಗಿಸುವುದಕ್ಕೆ ನಿಂದೆ ಗುಣದೋಷಂಗಳುಂಟೆ? ಇದು ಕಾರಣದಲ್ಲಿ ಒಡೆಯನ ಹರವರಿ ಬಂಟಂಗೆ ಲಾಭವಹಂತೆ, ಉಭಯಕ್ಕೆ ಕೇಡಿಲ್ಲದಿರ್ಪ ಭಕ್ತಿಸತ್ಯ. ಕಾಲಾಂತಕ ಭೀಮೇಶ್ವರಲಿಂಗನು ಉಭಯದ ತಪ್ಪನೊಪ್ಪನಾಗಿ.
--------------
ಡಕ್ಕೆಯ ಬೊಮ್ಮಣ್ಣ
ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ? ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ? ಇದು ಅಘಟಿತ, ಅನಾಮಯ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->