ಅಥವಾ

ಒಟ್ಟು 64 ಕಡೆಗಳಲ್ಲಿ , 21 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು. ಕಳೆ ಬಿಂದುವ ನುಂಗಿತ್ತೆಂಬರು, ಬಿಂದು ಕಳೆಯ ನುಂಗಿತ್ತೆಂಬರು. ಈ ಮೂರರ ಅಂದವ ಅತೀತ ತಿಂದಿತ್ತು, ತಿಂದವನ ತಿಂದ ಅಂದವ ನೋಡಾ. ಇದಕ್ಕೊಂದೂ ಇಲ್ಲಾ ಎಂದೆ, ಸಂದನಳಿದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಯತವಿಲ್ಲದ ಮಠದಲ್ಲಿ ಅಗ್ನಿಯಿಲ್ಲದೆ ಬೋನವ ಮಾಡಿ ಭಾವವಿಲ್ಲದೆ ಶಿವಕಾರ್ಯಂಗಳು ಭೋಜನವಿಲ್ಲದೆ ಅರಿಸಿ ಕೊಟ್ಟಡೆ ಆಪ್ಯಾಯನವಾರಿಗೂ ಅಡಸದಿರ್ದುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆನು.
--------------
ಘಟ್ಟಿವಾಳಯ್ಯ
ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ? ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ? ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ? ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು, ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ, ಒಂದ ಬಿಟ್ಟೊಂದು ಇರದು. ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ, ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ. ಇಂತೀ ಉಭಯಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಅನಿಮಿಷನ ಕೈಯ ಲಿಂಗವನಲ್ಲಮ ಕೊಂಡುದಿಲ್ಲಾಗಿ, ಆದಿಯಲ್ಲಿ ಬಸವಣ್ಣಂಗೆ ಗುರುಲಿಂಗವಿಲ್ಲಾಗಿ, ಬಸವ-ಚೆನ್ನಬಸವಂಗೆ ಕಾರಣವಿಲ್ಲಾಗಿ, ಇವರಾರೆಂಬುದ ಕೇಳಿದ್ದು ಇಲ್ಲ ಇಲ್ಲಾ ಎಂದನು. ಇವರಿಬ್ಬರ ಸಾಹಿತ್ಯ ಇಲ್ಲೆಂಬುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತೀರ್ಥಯಾತ್ರೆಯಲ್ಲಿ ಕೂಡೆಹೆನೆಂದು ಏಗೈದು ಹೋಹ ಪರಿಯ ನೋಡಾ, ಅಯ್ಯಾ. ಮನೆಗೆ ಬಂದ ಜಂಗಮಕ್ಕೆ ಇಲ್ಲಾ ಎಂದು, ಜಗಜಾತ್ರೆಯಲ್ಲಿ ಅನ್ನವನಿಕ್ಕಿದಡೆ, ಪುಣ್ಯವೆಂಬ ಅಣ್ಣಗಳಿಗೇಕೆ, ಸದಾಚಾರ ಉರಿಲಿಂಗತಂದೆ ?
--------------
ಉರಿಲಿಂಗದೇವ
ತ್ರಿಕರಣ ಶುದ್ಧವಿಲ್ಲದವನ ಮಾಟ, ನೇಣು ಹರಿದವನಾಟ. ಭಯಭಕ್ತಿ ಇಲ್ಲದವನ ಕೈಯ ದ್ರವ್ಯಕ್ಕೆ ಆಶೆಯ ಮಾಡುವ ಭವಭಾರಿಗೆ, ಭವವೇ ಕಡೆ. ಅದಕ್ಕೆ ಏನೂ ಇಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಮೃತದ ಗುಟಿಕೆಯ ಮರೆದು, ಅಂಬಲಿಯನರಸುವನಂತೆ, ಶಂಬರವೈರಿ ತನ್ನಲ್ಲಿ ಇದ್ದು, ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ, ಅವರಿಗೆ ಇಲ್ಲಾ ಎಂದೆ.
--------------
ಮನುಮುನಿ ಗುಮ್ಮಟದೇವ
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು ಮರೆಯಲಾಗದು ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು. ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ? ನಾನೆಂಬುದ ಇದೇನೆಂದು ಅರಿವನ್ನಕ್ಕ ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ. ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಸುಳಿವ ಅನಿಲಂಗೆ ಮೈಯೆಲ್ಲ ಕೈ. ಸುಡುವ ಅನಲಂಗೆ ಭಾವವೆಲ್ಲ ಬಾಯಿ. ಹಲಿವ ನೀರಿಂಗೆ ತನ್ಮಯವೆಲ್ಲ ಅಡಿ. ಅರಿಯದೆ ಮರೆಯದೆ ಮುಟ್ಟಿಹಂಗೆ ಕಡೆ ನಡು ಮೊದಲೆಂದು ಅರ್ಪಿತವಿಲ್ಲ. ಇಲ್ಲಾ ಎಂಬ ಸೂತಕಕ್ಕೆ ಮುನ್ನವೆ ಇಲ್ಲ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು ಅಲ್ಲಿಂದಾಚೆ ಏನೂ ಇಲ್ಲಾ ಎಂಬುದು ದೃಷ್ಟಿಯ ಭೇದವೊ? ಜಗದ ಭೇದವೊ? ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ, ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ ಅನಾದಿಯಿಂದತ್ತಣವನ ಭೇದಿಸಿ ಹಿಡಿದು ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು.
--------------
ಅವಸರದ ರೇಕಣ್ಣ
ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ. ಮುಂದೆ ಪೂಜಿಸಿ ಕಂಡೆಹೆನೆಂಬುದಕ್ಕೆ ಮುನ್ನವೆ ಇಲ್ಲ. ಪೂರ್ವ ಅಪೂರ್ವವೆಂಬುದಿಲ್ಲ. ಇವಾವ ಬಂಧನವೂ ಇಲ್ಲದ ಅವಿರಳಂಗೆ ಒಂದರ ತೋರಿಕೆಯೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲಾ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಆಸೆ ಇಲ್ಲಾ, ನಿರಾಸೆ ಇಲ್ಲಾ, ಕ್ಲೇಶ ಇಲ್ಲಾ, ರೋಷವಿಲ್ಲಾ, ದ್ವೇಷವಿಲ್ಲಾ, ದೂಷಿಯಿಲ್ಲಾ-ಇವೂ ಏನೂ ಇಲ್ಲದೇ ತಾನಲ್ಲಾಗದೆ ಮೆಲ್ಲಮೆಲ್ಲನೆ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ. ಲಯವಹ ಘಟಕ್ಕೆ ಹಲವು ತೆರನುಂಟು. ಹಲವು ತೆರದ ಲಯವ ಬಲ್ಲಡೆ, ಬೇರೊಂದು ಕುಲಹೊಲೆಸೂತಕವೆಂಬುದುಂಟೆ ? ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ, ನಿಂದ ನಿಜವೆ ತಾನಾದವಂಗೆ ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಏಕಾದಶ ರುದ್ರರು ಹೊರಗಾದ, ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ ತಿರುಗುವುದೊಂದು ಶಕ್ತಿಯ ಭೇದ. ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು ಒಂದು ಶಕ್ತಿಯ ಭೇದ. ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ. ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು, ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ, ದರ್ಪಣದಿಂದ ಒಪ್ಪಂಗಳನರಿವಂತೆ ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ ತ್ತøಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->