ಅಥವಾ

ಒಟ್ಟು 58 ಕಡೆಗಳಲ್ಲಿ , 27 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು, ನಿಲಿಸಿ ತೋರಿ, ಮುನ್ನಿನಂತಾಯಿತ್ತು. ಅಪ್ಪು ಸಂಗವನೆಯ್ದಿದಂತೆ ಇರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ ಭರಿತನಾಗಿ ಇರಬೇಕು. ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ ಬೇರೊಂದು ಬಯಕೆಯ ಅರಿತಿರಬೇಕು. ಅರಿವನರಿತೆನೆಂದು ಕುರುಹ ಮರೆದಡೆ ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶರಣನಾದೊಡೆ ಅಚ್ಚೊತ್ತಿದ ಅರಿವಿಯಂತಿರಬೇಕು ಲಿಂಗದಲ್ಲಿ. ಶರಣನಾದೊಡೆ ಮುರಿದ ಬಂಗಾರ ಬೆಳ್ಳಾರದಲ್ಲಿ ಬೆಚ್ಚಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಪುಷ್ಪ-ಪರಿಮಳದಂತೆ, ಪ್ರಭೆ-ಪಾಷಾಣದಂತೆ, ಜ್ಯೋತಿ-ಪ್ರಕಾಶದಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಸೂರ್ಯನ ಕಿರಣದಂತೆ, ಚಂದ್ರನ ಕಾಂತಿಯಂತೆ, ಗಾಳಿ-ಗಂಧದಂತೆ, ಜಾಗಟಿ-ನಾದದಂತೆ ಇರಬೇಕು ಲಿಂಗದಲ್ಲಿ. ಇಷ್ಟುಳ್ಳಾತನೇ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ. ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ? ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ? ತನ್ನ ಮನೆಗೆ ಕಟ್ಟಳೆ ಇರಬೇಕು. ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ, ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು. ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು. ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು. ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ. ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.
--------------
ಅಕ್ಕಮ್ಮ
ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು. ಜಂಗಮಕ್ಕೆ ಸದ್ಭಕ್ತಿ, ಸದಾಚಾರ, ಸಕ್ರೀ ಇಂತೀ ಆಚಾರದಲ್ಲಿ ಇರಬೇಕು. ಅದೆಂತೆಂದಡೆ:ಪುರುಷನ ಆಚಾರ ಸತಿಗೆ ಕಟ್ಟು, ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ. ಅವತಾರಕ್ಕೆ ವೇಷ, ಅರಿವಿಂಗೆ ಆಚಾರ. ಆ ಜಂಗಮಭಕ್ತನ ಇರವು ಘಟಪ್ರಾಣದಂತೆ. ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅರೆಯಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ ? ವಾಯು ರೂಪಾದುದುಂಟೆ ? ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ? ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು. ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ, ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂದ್ಥಿಗಳೆಂಬೆನಯ್ಯಾ. ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ. ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ ? ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ. ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ, ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ. ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು, ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ ಸರ್ವವ್ಯಾಪಾರ ನಿರಸನವಾಗಿರಬೇಕು ; ಸರ್ವಸಂಗವನೊಲ್ಲದೆ ಇರಬೇಕು. ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ, ಅವರು ಕೈಕೊಂಡು ಮಿಕ್ಕ ಪ್ರಸಾದವ ಲಿಂಗಕ್ಕೆ ಅರ್ಪಿತವ ಮಾಡಿ, ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ಮಿಥ್ಯವನರಿದವರೆಲ್ಲ ತತ್ವಕ್ಕೆ ಅಂದೇ ಹೊರಗು, ತಥ್ಯವನರಿದ ಶರಣರು ಸತ್ತಂತೆ ಇರಬೇಕು. ತಥ್ಯಮಿಥ್ಯ ಎರಡಳಿದ ಶರಣಂಗೆ ಮತ್ತೊಂದು ಬಾರಿ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆವಾವ ಭಾಷಾಂಗವ ತೊಟ್ಟರೂ ಆ ಭಾಷಾಂಗಕ್ಕೆ ತಕ್ಕ ಗತಿ ಭಾಷೆಯಿರಬೇಕು. ಶಿವಲಾಂಛನಧಾರಿಯಾದಡೆ, ಆ ಲಾಂಛನಕ್ಕೆ ತಕ್ಕ ನಡೆ ನುಡಿ ಇರಬೇಕು. ಅದೆಂತೆಂದಡೆ: ಕಾಯದ ಕಳವಳವ ಗೆಲಿದು, ಮಾಯಾಪ್ರಪಂಚ ಮಿಥ್ಯವೆಂದರಿದು, ಕ್ಷಮೆ ದಮೆ ಶಾಂತಿ ದಯೆ ಜ್ಞಾನ ವೈರಾಗ್ಯ ಮುಂತಾಗಿ ಸುಳಿಯಬೇಕು. ಲಿಂಗಮೋಹಿಯಾಗಿದ್ದಲ್ಲದೆ, ಉಳಿದ ಉದ್ದೇಶದ ಸುಳುಹೆಲ್ಲಾ ಬಿರುಗಾಳಿಯ ಸುಳುಹಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಕ್ಷದಲ್ಲಿ ಅಂಗವ ಧರಿಸಿದ ಮತ್ತೆ ಕುಕ್ಷಿಯ ವರ್ತನೆ ಬಿಡಬೇಕು. ಕರಸ್ಥಲದಲ್ಲಿ ಲಿಂಗವ ಧರಿಸಿದ ಮತ್ತೆ ಪರದ್ರವ್ಯಕ್ಕೆ ಕೈಯಾನದಿರಬೇಕು. ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮತ್ತೆ ಮತ್ರ್ಯರುಗಳಿಗೆ ನೆಟ್ಟನೆ ಇರಬೇಕು. ಅಮಳೋಕ್ಯದಲ್ಲಿ ಲಿಂಗವ ಧರಿಸಿದ ಮತ್ತೆ ತುತ್ತಿನಿಚ್ಫೆಯ ಬಿಡಬೇಕು. ಉರಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಪರಸ್ತ್ರೀಯರ ಸಂಗವ ಬಿಡಬೇಕು, ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಸಕಲಗುಣವನರಿಯಬೇಕು. ಇಂತಿವನರಿಯದೆ ಸತ್ಕ್ರಿಯೆಯಲ್ಲಿ ನಡೆವ ನಡೆ ಎಂತುಟಯ್ಯಾ ? ಭಕ್ತನಾದ ಮತ್ತೆ ಮತ್ರ್ಯರ ಸಂಗ ಬಿಡಬೇಕು. ಮಾಹೇಶ್ವರನಾದ ಮತ್ತೆ ಮಹಾವಿಚಾರವ ತಿಳಿಯಬೇಕು. ಪ್ರಸಾದಿಯಾದ ಮತ್ತೆ ಪರದೂಷಣೆಯ ಕೇಳದಿರಬೇಕು. ಪ್ರಾಣಲಿಂಗಿಯಾದಮತ್ತೆಜಾಗ್ರ ಸ್ವಪ್ನಸುಷುಪ್ತಿಯಲ್ಲಿ ಮತ್ತತ್ವವಿಲ್ಲದಿರಬೇಕು. ಶರಣನಾದ ಮತ್ತೆ ಸರ್ವಾವಧಾನಿಯಾಗಿರಬೇಕು. ಐಕ್ಯನಾದ ಮತ್ತೆ ಸತ್ತುಚಿತ್ತಾನಂದವೆಂಬ ತ್ರಿವಿಧದ ಗೊತ್ತು ಮುಟ್ಟದಿರಬೇಕು. ಹೀಂಗಲ್ಲದೆ ಷಟ್‍ಸ್ಥಲಕ್ಕೆ ಸಲ್ಲ, ಪರಬ್ರಹ್ಮಕ್ಕೆ ನಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪವಾದ ಶರಣ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->