ಅಥವಾ

ಒಟ್ಟು 78 ಕಡೆಗಳಲ್ಲಿ , 23 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ ಉದಕ ಮುಟ್ಟಿದುದುವೊ, ನಿರಾಳದಲದೆವೊ ಬ್ರಹ್ಮರಂಧ್ರದಲದೆವೊ_ಭ್ರಮಿಸದೆ ನೋಡಾ ! ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು! ಇದೇನು ಮಾಯೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜ್ಞಾನ ಜ್ಞಾನವೆಂದು ಕೇಳಿದೆವಯ್ಯಾ ಗುರುಹಿರಿಯರಿಂದ. ಕೇಳಿದಲ್ಲಿ ಅಂಗವಾಲಿಲ್ಲ, ಕೇಳದೆ ಬಿಟ್ಟ್ಲಲ್ಲಿ ಅಂಗವಾಯಿತ್ತು. ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ. ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ, ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,_ ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ ! ಇದೇನು ಸೋಜಿಗ ಹೇಳಾ ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ, ದೇವ ಬಂದಡೆ ದೇಗುಲ ಓಡಿತ್ತ ಕಂಡೆ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ? ಕತ್ತಲೆಯೆತ್ತ ಬೆಳಗೆತ್ತ? ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ ಇದೇನು ಗಾರುಡಿಗತನ ನಿನಗೆ?. ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ ಅದು ಹಿತವಹುದೆ? ನಿನ್ನ ನಿಜಸುಖದ ಸವಿಗಲಿಸಿ, ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?. ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ. ಎನ್ನ ನೀನರಿದು ಸಲಹು, ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಊರಿಗೆ ಹೋಹ ದಾರಿಯಲ್ಲಿ ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ. ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ. ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ, ಊರನೆಲ್ಲ ನುಂಗಿತ್ತು. ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆನೆಗಳೆಂಟನು ಒಂದು ಮೌನದ ಚಿಕ್ಕಾಡು ನುಂಗಿತ್ತು. ಕಾನನದೆರಳೆಯ ಕಪ್ಪೆ ನುಂಗಿತ್ತು. ಮಾನಿನಿಯ ಮಸ್ತಕದಲ್ಲಿ ಭಾನುಶತಕೋಟಿ ತೇಜದ ಕಳೆ ಮೊಳೆದೋರಿತ್ತು. ಇದೇನು ಸೋಜಿಗ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು ಕೆಂಪುಬಣ್ಣವಿರ್ಪುದು. ದಂಡಕಾಕೃತಿಯ ಮಕಾರಪ್ರಣವದ ಸ್ವಾದಿಷ್ಠಾನಚಕ್ರದೊಳು ನೀಲವರ್ಣವಿರ್ಪುದು. ಕುಂಡಲಾಕೃತಿಯ ಶಿಕಾರಪ್ರಣವದ ಮಣಿಪೂರಚಕ್ರದೊಳು ಕುಂಕುಮವರ್ಣವಿರ್ಪುದು. ಅರ್ಧಚಂದ್ರಾಕೃತಿಯ ಯಕಾರಪ್ರಣವದ ಅನಾಹತಚಕ್ರದೊಳು ಪೀತವರ್ಣವಿರ್ಪುದು. ದರ್ಪಣಾಕೃತಿಯ ಯಕಾರಪ್ರಣವದ ವಿಶುದ್ಧಿಚಕ್ರದೊಳು ಶ್ವೇತವರ್ಣವಿರ್ಪುದು. ಜ್ಯೋತಿರಾಕೃತಿಯ ಒಂಕಾರಪ್ರಣವದ ಆಜ್ಞಾಚಕ್ರದೊಳು ಮಾಣಿಕ್ಯವರ್ಣವಿರ್ಪುದು. ಮತ್ತಂ, ಪೃಥ್ವಿತತ್ವಯುಕ್ತನಾದ ಸದ್ಭಕ್ತನೆಂಬ ಅಂಗನ ಸುಚಿತ್ತಹಸ್ತದೊಳು ಆಚಾರಲಿಂಗವಿರ್ಪುದು. ಅಪ್ಪು ತತ್ವಯುಕ್ತವಾದ ಮಹೇಶನೆಂಬ ಅಂಗನ ಸುಬುದ್ಧಿಹಸ್ತದೊಳು ಗುರುಲಿಂಗವಿರ್ಪುದು. ತೇಜತತ್ವಯುಕ್ತನಾದ ಪ್ರಸಾದಿಯೆಂಬ ಅಂಗನ ನಿರಹಂಕಾರಹಸ್ತದೊಳು ಶಿವಲಿಂಗವಿರ್ಪುದು. ವಾಯುತತ್ವಯುಕ್ತನಾದ ಪ್ರಾಣಲಿಂಗಿಯೆಂಬ ಅಂಗನ ಸೂರ್ಯಹಸ್ತದೊಳು ಜಂಗಮಲಿಂಗವಿರ್ಪುದು. ಆಕಾಶತತ್ವಯುಕ್ತನಾದ ಶರಣನೆಂಬ ಅಂಗನ ಸುಜ್ಞಾನಹಸ್ತದೊಳು ಪ್ರಸಾದಲಿಂಗವಿರ್ಪುದು. ಆತ್ಮತತ್ವಯುಕ್ತನಾದ ಐಕ್ಯನೆಂಬ ಅಂಗನ ಸದ್ಭಾವಹಸ್ತದೊಳು ಮಹಾಲಿಂಗವಿರ್ಪುದು. ಮತ್ತಂ, ಘ್ರಾಣವೆಂಬಮುಖದ ಕ್ರಿಯಾಶಕ್ತಿಯ ಶ್ರದ್ಧಾಭಕ್ತಿಯೊಳು ಸುಗಂಧಪದಾರ್ಥವಿರ್ಪುದು. ಜಿಹ್ವೆಯೆಂಬಮುಖದ ಜ್ಞಾನಶಕ್ತಿಯ ನೈಷ್ಠಿಕಾಭಕ್ತಿಯೊಳು ಸಾರಸಪದಾರ್ಥವಿರ್ಪುದು. ನೇತ್ರವೆಂಬಮುಖದ ಇಚ್ಛಾಶಕ್ತಿಯ ಸಾವಧಾನಭಕ್ತಿಯೊಳು ಸಾರೂಪಪದಾರ್ಥವಿರ್ಪುದು. ತ್ವಗೇಂದ್ರಿಯೆಂಬಮುಖದ ಆದಿಶಕ್ತಿಯ ಅನುಭಾವಭಕ್ತಿಯೊಳು ಸುಸ್ವರೂಪಪದಾರ್ಥವಿರ್ಪುದು. ಶ್ರೋತ್ರೇಂದ್ರಿಯಮುಖದ ಪರಶಕ್ತಿಯ ಆನಂದವೆಂಬಭಕ್ತಿಯೊಳು ಸುಶಬ್ದಪದಾರ್ಥವಿರ್ಪುದು. ಹೃದಯೇಂದ್ರಿಯಮುಖದ ಚಿತ್‍ಶಕ್ತಿಯ ಸಮರಸಭಕ್ತಿಯೊಳು ಸುತೃಪ್ತಿಯಿರ್ಪುದು. ಇಂತೀ ಎಪ್ಪತ್ತೆರಡುಮುಖದಿ ನಿನ್ನ ಪೂಜಿಸಿ, ನಿನ್ನ ಹಾಡ್ಯಾಡಿ, ನಿನ್ನ ಧ್ಯಾನಿಸಿ, ನಿನ್ನ ಚಿಂತಿಸಿ, ನಿನ್ನೊಳು ಕೂಡುತ, ನೀನಾರೆಂದು ಹವಣಿಸಿ ಅಂತರಂಗದಿ ಪೊಕ್ಕು ನೋಡೆ ನೀನಲ್ಲದೆ ನಾನೇ ಆದ ಪರಿ ಇದೇನು ಚೋದ್ಯವೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು ನೀರಿಲ್ಲದ ಬಾವಿಗೆ ಹೋಗಿ ನೀರನೆ ಮೊಗೆದು ಕಣ್ಣಿಲ್ಲದ ಅಂಧಕ ಬಿದ್ದ, ನಡುವಿಲ್ಲದ ಬಾಲೆಯು ಅಡಗಿಪ್ಪಳಯ್ಯ. ಇದೇನು ವಿಚಿತ್ರವೆಂದು ಝೇಂಕಾರಪ್ರಭು ಬಂದು ವಿಚಾರಿಸಲು ಮಕ್ಕಳಿಲ್ಲದಾಕಿ ಬಂದು, ಕಣ್ಣು ಇಲ್ಲದ ಅಂಧಕನ ಕೂಡಿಕೊಂಡು, ನಡುವಿಲ್ಲದ ಬಾಲೆಯ ಕರೆದು ಅವರಿಬ್ಬರನು ಮಹಾಲಿಂಗಕ್ಕೆ ಒಪ್ಪಿಸುತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕುದುರೆಯನೇರಿದ ರಾವುತ, ಕುದುರೆ ಕೆಟ್ಟಿತೆಂದು ಅರಸಹೋಗಿ, ಇರುಬಿಲಿ ಬಿದ್ದಡೆ ಬಳ್ಳು ತರುಬಿ, ಕುದುರೆ ರಾವುತನಿಬ್ಬರ ನುಂಗಿತ್ತು. ಇದೇನು ಸೋಜಿಗ ಹೇಳಾ, ನಿಜಗುರು ಭೋಗೇಶ್ವರಾ.
--------------
ಭೋಗಣ್ಣ
ಯೋನಿಯಿಲ್ಲದ ಆಕಳಿನಲ್ಲಿ, ಬಾಯಿಯಿಲ್ಲದ ಕರು ಹುಟ್ಟಿತ್ತು. ಮೊಲೆಯಿಲ್ಲದ ಹಾಲ ಕುಡಿದು, ಒಡಲಿಲ್ಲದೆ ತಿರುಗಾಡುತ್ತದೆ. ಏಣಾಂಕಧರ ಸೋಮೇಶ್ವರಲಿಂಗ, ಇದೇನು ಸೋಜಿಗವೆಂದರಿಯೆ.
--------------
ಬಿಬ್ಬಿ ಬಾಚಯ್ಯ
ಹುಟ್ಟಿಬಂದ ಮನೆಯ ಸುಟ್ಟು ತಾಯಿಯ ಸಂಗ ಮಾಡಿದರೊಂದು ಕೂಸು ಹುಟ್ಟಿ ಕೈಯೊಳಗೆ ನಿಂದು ಮೈಯನೆಲ್ಲ ಮುಟ್ಟಿತ್ತು ಇದೇನು ಹೇಳಾ ! ನಾ ನೋಡಿ ಹೆಣ್ಣಾಗಿ ಬಗೆಬಗೆಯಾಟದಿಂದೆ ಸೊಗಸು ತೋರಿದರೆ ನೆಲಮನೆಯೊಳಿಪ್ಪ ಬಳಿವಿಡಿಯೆ ಭೋಗವ ನೆಗಹಿ ತೋರಿದನು ಮೇಲುಮನೆಯಲ್ಲಿ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಗದೆರೆಯ ಮಾಡಿದನೊಂದು ಕುರಿಮರಿಯ. ಆ ಕುರಿಮರಿ ಮೇಯುತ್ತಿದೆ. ಸರ್ವಜಗದವರೆಲ್ಲ ಅನಂತರಕ್ಕಸರು ಹಿಂಸೆ ಮಾಡುತಲೈದಿದರು. ಹೋದ ರಕ್ಕಸರು ಸತ್ತರು:ಇದ್ದ ಕುರಿಮರಿ ಇದ್ದಂತಿಪ್ಪುದು! ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->