ಅಥವಾ

ಒಟ್ಟು 51 ಕಡೆಗಳಲ್ಲಿ , 19 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲವನರಸುವರೆ ಇದರೊಳು ಛಲವನರಸುವರೆ ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ ತೊಗಲಹೊದಿಕೆ, ನರವಿನ ಹಂಜರ ಕುಲವನರಸುವರೆ ? ಹೊಲತಿ ಹೊಲೆಯ[ನು] ಹೋಗಿ ಹೊಲೆಯಲ್ಲಿ ಮಿಂದಡೆ ಹೊಲೆ ಹೋಯಿ[ತ್ತಿ]ಲ್ಲ, ಕುಲ ಹೋಗಲಿಲ್ಲ. ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ.
--------------
ಬಸವಣ್ಣ
ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ? ನೊಣವಿಂಗೆ ಪಕ್ಕ ಹುಟ್ಟಿದೆಡೆ ಶರಭನಾಗಬಲ್ಲುದೆ ? ಕಾಗೆ ಕೋಗಿಲೆಯು ಒಂದೆಯಾದೆಡೆ ಕೋಗಿಲೆಯಂತೆ ಸ್ವರಗೆಯ್ಯಬಲ್ಲುದೆ ? ಶ್ವಾನನ ನಡು ಸಣ್ಣನಾದಡೆ ಸಿಂಹನಾಗಬಲ್ಲುದೆ ? ಅಂಗದ ಮೇಲೆ ವಿಭೂತಿ ರುದ್ರಾಕ್ಷಿ ಶಿವಲಿಂಗವಿದ್ದಡೇನು ನಿಮ್ಮ ನಂಬಿದ ಸತ್ಯದಾಚಾರವುಳ್ಳ ಏಕಲಿಂಗನಿಷ್ಠಾವಂತರಿಗೆ ಸರಿಯೆನ್ನಬಹುದೆ ಅಯ್ಯಾ ? ಇಂಥ ಗುರುಲಿಂಗಜಂಗಮವ ನೆರೆ ನಂಬದೆ, ಪಾದತೀರ್ಥ ಪ್ರಸಾದದಿರವನರಿಯದೆ, ಬರಿದೆ ಭಕ್ತರೆಂದು ಬೊಗಳುವ ದುರಾಚಾರಿಯ ತೋರದಿರಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ, ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ, ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ. ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು, ಆಚರಿಸುವ ಜ್ಞಾನಕಲಾತ್ಮನಿಗೆ ಈ ಲೋಕದ ಜಡಜೀವರು ಕಡುಪಾತಕರು ಬಂದು ಈ ಸಂಸಾರದಲ್ಲಿ ಪಾರಮಾರ್ಥವುಂಟು, ಇದರೊಳಗೆ ಸಾದ್ಥಿಸಬೇಕೆಂದು ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು. ಇದಕ್ಕೆ ಉಪಮೆ- ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು. ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು. ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು. ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು. ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು. ಅವರೆಲ್ಲರು ಹುಚ್ಚರು, ನೀವೇ ಬಲ್ಲವರು. ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ ಪರಶಿವಲಿಂಗಲೀಲಾವಿನೋದದಿಂ ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು. ಇದರನುಭಾವವ ತಿಳಿಯಬಲ್ಲರೆ ಹೇಳಿರಿ; ಅರಿಯದಿದ್ದರೆ ಕೇಳಿರಿ. ತನು-ಮನ-ಧನ ನೀನಲ್ಲ, ಪಂಚವಿಂಶತಿತತ್ವ ನೀನಲ್ಲ, ಪಂಚಭೂತಪ್ರಕೃತಿ ನೀನಲ್ಲ, ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ. ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ, ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ, ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸೆಂದು ಹಾಡಿದರಲ್ಲದೆ ಅವರೇನು ದಡ್ಡರೇ? ನೀವೇ ಬಲು ಬುದ್ಧಿವಂತರು, ಬಲುಜಾಣರು ! ಇಂಥ ಯುಕ್ತಿ ವಿಚಾರವ ಹೇಳುವ ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ, ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು, ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು, ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣಾ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ, ಅಣುರೇಣುತೃಣಕಾಷ್ಠ ಮೊದಲಾದ ಬ್ರಹ್ಮಾಂಡ ಪರಿಪೂರ್ಣವಾದ ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂದ್ಥಿಸಿ ಸರ್ವಸಂ[ಕು]ಲವ ತೋರಿದ ಬಳಿಕ, ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ ನಟ್ಟ ಕಲ್ಲಿಂಗೆ ಅಡ್ಡಬೀಳುವ ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು, ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು. ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಾಮ ಕಾಲದೆ ಕಾಡುವ ಮಾಯೆ ನೆಳಲುಗತ್ತಲೆ ನೀನು ಮಾಯೆ. ಸಂಗ ಸುಖದಿಂದ ಹಿಂಗುವರಾರುಯಿಲ್ಲ. ಬಿಗಿದ ಕುಚ, ಉರಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ ಮೋಹಪ್ರಿಯವಾದ ಮೋಹಿನಿಯರ ಅಗಲುವುದೆಂತೊ ಕರಸ್ಥಳದ ಇಷ್ಟಲಿಂಗೇಶ್ವರಾ ?
--------------
ಮೆಡ್ಲೇರಿ ಶಿವಲಿಂಗ
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು, ಹಲವು ಸ್ತ್ರೀಯರ ಅಂದಚಂದಗಳು, ಹಲವು ತೇರು ಜಾತ್ರೆಗಳು, ಹಲವು ಆಟಪಾಟಗಳು, ಹಲವು ಅರಿವೆ ಆಭರಣಗಳು, ಹಲವು ಆನೆ ಕುದುರೆ ಅಂದಳಗಳು, ಹಲವು ಚಿತ್ರವಿಚಿತ್ರ ಛತ್ರ ಚಾಮರಗಳು, ಹಲವು ಹಣ್ಣು ಫಲಾದಿಗಳು, ಹಲವು ಪತ್ರೆ ಪುಷ್ಪಂಗಳು, ಹಲವು ಮೆಟ್ಟುವ ಚರವಾಹನ ಮೊದಲಾಗಿ ನೋಡಿದಾಕ್ಷಣವೇ ದೀಪಕ್ಕೆ ಪತಂಗ ಎರಗುವಂತೆ, ಹಲವು ಪ್ರಾಣಿಗಳಿಗೆ ತಿಗಳ ಎರಗುವಂತೆ, ಮೀನಿಗೆ ಗುಂಡುಮುಳುಗನಪಕ್ಷಿ ಎರಗುವಂತೆ, ಹಲವ ಹಂಬಲಿಸಿ, ಕಂಡುದ ಬಿಡದ ಮುಂಡೆ ಪಿಶಾಚಿಯಂತೆ, ಜನ್ಮಾಂತರವೆತ್ತಿ ತೊಳಲಿತಯ್ಯ ಎನ್ನ ನೇತ್ರೇಂದ್ರಿಯವು. ಇಂಥ ಕರ್ಮಜಡ ಜೀವರ ಸಂಗದಿಂದ ಕೆಟ್ಟೆ ಕೆಟ್ಟೆ. ಶಿವಧೊ ಶಿವಧೊ ಎಂದು ಮೊರೆಯಿಟ್ಟೆನಯ್ಯ. ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕನೀಲಾಂಬಿಕೆ ತಾಯಿಗಳ ತೊತ್ತಿನ ತೊತ್ತು ಸೇವೆಯ ಮಾಡುವ ಗೌಡಿಯ ಚರಣವ ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ. ಎನ್ನಾಳ್ದ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ, ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ, ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ, ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ, ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ, ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ, ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ, ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ, ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ ಎನ್ನ ಪಾಣೇಂದ್ರಿಯವು. ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಕಾಯವಿಡಿದು ಮಾಯೆ ಬಿಡಬೇಕೆಂಬ ಹೆಡ್ಡರಿಗೆ ಮಾಯೆ ಬಿಡುವುದು ಹೇಂಗಯ್ಯ ? ದೇಹವಿಡಿದು ನೋಡಿ ಕಂಡು ಆ ಅಮೃತ ಉಂಡೆನೆಂದು ನುಡಿವರು. ಆ ಅಮೃತ ಉಂಡ ಬಳಿಕ ಹಸಿವುಂಟೆ ಹೇಳಾ. ಪ್ರಳಯವಿದ್ಯೆ ವಾತ ಪಿತ್ಥ ಶ್ಲೇಷ್ಮಂಗಳ ಕುಡಿದು ಆ ಅಮೃತವ ಉಂಡೆನೆಂದು ನುಡಿವವರಿಗೆ ಎಂದೆಂದಿಗೂ ದೊರಕದು ಕಾಣಾ. ಇಂಥ ಭ್ರಾಂತಭ್ರಮಿತರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ. ಚಿತ್ತೇ ತಾನಾದ ಮಹಾತ್ಮಂಗೆ ಲಯವಿಲ್ಲ ಭಯವಿಲ್ಲ ಅನುವಿಲ್ಲ. ದೇಹದಿ ನೋಡುವ ಕಪಿಚೇಷ್ಟೆಗಳಿಗೆ ಎಂದೆಂದಿಗೂ ಇಲ್ಲ. ಮಹತೋತ್ತಮನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಅಯ್ಯಾ, ಮತ್ತೊಂದು ವೇಳೆ ಕಾಮವಿಕಾರದಿಂದ ತೊಳಲಿಸಿತಯ್ಯ, ಕ್ರೋಧದ ಸಂದಿನಲ್ಲಿ ಕೆಡಹಿತಯ್ಯ. ಲೋಭದ ಪಾಶದಲ್ಲಿ ನೂಂಕಿತಯ್ಯ. ಮೋಹಮದಮತ್ಸರದ ಬಲೆಯಲ್ಲಿ ಸಿಲ್ಕಿಸಿತಯ್ಯ. ಸತ್ವರಜತಮವೆಂಬ ತ್ರಿಗುಣಂಗಳಲ್ಲಿ ನುಗ್ಗುನುರಿ ಮಾಡಿತಯ್ಯ. ಗಂಧ ರಸ ರೂಪು ಸ್ಪರ್ಶನ ಶಬ್ದ ಮೊದಲಾದ ಸಮಸ್ತ ವಿಷಯದಲ್ಲಿ ಕಂದಿಕುಂದಿಸಿತಯ್ಯ. ಇಂಥ ದುರಾಚಾರಿ ದುರ್ಜೀವ ಮನವ ಎಂದಿಗೆ ಪರಿಹರಿಸಿಯೊ ? ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಈ ಸಕಲದೊಳಗೆ ಒಂದು ಸಯವಿಲ್ಲದೆ ನಾವು ಹಿರಿಯರು ನಾವು ಲಿಂಗವಂತರೆಂಬರು. ಇದಿರ ಕೈಯಲ್ಲಿ ಎನಿಸಿಕೊಳ್ಳುತ್ತಿಹರು ಮನ ನಾಚದೆ. ಇಂಥ ಮೂಗುನಾಚಿಗಳ ಮೆಚ್ಚುವನೆ ಮಹಾಲಿಂಗ ಗಜೇಶ್ವರನಲ್ಲಿ ಎನ್ನ ಹೆತ್ತ ತಂದೆ ಪೂರ್ವಾಚಾರ್ಯ ಸಂಗನಬಸವಣ
--------------
ಗಜೇಶ ಮಸಣಯ್ಯ
ಬಿಳಿಯ ತತ್ತಿಯೊಳಗೆ ಹಲವು ಬ್ರಹ್ಮಾಂಡವೈ, ಒಲವಿಂದಪ್ಪವವು ಸಮತೆ. ತಾಯ ಹಲವು ತತ್ತಿಯನಿಟ್ಟು ಮರಳಿ ಆಡುತ್ತಿಪ್ಪುದದು ಕರುಣ ಸಮತೆಯ ಸಾಕ್ಷಿಯೆನಿಪ ಭಕ್ತಿ. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ಇಂಥ ಸಕಲವನು ಧರಿಸಿ ಶರಣರ ಕರದಲಿ.
--------------
ಸಿದ್ಧರಾಮೇಶ್ವರ
ಆ ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ಬ್ರಹ್ಮಾಂಡಕಪಾಲದೊಳು ಚತುರ್ದಶಭುವನಂಗಳು, ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಿಹ ಕ್ರಮವೆಂತೆಂದಡೆ : ಆ ಭೂತಬ್ರಹ್ಮಾಂಡಕಪಾಲದಲ್ಲಿ ಅತಳಲೋಕವಿಹುದು. ಆ ಅತಳಲೋಕದಿಂದ ಮೇಲೆ ವಿತಳಲೋಕವಿಹುದು. ಆ ವಿತಳಲೋಕದಿಂದ ಮೇಲೆ ಸುತಳಲೋಕವಿಹುದು. ಆ ಸುತಳಲೋಕದಿಂದ ಮೇಲೆ ತಳಾತಳಲೋಕವಿಹುದು. ಆ ತಳಾತಳಲೋಕದಿಂದ ಮೇಲೆ ರಸಾತಳಲೋಕವಿಹುದು. ಆ ರಸಾತಳಲೋಕದಿಂದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದಿಂದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕದಿಂದ ಮೇಲೆ ಜಲಪ್ರಳಯವಿಹುದು. ಆ ಜಲಪ್ರಳಯದ ಮೇಲೆ ಮಹಾಕಮಠನಿಹುದು. ಆ ಮಹಾಕಮಠನ ಮೇಲೆ ಮಹಾವಾಸುಗಿ ಇಹುದು. ಆ ಮಹಾವಾಸುಗಿಯ ಸುತ್ತುವಳಯಾಕೃತವಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು. ಆ ಭೂಲೋಕದಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳಿಹವು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ಸುತ್ತುವಳಯಾಕೃತವಾಗಿ ಸಮಸ್ತ ಲೋಕಾಲೋಕ ಪರ್ವತವಿಹುದು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ವಿಸ್ತೀರ್ಣವೆಂತೆಂದಡೆ : ಪಂಚಾಶತಕೋಟಿ ವಿಸ್ತೀರ್ಣದ ಮಧ್ಯಭೂಮಿ. ಆ ಮಧ್ಯಭೂಮಿ ಮಂಡಲವಳಯದಲ್ಲಿ ಮಹಾಮೇರುಪರ್ವತದ ವಿಸ್ತೀರ್ಣವೆಂತೆಂದಡೆ : ಒಂದುಕೋಟಿಯು ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನಪ್ರಮಾಣು. ಆ ಮೇರುಮಂದಿರದ ಶಿರದ ಮೇಲೆ ಮೂವತ್ತುಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ನಂದಿವಾಹ ಗಣಂಗಳು, ದ್ವಾದಶಾದಿತ್ಯರು, ನಾರದಮುನಿ ಯೋಗೀಶ್ವರರು, ಅಷ್ಟದಿಕ್ಪಾಲರು, ಏಕಾದಶರುದ್ರರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು ಶಿವಸುಖ ಸಂಗೀತ ವಿನೋದದಿಂದ ರಾಜ್ಯಂಗೆಯ್ಯುತ್ತಿರಲು, ಆ ಮೇರುಮಂದಿರದ ಶಿಖರದ ಕೆಳಗೆ ಜಂಬೂದ್ವೀಪವಿಹುದು. ಆ ಜಂಬೂದ್ವೀಪವು ಒಂದು ಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಒಂದುಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನದಗಲವಾಗಿ ಲವಣಸಮುದ್ರವು ಆ ಜಂಬೂದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎರಡು ಲಕ್ಷದ ಮೇಲೆ ಐವತ್ತುಸಾವಿರ ಯೋಜನ ಪ್ರಮಾಣದಲ್ಲಿ ಇಕ್ಷುಸಮುದ್ರವು ಆ ಪ್ಲಕ್ಷದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಮೂರುಲಕ್ಷದ ಮೇಲೆ ಎಪ್ಪತ್ತುಸಾವಿರದಯಿನೂರು ಯೋಜನಪ್ರಮಾಣದಗಲವಾಗಿ ಕುಶದ್ವೀಪವಂ ಆ ಇಕ್ಷುಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ಕುಲಕ್ಷದ ಮೇಲೆ ಮೂರುಸಾವಿರ ಯೋಜನಪ್ರಮಾಣದಗಲವಾಗಿ ಸುರೆಯ ಸಮುದ್ರವು ಆ ಕುಶದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಐದುಲಕ್ಷ ಯೋಜನಪ್ರಮಾಣದಗಲವಾಗಿ ಶಾಕದ್ವೀಪವು ಆ ಸುರೆಯ ಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಹದಿನಾಲ್ಕುಲಕ್ಷ ಯೋಜನಪ್ರಮಾಣದಗಲವಾಗಿ ಘೃತಸಮುದ್ರವು ಆ ಶಾಕದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತುಲಕ್ಷ ಯೋಜನಪ್ರಮಾಣದಗಲವಾಗಿ ಶಾಲ್ಮಲೀದ್ವೀಪ ಆ ಘೃತಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತು ಲಕ್ಷ ಯೋಜನಪ್ರಮಾಣದಗಲವಾಗಿ ದಧಿಸಮುದ್ರವು ಆ ಶಾಲ್ಮಲೀದ್ವೀಪವಂ ವಳಯಾಕೃತವಾದಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಪುಷ್ಕರದ್ವೀಪ ಆ ದಧಿಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ಷೀರಸಮುದ್ರವು ಆ ಪುಷ್ಕರದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ರೌಂಚದ್ವೀಪವು ಆ ಕ್ಷೀರಸಮುದ್ರಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಸ್ವಾದೋದಕಸಮುದ್ರವು ಆ ಕ್ರೌಂಚದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಸಪ್ತದ್ವೀಪಂಗಳ ಸುತ್ತುವಳಯಾಕೃತವಾಗಿ ಲೋಕಾಲೋಕ ಪರ್ವಂತಗಳಿಹವು. ಆ ಲೋಕಾಲೋಕ ಪರ್ವತಂಗಳ ಸುತ್ತುವಳಯಾಕೃತವಾಗಿ ಚಕ್ರವಾಳಗಿರಿ ಇಹುದು. ಆ ಚಕ್ರವಾಳಗಿರಿಗತ್ತತ್ತ ಭೂಮಿ ಪರ್ವತಾಕಾರವಾಗಿಹುದು. ಆ ಭೂಮಿಯಿಂದಂ ಮೇಲೆ ಮೇಘಮಂಡಲಂಗಳಿಹವು. ಆ ಮೇಘಮಂಡಲಂಗಳ ಮೇಲೆ ಭುವರ್ಲೋಕವಿಹುದು. ಆ ಭುವರ್ಲೋಕದಿಂದ ಮೇಲೆ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಿಂದ ಮೇಲೆ ನಕ್ಷತ್ರಾದಿಮಂಡಲವಿಹುದು. ಆ ನಕ್ಷತ್ರಾದಿ ಮಂಡಲಂಗಳಿಂದತ್ತ ಮೇಲೆ ಮಹರ್ಲೋಕವಿಹುದು. ಆ ಮಹರ್ಲೋಕದಿಂದತ್ತ ಮೇಲೆ ಜನರ್ಲೋಕವಿಹುದು. ಆ ಜನರ್ಲೋಕದಿಂದತ್ತ ಮೇಲೆ ತಪರ್ಲೋಕವಿಹುದು. ಆ ತಪರ್ಲೋಕದಿಂದತ್ತ ಮೇಲೆ ಸತ್ಯರ್ಲೋಕವಿಹುದು. ಆ ಸತ್ಯರ್ಲೋಕದಿಂದತ್ತ ಮೇಲೆ ತ್ರಿಲಕ್ಷಕೋಟಿಯೋಜನ ಪರಿಪ್ರಮಾಣದುದ್ದದಲ್ಲಿ ಮಹಾಪ್ರಳಯಜಲವಿಹುದು. ಆ ಮಹಾಪ್ರಳಯಜಲದಿಂದತ್ತ ಮೇಲೆ ಶಿವಾಂಡ ಚಿದ್ಬ್ರಹ್ಮಾಂಡವಿಹುದು. ಇಂಥ ಅನಂತಕೋಟಿ ಚಿದ್ಬ್ರಹ್ಮಾಂಡಗಳು, ಅನಂತಕೋಟಿ ಲೋಕಾಲೋಕಂಗಳೆಲ್ಲ ಒಂದರಲ್ಲೊಂದಡಗಿ ಅಪ್ರಮಾಣ ಕೂಡಲಸಂಗಯ್ಯನು ತನ್ನ ಲೀಲಾವಿನೋದದಿಂದ ನಿಂದರಾಗಿ ನಿಲುವುದು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ಥಲ ಹದಿನಾಲ್ಕಕ್ಕೆ ಜಲಂಗಳೇಳಾಗಿ ಪರಿವೇಷ್ಟಿಸಿಕೊಂಡಿಪ್ಪುದು. ಆ ಸ್ಥಲ ಜಲಾದಿಗಳಿಪ್ಪವು ಒಂದು ವಟವೃಕ್ಷದ ಪತ್ರದಲ್ಲಿ. ಇಂಥ ವಟವೃಕ್ಷಂಗಳು ಹದಿನಾಲ್ಕನು ಅವಗ್ರಹಿಸಿಕೊಂಡಿ[ಪ್ಪ]ನಿನ್ನಯ ಸೀಮೆ ಸರ್ವಾಂಗವನವಗ್ರಹಿಸಿಕೊಂಡಿಪ್ಪುದು ಎಮ್ಮ ಶರಣರ ಕರಸ್ಥಲವಾವುದ ಘನವೆಂಬೆವಾವುದ ಕಿರಿದೆಂಬೆನೆಲೆಯಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->