ಅಥವಾ

ಒಟ್ಟು 498 ಕಡೆಗಳಲ್ಲಿ , 66 ವಚನಕಾರರು , 368 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಕರತರ್ಕದ ಪ್ರಸ್ತಾವನ ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿ ಕೂಗುತ್ತಿರೆ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ನಾಲ್ಕು ಸೂಕರ ಮುತ್ತಿಕೊಂಡಿರೆ, ಸಪ್ತವ್ಯಸನಗಳೆಂಬ ಏಳು ಬೆಕ್ಕು ಸುಳಿವುತ್ತಿರೆ, ಪಂಚೇಂದ್ರಿಯವೆಂಬ ಐದು ವರ್ಣದ ಹುಲಿ ನುಂಗುತ್ತಿರೆ, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರು ಮುಟ್ಟಿ ತನ್ನಂಗದೊಳು ನಾನು ನೀನೆಂಬ ಅಹಂಕಾರದ ಜಾಗಟೆಯ ಪಿಡಿದು ಅಜಾÕನವೆಂಬ ಕುಡಿಯಲ್ಲಿ ಬಾರಿಸಿ, ಇಂತಪ್ಪ ಪರಿಯಲ್ಲಿದ್ದ ಸೂತಕಂಗಳ ಪರಿಯದೆ ಹೊರಮಾತ ಕೇಳಬಾರದೆಂದು ಜಾಗಟೆಯ ಹೊಯ್ಸಿ ನಾದದ ಮರೆಯಲ್ಲಿ ಆಹಾರವ ಕೊಂಬ ಸೇವಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ ದ್ವಾದಶಮಂತ್ರವ ಕಲಿಸಿದ. ಒಂದು ಮಂತ್ರದಿಂದ ಮತ್ರ್ಯಲೋಕವ ಸುಟ್ಟೆ. ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ. ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ. ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ. ಆರು ಮಂತ್ರದಿಂದ ಆರು ವರ್ಣವ ಸುಟ್ಟೆ. ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕÀರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರೂರ ಮಧ್ಯದಲ್ಲಿ ಆರು ವರ್ಣದ ಪದ್ಮ ಬೇರೆ ಬೇರವಕೆ ಅಕ್ಷರಗಳಾರು. ಏರಿ ಬಂದಪೆವೆಂಬ ಕರ್ಮಯೋಗಿಗಳೆಲ್ಲ ಗಾರಾಗಿ ಹೋದರು. ಮೀರಿದ ಶಿವಯೋಗ ಗಾರಾದವರಿಗೆ ಸೂರೆಯೆ, ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು ಆರು ಕೇರಿಗಳ ಪೊಕ್ಕು ನೋಡಲು ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ ಒಳಹೊರಗೆ ಪರಿಪೂರ್ಣವಾಗಿಹರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಒಂದನೆ ದೆಸೆಯಲ್ಲಿ ಒಂದು ಮುಖದ ಭೈರವನು. ಎರಡನೆಯ ದೆಸೆಯಲ್ಲಿ ಎರಡು ಮುಖದ ಭೈರವನು. ಮೂರನೆಯ ದೆಸೆಯಲ್ಲಿ ಮೂರು ಮುಖದ ಭೈರವನು. ನಾಲ್ಕನೆಯ ದೆಸೆಯಲ್ಲಿ ನಾಲ್ಕು ಮುಖದ ಭೈರವನು. ಐದನೆಯ ದೆಸೆಯಲ್ಲಿ ಐದು ಮುಖದ ಭೈರವನು. ಆರನೆಯ ದೆಸೆಯಲ್ಲಿ ಆರು ಮುಖದ ಭೈರವನು. ಏಳನೆಯ ದೆಸೆಯಲ್ಲಿ ಏಳು ಮುಖದ ಭೈರವನು. ಎಂಟನೆಯ ದೆಸೆಯಲ್ಲಿ ಎಂಟು ಮುಖದ ಭೈರವನು. ಇಂತಿರುವ ಅಷ್ಟಭೈರವರು ಹೊರಸುತ್ತಿನಲ್ಲಿ ಪಹರಿಕರು. ತುತ್ತರಸಿನವೆಂಬ ಚಕ್ರವು ಸುರಗಿಯಂದದಿ ಸುತ್ತಿ, ತೆರಹು ಇಲ್ಲವೆ ತಿರುಗುತ್ತಿಹುದು. ಅದು ಕಾಣಬಾರದಂತಿಹುದು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ, ಐದು ವರ್ಣದ ಸಂಚಿಗ ಇವರೊಳಗಾದ ನಾನಾ ವರ್ಣದ ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ, ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ, ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು, ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು, ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
--------------
ವೀರ ಗೊಲ್ಲಾಳ/ಕಾಟಕೋಟ
ಇನ್ನಷ್ಟು ... -->