ಅಥವಾ

ಒಟ್ಟು 166 ಕಡೆಗಳಲ್ಲಿ , 49 ವಚನಕಾರರು , 152 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟದ ಮಧ್ಯದಲ್ಲಿ ನಿಂದವನ, ಆತ್ಮನ ಚಿತ್ತದಲ್ಲಿ ಅರಿದವನ, ಅಲ್ಲ ಆಹುದೆಂದು ಗೆಲ್ಲ ಸೋಲಕ್ಕೆ ಹೋರದವನ, ಎಲ್ಲಾ ಜೀವಂಗಳಲ್ಲಿ ದಯವುಳ್ಳವನ, ಆತನೆಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ. ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ. ಇದೇ ಸಂಸಾರವೆಂಬುದನರಿಯದೆ ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು ವಿರಕ್ತನಾದೆನೆಂಬ ಅಜಾÕನಿಯ ಪರಿಯ ನೋಡಾ. ಇದು ವಿರಕ್ತಿಯೇ? ಅಲ್ಲ. ದೇಹೇಂದ್ರಿಯ ಮನಃಪ್ರಾಣಾದಿಗಳ ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು. ಆತಂಗೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತ ಭಕ್ತನೆಂಬರು, ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯಫದನ್ನಕ್ಕ, ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,_ ಭಕ್ತರೆಂದು ಲಿಂಗವ ಪೂಜಿಸುವವರ ಕಂಡು ನಾನು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಹಭೋಜನವ ಮಾಡುವನ ಇರವು ಹೇಗೆಂದಡೆ: ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ, ಒಡಲಿನ ಆತ್ಮನ ಭೇದದಂತಿರಬೇಕು. ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ, ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ, ಕಾಯದ ಛಾಯವ ತೊಟ್ಟಿದ್ದಲ್ಲಿ ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ. ಅದು ಉರಿಯೊಳಗಳ ಕರ್ಪುರದಂತೆ, ಕರ್ಪುರದೊಳಗಳ ಉರಿಯಂತೆ. ಅನ್ಯಬ್ಥಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಇಂದ್ರಿಯಂಗಳ ಗಮನಗೆಡದೆ ಕರಣಂಗಳ ಸೂತಕ ಕಡೆಗಾಗದೆ ಆತ್ಮನ ಕುರುಹು ಅಡಗದೆ ಬರಿದೆ ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ ! ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ! ಒಂದುವನರಿಯದೆ ಹಿಂದಿನ ಸರಮಾಲೆಯ ಸಂಕೋಲೆಯೊಳಗಾಗಿ ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹಾಮನೆಯ ಮಂಟಪದಲ್ಲಿ ನಾಲ್ಕು ನಡುವಳ ಕಂಬದ ನಡುವಳ ಕಂಬದಲ್ಲಿ ಒಂದು ಒರಲೆ ಮನೆಯ ಮಾಡಿತ್ತು. ಅದಕ್ಕೆ ಎಂಟು ಕಂಬ, ಒಂಬತ್ತು ಬಾಗಿಲು, ಹತ್ತು ಕದ; ಮಿಗಿಲೊಂದು ಮುಚ್ಚುವುದಕ್ಕೆ ಬಾಗಿಲಿಲ್ಲ. ತುಂಬಿ ಅಲ್ಲಿ ಹಾರಿತ್ತು. ಆ ಆತ್ಮನ ನೆಲೆಯನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ: ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು. ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು. ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು; ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು; ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು ಪುನರಪಿಯ ಮಾಡಿ ಪುನರ್ದೀಕ್ಷೆಯ ಮಾಡಬೇಕು. ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ. ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು. ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು. ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು. ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು. ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು. ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು. ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ ? ಗುರುನಿರಂಜನ ಚನ್ನಬಸವಲಿಂಗಾ
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು. ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ, ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ ಅಡಗದೆ, ತಲೆದೋರಿದಲ್ಲಿಯೇ ಲಯವಾಗಬೇಕು. ಇಂತೀ ಗುಣ ಆತ್ಮನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
--------------
ಕರುಳ ಕೇತಯ್ಯ
ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ, ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ.
--------------
ಆದಯ್ಯ
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ, ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ, ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ. ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ.
--------------
ಆದಯ್ಯ
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ. ಇಂತಪ್ಪವರ ಬ್ಥಿನ್ನಕ್ರಿಯಾಚಾರವನು ಸುಜ್ಞಾನೋದಯವಾದ ಜ್ಞಾನಕಲಾತ್ಮನು ತನ್ನ ಪರಮಜ್ಞಾನದಿಂ ನಷ್ಟವ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂದ್ಥಿಯಾಗಿ, ಸರ್ವಾಂಗಲಿಂಗಮಯ ತಾನೆಂದು ತಿಳಿದು, ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ ಗುರುಲಿಂಗಜಂಗಮವನ್ನು ತನ್ನ ತನುಮನದಲ್ಲಿ ಸ್ವಾಯತವಮಾಡಿದ ಶಿವಶರಣಂಗೆ ಭವ ಹಿಂಗಿ, ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ, ವಾರಿಯ ಸರಲೆಕ್ಕವ ಭೇದಿಸಬಹುದೆ? ಆ ತೆರದಲ್ಲಿ ನಿಂದಾತ್ಮನ ಒದಗನರಿವ ಭೇದವೆಂತುಟಯ್ಯಾ? ವಾಯು ಬಯಲಲ್ಲಿ ಅಡಗಿ ಆವಠಾವಿನಲ್ಲಿ ಬೀಸಿದಡೆ ಕಲೆದೋರುವಂತೆ, ಆತ್ಮನ ಭೇದವ ಭೇದಿಸುವ ಪರಿ ತನ್ನನರಿತಲ್ಲದಾಗದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->