ಅಥವಾ

ಒಟ್ಟು 72 ಕಡೆಗಳಲ್ಲಿ , 31 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಪಂಕವ ಮೆಟ್ಟಿದ ಅಡಿ, ಉಭಯಕ್ಕೆ ಶಂಕೆದೋರದಿಹುದೆ ? ತ್ರಿವಿಧವ ಕೂಡಿ ಆಡುವ ಮನ, ಅವರೊಳು ಒಡಗೂಡದಿಹುದೆ ? ಅದರ ತೊಡಿಗೆಯನರಿತಡೆ ಗಡಿಗೆಯನೊಡಗೂಡಿದ ಜಲದಂತಿರಬೇಕು. ಕಾರ್ಯ ಕೂಡಿದಲ್ಲಿ ಗಡಿಗೆಯಾಗಿ, ಮತ್ತೆ ವಾರಿಯ ಬೆರಸದಂತಿರಬೇಕು. ಇದು ಕರತಳಾಮಳಕ, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ.
--------------
ಗೋಣಿ ಮಾರಯ್ಯ
ಸಂಚಿತಾದಿ ಕರ್ಮತ್ರಯಂಗಳು ಜೀವನಿಗಲ್ಲದೆ ಶಿವಸ್ವರೂಪನಿಗೆಲ್ಲಿಹವೂ? ಆಡುವ ಗೊಂಬೆಯನು ಆಡಿಸುವಾತಂಗಲ್ಲದೆ, ಆಡುವ ಗೊಂಬೆಗೆಲ್ಲಿಹದೊ ಸ್ವತಂತ್ರತೆ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇದರಿರವು ಸ್ವತಂತ್ರನಿಗಲ್ಲದೆ ಅಸ್ವತಂತ್ರನಿಗೆಲ್ಲಿಹದೊ ?
--------------
ಸಿದ್ಧರಾಮೇಶ್ವರ
ಒಂದು ಶರೀರ ನಾನಾ ಲಾಗ ಕಲಿತು, ಆಡುವ ಭೇದ ಬೇರಾದಂತೆ, ಆಡುವವ ತಾನೊಬ್ಬನೆಯಾಗಿ, ಆದುದ ಕಂಡು ಅನ್ಯರ ಕೇಳಲೇಕೆ? ಇದಿರಿಗೆ ಹೇಳಲೇಕೆ? ವಸ್ತುವಾಟ ಒಂದು, ವರ್ತನ ಬೇರೆ, ಉಭಯವೂ ತಾನೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಪೂಜಿಸಿಕೊಂಡೆಹೆವೆಂದು, ಘನಗಂಬ್ಥೀರದಲ್ಲಿ ರಾಗಿಸಿಕೊಂಡಿಪ್ಪ ಆತ್ಮ ತೇಜದ ಮಾತಿನ ವೇಷದ ಗರ್ವಿಗಳು, ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ, ಶ್ರೋಣಿತದಾಸೆಗೆ ಮಚ್ಚಿದಂತೆ. ಮತ್ತುಂಟೆ ಅರ್ಕೇಶ್ವರಲಿಂಗನ ಕೂಟ ?
--------------
ಮಧುವಯ್ಯ
ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ. ಹೊರಗೆ ಸ್ವಯಂಪಾಕ, ಒಳಗೆ ಅಧರಪಾಕ. ಹೊರಗೆ ಭವಿ ನಿರಸನ, ಒಳಗೆ ಭವಿಸಂಗ ಕೂಟ. ಇಂತಿವೆಲ್ಲವು, ಆಡುವ ವಿಧಾಂತ, ನೇಮವ ಹಿಡಿದಂತಾಯಿತ್ತು. ಇಂತೀ ಗುಣವನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ ತೊತ್ತಿನ ಮಕ್ಕಳು. ದೇವಲೋಕದ ಕವಿಗಳೆಲ್ಲರೂ ಎನ್ನ ಕರುಣದ ಕಂದಗಳು ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ ಲೆಂಕ ಡಿಂಗರಿಗರು ಹರಿ ಬ್ರಹ್ಮ ರುದ್ರ ಈ ಮೂವರೂ ಎನ್ನ ಕಕ್ಷೆಯ ಒಕ್ಕಲು ಗುಹೇಶ್ವರಾ ನೀ ಮಾವ ನಾನಳಿಯ.
--------------
ಅಲ್ಲಮಪ್ರಭುದೇವರು
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು, ತನ್ನ ನೆಲೆಯ ತಿಳಿದಿತ್ತು. ಕತ್ತಲೆಯೊಳಗೆ ನಿಂದು ನೋಡುತ್ತಿರಲು, ನೋಟ ಹಿಂದಾಯಿತ್ತು; ಆಟವಡಗಿತ್ತು; ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು. ಊಟವನುಂಡು ಕೂಟವ ಕೂಡಿ ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು, ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು, ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ. ಮೇರುವೆಯ ಮೇಲೆ ಕುಳಿತಿರುವ ಕಪ್ಪೆಯ ಕಂಡೆನಯ್ಯ. ಆ ಕಪ್ಪೆಗೆ ಧ್ವನಿಯಿಲ್ಲಾ ನೋಡಾ, ಆ ಹಕ್ಕಿಗೆ ಗರಿಯಿಲ್ಲ ನೋಡಾ! ಹಕ್ಕಿಗೆ ಗರಿ ಬಂದಲ್ಲದೆ, ಕಪ್ಪೆಗೆ ಧ್ವನಿ ಬಂದಲ್ಲದೆ ತಾನಾರು ಎಂಬುದು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ, ನಾಬ್ಥಿ ಮೂತ್ರನಾಳದ ನಾಲ್ಕಂಗುಲ ಮಧ್ಯದಲ್ಲಿ ಅಪ್ಪುನಾಡಿ, ಉಡಸೂತ್ರ ನಾಬ್ಥಿ ಮೊದಲಾದ ಪಂಚಾಂಗುಲ ಮಧ್ಯದ ಮೇಲೆಸೆಯಲ್ಲಿ [ತೇಜನಾಡಿ] ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ, ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ, ಇಂತೀ ಪಂಚಪಥವನೈದುವ ನಾಡಿಯಲ್ಲಿ ಆಡುವ ಆತ್ಮನ ವಿವರದ ದೆಸೆಯನರಿದು, ಇಂತೀ ಐದು ಮುಚ್ಚಿ ಮೇಗಳ ಬ್ರಹ್ಮರಂಧ್ರದಲ್ಲಿಯೆಯಿದರೆಮ್ಮ ವೈದ್ಯರು. ನಾದ ಬಿಂದು ಕಳೆಗತೀತ ನೋಡಾ, ಮರುಳಶಂರಪ್ರಿಯ ಸಿದ್ಧರಾಮೇಶ್ವರಲಿಂಗವು.
--------------
ವೈದ್ಯ ಸಂಗಣ್ಣ
ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ? ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ? ಅದು ತುಡುಗುಣಿಕಾರರ ನೇಮ. ಒಡೆಯರತ್ತ ನಾವಿತ್ತ. ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನತುಡುಗುಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೆ? ಇಂತೀ ಕಡುಕರ ಕಂಡು ಅಂಜಿದೆಯಲ್ಲಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ?
--------------
ಅಕ್ಕಮ್ಮ
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತಿವೆ. ಕರಣಂಗಳು ಬೆಂದು ಉರಿವುತಿವೆ. ಮರವೆ ಎಂಬ ಮಾಯೆ ಬಂದು ಕಾಡುತಿವಳೆ. ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ, ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->