ಅಥವಾ

ಒಟ್ಟು 62 ಕಡೆಗಳಲ್ಲಿ , 28 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು, ಮೋಹದ ಸಮುದ್ರದಲ್ಲಿ ಮುಳುಗಿ, ನಾನಾ ಭವರಸಂಗಳನುಂಡು ಘೋರಸರಾಗಬೇಡ. ಅರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ ಮನಪ್ರಕೃತಿ ಸಂಚಾರ ಹಿಂಗಿ ಕಲೆದೋರದ ಕುರುಹಿನಲ್ಲಿ ಸಲೆ ನಿಂದು ಉಭಯವಳಿದು ಉಳುಮೆ ತಲೆದೋರಿ ಕಲೆ ಅಳಿದು ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ, ತಾಯಿ ಅಳಿದು, ಶಿಶು ಉಳಿಯಿತ್ತು. ಉಳಿದುಳುಮೆಯ ತಿಳಿಯಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಡಗೂಡ ಬಲ್ಲವ.
--------------
ಮೋಳಿಗೆ ಮಾರಯ್ಯ
ಬೇಡಿ ಮಾಡುವ ಭಕ್ತನ ಇರವೆಂತೆಂದಡೆ: ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು, ಸತಿಸುತರಿಗೆಂದೆನ್ನದೆ, ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ, ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ ಬೇಡಿ[ದ]ನೆಂಬ ಭಾವವಿಲ್ಲ. ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ.
--------------
ಏಲೇಶ್ವರ ಕೇತಯ್ಯ
ನೆಲ್ಲು ನೆಲದಲ್ಲಿಯೆ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ, ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ. ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ ! ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ, ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ,
--------------
ಹೊಡೆಹುಲ್ಲ ಬಂಕಣ್ಣ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಧರೆಯ ಮೇಲೆ ಬಿದ್ದ ಬೀಜ, ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು. ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ, ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ, ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು. ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
--------------
ಹೊಡೆಹುಲ್ಲ ಬಂಕಣ್ಣ
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಯಲಬೀಜ ಭೂಮಿಯಲ್ಲಂಕುರಿಸಿ ಎಲೆಯೆರಡಾದುವು, ಎಸಳು ಮೂರಾದವು, ಕುಸುಮ ಆರಾದವು, ಕಾಯಿ ಮೂವತ್ತಾರಾದವು, ಹಣ್ಣು ಇನ್ನೂರಾಹದಿನಾರಾದವು. ತೊಟ್ಟು ತುಂಬಿ ವಿಶ್ವಪರಿಪೂರ್ಣವಾಗಿ ತೊಟ್ಟು ಕಳಚಿ ಇನ್ನೂರಹದಿನಾರರೊಳು ನಿಂದು ಆ ಮೂವತ್ತಾರರಲ್ಲಿ ಅಡಗಿ ಆರರಲ್ಲಿ ಅಳಿದು ಮೂರರಲ್ಲಿ ಮುಳುಗಿ ಎರಡರಲ್ಲಿ ನಿಂದು ಒಂದಾಗಿ ಮರೆದುಳಿದು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೃತಜೀವಿಯೆಂಬ ಹೆಂಗೂಸಿನ ಶಿರದಲ್ಲಿ ಅಮೃತದ ಸೋನೆ ಸುರಿವುತ್ತಿದೆ ನೋಡ. ಹಾಲುಮಳೆ ಕರೆದು ಆಕೆಯ ಮೇಲೆ ಮೇರೆದಪ್ಪಿ ಹರಿಯಲು ಆ ಬಾಲೆ ಅಳಿದು ಆ ಲೋಕದ ಪ್ರಾಣಿಗಳು ಸತ್ತು ಸಚರಾಚರಂಗಳ ಮೀರಿ ಸಚ್ಚಿದಾನಂದ ಶಿವೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ. ಆ ಸರೋವರದ ಮೇಲೆ ಮಹಾಘನವ ಕಂಡೆ. ಆ ಮಹಾಘನವಿಡಿದು ಮನವ ನಿಲಿಸಿ ಕಾಯಗುಣವನುಳಿದು ಕರಣಗುಣವ ಸುಟ್ಟು, ಆಸೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಯಲ ಪಟ್ಟಣದ ರಾಜಕುಮಾರನು ಮಲೆಯಪುರದಲ್ಲಿ ಶಿಕಾರಿಯ ಮಾಡಲು, ಆ ಪಟ್ಟಣದ ಬೀದಿಬಾಜಾರದೊಳಗೆ ಪದ್ಮಜಾತಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯ ಕೈಯೊಳಗಿನ ಕೋತಿಯ ವಿಲಾಸವನು, ಆ ಸ್ತ್ರೀಯ ರೂಪಲಾವಣ್ಯವನು, ರಾಜಕುಮಾರನು ಕಂಡು, ಬೆರಗಾಗಿ ಮರುಳುಗೊಂಡು, ಆ ನಾರಿಯ ವಾಸದೊಳಗೆ ಬಹುಕಾಲವಿರ್ದು, ಪಟ್ಟಣ ಪಾಳೆಯಲ್ಲಿ ಚರಿಸುತ್ತಿರಲು, ಅತ್ತಳ ಊರಿಂದ ಜೋಗಿ ಬಂದು ಪತ್ರವ ಕೊಡಲಾಗಿ ಆ ಪಟ್ಟಣ ಬೆದರಿ, ಪಾಳ್ಯ ಅಳಿದು, ಪಾಳ್ಯದ ನಾಯಕರು ಪಲಾಯನವಾಗಿ, ನಾರಿಯಮುಖ ವಿಕಾರವಾಗಿ, ಬಹುವರ್ಣದ ಕೋತಿ ಏಕವರ್ಣವಾಗಿ, ಆ ಹಸ್ತದೊಳಗಿನ ಪತ್ರವ ಸುಕುಮಾರ ನೋಡಿ, ಅಗ್ನಿಸ್ಪರ್ಶದ ಬೆಣ್ಣಿಯಂತೆ, ಜ್ಯೋತಿಯ ಸಂಗದ ಕರ್ಪೂರದಂತೆ, ಆ ಪತ್ರದಲ್ಲಿ ನಿರ್ವಯಲಾದುದು ಸೋಜಿಗ ಸೋಜಿಗವೆಂದನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->