ಅಥವಾ

ಒಟ್ಟು 71 ಕಡೆಗಳಲ್ಲಿ , 25 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಲೋಕದಗತಿ. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಪಾರಮಾರ್ಥಗತಿ. ಇದು ಕಾರಣ ನೋಡಿ ಬಾ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾರೀಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ. ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ ನಿಶ್ಚೆ ೈಸಿದ ಮನ ವಸ್ತುವಿನಲ್ಲಿ ಕೂಡಿ ಕಾಯದ ಕರಂಡದಲ್ಲಿ ಕರಣಂಗಳರತು ಜೀವ ಕೆಟ್ಟು ಪರಮನಾದಂತೆ. ಈ ಭೇದವನರಿದು ಕಾಲನ ಗೆದ್ದು ಕಾಲಾಂತಕ ಬ್ಥೀಮೇಶ್ವರಲಿಂಗವು ತಾನಾದನು.
--------------
ಡಕ್ಕೆಯ ಬೊಮ್ಮಣ್ಣ
ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ, ಪಾಠದಲ್ಲಿ ಕಾಬಡೆ ಗಂಧರ್ವನಲ್ಲ. ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ. ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ. ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು. ತನಗಲ್ಲದುದ ಕೈ ಮುಟ್ಟಿದಲ್ಲಿ ಅಲ್ಲಿಯೇ ತೆಗೆವೆನು. ತನಗಲ್ಲದುದ ಕಿವಿ ಕೇಳಿದಲ್ಲಿ ಅಲ್ಲಿಯೇ ಗುಂಟಿ ಬಲಿವೆನು. ತನಗಲ್ಲದುದ ನಾಸಿಕ ವಾಸಿಸಿದಲ್ಲಿ ಅಲ್ಲಿಯೇ ದಸಿಯ ದಕ್ಕನೇರಿಸುವೆನು. ದೃಷ್ಟಿ ಅನುತಪ್ಪಿ ನೋಡಿದಲ್ಲಿ ಅಲ್ಲಿಯೇ ಕಿತ್ತಿಡುವೆನು. ಚಿತ್ತ ಅನುತಪ್ಪಿ ಮತ್ತೊಂದ ನೆನೆದಡೆ, ಆತ್ಮನನಲ್ಲಿಯೆ ಕಿತ್ತು ಹಾಕುವೆನು. ಇದಕ್ಕೆ ನೀವೇ ಸಾಕ್ಷಿ, ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು.
--------------
ಕರುಳ ಕೇತಯ್ಯ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಬೆಣ್ಣೆ ಕೆಚ್ಚಲ ನುಂಗಿ, ಕಣ್ಣು ತಲೆಯ ನುಂಗಿ, ತುದಿ ಬೇರಿನಲ್ಲಿ ಅಡಗಿತ್ತು. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಅಡಗಿತ್ತು.
--------------
ಬಿಬ್ಬಿ ಬಾಚಯ್ಯ
ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು, ಕಿಚ್ಚನು ಕೆಂಡದಲ್ಲಿ ಸುಟ್ಟು, ಗಾಳಿಯನು ವಾತದಲ್ಲಿ ತಿರುಹಿ, ಆಕಾಶವನು ಬಯಲಲ್ಲಿ ಬಗೆದು, ತನ್ನನು ತನ್ನಲ್ಲಿ ನೋಡಿ ಮಾಡಿ ಪೂಜಿಸಿ ಸುಖಿಸಲರಿಯದೆ ಪಂಚ ಪಂಚವರ್ತನಾಭಾವದ ಕಳೆಯಲ್ಲಿ ಬೆಳೆದು ತೋರಿ ಮಾಡಿ, ಮಾಟಕೂಟದ ಕೋಟಲೆಯೊಳಗೆ ಭಂಗಿತರಾದರು. ಅದು ಕಾರಣ ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ಅಲ್ಲಿಯೇ ಹಿಂಗಿರ್ದನು ನಿರ್ಮಲಹೃದ್ಬೆಳಗಿನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು. ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ, ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು, ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ. ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ. ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ. ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ. ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ. ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿರ್ಲೇಪವಾದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ.
--------------
ಆದಯ್ಯ
ಬಲ್ಲೆಬಲ್ಲೆನೆಂದು ಎಲ್ಲರೊಳಗೆ ಗೆಲ್ಲಸೋಲವೇತಕ್ಕೆ? ಬಲ್ಲತನ ಅಲ್ಲಿಯೇ ಉಳಿಯಿತ್ತು. ಮಿಥ್ಯ ತಥ್ಯವ ತಲೆಯಲ್ಲಿ ಹೊತ್ತು ಹೋರಬೇಡ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪುರುಷನ ಸೋಂಕದೆ ಸಂಗಸಂಯೋಗಸುಖವನರಿದ ಸತಿಯಳ ಕಂಡವರುಂಟೆ ಮಂಡಲದೊಳಗೆ? ಲಿಂಗವನರಿಯದೆ ಚರಗುರುಭಕ್ತಿಯ ಸಾರಾಯಸುಖ ಬೆಳಗಬಲ್ಲೆನೆಂದು ಅಲ್ಲಿಯೇ ಸಂದಿ ಹೋಗುವ ಬಂಧನಬದ್ಧ ಮೂಢ ಪ್ರಾಣಿಯ ಉರದೊಳು ಒಲ್ಲದಿರ್ದನು ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು ಸನುಮತರ ಸಂಗಸಮತೆಯೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರು ಬಣ್ಣದ ಆರು ಲಿಂಗದಲ್ಲಿ ಮೂರು ಬಣ್ಣದ ಮೂರು ಲಿಂಗವ ಕೂಡಲು ನವಲಿಂಗದ ಒಂಬತ್ತು ಬಣ್ಣದಲ್ಲಿ ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ ಹದಿಮೂರು ಬಣ್ಣವ ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ, ವಾಸನೆಯೆಂಬ ಸೀಸವ ಬೆರಸಿದ ನೋಡಾ. ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ ಆ ವಾಸನೆ ಅಲ್ಲಿಯೇ ಅಡಗಿ, ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ ಸ್ವಯಬಣ್ಣದ ಮಿಸುನಿಗೆ ತನುವೆಂಬ ಒರೆಗಲ್ಲ ಹಂಗಿಲ್ಲ, ಮನವೆಂಬ ಮಚ್ಚದ ಹಂಗಿಲ್ಲ. ಭಾವವೆಂಬ ಹಸ್ತದ ಹಂಗಿಲ್ಲ, ತಮೋಗುಣವೆಂಬ ಮಯಣದ ಹಂಗಿಲ್ಲ. ಬೋಧವೆಂಬ ನೇತ್ರದ ಹಂಗಿಲ್ಲ. ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಪರವಳಿದು ಸಯವಾಯಿತ್ತು
--------------
ಆದಯ್ಯ
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೊ, ಬಸವಣ್ಣನ ಅನುಮಾನದ ಚಿತ್ತವೊ ? ಈ ಮಾತು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಸಲ್ಲದಬೋನ. ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ.
--------------
ಆಯ್ದಕ್ಕಿ ಲಕ್ಕಮ್ಮ
ಬೆಳಗಿನ ಬೀಜ ಮಹಾಬೆಳಗು ಕತ್ತಲೆಯನೊಳಕೊಂಡು ಕಣ್ಣಿರೆವ ಪರಿಯ ನೋಡಾ! ತಿಳಿವಡೆ ಬೆಳಗಲ್ಲ, ಒಳಗೊಳಗೆ ಹೊಳೆವ ಕಳೆ ಇದೇನೊ! ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು! ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು. ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಘನಲಿಂಗದಲ್ಲಿಯೆ ಕಾಲೂರಿ ನಿಂದ ಪರಿಯನೇನೆಂಬೆ!
--------------
ಚಂದಿಮರಸ
ಮನದ ಕೈಯಿಂದರಿದು, ಬುದ್ಧಿಯ ಕೈಯಿಂದ ವಿಚಾರಿಸಿ, ಚಿತ್ತದ ಕೈಯಿಂದ ಅರ್ಪಿಸಿಕೊಂಬುದು ಜ್ಞಾತೃವೋ ಜ್ಞಾನವೋ ಜ್ಞೇಯವೋ ? ಇಂತೀ ತ್ರಿವಿಧದ ಕೈಯಲ್ಲಿ ತ್ರಿವಿಧಮುಖಂಗಳಿಂದ ಅರ್ಪಿಸಿಕೊಂಬುದು ಅಂಗದ ಮೇಲಿದ್ದ ಲಿಂಗಸೋಂಕೊರಿ ಆ ಲಿಂಗದ ಒಳಗಣ ಕಳಾಸ್ವರೂಪೊ ? ಅಲ್ಲಾ, ತನ್ನ ಅರಿದ ಅರುಹಿಸಿಕೊಂಬ ನಿರುಗೆಯ ಕುರುಹೊ ? ಇಂತೀ ಅಂಗದಲ್ಲಿ, ಭಾವದಲ್ಲಿ, ಅರಿದ ಅರಿಕೆಯಲ್ಲಿ ತ್ರಿವಿಧ ಕುರುಹಳಿದು ಒಡಗೂಡಿದಲ್ಲಿ ಅಂಗಸೋಂಕು, ಅಲ್ಲಿಯೇ ನಿರಾಳ ಭೋಗಬಂಕೇಶ್ವರಲಿಂಗವಲ್ಲಿಯೆ.
--------------
ಶ್ರೀ ಮುಕ್ತಿರಾಮೇಶ್ವರ
ಇನ್ನಷ್ಟು ... -->