ಅಥವಾ

ಒಟ್ಟು 75 ಕಡೆಗಳಲ್ಲಿ , 26 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು. ಇಲ್ಲದುದ ಇದ್ದುದೆಂದು ನೋಡಲಿಕಾಗಿ, ಇದ್ದಲ್ಲಿಯೆ ತಲ್ಲೀಯವಾಯಿತ್ತು ಇಂತು ಉಭಯವ ಕಡೆಗಾಣಿಸಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
--------------
ಮೋಳಿಗೆ ಮಾರಯ್ಯ
ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು ಮಜ್ಜನಕ್ಕೆರೆವರೆಲ್ಲ ಶೀಲವಂತರೆ ? ಭವಿಪಾಕವನೊಲ್ಲೆವೆಂದು ಭುಂಜಿಸುವ ಉದರಪೋಷಕರೆಲ್ಲ ಶೀಲವಂತರೆ? ವರಲ್ಲ, ನಿಲ್ಲು ಮಾಣು. ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ
--------------
ಚನ್ನಬಸವಣ್ಣ
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ. ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
--------------
ಅಲ್ಲಮಪ್ರಭುದೇವರು
ರತ್ನದ ಪುಂಜವ ಬೆಗಡವನಿಕ್ಕುವಲ್ಲಿ ಮೊನೆ ಮುಂದೆ ಸವೆದ ಮತ್ತೆ ಪೂರ್ವಕ್ಕೆ ಉತ್ತರವಿಲ್ಲ. ನಿಶ್ಚೈಸಿ ಉತ್ತರ ಕಡೆಗಾಣಿಸಿದಲ್ಲಿ ಮುಟ್ಟಿ ಮುಂಚುವ ಅರ್ಪಿತ ಅಲ್ಲಿಯೆ ಉಪದೃಷ್ಟ ನಷ್ಟ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪಕ್ವ ಫಲದಲ್ಲಿಹ ಸ್ವಾದುವಿನಂತೆ, ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ, ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ, ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು, ನಿಮ್ಮಿಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಡಿನೊಳಗಣ ವರಹನ, ಊರ ಕುಕ್ಕುರ ಕೊಲುವಾಗ ಊರಿಗೂ ಕಾಡಿಗೂ ಏತರ ಹಗೆ ? ಅದರ ಭೇದ ಅಲ್ಲಿಯೆ ಅಡಗಿತ್ತು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು. ಅದ್ವೈತವೆಂದಡೆ ಕಾಣಬಾರದುದ ಕಂಡೆಹೆನೆಂಬುದು. ಇಂತು ದ್ವೈತ ಅದ್ವೈತಂಗಳಿಂದ ಕಂಡೆ ಕಾಣಿಸಿಕೊಳ್ಳೆನೆಂಬ ಬಂಧವಿಲ್ಲದೆ ನಿಜಸಂಗವೆಂಬುದು ತಲೆದೋರದೆ, ಉರಿಕೊಂಡ ಕರ್ಪುರದ ಗಂಧದಂತೆ ಅಲ್ಲಿಯೆ ಸ್ಥಲಲೇಪ ಲೋಪ, ಸದ್ಯೋಜಾತಲಿಂಗ ಬಟ್ಟಬಯಲು.
--------------
ಅವಸರದ ರೇಕಣ್ಣ
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಉದಕದೊಳಗಣ ಕಿಚ್ಚು ನನೆಯಿತ್ತು, ಕಿಚ್ಚಿನೊಳಗಣ ತೇಜ ಬೆಂದಿತ್ತು;_ತಿಳಿದು ನೋಡಾ ಅದೇನೊ ಅದೆಂತೊ ? ಸಂಬಂಧಿಗಳು ತಿಳಿಯರು ನೋಡಾ. ಬೆಳಗಿನೊಳಗಣ ಕತ್ತಲೆಯಡಗಿತ್ತು; ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.
--------------
ಅಲ್ಲಮಪ್ರಭುದೇವರು
ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು ಇದಾವನಾವನ ಕಾಡದಯ್ಯಾ ? ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ ! ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)
--------------
ಅಲ್ಲಮಪ್ರಭುದೇವರು
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ವಿದ್ಯೆ ಅವಿದ್ಯೆಯಾದಲ್ಲಿ, ಆ ಅರಿವ ಹೊದ್ದುವ ಬಂಧವಾವುದು ? ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ? ಅದು ಒಡೆದ ಕುಂಭದ ನೀರಿನ ನೆಳಲಿನಂತೆ, ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು, ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ. ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ, ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ.
--------------
ಮಾದಾರ ಧೂಳಯ್ಯ
ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ. ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹ ಶಿವಪುರದಲ್ಲಿ. ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟಿ, ಪೂಜಿಸುತಿರ್ದುದು_ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ! ಗುಹೇಶ್ವರನೆಂಬುದಲ್ಲಿಯೇ ನಿಂದಿತ್ತು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->