ಅಥವಾ

ಒಟ್ಟು 53 ಕಡೆಗಳಲ್ಲಿ , 18 ವಚನಕಾರರು , 49 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರವೆಯ ತಮವ ಕಳೆಯಯ್ಯ. ಅರುಹಿನ ಜ್ಯೋತಿಯ ಬೆಳಗಯ್ಯ. ಅರುಹಿನ ಜ್ಯೋತಿಯ ಬೆಳಗಿ, ನಿಮ್ಮ ಕುರುಹ ಕಂಡು ಕೂಡುವ ತುರ್ಯಾವಸ್ಥೆಯ ಸುಖವನೆ ಕೊಡು ಕಂಡ ಮಹಾಲಿಂಗ ತಂದೆ. ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ. ಮಾಡಿದಡೇನಹುದೊ? ಮಾಡದಿರ್ದಡೇನಹುದೊ? ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ. ಮಾಡಿದಡೇನಹುದೊ?
--------------
ಅಲ್ಲಮಪ್ರಭುದೇವರು
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ. ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
--------------
ಅಕ್ಕಮಹಾದೇವಿ
ಕುರುವ ಹಿಡಿವರೆ ಗುರು ಕರಜಾತ. ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ ? ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು. ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ ? ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ನಿತ್ಯಾನಂದ ಸುಖಮುಖ ಶರಣರು ನುಡಿವರು- ಕಾಯಕಳೆ ಸಂಗಮನೆಂದರೆ ಗುರುವಿಹೀನನೆಂದು. ಮನಕಳೆ ಸಂಗಮನೆಂದರೆ ಲಿಂಗವಿಹೀನನೆಂದು. ಪ್ರಾಣಕಳೆ ಸಂಗಮನೆಂದರೆ ಜಂಗಮವಿಹೀನನೆಂದು. ಭಾವಕಳೆ ಸಂಗಮನೆಂದರೆ ಪ್ರಸಾದವಿಹೀನನೆಂದು, ಅರುಹಿನ ಕಳೆ ಸಂಗಮನೆಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಾದೋದಕ ಸಂಬಂದ್ಥಿ ಭಕ್ತನೆಂದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ, ಸಮಾಧಾನವಾಯಿತ್ತು ಸದಾಚಾರ._ ಇಂತೀ ತ್ರಿವಿಧವು ಏಕಾರ್ಥವಾಗಿ, ಅರುಹಿನ ಹೃದಯ ಕಂದೆರೆದು, ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು, ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು, ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು, ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ ನಮೋನಮೋ ಎಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತಿಯ ನುಡಿವಲ್ಲಿ ಬಾಹ್ಯವಾಗಿರಬೇಕು, ಸತ್ಯವ ನುಡಿವಲ್ಲಿ ಮರೆಯಾಗಿರಬೇಕು. ವೇಶಿ ತಿರುಗಾಡುವಲ್ಲಿ ತನ್ನಯ ವೇಷವ ತೋರಬೇಕು, ಗರತಿಯಿಹಲ್ಲಿ ತನ್ನ ಪುರುಷನ ಅಡಕದಲ್ಲಿ ಅಡಗಬೇಕು. ದಿವ್ಯಜ್ಞಾನವ ದಿವಜರಲ್ಲಿ ಹೇಳುವ ತ್ರಿವಿಧ ಗುಡಿಹಿಗಳಿಗೆ ಅರುಹಿನ ಪಥವಿಲ್ಲ, ಸದಾಶಿವಮೂರ್ತಿಲಿಂಗಕ್ಕೆ ದೂರವಾಗಿಹರು.
--------------
ಅರಿವಿನ ಮಾರಿತಂದೆ
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರುಗೊಂಡೆನಯ್ಯಾ. ವಿತ್ತಾಪಹಾರಿ ಗುರುಗಳು ನೂರಾರು; ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು; ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು; ಸತ್ಕರ್ಮೋಪದೇಶವನರುಹಿ ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು; ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು. ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು; ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು. ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎನ್ನ ತನುವೆ ಬಸವಣ್ಣ, ಎನ್ನಾತ್ಮವೆ ಮಡಿವಾಳಯ್ಯ, ಎನ್ನ ಪ್ರಾಣವೆ ಚೆನ್ನಬಸವಣ್ಣ, ಎನ್ನ ಇಂದ್ರಿಯಂಗಳೆ ಪ್ರಭುದೇವರು, ಎನ್ನ ವಿಷಯಂಗಳೆ ಮೋಳಿಗೆ ಮಾರಿತಂದೆ ಎನ್ನ ಪ್ರಕೃತಿಯೆ ಅಜಗಣ್ಣದೇವರು. ಎನ್ನ ಅಂಗಕರಣಂಗಳೆ ಅಸಂಖ್ಯಾತ ಮಹಾಗಣಂಗಳು. ಎನ್ನ ಮನವೆ ಮಹಾದೇವಿಯಕ್ಕ, ಎನ್ನ ಬುದ್ಧಿಯೆ ಮೋಳಿಗಯ್ಯನ ರಾಣಿ, ಎನ್ನ ಚಿತ್ತವೆ ನೀಲಲೋಚನೆಯಮ್ಮ. ಎನ್ನ ಅಹಂಕಾರವೆ ತಂಗಟೂರ ಮಾರಯ್ಯನ ರಾಣಿ. ಎನ್ನ ಅರುಹೆ ಅಕ್ಕನಾಗಾಯಕ್ಕ. ಎನ್ನ ಅರುಹಿನ ವಿಶ್ರಾಂತಿಯೆ ಮುಕ್ತಾಯಕ್ಕ. ಎನ್ನ ನೇತ್ರದ ದೃಕ್ಕೆ ಸೊಡ್ಡಳ ಬಾಚರಸರು. ಎನ್ನ ಪುಣ್ಯದ ಪುಂಜವೆ ಹಡಪದಪ್ಪಣ್ಣ. ಎನ್ನ ಕ್ಷುತ್ತು ಪಿಪಾಸೆಯೆ ಘಟ್ಟಿವಾಳಯ್ಯ. ಎನ್ನ ಶೋಕ ಮೋಹವೆ ಚಂದಿಮರಸರು. ಎನ್ನ ಜನನ ಮರಣವೆ ನಿಜಗುಣದೇವರು. ಎನ್ನ ಯೋಗದ ನಿಲುಕಡೆಯೆ ಸಿದ್ಧರಾಮೇಶ್ವರರು. ಎನ್ನ ಅಂಗಕರಣವೆ ಏಳ್ನೂರೆಪ್ಪತ್ತಮರಗಣಂಗಳು. ಇಂತಿವನರಿದೆನಾಗಿ ಬೋಳಬಸವೇಶ್ವರನ ಕೃಪೆಯಿಂದ ಸಿದ್ಧೇಶ್ವರನೆಂಬ ಪರುಷ ಸಾಧ್ಯವಾಯಿತ್ತಯ್ಯ. ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅಂಗ ಮಿಥ್ಯಭಾವವನರಿಯದೆ ನಿಮ್ಮ ಕೃಪಾನಂದದೊಳಗೆ ಮುಳುಗಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ ಗುರುದ್ರೋಹಿಯನೇನೆಂಬೆ ? ಲಿಂಗದ್ರೋಹಿಯನೇನೆಂಬೆ ? ಇಷ್ಟಲಿಂಗಮವಗ್ರಾಹೀ ಪ್ರಾಣಲಿಂಗೇನ ಸಂಯುತಃ ನಿಮಿಷಾರ್ಧವಿಯೋಗೇನ ಮಹಾಪಾಪಂ ತು ಸಂಭವೇತ್ ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ, ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.
--------------
ಚನ್ನಬಸವಣ್ಣ
ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು ಕೂನಪಾಂಡ್ಯನ ವಾದವ ಗೆದ್ದರು ನೋಡಾ. ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯನು ಮಹಾಬಯಲನೈದಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣ ತಂದೆಗಳು ನಿಜಲಿಂಗೈಕ್ಯರಾದರು ನೋಡಾ. ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು ಓಂ ನಮಃಶಿವಾಯ, ಓಂ ನಮಃಶಿವಾಯ, ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು, ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು, ವಿಷಯಂಗಳ ಶಿವನರಿಯಿತ್ತು. ದಶವಿಧೇಂದ್ರಿಯಂಗಳ ದಾಳಿಯ ನಿಲಿಸಿತ್ತು. ಪಂಚಮಹಾಭೂತಂಗಳಂಗಳ ಪ್ರಪಂಚುವ ಪರಿಹರಿಸಿತ್ತು. ಬ್ರಹ್ಮವೇ ತಾನೆಂಬ ಕುರುಹ ಮೈಗಾಣಿಸಿತ್ತು. ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ, ಮಹಾಲಿಂಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು, ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು. ಎನ್ನ ಭಾವದ ಬಲುಹೆ ಪ್ರಭುದೇವರು, ಎನ್ನ ತನುವಿನ ಮೂರ್ತಿಯೆ ಚಂದಯ್ಯನು, ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು, ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು, ಎನ್ನ ಅರುಹಿನ ನೈಷೆ*ಯೆ ಸೊಡ್ಡಳ ಬಾಚರಸನು, ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು, ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು, ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು, ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು, ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು, ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು, ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು, ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು. ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಶ್ರೀ ಮುಕ್ತಿರಾಮೇಶ್ವರ
ಇನ್ನಷ್ಟು ... -->