ಅಥವಾ

ಒಟ್ಟು 217 ಕಡೆಗಳಲ್ಲಿ , 54 ವಚನಕಾರರು , 179 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ : ಮಂತ್ರಯೋಗ ಲಯಯೋಗ ಹಠಯೋಗಕ್ಕೆ ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು ಮೂರು ಪ್ರಕಾರವಾಗಿರ್ಪುದು. ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ ತತ್ವಜಾÕನರೂಪವಪ್ಪುದರಿಂದೆ, ಆ ತತ್ವಂಗಳೆಂತೆನೆ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವಂಗಳಿಂದೆ ಜನಿತಮಾದ ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಶ್ರೋತ್ರಾದಿ ಜಾÕನೇಂದ್ರಿಯಂಗಳೈದು, ಪ್ರಾಣಾದಿ ವಾಯುಗಳೈದು, ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು, ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ, ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು, ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ ಸಾಂಖ್ಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ. ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ. ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ. ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ. ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು, ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ ನೀನೇ ನಾನಾದುದೇ ಇದೇ ಆದಿಯಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ, ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ. ಸುವರ್ಣ ಒಂದು ಆಭರಣ ಹಲವಾದಂತೆ. ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಮತ್ತಿದಿರು ದೈವವುಂಟೆಂದು ಗದಿಯಬೇಡ. ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.
--------------
ಅರಿವಿನ ಮಾರಿತಂದೆ
ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ. ಅದೇನು ಕಾರಣವೆಂದೊಡೆ, ತನ್ನಿಂದ ತೋರಿದ ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ ಸೂರ್ಯ ಚಂದ್ರ ತನ್ನಿಂದೆ ತೋರಿದ ಸಕಲಾರಂಭ. ಇದು ಕಾರಣ, ತಾನೊಂದರಿಂದ ತೋರಿದವನಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಕಾರಣನಹುದು ಕಾರ್ಯನಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು, ನಿಲಿಸಿ ತೋರಿ, ಮುನ್ನಿನಂತಾಯಿತ್ತು. ಅಪ್ಪು ಸಂಗವನೆಯ್ದಿದಂತೆ ಇರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅನಾದಿಯ ಮಗನು ಆದಿ, ಆದಿಯ ಮಗನತೀತ, ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು, ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಇನ್ನು ಆ ಆತ್ಮನು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಂ ಪಂಚಭೂತಾಂಶಿಕಮಂ ಕೂಡಿಕೊಂಡು ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆದ್ಥಿದೈವಿಕ, ಆದ್ಥಿಭೌತಿಕವೆಂಬ ತಾಪತ್ರಯಂಗಳಿಂದ ನೊಂದು ಬೆಂದು ಪುಣ್ಯಪಾಪ ವಶದಿಂದ ಜೀವನಾಗಿ, ಅಂಡಜ, ಸ್ವೇದಜ, ಉದ್ಬಿಜ, ಜರಾಯುಜವೆಂಬ ಚೌರಾಶಿಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು, ಹುಟ್ಟದ ಯೋನಿಯಿಲ್ಲ, ಮೆಟ್ಟದ ಭೂಮಿಯಿಲ್ಲ, ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ. ಇದಕ್ಕೆ ಈಶ್ವರ ಉವಾಚ : ``ನಾನಾಯೋನಿಸಹಸ್ರಾಣಿ ಗತ್ವಾ ಚೈವಂತು ಮಾಯಯಾ | ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಂಸಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆ ಎಂಬ ಪಂಚ ವಿಭೂತಿ ಉತ್ಪತ್ಯವೆಂತೆಂದಡೆ : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಮುಖದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಉತ್ಪತ್ಯವಾಯಿತ್ತು. ಆ ಪೃಥ್ವಿಯಪ್ಪುತೇಜವಾಯುವಾಕಾಶದಿಂದಲ್ಲಿ ನಿವೃತ್ತಿ ಪ್ರತಿಷ್ಠೆ ವಿದ್ಯಾ ಶಾಂತಿ ಶಾಂತ್ಯಾತೀತಯೆಂಬ ಪಂಚಕಲೆಗಳುತ್ಪತ್ಯವಾಯಿತ್ತು. ಆ ಪಂಚಕಲೆಗಳಿಂದ ನಂದೆ ಭದ್ರೆ ಸುರಬ್ಥಿ ಸುಶೀಲೆ ಸುಮನೆಯೆಂಬ ಪಂಚಗೋವುಗಳುತ್ಪತ್ಯವಾಯಿತ್ತು. ಆ ಪಂಚಗೋವುಗಳ ಗೋಮಯದಲ್ಲಿ ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆಯೆಂಬ ಪಂಚವಿಭೂತಿ ಉತ್ಪತ್ಯವಾಯಿತ್ತು. ಇದಕ್ಕೆ ಜಾಬಾಲೋಪನಿಷತ್ : ``ಸದ್ಯೋಜಾತಾತ್ ಪೃಥಿವೀ ತಸ್ಯಾ ನಿವೃತ್ತಿಃ ತಸ್ಯಾಃ ಕಪಿಲವರ್ಣಾ ನಂದಾ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಬ್ಥೀ ತಸ್ಯಾಃ ಗೋಮಯೇನ ಭಸ್ಮ ಜಾತಂ || ತತ್ಪುರುಷಾತ್ ವಾಯುಃ ತಸ್ಮಾತ್ ಶಾಂತಿ ಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ || ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಃ ಚಿತ್ರವರ್ಣಾ ಸುಮನಾಃ ತಸ್ಯಾಃ ಗೋಮಯೇನ ರಕ್ಷಾ ಜಾತಾ ||'' ``ಐಶ್ವರ್ಯಕಾರಣಾತ್ ಭೂತಿಃ, ಭಾಸನಾತ್ ಭಸಿತಂ, ಸರ್ವಾಘಭಕ್ಷಣಾತ್ ಭಸ್ಮಂ, ಅಪದಾಂ ಕ್ಷರಣಾತ್ ಕ್ಷಾರಂ, ಭೂತಪ್ರೇತಪಿಶಾಚಬ್ರಹ್ಮರಾಕ್ಷಸಾಪಸ್ಮಾರ ಭವಬ್ಥೀತಿಭ್ಯೋsಬ್ಥಿರಕ್ಷಣಾತ್ ರಕ್ಷೇತಿ ||'' ಇಂತೆಂದುದು ಶ್ರುತಿ. ಇದಕ್ಕೆ ಕ್ರಿಯಾಸಾರೇ : ``ವಿಭೂತಿರ್ಭಸಿತಂ ಭಸ್ಮ ಕ್ಷಾರಂ ರಕ್ಷೇತಿ ಭಸ್ಮನಃ | ಭವಂತಿ ಪಂಚ ನಾಮಾನಿ ಹೇತು ರಕ್ಷಣಾದ್ರಕ್ಷೇತಿ ||'' ಇಂತೆಂದುದು ಶ್ರುತಿ. ``ಪಂಚಬ್ಥಿಃಬೃಷಂ ಐಶ್ವರ್ಯಕಾರಣಾದ್ಭೂತಿ, ಭಸ್ಮ ಸರ್ವಾಘಭಕ್ಷಣಾತ್, ಭಾಸನಾತ್ ಭಸಿತಂ, ತತ್ವಾ ಕ್ಷರಣಾತ್‍ಕ್ಷಾರಮಾಪದಂ, ಭೂತಪ್ರೇತಪಿಶಾಚೇಭ್ಯೋ ಸ್ವರ್ಗಹೇತುಭ್ಯೋಬ್ಥಿರಕ್ಷಣಾತ್ ರಕ್ಷಾ ಸ್ಯಾತ್ ಕ್ರೂರಸರ್ಪೇಭ್ಯೋ ವ್ಯಾಘ್ರಾದಿಭ್ಯಶ್ಚ ಸರ್ವದಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವ ತತ್ವದ ಪಂಚಮುಖದಲ್ಲಿ ಉತ್ಪತ್ಯವಾದ ಪಂಚಮಹಾಭೂತಬ್ರಹ್ಮಾಂಡಕಪಾಲದೊಳು ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು. ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಇದಕ್ಕೆ ಈಶ್ವರ ಉವಾಚ : ``ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ | ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಉಪ್ಪು ಅಪ್ಪು ಕೂಡಿದಂತೆ, ಉರಿ ಕರ್ಪುರ ಕೂಡಿದಂತೆ, ಮಾರುತ ಪರಿಮಳವ ಕೂಡಿದಂತೆ, ಆಕಾಶ ಬಯಲ ಕೂಡಿದಂತೆ, ತಾನು ತಾನಾದುದ ತಾನೇ ಕೂಡಿದಂತೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸದ್ಯೋಜಾತನ ಮುಟ್ಟಿ, ಪೃಥ್ವಿ ಬಯಲಾಗಿ ಚಿತ್ತ ಪಂಚಕವು ಕೆಟ್ಟವು ನೋಡಾ. ವಾಮದೇವನಿಗೊಲಿದು, ಅಪ್ಪು ಬಯಲಾಗಿ ಬುದ್ಧಿ ಪಂಚಕವು ಕೆಟ್ಟವು ನೋಡಾ. ಅಘೋರನ ನೆರೆದು, ಅಗ್ನಿ ಬಯಲಾಗಿ ಅಹಂಕಾರ ಪಂಚಕವಳಿದು ನಿರಹಂಕಾರಿಯಾದೆನಯ್ಯ. ತತ್ಪುರುಷನನಪ್ಪಿ, ವಾಯು ಬಯಲಾಗಿ ಮನಪಂಚಕವಳಿದವು ನೋಡಾ. ಈಶಾನ್ಯನೊಡಗೂಡಿ, ಆಕಾಶಬಯಲಾಗಿ ಭಾವ ಪಂಚಕವಳಿದು ನಿರ್ಭಾವಿಯಾಗಿ ನಿಜಲಿಂಗೈಕ್ಯನಾದೆನಯ್ಯ. ಎಲ್ಲಾ ಪದಂಗಳ ಮೀರಿ ಮಹಾಲಿಂಗ ಪದದೊಳಗೆ ಸಂಯೋಗವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಯಿಂದ ಅಪ್ಪು, ಅಪ್ಪುವಿನಿಂದ ಪೃಥ್ವಿ. ಅಗ್ನಿಯಿಂದ ವಾಯು, ವಾಯುವಿನಿಂದ ಅಗ್ನಿ. ಆಕಾಶದಿಂದ ಮಹದಾಕಾಶ, ಮಹದಾಕಾಶದಿಂದ ಆಕಾಶ. ನಿನ್ನಿಂದ ನಾ, ನನ್ನಿಂದ ನೀ, ನಾ ನೀನೆಂಬ ಭಾವ ಲೀಲೆವುಳ್ಳನ್ನಕ್ಕ. ಮತ್ತೆ ತಿಳಿದು ನೋಡಲಿಕ್ಕೆ ಮತ್ತೆಯೂ ಪರಿಪೂರ್ಣ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->