ಅಥವಾ

ಒಟ್ಟು 58 ಕಡೆಗಳಲ್ಲಿ , 25 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಕಲಿದೇವಯ್ಯಾ, ಆದಿಯ ಕುಳವೂ ಅನಾದಿಯ ಕುಳವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಮೂಲಶುದ್ಧದ ಮುಕ್ತಾಯ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಉಭಯಕುಳದ ಕಿರಣಶಕ್ತಿ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಭಾವವೂ ನಿರ್ಭಾವವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅರ್ಥ ಪ್ರಾಣ ಅಬ್ಥಿಮಾನ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಂಗಲಿಂಗಸಂಗ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಷ್ಟದಳಕಮಲದ ಸಪ್ತಕರ್ಣಿಕೆಯು ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಎನ್ನ ನಡೆಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ನುಡಿಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ ಎನ್ನ ನೋಟ ಕೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ಮಾಟ ಸಮಾಪ್ತಿಯಾಯಿತ್ತು ನಿಮ್ಮ ಜಂಗಮಮೂರ್ತಿಯಿಂದ. ನಿಮ್ಮ ಪ್ರಸಾದದಿಂದ ತನು ಶುದ್ಧವಾಯಿತ್ತು. ಬಸವಣ್ಣ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು ಬದುಕಿದೆನು ಕಾಣಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅನಾದಿಯ ಮಗನು ಆದಿ, ಆದಿಯ ಮಗನತೀತ, ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು, ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಆಧಾರ ಸ್ವಾಧಿಷ್ಠಾನ ಮಣಿಪೂರಕ ವಿಶುದ್ಧಿ ಆಜ್ಞೇಯವ ನುಡಿದಡೇನು ಆದಿ ಅನಾದಿಯ ಸುದ್ದಿಯ ಕೇಳಿದಡೇನು ಹೇಳಿದಡೇನು ತನ್ನಲ್ಲಿದ್ದುದ ತಾನರಿಯದನ್ನಕ್ಕರ. ಉನ್ಮನಿಯ ರಭಸದ ಮನ ಪವನದ ಮೇಲೆ ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಉರಿಯೊಳಗಣ ಪ್ರಕಾಶದಂತೆ ಮೊಗ್ಗೆಯೊಳಗಣ ಪರಿಮಳದಂತೆ ಕ್ಷೀರದೊಳಗಣ ಘೃತದಂತೆ ಭಾವದೊಳಗಣ ನಿರ್ಭಾವದಂತೆ ಶಬ್ದದೊಳಗಣ ನಿಶ್ಶಬ್ದದಂತೆ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಅನಾದಿಯ ಅರಿವು.
--------------
ಜಕ್ಕಣಯ್ಯ
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು. ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು. ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ, ನಿಮ್ಮ ಪ್ರಮಥರೆ ಬಲ್ಲರು. ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು ! ಎಂಟಾನೆ ಬಿಟ್ಟೋಡಿದವು ! ಹದಿನಾರು ಪ್ರಜೆ ಬೊಬ್ಬಿಡುತಿರ್ದರು. ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.
--------------
ಅಲ್ಲಮಪ್ರಭುದೇವರು
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ, ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅನಾದಿ ಆದಂದು ಅನಾದಿಯ ಮರೆಯಲ್ಲಿಯಿದ್ದೆಯಯ್ಯಾ. ತತ್ವಬ್ರಹ್ಮಾಂಡವಾದಂದು ತತ್ವಬ್ರಹ್ಮಾಂಡದ ಮರೆಯಲ್ಲಿಯಿದ್ದೆಯಯ್ಯಾ. ಪಿಂಡಾಂಡವಾದಂದು ಪಿಂಡಾಂಡದ ಮರೆಯಲ್ಲಿಯಿದ್ದೆ ಅಯ್ಯಾ. ಜ್ಞಾನವಾದಂದು ಜ್ಞಾನದ ಮರೆಯಲ್ಲಿದ್ದೆ ಅಯ್ಯಾ. ನಾನಾದಂದು ನನ್ನ ಆತ್ಮದಲ್ಲಿ ನೀನೆ ಹೊಳೆವುತಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು. ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ. ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ. ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ. ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ. ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು, ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ. ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ ಆ ಕುಂಭದೊಳಹೊರಗ ಕಾಣಬಹುದು. ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಯೋಗಕ್ಕೆ ಸಿಕ್ಕಲಿಲ್ಲವೆಂಬೆನು.
--------------
ಬಾಚಿಕಾಯಕದ ಬಸವಣ್ಣ
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರ[ನ] ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
--------------
ಅಲ್ಲಮಪ್ರಭುದೇವರು
ಅನಾದಿಯ ಲಿಂಗವ ಕಂಡು, ಆದಿಯ ಪ್ರಸಾದ ಕೊಂಡು, ಆ ಪ್ರಸಾದವಪ್ಪ ಪರಿಣಾಮದಲ್ಲಿ ಬೆಳಗುತಿರ್ಪನಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ನೆಲದ ಬೊಂಬೆಗೆ ಜಲದ ಹೊದಿಕೆಯ ಹೊದಿಸಿ, ಅಗ್ನಿಯ ಆಭರಣವ ತೊಡಿಸಿ, ಆಕಾಶದ ಅರಳೆಲೆಯ ಕಟ್ಟಿ, ವಾಯುವ ಸೂತ್ರಧಾರವಂ ಹೂಡಿ, ಸೂರ್ಯ ಸೋಮ ವೀಥಿಗಳೊಳಗೆ ಎಡೆಯಾಡಿಸುವ ಸೂತ್ರಗನಿವನಾರೋ ? ಅನಾದಿಯ ಶಿಷ್ಯಂಗೆ ಆದಿಯ ಗುರು ಉಭಯನಷ್ಟವಾದ ಲಿಂಗವಂ ತಂದು, ಅಂಗದ ಮೇಲೆ ಬಿಜಯಂಗೈಯಿಸಲೊಡನೆ ಲಿಂಗನಾಮನಷ್ಟವಾಯಿತ್ತು, ಗುರುವಿನ ಕುಲವಳಿಯಿತ್ತು. ಜಂಗಮದ ಕೈಕಾಲಂ ಮುರಿದು, ಸೂತ್ರಿಕನ ಹಿಡಿದು, ಮೇಲುದುರ್ಗದಲ್ಲಿ ಶೂಲಕ್ಕೆ ತೆಗೆದು, ಆ ಸೂತ್ರದ ಹಗ್ಗಮಂ ಹರಿದು ಬಿಸುಟುಹೋದಡೆ ತಲೆಯ ಒಂದಾಗಿ ಗಂಟಿಕ್ಕಿ, ಮೂವರ ಮುಂದುಗೆಡಿಸಿ ಒಂದು ಮಾಡಿ, ಹಿಂದಣಸ್ಥಿತಿ ಮುಂದಣಗತಿಯನೊಂದಾಗಿ ಸುಟ್ಟು, ಆ ಭಸ್ಮವ ಅಂಗದಲ್ಲಿ ಅನುಲೇಪನವ ಮಾಡಿಕೊಂಡು ನೀವು ಹೊಕ್ಕಲ್ಲಿ ಹೊಕ್ಕು, ಮಿಕ್ಕು ಮೀರಿ, ಮಿಗೆವರಿದ ಲಿಂಗಾಂಗಿಗಳ ಪಾದದೊಳು ಹಿಂಗದಂತೆ ಇರಿಸೆನ್ನ. ನಿಜಗುರು ಭೋಗೇಶ್ವರಾ, ನಾ ನಿಮ್ಮ ಬೇಡಿಕೊಂಬೆ.
--------------
ಭೋಗಣ್ಣ
ಅನಾದಿಯ ಸ್ಥೂಲ, ಆದಿಯ ನಿಃಕಲ, ಆದಿಯನಾದಿಯೆಂಬ ಕುಳವಳಿದು ಕುಳಸ್ಥಳವಳಿದೆನಯ್ಯ. ಆ ಕುಳಸ್ಥಳದ ಮೂರ್ತಿಯನರಿದು ಆನು ಬದುಕಿದೆನಯ್ಯ. ಸಂಗಯ್ಯನಲ್ಲಿ ನಾನು ಬಸವನ ಸ್ವರೂಪಿಯಾದೆನಯ್ಯ.
--------------
ನೀಲಮ್ಮ
ಆರು ಮಣಿಗೆ ದಾರವನೇರಿಸಿ, ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು. ಇದು ಆದಿಯ ಕ್ರೀ, ಅನಾದಿಯ ಜ್ಞಾನ. ಈ ಉಭಯವ ಭೇದಿಸಿದಡೆ ಕುಣಿಕೆಯ ಮಣಿ ತಲಪಿಗೇರಿತ್ತು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಏಕವೆಂದಲ್ಲಿ
--------------
ಮೋಳಿಗೆ ಮಹಾದೇವಿ
ಆದಿಯ ಅಂಗಮುಖಕ್ಕರ್ಪಿಸಿ, ಅನಾದಿಯ ಪ್ರಾಣ ಮುಖಕ್ಕರ್ಪಿಸಿ, ಮನವೆಂಬುದ ಅರಿವಿನ ಮುಖಕ್ಕರ್ಪಿಸಿ, ತಾನೆಂಬುದ ನಿರಾಕಾರದಲ್ಲಿ ನಿಲಿಸಿ, ಪರಿಣಾಮಪ್ರಸಾದದಲ್ಲಿ ತದ್ಗತವಾಗಿ, ಪ್ರಸಾದವೆ ಪ್ರಾಣವಾಗಿ ಪ್ರಸಾದವೆ ಕಾಯವಾಗಿ, ಪ್ರಸಾದವೆ ಜ್ಞಾನವಾಗಿ ಪ್ರಸಾದವೆ ಧ್ಯಾನವಾಗಿ, ಪ್ರಸಾದವೆ ಲಿಂಗಭೋಗೋಪಭಾಗವಾಗಿಪ್ಪ, ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ ಮರುಳಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->