ಅಥವಾ

ಒಟ್ಟು 49 ಕಡೆಗಳಲ್ಲಿ , 22 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ. ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ. ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ? ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ. ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ !
--------------
ಸುಂಕದ ಬಂಕಣ್ಣ
ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ ತಾಗಿತು ಮನ ಸಂದ ಗುರಿಯ. ಅದೇತರ ಗುಣದಿಂದ? ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ ಚಿತ್ತ ಹಸ್ತದ ಲಿಂಗದ ದೃಷ್ಟ. ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು ಕಾಯದ ನೆಮ್ಮುಗೆಯಲ್ಲಿ ಕಾಣಬೇಕು. ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಸುಧೆಯೊಳಗೆ ವಿಷವುಂಟೆ? ಮಧುರದೊಳಗೆ ಕಹಿಯುಂಟೆ? ದಿನಮಣಿಯೊಳಗೆ ಕಪ್ಪುಂಟೆ? ಬೆಳದಿಂಗಳೊಳಗೆ ಕಿಚ್ಚುಂಟೆ? ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ? ಮಹಾಜ್ಞಾನಸ್ವರೂಪರಪ್ಪ ಶರಣರೇ ಲಿಂಗವೆಂದರಿದ ಮಹಾತ್ಮಂಗೆ ಸಂಕಲ್ಪ ಭ್ರಮೆಯುಂಟೆ? ಅದೇತರ ವಿಶ್ವಾಸ? ಸುಡು ಸುಡು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
--------------
ಅಕ್ಕಮ್ಮ
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ಗಂಪಕ್ಕೆ ಸಿಕ್ಕೆ, ಬಲೆಗೊಳಗಾಗೆ, ಗೂಳಿಯ ಇರಿತದ ಡಾವರಕ್ಕೆ ನಿಲ್ಲೆ, ಸೆಳೆಗೋಲಿನ ಗಾಣದ ಕೀಟಕವನೊಲ್ಲೆ. ನಿನ್ನಾಟ ಅದೇತರ ಮಡುವಿನಾಟ ಹೇಳಾ, ಕದಕತನ ಬೇಡ ಕದಂಬಲಿಂಗಾ.
--------------
ಗೋಣಿ ಮಾರಯ್ಯ
ತೂತಿಗೆ ಬಹವರ ಶುದ್ಧಿಯ ಮಾತು, ಅದೇತರ ವೇದ? ಅದೇತರ ಶಾಸ್ತ್ರ? ಅದೇತರ ಆಗಮಯುಕ್ತಿ? ಪೂರ್ವ ಅಪರವೆಂಬ ತೂತಿನ ಭೇದವ ಮುಚ್ಚಿ ಆತನನರಿತಲ್ಲಿ ಸಕಲ ಭ್ರಾಂತು ನಿರಸನ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜಲವ ಕಾಣದ ಬೋದನಂತೆ ನೋಡುತ್ತ ಗರಿಯ ಹಿಡಿದ ಅಂಟಿನಂತೆ ಹಿಡಿದೊಡವೆಯ ಬಿಡಲಾರದೆ ಬೇವುತ್ತ ಅಡಿವಜ್ಜೆಯ ಮೆಟ್ಟಿ ಬಿಡಲಾರದೆ ಅಡಿಗಡಿಗೆ ಎಡತಾಕುತ್ತ ಕೂಪರ ಕೈಯಿಂದ ಘಾತಕತನದಿಂದ ವ್ಯಾಪರಿಸುತ್ತ ಸುಡು ಅದೇತರ ವಿರಕ್ತಿ! ಮಾತಿನ ಮಾಲೆಯ ಪೂಸತ್ವ! ಇದ ನಿಹಿತಲಿಂಗಾಂಗಿಗಳೊಪ್ಪರು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಮಾಡುವರ ಮಾಟಕ್ಕಂಜಿ ತೂತ ಬಿಟ್ಟಡೆ ಅದೇತರ ಯೋಗ? ಅದೇತರ ಪೂಜೆ? ಪರರ ಬೇಡುವ ಬಾಯಿ ತೂತ ಮುಚ್ಚಿದಡೆ ಆಸೆಗೆ ಹೊರಗು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ, ತ್ರಿವಿಧದ ಆಸೆಗೆ ಸಿಕ್ಕಿ ಸಾವ ತೂತರಿಗೆಲ್ಲಿಯದೊ ಲಿಂಗ ? ಅದೇತರ ನಿರ್ವಾಣ? ಏತದ ಕೂನಿಯಂತೆ, ರಾಟಾಳದಂತೆ, ಭವಪಾಶದಲ್ಲಿ ಬಿದ್ದು ಘಾಸಿಯಾದ ಮತ್ತೆ ನಿನಗಿನ್ನೇತರ ಭಾಷೆಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಭವಿಸಂಗವನೊಲ್ಲೆನೆಂದು, ಭವಿಗಳ ಮನೆಯಲ್ಲಿ ಉಣ್ಣೆನೆಂದು, ಭವಿಗಳಿಗೆ ಇಕ್ಕೆನೆಂದು, ಭವಿಪಾಕದ ಕ್ಷಾರ ಕ್ರಮುಕ ಮಧುರ ತಿಲ ಚೂರ್ಣ ಇವು ಮೊದಲಾದ ದ್ರವ್ಯಂಗಳ ಭಕ್ಷಿಸಿ, ಪ್ರೇತರ ಕೂಟವನೊಲ್ಲೆನೆಂಬ, ಜಗನೀತಿಯ ವರ್ತಕರುಗಳಿಗೆ ಅದೇತರ ಶೀಲ, ಬಂಕೇಶ್ವರಲಿಂಗದಲ್ಲಿ ?
--------------
ಸುಂಕದ ಬಂಕಣ್ಣ
ಕಾಯ ಹಲವು ಭೇದಗಳಾಗಿ ಆತ್ಮನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
--------------
ಏಕಾಂತರಾಮಿತಂದೆ
ಇನ್ನಷ್ಟು ... -->