ಅಥವಾ

ಒಟ್ಟು 103 ಕಡೆಗಳಲ್ಲಿ , 36 ವಚನಕಾರರು , 82 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು. ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು. ಮರದೊಳಗಣ ಕಿಚ್ಚು ಮರನನೂ ಸುಟ್ಚು, ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು. ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನವಿಕಾರದಲ್ಲಿ ತೋರುವ ಸುಳುಹು ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ ಅರಿವಿನ ಭೇದ ಎಲ್ಲಿ ಅಡಗಿತ್ತು ? ಅರಿದು ತೋರದ ಮತ್ತೆ ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ? ಇಂತೀ ಭಗಧ್ಯಾನರನೊಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ, ತೇಜಸ್ತತ್ವ ಅರಿವುಭೇದವಾಗಿ, ಇಂತೀ ತ್ರಿವಿಧಭೇದ ವರ್ತುಳ ಗೋಮುಖ ಗೋಳಕಾಕಾರ ಕೂಡಿ ಲಿಂಗವಾದಲ್ಲಿ, ಈಶ್ವರತತ್ವ ವಾಯುಭೇದವಾಗಿ, ಸದಾಶಿವತತ್ವ ಆಕಾಶಭೇದವಾಗಿ, ಉಭಯ ಏಕವಾಗಿ, ಅಗ್ನಿತತ್ವ ಕೂಡಲಿಕ್ಕೆ ಆ ತ್ರಿವಿಧ ಏಕವಾಗಿ, ಅಪ್ಪುತತ್ವವ ಕೂಡಲಿಕ್ಕೆ ಆ ಚತುರ್ಭಾವ ಏಕವಾಗಿ, ಪೃಥ್ವಿತತ್ವ ಕೂಡಲಾಗಿ, ಉತ್ಪತ್ಯವೆಲ್ಲಿ ಅಡಗಿತ್ತು ? ಸ್ಥಿತಿಯೆಲ್ಲಿ ನಡೆಯಿತ್ತು ? ಲಯವೆಲ್ಲಿ ಸತ್ತಿತ್ತು ? ಲಿಂಗ ಮಧ್ಯ ಸಚರಾಚರವೆಂದಲ್ಲಿ, ಕಂಡು ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು. ಇಲ್ಲದುದ ಇದ್ದುದೆಂದು ನೋಡಲಿಕಾಗಿ, ಇದ್ದಲ್ಲಿಯೆ ತಲ್ಲೀಯವಾಯಿತ್ತು ಇಂತು ಉಭಯವ ಕಡೆಗಾಣಿಸಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
--------------
ಮೋಳಿಗೆ ಮಾರಯ್ಯ
ಎನ್ನ ತನು ಬಸವಣ್ಣನಲ್ಲಿ ಅಡಗಿತ್ತು. ಎನ್ನ ಮನ ಚೆನ್ನಬಸವಣ್ಣನಲ್ಲಿ ಅಡಗಿತ್ತು. ಎನ್ನ ಪ್ರಾಣ ಪ್ರಭುದೇವರಲ್ಲಿ ಅಡಗಿತ್ತು. ಎನ್ನ ಸರ್ವಾಂಗದ ಸಕಲಕರಣಂಗಳೆಲ್ಲವು ನಿಮ್ಮ ಶರಣರ ಶ್ರೀಪಾದದಲ್ಲಿ ಅಡಗಿದವು ಮಹಾಘನ ಶಾಂತಮಲ್ಲಿಕಾರ್ಜುನ.
--------------
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)
ಕಾಲಿಗೆ ಕೋಳ, ಕೈಗೆ ಸಂಕಲೆ, ಕೊರಳಿಗೆ ಪಾಶ ಪಾಷಂಡಿಗಳಾಗುತ್ತ, ಮತ್ತಾ ಅರಿವಿನ ಹೊಲಬೆಲ್ಲ ಅಡಗಿತ್ತು. ಅಂಗದ ಕ್ರೀ, ಲಿಂಗದ ಕೂಟ, ನಿರಂಗದ ಸುಖವೆಂಬುದು ಆ ಮೂರರ ಬಂಧದಲ್ಲಿ ಅಡಗಿತ್ತು. ಬೇರೊಂದು ಸಂಗವೆಲ್ಲಿದ್ದಿತ್ತು ಹೇಳಾ ? ನಿರಂಗವೆಂಬ ನಾಮವಿಲ್ಲದನೆ ಕಾಮಕ್ಕೇಕೆ ಕೂಟವಾದೆ ? ದುರ್ಮುಖಕ್ಕೇಕೆ ಆತ್ಮನಾದೆ ? ಕಾಮಧೂಮ ಧೂಳೇಶ್ವರನೆಂಬುದಕ್ಕೆ ಕುರುಹಿಲ್ಲದ ನೆರೆ ನಾಮವಾದೆಯಲ್ಲಾ.
--------------
ಮಾದಾರ ಧೂಳಯ್ಯ
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಪ್ರಾಣಲಿಂಗ ಶರಣ ಐಕ್ಯ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಇಂತೀ ಉಭಯದ ಕೋಡ ಹಿಡಿದು ಪಶ್ಚಿಮ ದ್ವಾರವ ಮುಚ್ಚಿ ನಿಂದು ಉತ್ತರ ದ್ವಾರದಲ್ಲಿ ಎಡತಾಕುವ ನಿಶ್ಚಿಂತರ ಮುಚ್ಚಿಸಿ ಸಚ್ಚಿದಾನಂದದಿ ನಲಿದೊಲಿದು ಕಲೆ ವಿದ್ಯವನೊಪ್ಪಿಸ ಬಂದೆ. ಉಲುಹಿನ ಗಿಲಿಕೆಯ ಕೊಂಬಿನಲ್ಲಿ ಸುಳುಹಿನ ಸೂಕ್ಷ್ಮದ ಕಳೆಯ ಬೆಳಗಿನಲ್ಲಿ ಅಕ್ಕನ ಗಂಡ ಭಾವಂದಿರ ಧಿಕ್ಕರಿಸ ಬಂದೆ. ಮೇಖಲೇಶ್ವರಲಿಂಗವನರಿಯ ಹೇಳಿ.
--------------
ಕಲಕೇತಯ್ಯ
ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ : ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು. ತನ್ನಯ ಅರಿವು ಮರವೆಯಿಂದ ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು. ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು. ಆ ತೆರದ ದೃಷ್ಟವನರಿ, ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು.
--------------
ಮೆರೆಮಿಂಡಯ್ಯ
ಕಾಡಿನೊಳಗಣ ವರಹನ, ಊರ ಕುಕ್ಕುರ ಕೊಲುವಾಗ ಊರಿಗೂ ಕಾಡಿಗೂ ಏತರ ಹಗೆ ? ಅದರ ಭೇದ ಅಲ್ಲಿಯೆ ಅಡಗಿತ್ತು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆಯುತ್ತಿಹವೆ ? ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ. ನಿಮ್ಮ ಭಕ್ತಿಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು. ಎನಗೆ ಭಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ ?
--------------
ಮೋಳಿಗೆ ಮಹಾದೇವಿ
ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು. ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು. ಬೆಟ್ಟವ ಬೆಳ್ಳಕ್ಕಿ ನುಂಗಿತ್ತು. ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ. ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !
--------------
ಅಲ್ಲಮಪ್ರಭುದೇವರು
ಪಿಂಡದ ಸರ್ವಾಂಗದಲ್ಲಿ ಆತ್ಮನು ವೇಧಿಸಿ ಇದ್ದಿಹಿತ್ತೆಂಬರು. ಕರ ಚರಣ ಕರ್ಣ ನಾಸಿಕ ನಯನ ಇವನರಿದು ಕಳೆದಲ್ಲಿ ಆತ್ಮ ಘಟದಲ್ಲಿದ್ದಿತ್ತು. ಶಿರಚ್ಛೇದನವಾದಲ್ಲಿ ಆತ್ಮ ಎಲ್ಲಿ ಅಡಗಿತ್ತು ? ಇದನರಿತು ಆತ್ಮ ಪೂರ್ಣನೊ, ಪರಿಪೂರ್ಣನೊ ಎಂಬುದ ತಿಳಿದು ನಿಶ್ಚಯದಲ್ಲಿ ನಿಂದುದು ಪಿಂಡಜ್ಞಾನಸಂಬಂಧ. ಇದು ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ಇನ್ನಷ್ಟು ... -->