ಅಥವಾ

ಒಟ್ಟು 85 ಕಡೆಗಳಲ್ಲಿ , 15 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ, ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ, ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ, ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ, ನಿಜದರಿವನರುಹಿಸಿಕೊಟ್ಟ ಗುರುವೆ, ನಿರ್ಮಳಪ್ರಭೆಯ ತೋರಿದ ಗುರುವೆ, ನಿಜವನನುಭವಕ್ಕೆ ತಂದ ಗುರುವೆ ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ, ಬಸವನ ಪ್ರಭೆ ಎಲ್ಲಿ ಅಡಗಿತ್ತೊ?
--------------
ನೀಲಮ್ಮ
ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಬ್ರಹ್ಮನು ಉತ್ತರಖಂಡಣೆಯೆಂಬ ವೇದವನುಚ್ಚರಿಸುತ್ತಿಹನು. ಸ್ವಾದ್ಥಿಷ್ಠಾನಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು. ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ರುದ್ರನು ಋಗ್ವೇದವನುಚ್ಚರಿಸುತ್ತಿಹನು. ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಈಶ್ವರನು ಯಜುರ್ವೇದವನುಚ್ಚರಿಸುತ್ತಿಹನು. ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು. ಆಜ್ಞಾಚಕ್ರದಲ್ಲಿ ಒಂಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಉಪಮಾತೀತನು ಅಥರ್ವಣವೇದವನುಚ್ಚರಿಸುತ್ತಿಹನು. ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು. ಇಂತಿವೆಲ್ಲವನರಿದು ಮರದು, ನಿಜಲಿಂಗ ನಿಜಮಂತ್ರಂಗಳಲ್ಲಿ ಪರವಶವಾಗಿರ್ದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ರವಿ ಶಶಿಗಳಿಲ್ಲದಂದು, ಕತ್ತಲೆ ಕಾಳಾಂಧಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳು ಇಲ್ಲದಂದು, ಅತ್ತತ್ತಲೆ ತಾನೆ ತಂದೆಯಾಗಿದ್ದೆಯಯ್ಯ. ತನಗೆ ಮಕ್ಕಳು ಬೇಕಾಗಿ ನೆನಹಂಗೈಯಲು. ಓಂಕಾರವೆಂಬ ಪ್ರಣವ ಪುಟ್ಟಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು ನೋಡಾ. ಅಕಾರ ಉಕಾರ ಮಕಾರಂಗಳೊಡನೆ ಷಡಕ್ಷರಂಗಳು ಆದವು ನೋಡಾ. ಆ ಷಡಕ್ಷರಂಗಳೊಡನೆ ಷಟ್ಚಕ್ರಂಗಳಾದವು ನೋಡಾ. ಆ ಷಟ್ಚಕ್ರಂಗಳೊಡನೆ ಷಡ್ವಿಧಮೂರ್ತಿಗಳಾದವು ನೋಡಾ. ಆ ಷಡ್ವಿಧಮೂರ್ತಿಗಳೊಡನೆ ಷಡ್ವಿಧಲಿಂಗವಾದವು ನೋಡಾ. ಆ ಷಡ್ವಿಧಲಿಂಗದೊಡನೆ ಷಡ್ವಿಧಶಕ್ತಿಯರಾದರು ನೋಡಾ. ಆ ಷಡ್ವಿಧಶಕ್ತಿಯರೊಡನೆ ಷಡ್ವಿಧಭಕ್ತಿಯಾಯಿತು ನೋಡಾ. ಆ ಷಡ್ವಿಧಭಕ್ತಿಯನರಿತು ನಾದಬಿಂದುಕಲೆಗಳ ಮೀರಿ ಪರಕೆ ಪರವಾದ ಲಿಂಗವನಾಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಂತಕೋಟಿ ಆದಿಬ್ರಹ್ಮರ ಶಿರವನರಿದು ಬ್ರಹ್ಮಕಪಾಲವ ಪಿಡಿದಾಡದಂದು, ಅನಂತಕೋಟಿ ಆದಿನಾರಾಯಣರ ನಿಟ್ಟೆಲುವ ಮುರಿದು ಕಂಕಾಳದಂಡವ ಧರಿಸದಂದು, ಅನಂತಕೋಟಿ ಆದಿಕಾಲರ ಒದ್ದೊದ್ದು ಕೊಲ್ಲದಂದು, ಅನಂತಕೋಟಿ ಆದಿ ಮನ್ಮಥರ ದಹಿಸಿ ಭಸ್ಮವ ಮಾಡದಂದು, ಅನಂತಕೋಟಿ ತ್ರಿಪುರಂಗಳ ಸಂಹಾರವ ಮಾಡದಂದು, ಪರಶಿವಲೀಲೆಯಿಂದ ಅನಂತಕೋಟಿ ಬ್ರಹ್ಮಾಂಡಂಗಳ ಸೃಜಿಸದಂದು, ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇದಕ್ಕೆ ಮಹದೋಂಕಾರೋಪನಿಷತ್ತು : ಉಕಾರವೆಂಬ ಪ್ರಣವದಲ್ಲಿ- ``ದಂಡಶ್ಚ ತಾರಾಕಾಕಾರೋ ಭವತಿ ಓಂ ಸ್ವಯಂಭುಲಿಂಗ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಏಕಾದಶಮೇ ಪ್ರಣವಾಂಶಕೇ || '' ಮಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಶಿವತತ್ವಂ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ || '' ಅಕಾರವೆಂಬ ಪ್ರಣವದಲ್ಲಿ- ``ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಗುರುತತ್ವಂ ದೇವತಾ| ಅಕಾರೇ ಚ ಲಯಂ ಪ್ರಾಪ್ತೇ ತ್ರಯೋದಶಮೇ ಪ್ರಣವಾಂಶಕೇ ||'' ``ಉಕಾರೇ ಚ ಮಕಾರೇ ಚ ಅಕಾರಂ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂ ಕಲಾ ಚೈವ ನಾದಬಿಂದುಕಲಾತ್ಮನೇ || ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ | ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ || ಓಂಕಾರಂ ನಾದರೂಪಂಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||'' ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಲೀಯವಾಗಿ ಬಂದ ಪರಿಯ, ಅಕಾರ ಉಕಾರ ಮಕಾರಂಗಳು ಸೋಂಕದಿರ್ದ ಪರಿಯ, ನಿರ್ಲೇಪಸ್ಥಲವಾಧಾರವಾದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲನು. ಬೆಸಗೊಳ್ಳಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆ ಆದಿ ಪ್ರಣವದ ನೆನಹುಮಾತ್ರದಲ್ಲಿ ಆದಿ ಅಕಾರ, ಆದಿ ಉಕಾರ, ಆದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು . ಆ ಆದಿ ಅಕಾರ, ಆದಿ ಉಕಾರ, ಆದಿ ಮಕಾರ-ಇವು ಮೂರು ಬೀಜಾಕ್ಷರ. ಆದಿ ಅಕಾರವೆ ಆದಿನಾದ, ಆದಿ ಉಕಾರವೇ ಆದಿಬಿಂದು, ಆದಿ ಮಕಾರವೆ ಆದಿಕಲೆ. ಆದಿ ಅಕಾರವೇ ನಿರಾಳಾತ್ಮನು, ಆದಿ ಉಕಾರವೇ ನಿರಂಜನಾತ್ಮನು, ಆದಿ ಮಕಾರವೆ ನಿರಾಮಯಾತ್ಮಕನು ನೋಡಾ. ಇದಕ್ಕೆ ಶ್ರೀಮಹಾದೇವೋವಾಚ: ``ಅಕಾರಂ ನಾದರೂಪೇಣ ಉಕಾರೋ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ || ಓಂಕಾರೋ ಜ್ಯೋತಿರೂಪಂಚ ಓಂಕಾರೋ ಪರಮೇಶ್ವರಃ | ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ | ನಾದಬಿಂದೂಭಯೋಃ ಕರ್ತಾ ರುದ್ರಃ ಶಂಭುಃ ನಿರಾಮಯಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನೂ ಏನೂ ಎನಲಿಲ್ಲದ ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನೆನಹು ಮಾತ್ರದಲ್ಲಿಯೇ ಆದಿ ಪ್ರಣವ ಉತ್ಪತ್ಯವಾಯಿತು. ಆ ಆದಿ ಪ್ರಣವಸ್ಥಲದ ವಚನವದೆಂತೆಂದಡೆ : ಆಧಾರಚಕ್ರ ಸ್ವಾದ್ಥಿಷ್ಠಾನಚಕ್ರ ಉತ್ಪತ್ಯವಾಗದ ಮುನ್ನ , ಮಣಿಪೂರಕಚಕ್ರ ಅನಾಹತಚಕ್ರ ಉತ್ಪತ್ಯವಾಗದ ಮುನ್ನ , ವಿಶುದ್ಧಿಚಕ್ರ ಆಜ್ಞಾಚಕ್ರ ಉತ್ಪತ್ಯವಾಗದ ಮುನ್ನ , ಬ್ರಹ್ಮಚಕ್ರ ಶಿಖಾಚಕ್ರ ಉತ್ಪತ್ಯವಾಗದ ಮುನ್ನ , ಪಶ್ಚಿಮಚಕ್ರ ಅಣುಚಕ್ರ ಉತ್ಪತ್ಯವಾಗದ ಮುನ್ನವೆ ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ನಿರಂಜನಾತೀತಪ್ರಣವ ಮೊದಲಾಗಿ ಬ್ರಹ್ಮ ಕಡೆಯಾಗಿ ಸೃಷ್ಟಿಮಾರ್ಗವ ಹೇಳುತ್ತಿದ್ದೆನು. ಅದೆಂತೆಂದೊಡೆ : ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯ ನೆನಹುಮಾತ್ರದಲ್ಲಿಯೇ ನಿರಂಜನಾತೀತಪ್ರಣವ ಉತ್ಪತ್ತ್ಯವಾಯಿತ್ತು. ಆ ನಿರಂಜನಾತೀತಪ್ರಣವದ ನೆನಹುಮಾತ್ರದಲ್ಲಿಯೇ ನಿರಂಜನಪ್ರಣವ ಉತ್ಪತ್ತ್ಯವಾಯಿತ್ತು. ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿಯೇ ಅವಾಚ್ಯಪ್ರಣವ ಉತ್ಪತ್ತ್ಯವಾಯಿತ್ತು. ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ ಕಲಾಪ್ರಣವ ಉತ್ಪತ್ತ್ಯವಾಯಿತ್ತು. ಆ ಕಲಾಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿಪ್ರಣವ ಉತ್ಪತ್ತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿ ಅಕಾರ ಉಕಾರ ಮಕಾರ ಉತ್ಪತ್ತ್ಯವಾಯಿತ್ತು. ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ ಆದಿಪ್ರಣವ ಉತ್ಪತ್ತ್ಯವಾಯಿತ್ತು. ಆ ಆದಿಪ್ರಣವದ ನೆನಹುಮಾತ್ರದಲ್ಲಿಯೇ ಆದಿ ಅಕಾರ ಉಕಾರ ಮಕಾರ ಉತ್ಪತ್ತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ``ನಿರಂಜನಾತೀತಚಿಂತಾಯಾಂ ಅನಾದ್ಯೋಂಕಾರ ಸಂಭವಃ | ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ | ಅವಾಚ್ಯೋಂಕಾರ ಚಿಂತಾಯಾಂ ಕಲಾ ನಾಮ ಸಮುದ್ಭವಃ | ಕಲಾಪ್ರಣವಚಿಂತಾಯಾಂ ಅನಾದಿಪ್ರಣವೋ ಭವೇತ್ || ಅನಾದಿಪ್ರಣವ ಚಿಂತಾಯಾಂ ಆದಿ ಮಾತ್ರಸ್ಯ ಸಂಭವಃ | ಆದಿ ಮಾತ್ರಸ್ಯ ಚಿಂತಾಯಾಂ ಆದಿ ಪ್ರಣವಸಂಭವಃ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದ : ``ಓಂ ನಿರಂಜನಾತೀತಪ್ರಣವಾಖ್ಯಾ ನಿರಂಜನ ಪ್ರಣವ ಜಾಯತೇ | ನಿರಂಜನಪ್ರಣವ ತದಸ್ಯ ಅವಾಚ್ಯೋಂಕಾರ ಜಾಯತೇ | ಅವಾಚ್ಯೋಂಕಾರ ಚಿಂತಾಖ್ಯಾಂ ಕಲಾಪ್ರಣವಸ್ಯ ಜಾಯತೇ | ಕಲಾಪ್ರಣವಸ್ಯ ತದಸ್ಯ ಅನಾದ್ಯೋಂಕಾರ ಜಾಯತೇ | ಅನಾದ್ಯೋಂಕಾರಚಿಂತಾಯಾಂ ಅನಾದಿತ್ರ್ಯಕ್ಷರೋ ಜಾಯತೇ | ಅನಾದ್ಯರಕ್ಷರ ಚಿಂತಾಯಾಂ ಆದಿಪ್ರಣವ ಜಾಯತೇ | ಆದಿ ಪ್ರಣವಚಿಂತಾಯಾಂ ಅಕ್ಷರತ್ರಯಂ ಜಾಯತೇ ||'' ಇಂತೆಂದು ಶ್ರುತಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ ಉತ್ಪತ್ಯವಾಗದ ಮುನ್ನ ಮುನ್ನವೆ ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು. ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು. ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿಪ್ರಣವದುತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ ಅದಿಪ್ರಣವ ಉತ್ಪತ್ಯವಾಯಿತ್ತು. ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ. ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ``ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ | ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ || ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ | ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ || ಕಲಾಪ್ರಣವಚಿಂತಾಯಾಂ ಅನಾದಿಪ್ರಣವ್ದೋಭವತ್ | ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ || ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||'' ಇಂತೆಂದುದಾಗಿ. ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೆ ೀ : ``ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ | ಕಲಾಪ್ರಣವ ತದಸ್ಯಾ ಅನಾದಿ ಓಂಕಾರ್ದೋಜಾಯತ || ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ | ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವ್ದೋಜಾಯತ | ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವ್ದೋಜಾಯತ | ನಿರಂಜನಪ್ರಣವಾದಸ್ಯ ಅವಾಚ್ಯೋಂಕಾರ್ದೋಜಾಯತ | ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವ್ದೋಜಾಯತ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||'' ಇಂತೆಂದುದು ಶ್ರುತಿ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಂಚಾಕ್ಷರಿ ಪಂಚವಕ್ತ್ರಂಗಳ ನೆಲೆಯನರಿಯರು ಅಕಾರ ಉಕಾರ ಮಕಾರ ನಾದ ಬಿಂದು ಕಲೆಯನರಿಯರು ಪ್ರಣವಸ್ವರೂಪವನರಿಯರು ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ, ಗುರುಲಿಂಗಜಂಗಮವೆಂದು ಸುಳಿದಡೆ ಪಂಚಮಹಾಪಾತಕ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಅಕಾರ ಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ. ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ. ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ. ಆ ಆದಿ ನಾದಬಿಂದುಕಲಾಪ್ರಣವಣಕ್ಕೆ ಆ ಆದಿ ಪ್ರಕೃತಿಪ್ರಣವವೇ ಆಧಾರ. ಆ ಆದಿ ಪ್ರಕೃತಿಪ್ರಣವಕ್ಕೆ ಆ ಆದಿ ಪ್ರಾಣಮಾತ್ರೆಯ ಪ್ರಣವವೇ ಆಧಾರ. ಆ ಆದಿ ಪ್ರಾಣಮಾತ್ರೆಯ ಪ್ರಣವಕ್ಕೆ ಆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ. ಆದಿ ಅ ಎಂದರೆ ಆದಿ ಅನಾಹತಪ್ರಣವ, ಆದಿ ಉ ಎಂದರೆ ಆದಿ ನಾದ ಪ್ರಣವವಳಿಯಿತ್ತು. ಆದಿ ಮ ಎಂಬ ಪ್ರಣವದಲ್ಲಿ ಆದಿ ಬಿಂದುಪ್ರಣವ ಬಂದು ಕೂಡಲು ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->