ಅಥವಾ

ಒಟ್ಟು 26 ಕಡೆಗಳಲ್ಲಿ , 16 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ ಕೆಟ್ಟ ಕೇಡ ನೋಡಾ. ಅಂದಳ ಸತ್ತಿಗೆ ಕರಿ ತುರಗಂಗಳಿಂದ, ನಾನಾ ಭೂಷಣ ಸುಗಂಧ ಸುಖದಿಂದ ಮೆಚ್ಚಿ ಪೂಜಿಸಿಕೊಂಬ ಹಿರಿಯರೆಲ್ಲರೂ ಬೋಧನೆಯ ಹೇಳಿ ಬೋದ್ಥಿಸಿಕೊಂಡುಂಬ ಹಿರಿಯರುಗಳೆಲ್ಲರೂ ಹಿರಿಯರಲ್ಲದೆ ಕಿರಿಯರಾದವರಾರೂ ಇಲ್ಲ. ಇದುಕಾರಣ, ಅಂಧಕನ ಕೈಯ ಅಂಧಕ ಹಿಡಿದಂತೆ. ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ? ತನುಸುಖವ ಮೆಚ್ಚಿದ, ಗುರು ಮುಟ್ಟಿದ ಭಕ್ತಂಗೆ ನಿಶ್ಚಯ ಹೇಳಲಾಗಿ, ಅವನಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು. ಆ ಭುವನಂಗಳನೆಲ್ಲ ಒಂದು ನಕ್ರ ನುಂಗಿರ್ಪುದು. ಆ ನಕ್ರನ ತಲೆಯೊಳಗೆ ಒಂದು ಬೆಲೆಯಿಲ್ಲದ ರತ್ನ ಇರ್ಪುದು. ಆ ರತ್ನಕ್ಕೆ ಇಬ್ಬರು ಹೆಣಗಾಡುತ್ತಿರ್ಪರು ನೋಡಾ! ಹೆಳವ ನಡದ, ಅಂಧಕ ಕಂಡ, ಕೈಯಿಲ್ಲದವ ಪಿಡಿದುದ ಕಂಡು ನಾ ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು ನೀರಿಲ್ಲದ ಬಾವಿಗೆ ಹೋಗಿ ನೀರನೆ ಮೊಗೆದು ಕಣ್ಣಿಲ್ಲದ ಅಂಧಕ ಬಿದ್ದ, ನಡುವಿಲ್ಲದ ಬಾಲೆಯು ಅಡಗಿಪ್ಪಳಯ್ಯ. ಇದೇನು ವಿಚಿತ್ರವೆಂದು ಝೇಂಕಾರಪ್ರಭು ಬಂದು ವಿಚಾರಿಸಲು ಮಕ್ಕಳಿಲ್ಲದಾಕಿ ಬಂದು, ಕಣ್ಣು ಇಲ್ಲದ ಅಂಧಕನ ಕೂಡಿಕೊಂಡು, ನಡುವಿಲ್ಲದ ಬಾಲೆಯ ಕರೆದು ಅವರಿಬ್ಬರನು ಮಹಾಲಿಂಗಕ್ಕೆ ಒಪ್ಪಿಸುತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಧಕ ಪಂಗುಳನಾದ, ಪಂಗುಳ ಅಂಧಕನಾದ. ಈ ಉಭಯದ ಬೆಂಬಳಿಯನರಿಯಬೇಕು. ಮಂಜರಿ ವಿಹಂಗನ ಕೊಂದು ಉಭಯವನರಿಯಬೇಕು. ಪರಮ ಜೀವನದೊಳಗಡಗಿ ಪರಮನಾದ ಉಭಯವ ತಿಳಿಯಬೇಕು. ಬೆಂಕಿ ಮರದೊಳಗಿದ್ದು, ಮಥನದಿಂದ ಮರ ಸುಟ್ಟು, ಮರ ಬೆಂಕಿಯಾದ ತೆರನನರಿತಡೆ ಪ್ರಾಣಲಿಂಗಸಂಬಂದ್ಥಿ. ಪ್ರಾಣಲಿಂಗವೆಂಬುಭಯ ಸಮಯ ನಿಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಧಕ ವ್ರತಿಯಲ್ಲ, ಪಂಗುಳ ಕ್ರೀವಂತನಲ್ಲ, ಕುಟಿಲ ಸದೈವಭಕ್ತನಲ್ಲ. ಇಂತೀ ಗುಣವೆ [ದೃಷ್ಟ], ದೃಷ್ಟದಲ್ಲಿಯೇ ದೃಷ್ಟವ ಕಂಡು, ಅಂಧಕ, ಪಂಗುಳ, ಕುಟಿಲ ಈ ಮೂರಕ್ಕೆ ವ್ರತದಂಗವೊಂದೂ ಇಲ್ಲ, ಇದಕ್ಕೆ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು. ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು. ದರ್ಪಣದೊಳಗಣ ಪ್ರತಿಬಿಂಬದಂತೆ ಹಿಡಿವರಿಗಳವಲ್ಲದಿರಬೇಕು ಅಣ್ಣಾ. ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ ಆರೂಢಗೆಟ್ಟೆಯೊ ಅಜಗಣ್ಣಾ.
--------------
ಮುಕ್ತಾಯಕ್ಕ
ನಾನರಿದು ಕಂಡೆಹೆನೆಂದಡೆ ಸ್ವತಂತ್ರಿಯಲ್ಲ. ನಿನ್ನ ಭೇದಿಸಿ ಕಂಡೆಹೆನೆಂದಡೆ ವಿಶ್ವಾಸಿಯಲ್ಲ. ಈ ಉಭಯದ ತೆರನ ಹೇಳಾ. ಚಿತ್ತಶುದ್ಧವಾಗಿ ಕಂಡೆಹೆನೆಂದಡೆ, ಆ ಚಿತ್ತವ ಪ್ರಕೃತಿಗೊಳಗುಮಾಡಿದೆ. ನಿನ್ನನರಿದು ಭೇದಿಸಿ ಕಂಡೆಹೆನೆಂದಡೆ, ಅವರ ಮನದ ಧರ್ಮಕ್ಕೊಳಗಾದೆ. ಅಂಧಕ ಅಂಧಕನ ಕೈ ಹಿಡಿದಡೆ, ಅವರೆಲ್ಲಿಗೆ ಹೋಗುವರು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನಾನರಿಯದಿರ್ದಡೆ ಜ್ಞಾನಿಗಳ ಸಂಭಾಷಣೆಯನರಸುತ್ತಿದ್ದೇನೆ. ಕಲಿಗಳೊಂದಿಗೆ ಹಂದೆ ಹೋಹಂತೆ, ಹೊಳೆಯಲ್ಲಿ ಹೋಹನ ಉಡಿಯ ಹಿಡಿದು ಹೋಹಂತೆ, ಅಂಧಕ ದೃಷ್ಟಿಯವನೊಡನೆ ನಡೆವಂತೆ, ಆನು ನಿಮ್ಮ ಶರಣರ ಬೆಂಬಳಿವಿಡಿದೆಯ್ದುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು! ನೋಡಿರೆ; ಅಪೂರ್ವ ಅತಿಶಯವ! ಅಂಧಕ ಹಾವ ಹಿಡಿದ._ ಇದು ಕಾರಣ; ಲೋಕಕ್ಕೆ ಅರುಹದೆ, ನಾನು ಅರಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ ನಿಮ್ಮ ನಿಜಾಚರಣೆಯ ನಿಲುಕಡೆಯ ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ ? ಅದೆಂತೆಂದಡೆ, ಲೋಕದಲ್ಲಿ ದೃಷ್ಟವುಂಟು. ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ ? ಶುನಿ ಬಲ್ಲುದೆ ಕಲ್ಪವೃಕ್ಷವ ? ದಂಷ್ಟ್ರಿ ಬಲ್ಲುದೆ ಕಾಮಧೇನುವ ? ಗಾರ್ದಭ ಬಲ್ಲುದೆ ಚಿಂತಾಮಣಿಯ ? ನರಿ ಬಲ್ಲುದೆ ಗಜಭದ್ರವ ? ಕಾಗೆ ಬಲ್ಲುದೆ ಪರಮಾಮೃತವ ? ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ ? ಬಧಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ ? ಷಂಡ ಬಲ್ಲನೆ ರತಿಸಂಯೋಗವ ? ತೊತ್ತು ಬಲ್ಲಳೆ ರಾಜಭೋಗವ ? ಹೇಡಿ ಬಲ್ಲನೆ ರಣಧೀರತ್ವವ ? ದರಿದ್ರ ಬಲ್ಲನೆ ನವರತ್ನಂಗಳ ? ಬೆಸ್ತ ಬಲ್ಲನೆ ಅಂದ? ಮೊದಲಾದ ಅಷ್ಟಭೋಗಂಗಳ ? ಮೂಢ ಬಲ್ಲನೆ ಶಿವಕವಿತ್ವವ ? ಕಾಮಿ ಬಲ್ಲನೆ ಶಿವಯೋಗದ ಸುಖವ ? ರೋಗಿ ಬಲ್ಲನೆ ರಂಭಾರಸವ ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ ? ಇಂತೆಂದುದಾಗಿ, ಲೋಕದ ದೃಷ್ಟದಂತೆ, ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ ಅಷ್ಟಮಲಂಗಳಲ್ಲಿ, ಅಷ್ಟಕಾಮವಿಕಾರದಿಂದ, ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ ? ನಿಜಸುಖದ ರಾಜಾಧಿರಾಜ ಶಿವಯೋಗದ ನಿಲುಕಡೆಯ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು ತನ್ನ ಮಠಕ್ಕೆ ಬಂದ ಲಿಂಗಜಂಗಮದ ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ. ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ. ಮುಂದಿರ್ದ ನಿಧಾನವ ಕಾಣಲರಿಯದೆ ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ, ಎಂದಾದರೂ ತನ್ನ ವ್ಯಸನವೆತ್ತಿದಾಗ ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ ಬಂಧುಬಳಗವ, ಮುಯ್ಯೂಟವ ಕೂಡಿ ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುಂಭಕ್ಕೆ ಜಲವ ತುಂಬುವಲ್ಲಿ ಶೋಧಿಸಿದಲ್ಲದೆ ಶುದ್ಧವಿಲ್ಲ. ತಾ ಭುಂಜಿಸುವ ದ್ರವ್ಯಕ್ಕೆ ಕಲ್ಲು ಕಡ್ಡಿ ಮುಳ್ಳು ಮೊದಲಾಗಿ ಶೋಧಿಸಿಕೊಂಡಲ್ಲದೆ, ಶುದ್ಧವಿಲ್ಲ[ದೆ] ಕಂಡುಕೊಳಬಹುದೆ? ಇಂತಿವನರಿತು ಸಂದೇಹದಲ್ಲಿ ಮಾಡುವ ಭಕ್ತಿ ಅಂಧಕ ಕಣ್ಣಿಯ ಹೊಸದಂದವಾಯಿತ್ತು. ಸಂದೇಹವ ಬಿಟ್ಟಿರು, ಅದು ನಿನ್ನಂಗ, ಸದಾಶಿವಮೂರ್ತಿಲಿಂಗದ ಸಂಗ.
--------------
ಅರಿವಿನ ಮಾರಿತಂದೆ
ಮಾತನಾಡುವ ಪಂಜರದ ವಿಂಹಗನ ಕೊಂದು, ಕೋಡಗ ನುಂಗಿತ್ತು. ನುಂಗಿದ ಕೋಡಗವ ಮಂಜರಿ ತಿಂದಿತ್ತು. ತಿಂದ ಮಂಜರಿಯ ಅಂಧಕ ಕಂಡ. ಆ ಅಂಧಕ ಪಂಗುಳಗೆ ಹೇಳಲಾಗಿ, ಪಂಗುಳ ಹರಿದು ಮಂಜರಿಯ ಕೊಂದ. ಪಂಜರದ ಗಿಳಿಯ, ಮಂಜರಿಯ ಲಾಗ, ಅಂಧಕನ ಧ್ಯಾನವ, ಪಂಗುಳನ ಹರಿತವ, ಈ ದ್ವಂದ್ವಗಳನೊಂದುಮಾಡಿ, ಈ ಚತುರ್ವಿಧದಂಗವ ತಿಳಿದಲ್ಲಿ, ಪ್ರಾಣಲಿಂಗಸಂಬಂಧ. ಸಂಬಂಧವೆಂಬ ಸಮಯ ಹಿಂಗಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೊಟ್ಟವನೀಶ ಭಕ್ತನಲ್ಲ, ಅರಿವಡೆ ಕರಿಗೊಂಡವನಲ್ಲ. ಅಂಧಕ ಪಂಗುಳನ ಸಂಗದಂತಾಯಿತ್ತು. ಇದ ನೋಡಿ ಬೆಂದು ಬೇಯಲಾರೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ ಚೋರತನವ ಕಂಡು ಅಂಜಿದೆನಯ್ಯಾ. ಮನೆಯ ಕೂಡಿಕೊಂಡು ಅನ್ನವನಿಕ್ಕಿದಲ್ಲಿ ಸುಳಿವ ಚೋರರ ಕಂಡು ಗುರುವೆನಲಾರೆ. ಅದೆಂತೆಂದಡೆ : ಮಹತ್ತರವಪ್ಪ ಜ್ಯೋತಿರ್ಲಿಂಗವ ಕೈಯಲ್ಲಿ ಕೊಟ್ಟು, ಪಾತಕವಪ್ಪ ಫಲಭೋಗಂಗಳ ಕೈಯಲ್ಲಿ ಕೊಟ್ಟು, ಅಜಾತರೆಂದಡೆ ನಾಚಿದೆನಯ್ಯಾ. ಇಂತೀ ಭ್ರಾಂತರ ಕಂಡು ವಂದಿಸಲಾಗದು, ತನ್ನ ರೋಗಕ್ಕೆ ನಿರ್ವಾಹವ ಕಾಣದೆ, ಇದಿರ ರೋಗವ ಮಾಣಿಸಿಹೆನೆಂದು, ಮದ್ದಿನ ಚೀಲವ ಹೊತ್ತು ಸಾವ ಕದ್ದೆಹಕಾರನಂತೆ, ಕ್ಷುದ್ರಜೀವಿಗೆಲ್ಲಿಯದು ಸದ್ಗುರುಸ್ಥಲ ? ಸದ್ಗುರುವಾದಡೆ ಅವ ಬದ್ಧನಾಗಿರಬೇಕು. ತಂತ್ರದಲ್ಲಿ ಹೋಹ ಮಂತ್ರದಂತಿರಬೇಕು. ಮಂದಾರದಲ್ಲಿ ತೋರುವ ಸುಗಂಧದಂತಿರಬೇಕು. ಇಂತಿಪ್ಪ ಗುರುವಿಂಗಿಹವಿಲ್ಲ, ಪರವಿಲ್ಲ, ಭಾವಕ್ಕೆ ಭ್ರಮೆಯಿಲ್ಲ. ಆ ಗುರುವಿನ ಕೈಯಲ್ಲಿ ಬೋಧಿಸಿಕೊಂಡ ಶಿಷ್ಯಂಗೆ ತುಪ್ಪವನಿಕ್ಕಿದ ಚಿತ್ತೆಯಂತೆ ಸ್ಫಟಿಕವ [ಸಾರಿ] ದ [ಒರತೆ ]ಯಂತೆ. ಹೀಂಗಲ್ಲದೆ, ಗುರುಶಿಷ್ಯಸಂಬಂಧವಾಗಬಾರದು. ಇದನರಿಯದಿರ್ದಡೆ ಅಂಧಕನ ಕೈಯ ಅಂಧಕ ಹಿಡಿದಂತೆ, ಪಂಗುಳ[ನ]ಲ್ಲಿ ಚಂದವನರಸುವನಂತೆ, ಸ್ವಯಾನಂದಭರಿತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->