ಅಥವಾ

ಒಟ್ಟು 18 ಕಡೆಗಳಲ್ಲಿ , 11 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದಿನ ಪರಿ ಇಂದಿನ ಪರಿ ಬೇರೆ ಕಂಡೆಯಾ, ಮನವೆ. ಅಂದಿನ ವಿಷ ಇಂದಮೃತವಾಯಿತ್ತು ಕಂಡೆಯಾ, ಮನವೆ. ಅಂದಿನ ದೇವಾಂಗನೆ ಇಂದು ನಿಮಗೆ ಚಿಚ್ಛಕ್ತಿಯಾಯಿತ್ತು ಕಂಡೆಯಾ, ಮನವೆ. ಅಂದಿನವ ನೀನಿಂದು ಕಪಿಲಸಿದ್ಧಮಲ್ಲಿಕಾರ್ಜುನನೆಂದು ನಂಬು ಕಂಡೆಯಾ, ಮನವೆ.
--------------
ಸಿದ್ಧರಾಮೇಶ್ವರ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ], ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು. ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು, ಕಂಜನಾಳದ ನೂಲಿನ ಕಂಬ ಆ ತಲಪಿಂಗೆ. ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ ಸಾಳಿವನ ಬೆಳೆಯಿತ್ತು, ಕೊಯ್ದು ಅರಿಯ ಹಾಕಲಾಗಿ ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು. ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ.
--------------
ಅವಸರದ ರೇಕಣ್ಣ
ಭೂಪ ಗೋಪನ ನೆನೆದಡೆ ಗೋಪನಾಗಬಲ್ಲನೆ? ಅಂದಿನ ಗಣಂಗಳ ಕಂಡು, ಇಂದಿನ ಜೀವಿಗಳು ನೆನೆನೆನೆದು ಧನ್ಯರಾದೆವೆಂಬ ಪರಿಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ, ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು. ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ ಮತ್ತೊಂದಾದನು(ನ?)ವ. ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು, ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು. ಗಣಿತ ಗುಣಿತವನಳಿದುಳಿದು, ಅಗಣಿತನಚಳಿತನಾದ ಅಪ್ಪಣ್ಣನು. ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ, ಅಮಳೋಕ್ಯವಾದ ನಿಜದ ನಿಲವ ; ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.
--------------
ಅಲ್ಲಮಪ್ರಭುದೇವರು
ಮೂರು ಮೊಲೆಯನುಂಡು ಬಂದವ, ಈರೈದು ಕಂಡು ಬಂದವ ನೀನಾರು ಹೇಳಾ? ಸಂದಿಲ್ಲದ ಪಟ್ಟಣದಲ್ಲಿ ಬಂದು ನೊಂದೆಯಲ್ಲ! ಅಂದಿನ ಬೆಂಬಳಿಯ ಮರೆದು ಇಂದಿನ ಸಂದೇಹಕ್ಕೊಡಲಾಗಿ, ಈ ಉಭಯದ ಸಂದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
--------------
ಕೋಲ ಶಾಂತಯ್ಯ
ವೇದ ಶಾಸ್ತ್ರ ಪುರಾಣ ಆಗಮಂಗಳಿಗೆ ಅಭೇದ್ಯಲಿಂಗಕ್ಕೆ ಸಕಲಸಂಸಾರವೇದಿಗಳ ಶೇಷವ ಸಮರ್ಪಿಸಬಹುದೆ? ಅಲ್ಲಾಯೆಂದಡೆ ಸಮಯವಿರೋಧ. ಅಹುದೆಂದಡೆ ಆದಿಯನಾದಿಯಿಂದತ್ತ ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ ಸರ್ವಸಾಧನೆಯಲ್ಲಿ ಸಾವವರ ಶೇಷವ ನಾದ ಬಿಂದು ಕಳೆಗೆ ಅತೀತವಪ್ಪ ವಸ್ತುವಿಂಗೆ ನೈವೇದಿಸಬಹುದೆ? ಲಿಂಗದ ಆದ್ಯಂತವನರಿಯರು. ಗುರುಲಿಂಗಜಂಗಮದ ಭೇದಕ್ರೀಯನರಿದು ಕಂಡು ತನ್ನಿರವ ತಾ ಶೋಧಿಸಿಕೊಂಡು ತ್ರಿವಿಧವ ಅರಿತವಂಗಲ್ಲದೆ ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ ತ್ರಿವಿಧಪ್ರಸಾದವ ಒಡಗೂಡಿಕೊಂಬುದು ನಿರಂಗಿ. ನಿರಂಗಿಯ ಮಹಾಪ್ರಸಾದಿಯ ಅಂಗ ಹೀಂಗಲ್ಲದೆ ಕಂಡವರ ಕೈಕೊಂಡು ಬಂಧ ಮೋಕ್ಷ ಕರ್ಮಂಗಳೊಂದೂ ಹರಿಯದೆ ನಿಂದ ಕೀರ್ತಿ ಆಡಂಬರಕ್ಕಾಗಿ ಮಾಡಿಕೊಂಡ ನೇಮಕ್ಕೆ ಕೆಟ್ಟಡೆ ತ್ರಿವಿಧವೇದಿಗಳು ಬಾಧಿಸಿಹರೆಂದು ಕಟ್ಟುಗುತ್ತಿಗೆಯ ವರ್ತಕರಿಗೆ ತ್ರಿವಿಧಪ್ರಸಾದದ ನಿಜನಿಶ್ಚಯ ಉಂಟೆ? ಇಂತೀ ಭೇದವಿಚಾರಗಳ ತಿಳಿದು ಲಿಂಗದ ಅಂದಿನ ಸೋಂಕಿನಿಂದ ಬಂದ ಗುರು ಲಿಂಗ ಜಂಗಮದ ಅಂಗವನರಿದು ಲಿಂಗಮೂರ್ತಿ ತ್ರಿವಿಧರೂಪಾಗಿ ಬಂದುದ ತಿಳಿದು, ತನ್ನ ಮೂರ್ತಿಗೆ ತಾ ಗುರುವಾಗಿ ದೀಕ್ಷಿತನಾಗಿ ಬಂದುದ ಕಂಡು ತನ್ನ ಮೂರ್ತಿಗೆ ತಾನು ಸುಳಿದು, ಚರವಾಗಿ ನಿಂದುದ ಕಂಡು ತನ್ನ ಮೂರ್ತಿಗೆ ನಿಜಕ್ಕೆ ತಾ ಮೂರ್ತಿಯಾಗಿ ಆ ಲಿಂಗವು ಉಭಯದ ಗುಣದಲ್ಲಿ ಕುರುಹಗೊಂಡಿತ್ತು. ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ, ದಹನ ಚಂಡಿಕೇಶ್ವರಲಿಂಗವನರಿದ ಪ್ರಸಾದಿಯ ನಿರಂಗ.
--------------
ಪ್ರಸಾದಿ ಲೆಂಕಬಂಕಣ್ಣ
ಅವರಪ್ಪನ ಮಗಳ ಗಂಡನ ತಂದೆಯ ತಾಯ ತಂದವರ ಗಂಡನ ಹೆಂಡತಿಯ ಹೆತ್ತವಳ ಮಕ್ಕಳ ಮೂರಿ ತಲೆಗಡಿದವರ ಅಂದಿನ ನಂಟ ಬಂದ ನಾನು. ನೀಂ ಪಂದಿಯೊಳಗಿರ್ದ ಅಂದವ ತೋರಾ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಲಿಂಗವ ಪೂಜಿಸಿ ಪಡೆದರು ಫಲಪದವನೆಂದು ಹೇಳದಿರಾ. ಅಂದಿನ ವೃತ್ತಾಂತವ ನೀನಿಂದರಿವಡೆ ಮಾಡಿ ಮಾಡಿ ನೋಡಾ, ಲಿಂಗಾರ್ಚನೆಯ. ಮಾಡದೆ ನೋಡದೆ ನೀಡಾಡದೆ ಅರಿಯಬಾರದು, ಕಪಿಲಸಿದ್ಧಮಲ್ಲಿಕಾರ್ಜುನನ ಲೀಲೆಯ ಎಲೆ ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ, ಅಕ್ಕನಾಗಲೆ, ನೀಲಲೋಚನೆ, ಮುಕ್ತಾಂಗನೆ, ಮಹಾದೇವಿಯಕ್ಕ ಮೊದಲಾದ ಮಹಾಪ್ರಮಥಗಣಂಗಳೆಲ್ಲ. ಸುಗಂಧದೊಳಗಣ ಮಹಾಗಂಧಪ್ರಸಾದವ ಕೊಂಡರಯ್ಯ. ಸುರಸದೊಳಗಣ ಮಹಾರಸಪ್ರಸಾದವ ಕೊಂಡರಯ್ಯ. ಸುರೂಪಿನನೊಳಗಣ ಮಹಾರೂಪಪ್ರಸಾದವ ಕೊಂಡರಯ್ಯ. ಸುಸ್ಪರ್ಶನದೊಳಗಣ ಮಹಾಸ್ಪರ್ಶನಪ್ರಸಾದವ ಕೊಂಡರಯ್ಯ. ಸಶಬ್ದದೊಳಗಣ ಮಹಾಶಬ್ದಪ್ರಸಾದವ ಕೊಂಡರಯ್ಯ. ಇಂತೀ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ, ಸುಶಬ್ದವ ಸತ್ತುಚಿತ್ತಾನಂದಮೂರ್ತಿ ಶ್ರೀಗುರುಲಿಂಗಜಂಗಮಕ್ಕೆ ಪವಿತ್ರಮುಖದಿಂದ ಸಮರ್ಪಿಸಿ, ಅವರೊಕ್ಕುಮಿಕ್ಕ ಮಹಾಪ್ರಸದವ ಹಾರೈಸಿ, ಪರತತ್ವಲಿಂಗಮುಖದಲ್ಲಿ ನಿಜಪ್ರಸಾದವೆಂದು ಸಂಬಂಧಿಸಿ ನಿರಾವಯ ಸಮಾಧ್ಯಸ್ತರಾದರು ನೋಡ. ಅಂದಿನ ಮಹಾಗಣಂಗಳ ಚಿತ್ಪ್ರಭೆಯೆ ಇಂದಿನ ಗುರುಲಿಂಗಜಂಗಮ ಪಾದೋದಕ ಪ್ರಸಾದವೆಂದು ನಿರ್ವಂಚಕತ್ವದಿಂದ ಪ್ರಸಾದದೊಳಗಣ ಮಹಾಪ್ರಸಾದವೆಂದರಿದು ಆಚರಿಸುವ ನಿತ್ಯತೃಪ್ತಿಯೇ ಘನಪ್ರಸಾದ ! ಆ ಪ್ರಸಾದವೆ ಪರಮಾನಂದ ! ಈ ವಿಚಾರವನರಿದು ಕೊಂಡು ಕೊಡಬಲ್ಲಾತನೆ ಸದ್ಗುರುಲಿಂಗ-ಜಂಗಮ-ಪಾದೋದಕ-ಪ್ರಸಾದ ! ಈ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದವನರಿದು, ಕೊಳಬಲ್ಲಾತನೆ ಸದ್ಭಕ್ತ-ಪ್ರಸಾದಿ-ಶಿವಶರಣ ನೋಡ. ಈ ವಿಚಾರವನರಿಯದೆ ಕೊಟ್ಟು ಕೊಂಬ ಭ್ರಷ್ಟರನೇನೆಂಬೆನಯ್ಯ ! ಆದಿ-ಅನಾದಿಯಿಂದತ್ತತ್ತ ಮೀರಿ ತೋರುವ ಸದ್ಗುರುಲಿಂಗಜಂಗಮದಿಂದ ಸದ್ಗುರು, ಲಿಂಗ, ಜಂಗಮ, ಭಕ್ತ, ಪ್ರಸಾದಿ, ಶರಣತ್ವದ ವಿಚಾರವ ತಿಳಿದ ಮಹಾಗಣಂಗಳಿಗೆ ಸೂತಕ, ಪಾತಕ, ದರಿದ್ರ, ದುಃಖಂಗಳು ಬಂದು ತಟ್ಟಲುಂಟೆ? ಅಗ್ನಿಯಲ್ಲಿ ದಗ್ಧವಾದ ಕಾಷ*ಂಗಳಿಗೆ ಮರಳಿ ಅಗ್ನಿ ಉಂಟೆ? ಕ್ಷೀರವಳಿದು ಘೃತವಾದ ಮೇಲೆ ಮರಳಿ ಕ್ಷೀರವಪ್ಪುದೆ? ಜ್ಯೋತಿಯಲ್ಲಿ ಬಯಲಾದ ಘನಸಾರ ಮರಳಿ ಸಾಕಾರವಪ್ಪುದೆ? ಸರ್ವಾವಸ್ಥೆಯಲ್ಲಿ ಪರತತ್ವಮೂರ್ತಿಯಲ್ಲಿ ಕೂಡಿದ ಸದ್ಭಕ್ತನು ಮರಳಿ ಭವಿಯಪ್ಪನೆ? ಜಾತಿ-ಸೂತಕ-ಪಾತಕವಳಿದ ಸದ್ಭಕ್ತಶರಣಗಣಂಗಳ ಭಾವ-ಮನ-ದೃಷ್ಟಿ-ಅವಸ್ಥೆಗಳೆಲ್ಲ ಪರಶಿವಲಿಂಗಪ್ರಕಾಶ ನೋಡ. ಅಂದು-ಇಂದು ಎಂಬ ಸಂದೇಹವನಳಿದು, ಶ್ರುತಿ-ಗುರು-ಸ್ವಾನುಭಾವದಿಂದ ಅಂಗಲಿಂಗವೆಂಬ ಉಭಯಭಾವವಳಿದು, ತ್ರಿವಿಧದೀಕ್ಷೆ, ತ್ರಿವಿಧಸ್ವಸ್ವರೂಪು ನಿಲುಗಡೆ, ತ್ರಿವಿಧ ಚಿದ್ವಿಭೂತಿ-ರುದ್ರಾಕ್ಷಿ-ಮಂತ್ರ, ತ್ರಿವಿಧಾಚಾರ ಭಕ್ತಿ-ಜ್ಞಾನ-ವೈರಾಗ್ಯವಿಡಿದಾಚರಿಸುವ ಭಕ್ತಗಣಂಗಳ ಕಾಯವೆ ಚಿತ್ಕಾಯ. ಅವರಂಗ-ಮನ-ಪ್ರಾಣ-ಭಾವಂಗಳೆ ಮಹಾಘನನಿಜಪ್ರಸಾದ ಪಾದೋದಕ ನೋಡಾ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಆ ಗುರುಶಿಷ್ಯರೆರಡು ಒಂದಾಗಿ ತಾನೇ ತಾನಾದ ವಿನೋದವೇನೆಂಬೆ ? ಮಹಾಂತ ಮಹಾಂತ ನೀನೆಂದರೆ ನೀನು ಇಂದಿನ ಮಹಾಂತನೇ ಅಲ್ಲಾ, ಅಂದಿನ ಮಹಂತ ನೀನು. ನೀನು ನಿರುಪಮ, ನಿರಾಳ, ನಿಷ್ಕಳ, ನಿರ್ಬೈಲು, ಮಹಾಬಯಲಾದ ಅಂದಿನ ಮಹಾಂತ ನೀನಲ್ಲವೆ ? ಅದು ನೀ ಹ್ಯಾಂಗ ಬಲ್ಲೆಯೆಂದರೆ : ನೀನು ನನಗೆ ತತ್ವೋಪದೇಶ ಹೇಳಿದಾತನೇ ? ಅಲ್ಲ. ಅಷ್ಟಾಂಗಯೋಗಂಗಳ ಹೇಳಿದಾತನೇ ? ಅಲ್ಲ. ಮುದ್ರೆಸಾಧನವ ಹೇಳಿದಾತನೇ ? ಅಲ್ಲ. ಹಠಯೋಗ ಲಯಯೋಗ ಲಂಬಿಕಾಯೋಗ ತಪಜಪ ಅದ್ವೈತಾದಿ ನಿತ್ಯನೇಮ ಪುಣ್ಯ ಸತ್ಕರ್ಮ ಮೊದಲಾದ ಇವು ಏನಾದರೂ ಎನಗೆ ಹೇಳಿದಾತನೇ ? ಅಲ್ಲ. ಇವು ಏನು ಹೇಳಲೊಲ್ಲದೆ ನನಗೊಂದು ಹೇಳಿದಿರಿ. ಅದ ಏನು ಹೇಳಿದಿರಿ ಅಂದರೆ, ನಿನ್ನ ನೀ ತಿಳಿದು ಹಾಡೆಂದು ಹೇಳಿದಿರಿ. ನೀನು ಹೇಳಿದುದಕ್ಕೆ ನಾನು ನನ್ನ ಒಬ್ಬುಳಿಯ ಮಾಡಿ ಏಕಚಿತ್ತಾಗಿ ಹೊರ ಆಸೆ ಬಿಟ್ಟು ಒಳನೋಟವಿಟ್ಟು ಹಸಿವೆ ತೃಷೆಗಳಂ ಸುಟ್ಟು ನನ್ನನ್ನೇ ನಾ ಕೆಟ್ಟು ರತಿ ನಿನ್ನೊಳಗಿಟ್ಟು ಆತ್ಮಜ್ಞಾನ ಅಳವಟ್ಟು, ಅಹಂಬ್ರಹ್ಮವಂ ಬಿಟ್ಟು, ನೀ ಒಂದು ಮಾಡೆಂದರೆ ನಾ ಒಂಬತ್ತು ಮಾಡಿ ಹುಡುಕಲು, ಅಲ್ಲಿ ನಿನ್ನ ಬಲ್ಲಾದೆ, ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ನನ್ನ ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ಅದು ಹ್ಯಾಂಗ ಬಲ್ಲಿ ಅಂದರೆ, ಮಾತಿಲೆ ಬಲ್ಲಲ್ಲಿ ನಿನ್ನ ವಾರ್ತಿ ಕೇಳಿ ಬಲ್ಲೆ, ನಿನ್ನ ಸನ್ನಿಧಿಗೆ ಹೋಗಿ ಬಲ್ಲೆ, ನಿನ್ನ ಕಂಡು ಬಲ್ಲೆ, ನಿನ್ನ ಕೂಡಿ ಬಲ್ಲೆ, ನಿನ್ನ ಸದ್ವಾಸನೆಗೊಂಡು ಬಲ್ಲೆ, ನಿನ್ನ ಸ್ನೇಹವ ಮಾಡಿ ಬಲ್ಲೆ, ನಿನ್ನ ಕೂಡುಂಡು ಬಲ್ಲೆ, ನಿನ್ನ ಸಮರಸಗೂಡಿ ಬಲ್ಲೆ, ನಿನ್ನ ಕೂಡಿದ ಪರಮಸುಖ ಪರಮ ಉಪಕಾರಕ್ಕೆ ಹೇಳಬಲ್ಲೆ, ವಿಸ್ತಾರವಾಗಿ ನಿನ್ನ ಹಾಡಿ ಬಲ್ಲೆ, ಒಂದೆ ಮಾಡಬಲ್ಲಲ್ಲಿ ಒಂಬತ್ತ ಮಾಡಬಲ್ಲೆ, ಈ ಒಂಬತ್ತುಮಾಡಿ ಬಲ್ಲಲ್ಲಿ ನಾ ಮೊದಲಾದ ಸರ್ವವು ನೀನೆಂಬುದು ಬಲ್ಲೆ. ಇನ್ನು ಎನ್ನ ಪ್ರಾಣ, ಮನ, ದೇಹ, ಭಾವ, ಅರವು, ಮನವು ನನ್ನ ಸರ್ವವು ನೀನಾದ ಮ್ಯಾಲೆ ನನಗೇನುಂಟು ? ಮತ್ರ್ಯಲೋಕದ ಮಹಾಗಣಂಗಳು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಎನಗೊಂದು ಹೆಸರಿಟ್ಟಿದ್ದರು. ಅದು ಹೆಸರು ನಿನಗೆ ಆಯಿತು. ಅದೇನು ಹೆಸರೆಂದರೆ ? ಸರ್ವವು ನೀನಾದಮ್ಯಾಲೆ, ಸತ್ಕರ್ಮ ದುಷ್ಕರ್ಮ ಎರಡು ನೀನೇ ಆದಿ. ನಾನು ಇನ್ನೇನು ಮಾಡಲಿ ಎಂದು ಆವ ಕರ್ಮವಿಲ್ಲದೆ ಸುಮ್ಮನೆ ಇರುತಿರಲು, ಅದ ಕಂಡು ಹೆಸರಿಟ್ಟಿದ್ದರು. ಈತ ಸತ್ಕರ್ಮಿಯೆಂಬುವೆ ಸತ್ಕರ್ಮಿ ಅಲ್ಲಾ, ಈತಗೆ ನಾವು ದುಷ್ಕರ್ಮಿಯೆಂಬುವೆ ದುಷ್ಕರ್ಮಿ ಅಲ್ಲಾ, ಪಾಪಿಯೆಂಬುವೆ ಪಾಪಿ ಅಲ್ಲಾ, ಪುಣ್ಯನೆಂಬುವೆ ಪುಣ್ಯನಲ್ಲಾ, ಆಸೆ ಅಲ್ಲಾ ನಿರಾಸೆ ಅಲ್ಲಾ, ಅಜ್ಞಾನಿ ಅಲ್ಲಾ ಸುಜ್ಞಾನಿ ಅಲ್ಲಾ, ಕಾಮಿ ಅಲ್ಲಾ ನಿಷ್ಕಾಮಿ ಅಲ್ಲಾ, ಕ್ರೋಧಿ ಅಲ್ಲಾ ನಿಷ್ಕ್ರೋಧಿ ಅಲ್ಲಾ, ಲೋಭಿ ಅಲ್ಲಾ ನಿರ್ಲೋಭಿ ಅಲ್ಲಾ, ಮೋಹಿ ಅಲ್ಲಾ ನಿರ್ಮೋಹಿ ಅಲ್ಲಾ, ಅಹಂಕಾರಿ ಅಲ್ಲಾ ನಿರಹಂಕಾರಿ ಅಲ್ಲಾ, ಮತ್ಸರಿ ಅಲ್ಲಾ ಮತ್ಸರರಹಿತನೇ ಅಲ್ಲಾ. ಯೋಗಿಯೇ ಅಲ್ಲಾ ಭೋಗಿಯೆ ಅಲ್ಲಾ. ತ್ಯಾಗಿಯೇ ಅಲ್ಲಾ ರಾಗಿಯೇ ಅಲ್ಲಾ, ಸುಖಿಯೇ ಅಲ್ಲಾ ದುಃಖಿಯೆ ಅಲ್ಲಾ, ಕ್ರಿಯಯುಕ್ತನೇ ಅಲ್ಲಾ ಕ್ರಿಯಾಬಾಹ್ಯನೇ ಅಲ್ಲಾ, ಭವಿಯೇ ಅಲ್ಲಾ ಭಕ್ತನೇ ಅಲ್ಲಾ, ಶಿವನೇ ಅಲ್ಲಾ ಜೀವನೇ ಅಲ್ಲಾ. ಅರುವೇ ಅಲ್ಲಾ ಮರವೆಯೇ ಅಲ್ಲಾ, ಸತ್ತವನೇ ಅಲ್ಲಾ ಬದುಕಿದವನೇ ಅಲ್ಲಾ, ಊರವನೇ ಅಲ್ಲಾ ಅಡವಿಯವನೇ ಅಲ್ಲಾ, ಗುರುವೇ ಅಲ್ಲಾ ಶಿಷ್ಯನೇ ಅಲ್ಲಾ, ಶಂಕರನೆ ಅಲ್ಲಾ ಕಿಂಕರನೇ ಅಲ್ಲಾ, ಹೇಳುವವನೇ ಅಲ್ಲಾ ಕೇಳುವವನೇ ಅಲ್ಲಾ, ಮೂಕನೇ ಅಲ್ಲಾ ಮಾತಾಡುವವನೇ ಅಲ್ಲಾ, ಹೆಣ್ಣೆ ಅಲ್ಲಾ ಗಂಡೇ ಅಲ್ಲಾ, ನಪುಂಸಕನೇ ಅಲ್ಲಾ ಅಂತರಪಿಶಾಚಿಯೇ ಅಲ್ಲಾ, ವಿಷಯಾತುರಿಯೇ ಅಲ್ಲಾ ವಿರಕ್ತನೇ ಅಲ್ಲ, ಇಹಲೋಕ ಇಚ್ಛಿಯೇ ಅಲ್ಲಾ ಪರಲೋಕ ಬಯಕಿಯೇ ಅಲ್ಲಾ. ಅದು ಎಂಬುವೆ ಅದು ಅಲ್ಲ, ಇದು ಎಂಬುವೆ ಇದು ಅಲ್ಲ. ಹಾಂಗೂ ಅಲ್ಲ ಹೀಂಗೂ ಅಲ್ಲ, ಅಂತೂ ಅಲ್ಲಾ ಇಂತೂ ಅಲ್ಲಾ, ಏನೂ ಅಲ್ಲಾ ಅಲ್ಲಾ ಅಲ್ಲಾ ಎಂದು ಹೆಸರಿಟ್ಟಿದ್ದರು ಎನಗೆ. ಇದು ಹೆಸರು ನಿನಗೆ ಆಯಿತು. ಅದೆಂತೆಂದೊಡೆ : ಅಲ್ಲಮಪ್ರಭು ಎಂಬುವ ನಾಮವು ನಿನಗೆ ಆಯಿತಲ್ಲದೆ ನನಗೆಲ್ಲಿಹದು ? ಅದು ಕಾರಣ ನನಗೆ ನಾಮವಿಲ್ಲಾ ರೂಪವಿಲ್ಲಾ ಕ್ರೀಯವಿಲ್ಲಾ ಬಯಕೆಯಿಲ್ಲಾ ಭವವಿಲ್ಲಾ ಆವುದೂ ಇಲ್ಲಾ. ಅದೇಕೆ ನೀ ಅಲ್ಲಾ ನಾ ಇಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು. ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು. ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ. ಅವರಿಗೆ ವಾರಗಳೇ ದೈವವಾಗಿಪ್ಪವು. ಇದಕ್ಕೆ ದೃಷ್ಟಾಂತ: ವಸಿಷ*ಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ ಲಗ್ನವ ನೋಡಿ ತೆಗೆದುಕೊಟ್ಟನು. ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ? ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು? ಸಾಕ್ಷಿ: 'ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ | ವಸಿಷಾ*ದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||' ಎಂದುದಾಗಿ, ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ. ಸಮ್ಮತ ಹೇಗೆಂದಡೆ : ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ, ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ, ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ, ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು ಸಮಸ್ತ ಕಾರ್ಯವ ಮಾಡುವುದು. ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು. ಅದು ಹೇಗೆಂದಡೆ : ನಕ್ಷತ್ರಫಲವ ಕೇಳಿಹೆನೆಂದಡೆ, ನಮ್ಮ ಗಣಂಗಳಾದ ರಾಜೇಂದ್ರಜೋಳ, ಚೇರಮರಾಯ, ಸೌಂದರ ಪಾಂಡ್ಯ ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ ತಮ್ಮ ಊರಿಗೆ ತಂದು ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು. ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು. ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ ? ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು ಅಂದುಂಟು ಇಂದುಂಟು. ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು ಇಂದು ಬಿತ್ತಿದರೆ ಬೆಳೆವವು. ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು. ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು. ಅಂದಿನ ಅಷ್ಟಾವರಣಸ್ವರೂಪ ಇಂದುಂಟು. ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು ದಯಮಾಡು ಸದ್ಗುರುವೆ. ಕೇಳೈ ಮಗನೆ : ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ ಶಿವಭಕ್ತಂಗೆ ಅಂದೇನು, ಇಂದೇನು ? ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ, ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ, ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ ಅಂದೇನೊ, ಇಂದೇನೊ ? ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ ಅಂದೇನೊ, ಇಂದೇನೊ ? ಪುರಾತರ ವಚನವಿಡಿದು ಆರಾಧಿಸುವವರಿಗೆ, ಆದಿ ಮಧ್ಯ ಅವಸಾನ ತಿಳಿದವರಿಗೆ, ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ. ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ. ಮೇರುಗುಣವನರಸುವುದೆ ಕಾಗೆಯಲ್ಲಿ? ಪರುಷಗುಣವನರಸುವುದೆ ಕಬ್ಬುನದಲ್ಲಿ? ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ, ಶಾಂತಕೂಡಲಸಂಗಮದೇವ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಗಣದಾಸಿ ವೀರಣ್ಣ
ನಿಜಗುಣ ಚೆಂದಿಮರಸರು ಕರಸ್ಥಲದ ನಾಗಿದೇವರೊಳಗಾದ ಎಲ್ಲಾ ವಿರಕ್ತರು ಆವ ಕ್ರಿಯೆಯಲ್ಲಿ ಆಚರಿಸಿ ಲಿಂಗೈಕ್ಯರಾದರೆಂದು ಕೆಟ್ಟು ನುಡಿವ ಭವಹೇತುಗಳು ನೀವು ಕೇಳಿರೆ. ಅವರು ತುಂಬಿದ ತೊರೆಯ ಸಂಭ್ರಮದಿಂದ ಹಾಯ್ದರು. ಶಕ್ತಿಯ ಮುಂದೆ ಹಾಲು ಬೋನ ಹಣ್ಣು ಕಜ್ಜಾಯವಿಕ್ಕಿರಲು ಆ ಶಕ್ತಿಯ ಮಾತನಾಡಿಸಿ ಉಂಡರು. ವಿಷವ ಪದಾರ್ಥವೆಂದು ಕೊಡಲು ಉಂಡು ದಕ್ಕಿಸಿಕೊಂಡರು. ಭಿಕ್ಷಕ್ಕೆ ಹೋದಲ್ಲಿ ಕಾಮುಕ ಸ್ತ್ರೀ ಬಂದು ಹಿಡಿದಡೆ ಅವರಂಗಳದಲ್ಲಿ ಅವಳ ಅನುಭವಿಸುವಾಗ ಆ ಸಮಯದಲ್ಲಿ ಮನೆಯೊಡೆಯ ಬಂದು ಕಡಿದರೆ ಖಂಡೆಯದ ಮೊನೆಗೆ ಬಯಲಾಗಿ ತೋರಿದರು. ಪಚ್ಚೆಯ ಕಡಗಮಂ ತಿರುಗಣಿಯ ಮಡುವಿಗಿಟ್ಟು ತಿರುಗಿ ಕರೆದುಕೊಂಡರು. ಕೆಂದೆಂಗಿನ ಎಳನೀರ ಭಾವಾರ್ಪಣವ ಮಾಡಿದರು. ಪಟ್ಟದರಸಿನ ರಾಣಿಯು ಪಲ್ಲಕ್ಕಿಯ ಮೇಲೆ ಹೋಗುವಲ್ಲಿ ಅವಳ ಬಟ್ಟಮೊಲೆವಿಡಿದು ಮುದ್ದಾಡಿ ಇರಿಸಿಕೊಂಡು ಬಯಲಾದರು. ದೇವೇಂದ್ರಭೋಗಮಂ ಬಿಟ್ಟರು. ತನು ನಿಲಿಸಿ ಪ್ರಾಣವ ಕೊಂಡೊಯ್ದರು. ಉಂಗುಷ*ದಲ್ಲಿ ಧರಿಸಿದ್ದ ಲಿಂಗಮಂ ತೆಗೆಯಲು ಆ ಲಿಂಗದ ಕೂಡೆ ಪ್ರಾಣವ ಕಳುಹಿದರು. ಮಿಡಿವಿಲ್ಲಿನೊಳಗೆ ಲಿಂಗವನೆಚ್ಚು ಆ ಲಿಂಗದೊಡನೆ ನಿರವಯಲಾದರು. ಉಪಾಧಿಕೆಯೊಡಲಾಸೆಯ ಸುಟ್ಟರು. ಚಳಿ ಮಳೆಯೆನ್ನದೆ ಅರಣ್ಯದಲ್ಲಿದ್ದರು. ಹಸಿದರೆ ಕೆಸರ ಮೆದ್ದರು. ಅವರು ಲಿಂಗಾಂಗರೂಢರಾಗಿ ಲಿಂಗದಲೈಕ್ಯರಾದರು. ನೀವು ಅವರಂತೆ ಲಿಂಗಾಂಗವ ತೋರಬೇಕು. ಅದಿಲ್ಲದಿದ್ದರೆ ಜ್ಞಾನಕ್ರಿಯಗಳಿಂದಿರಬೇಕು. ಅದಿಲ್ಲದಿದ್ದರೆ ಸುಮ್ಮನಿದ್ದು ಶಿವಶರಣರ ಮನಸಿಂಗೆ ಬರಬೇಕು. ಹೀಗಲ್ಲದೆ ಹೊಟ್ಟೆಯಕಿಚ್ಚಿನ ಬಾಯಿ ಬಡಕುತನವೇತಕಯ್ಯ ನಿಮಗೆ? ಆನೆ ಮದವೆದ್ದು ಸೋಮವೀಥಿಯ ಸೂರೆಮಾಡಿತೆಂದು ಆಡು ಮದವೆದ್ದು ಬೇಡಗೇರಿಗೆ ಹೋಗಿ ಕೊರಳ ಮುರಿಸಿಕೊಂಬಂತೆ ಅಂದಿನ ಕಾಲದ ಹನುಮ ಲಂಕೆಯ ದಾಂಟಿದನೆಂದು ಇಂದಿನ ಕಾಲದ ಕಪಿ ಹಳ್ಳವ ದಾಂಟಿದಂತೆ ಅರ್ತಿಯಿಂದ ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು ತೊತ್ತು ತಿಪ್ಪೆಯನೇರಿದಂತೆ ರಾಜಕುಮಾರ ತೇಜಿಯನೇರಿದನೆಂದು ರಜಕನ ಕುವರ ಕುನ್ನಿಯನೇರಿದಂತೆ ಬಲಮುರಿಯ ಶಂಖ ಧಿಗಿಲು ಭುಗಿಲೆಂದು ರುsುಂಕರಿಸಿತೆಂದು ಕೆರೆಯೊಳಗಣ ಗುಳ್ಳೆ ಕೀಚು ಕೀಚೆಂದಂತೆ ತಮ್ಮಿರವ ತಾವರಿಯದೆ ಬಾಳುವ ಕಾಲದಲ್ಲಿ ಮರಣದ ಮದ್ದಕೊಂಬ ಈ ಖೂಳ ಮಾನವರ ಎನಗೊಮ್ಮೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->