ಅಥವಾ

ಒಟ್ಟು 38 ಕಡೆಗಳಲ್ಲಿ , 26 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎಂದಡಾ ಮಾಯೆಯನು ಕರದಿಂ ತಂದೆ ಇಕ್ಕೆ ಜಾರಿ ಕೆಡುಹುವುದು. ಮಾಯೆ ಆರೂಢವೆಂಬವರ ಏಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ.
--------------
ಸಿದ್ಧರಾಮೇಶ್ವರ
ಕಾಯದ ಕಂಥೆಯ ಹಿಡಿದು ಅಕಾಯಚರಿತ್ರ ಪರಮನೆಂಬ ಜಂಗಮ ಬಂದು, ಕರ ಖರ್ಪರವನಳವಡಿಸಿಕೊಂಡು ಬ್ಥಿಕ್ಷೆಕ್ಕೆ ನಡೆಯಲು ಕೇಳಿದ. ಇಂದ್ರಿಯಂಗಳು ನಿಲಲಮ್ಮದೆ ಕಡೆಯ ಬಾಗಿಲಲ್ಲಿ ನಿಲಕಿ ನೋಡುತಿರ್ದಯ್ಯಾ ! ದಶೇಂದ್ರಿಯಂಗಳು ಪ್ರದಕ್ಷಿಣ ಬಂದು ತಮಗೆ ತಾವೇ ಅಂಜಿ ಓಡಿ[ದವು] ಕೇಟೇಶ್ವರಲಿಂಗನ ಶರಣನಿರವ ಕೇಳಿದಾಕ್ಷಣ.
--------------
ಬೊಕ್ಕಸದ ಚಿಕ್ಕಣ್ಣ
ಹರಿ ಹತ್ತು ಭವ ಬಂದ; ಸಿರಿಯಾಗಿ ತೊಳಲಿತೈ ಉರಗ ಖೇಚರರನ್ನು ಒರಸಿತಯ್ಯಾ! ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ಓಡಿದುದು ಮಾಯೆ.
--------------
ಸಿದ್ಧರಾಮೇಶ್ವರ
ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?
--------------
ಅಕ್ಕಮಹಾದೇವಿ
ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ. ಸಂಜೆಯ ಮಬ್ಬು ಅಂಜಿ ಓಡಿದುದ ಕಂಡೆ. ಕುಂಜರನ ಮರಿಗಳ ಕೋಳಿ ನುಂಗಿದುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತಿವೆ. ಕರಣಂಗಳು ಬೆಂದು ಉರಿವುತಿವೆ. ಮರವೆ ಎಂಬ ಮಾಯೆ ಬಂದು ಕಾಡುತಿವಳೆ. ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ, ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಾಡುವ ಭಕ್ತನ ವಿವರ: ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ, ಗುರುಲಿಂಗಜಂಗಮ ತ್ರಿವಿಧಮುಖವು ಒಂದೆಯೆಂದು ಪ್ರಮಾಳಿಸಿ, ಮಾಡುವ ದ್ರವ್ಯ ಕೇಡಿಲ್ಲದಂತೆ ಮಾಡುವುದು ಸದ್ಭಕ್ತಿಸ್ಥಲ. ಹೀಗಲ್ಲದೆ ಗುರುವಿನ ಆಢ್ಯಕ್ಕಂಜಿ, ಜಂಗಮದ ಸಮೂಹದ ವೆಗ್ಗಳವ ಕಂಡು ಅಂಜಿ ಮಾಡಿದಡೆ, ಭಕ್ತಿಗೂಣೆಯ, ದ್ರವ್ಯದ ಕೇಡು, ಸತ್ಯಕ್ಕೆ ಹೊರಗು ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ತಾಮಸಗುಣದಲ್ಲಿ ತಲ್ಲೀಯವಾದ ನಾಮದೇಹಿಗಳ ನಡೆ ಲಿಂಗದೊಳಡಗದು, ನುಡಿ ಲಿಂಗದೊಳಡಗದು, ನೋಟವು ಲಿಂಗದೊಳು ನಾಟದು, ಮಾಟ ಮಾಣದು. ಮಂಜಿನ ಮರೆಯಲ್ಲಿ ಮುಳುಗಿ, ಗಂಜಿಯ ಕಳೆದು ನಿರಂಜನದ ನಿಲುವೆಂದಡೆ ಅಂಜಿ ಅಲಸಿದನು ಅಪ್ಪಿಕೊಳ್ಳದೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿದ್ಥಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗÀಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿದ್ಥಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸಂಗದವರ ಕಂಡು ಅಂಜಿ ನಿಸ್ಸಂಗನಾದೆ, ಕಾಮಿಗಳ ಕಂಡು ಅಂಜಿ ನಿಃಕಾಮಿಯಾದೆ. ಕಾರುಣ್ಯಸಿಂಧುವೆ ಕೇಳಯ್ಯಾ, ಅನಾದಿಯಾಧಾರಕ್ಕೆ ಮೂಲ ನೀನೆ ಕಾಣಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಮಾತುಗಾರರ ಕಂಡು ಮೌನಿಯಾದೆ.
--------------
ಸಿದ್ಧರಾಮೇಶ್ವರ
ಅಯ್ಯಾ, ಎನ್ನ ನಡೆಯಲ್ಲಿ ನಿನ್ನನುಳಿದು ನಡೆದೆನಾದರೆ ಹುಳುಗೊಂಡ ಮುಂದೆ ನಿರುತವೆಂಬುದು. ನಿಮ್ಮವರ ನಿನ್ನ ವಾಕ್ಯವನು ಕೇಳಿ ಅಂಜಿ ನಡೆವೆನಯ್ಯಾ. ಅಯ್ಯಾ, ಎನ್ನ ನುಡಿಯಲ್ಲಿ ನಿನ್ನನುಳಿದು ನುಡಿದೆನಾದರೆ ಕೊಂದುಕೆಡಹುವರು ಮುಂದೆ ನಿರವಯದಲ್ಲೆಂಬುದು ನಿಮ್ಮವರ ನಿನ್ನ ವಾಕಯವಕೇಳಿ ಅಂಜಿ ನುಡಿವೆನಯ್ಯಾ. ಅಯ್ಯಾ, ಎನ್ನ ಕೂಟದಲ್ಲಿ ನಿನ್ನನುಳಿದು ಕೂಡಿದೆನಾದರೆ ಮುಂದೆ ನಾಯಕ ನರಕವೆಂಬುದು ನಿಮ್ಮವರ ನಿನ್ನ ವಾಕ್ಯವ ಕೇಳಿ ಅಂಜಿ ಕೂಡುವೆನಯ್ಯಾ. ಅಯ್ಯಾ, ಎನ್ನೊಳಹೊರಗೆ ನಾನರಿಯದೆ ನೀನೆಯಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆರೆಯಲ್ಲಿ ಕಂಡರೆ ಉದಕವೆಂಬೆ, ಮನೆಗೆ ಬಂದರೆ ಅಗ್ಘವಣಿಯೆಂಬೆ. ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ, ಮನೆಗೆ ಬಂದರೆ ಸಯದಾನವೆಂಬೆ ಮಾಡುವೆ ನೀಡುವೆ, ನೀಡುವಲ್ಲಿ ಬೋನವೆಂಬೆ. ಪ್ರಸಾದವೆಂದು ಅಂಜಿ ಎಂಜಲೆಂದರೆ ಅಂದೇ ವ್ರತಗೇಡಿ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಅಂಜದಿರಿ ಅಂಜದಿರಿ ಅನಿಮಿಷನಂತೆ ಬೇಡುವವ ನಾನಲ್ಲ. ನಿಮಗಾದಿಯ ಶಿಶು ನಾನೆ ಅಯ್ಯಾ. ಅದೆಂತೆಂದರೆ: ಅಂಜನೆಗೆ ಜಲಗರ ಬೆಳೆಯಿತೆಂದು ಅಂಜಿ ಹೇಮರಸವ ಕುಡಿದಲ್ಲಿ ಒಳಗಿದ್ದ ಕಪಿ ಶೃಂಗಾರವಾಗನೆ ? ಕೆಡುವುದೆ ಶಿವಪಿಂಡವು ? ಮರೆವುದೆ ಶಿವಜ್ಞಾನವು ? ಹಿಂದೆ ಏಳುನೂರು ವರುಷ ಮಂಡೋದರಿಯ ಬಸುರಲ್ಲಿದ್ದು ಉದಯಂಗೆಯ್ಯನೆ ಇಂದ್ರಜಿತು ? ನೀವು ಹೊಟ್ಟೆಗೆ ವಿಭೂತಿಯ ಪಟ್ಟವ ಕಟ್ಟಿದಂದೆ ಅನುಗ್ರಹವಾಯಿತ್ತು. ಕೂಡಲಚೆನ್ನಸಂಗಮದೇವಾ ನಿಮ್ಮ ತೊತ್ತಿನ ತೊತ್ತು ನಾನು ಚೆನ್ನಬಸವಣ್ಣನು.
--------------
ಚನ್ನಬಸವಣ್ಣ
ಇನ್ನಷ್ಟು ... -->