ಅಥವಾ

ಒಟ್ಟು 14 ಕಡೆಗಳಲ್ಲಿ , 11 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು ! ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು. ರಂಜನೆಗೊಳಗಪ್ಪುದೆ ? _ಆಗರದ ಸಂಚವನರಿಯರು ! ರಂಜಕನೂ ಅಲ್ಲ, ಭುಂಜಕನೂ ಅಲ್ಲ, ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !
--------------
ಅಲ್ಲಮಪ್ರಭುದೇವರು
ಅರಸು ಪ್ರಧಾನಿ ಗೌಡರಿಗೆ ಅಂಜದೆ, ಬಂಟಂಗೆ ಅಳುಕದೆ ಊರನಾಳಿ ದಾಳಿಹೋದರು ಚಿಲ್ಲಿಂಗಸಂಬಂದ್ಥಿಗಳು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತರು ಮನೆಗೆ ಬಂದಡೆ, ತಮ್ಮ ಮನೆಯಲ್ಲಿ ತಾವಿಪ್ಪಂತಿರಬೇಕು. ಅಂಜದೆ ಅಳುಕದೆ ನಡುಗುತ್ತಿರದೆ, ತಮ್ಮ ಶುದ್ಧಿ ತಾವಿರಬೇಕು. ತಾವು ಆಳ್ವವರು ಅಲಿನಂತಿದ್ದಡೆ, ಬಸವಪ್ರಿಯ ಕೂಡಲಚೆನ್ನಸಂಗ ಹಲ್ಲ ಕಳೆವ.
--------------
ಸಂಗಮೇಶ್ವರದ ಅಪ್ಪಣ್ಣ
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ``ಏಕೋ ದೇವೋ ನ ದ್ವಿತೀಯಃ'' ಎಂದು ಶುದ್ಧಶೈವನಿಷ್ಠಾಪರನಾಗಿ ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಂಜಲ ತಿಂಬರೆ ಅಂಜದೆ ಅಳುಕದೆ ತಿನಬೇಕು. ಅಂಜುತ ಅಳುಕುತ ತಿಂದರೆ ಅದು ನಂಜಿನಂತಕ್ಕು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ ಸದಮದದಲ್ಲಿ ಎಳೆವುತ್ತದೆ. ಆನೆಯ ಕೊಂಬು ಮುರಿದು, ಸುಂಡಿಲುಡುಗಿ, ಮದ ಸೋರಿ, ಗಜಘಟವಳಿದು ಹೋಯಿತ್ತು. ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು, ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು, ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು.
--------------
ಅರಿವಿನ ಮಾರಿತಂದೆ
ನಂಜು ಅಮೃತವಾದುದ ಕಂಡೆ. ಮಂಜೂರ ಸುಟ್ಟುದ ಕಂಡೆ. ಮಂಜಿನ ಮನೆ ಕರಗಿ ಕುರುಹಿಲ್ಲದೆ ನಿಷ್ಪತ್ತಿಯಾದುದ ಕಂಡೆ. ಬಂಜೆಯ ಬಸುರಲ್ಲಿ ನಂಜುಗೊರಳನೆಂಬ ಶಿಶುಹುಟ್ಟಿ ಅಂಜದೆ, ಅರುವತ್ತಾರು ಕೋಟಿ ದೈತ್ಯರ ಕೊಂದುದ ಕಂಡೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು. ನೀ ಹೊರೆವ ಜಗದ ಜೀವರಾಸಿಗಳೊಳಗೆ, ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ. ಅರ್ಚಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ ಬಾರದ ಭವಂಗಳಲ್ಲಿ ಎನ್ನ ಬರಿಸು, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು. ಆ ಕೆರೆಗೆ ಏರಿ ಮೂರು; ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ ! ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ ಆಕಾಶವೆಲ್ಲ ಜಲಮಯವಾಗಿತ್ತು ! ತುಂಬಿದ ಜಲವನುಂಡುಂಡು ಬಂದು ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ ಮರುಳುಗೊಂಡಾಡುತ್ತಿದ್ದಾರೆ ನೋಡಾ. ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ ಅಂಜದೆ ಪಾಕವ ಮಾಡಿಕೊಂಡು ಉಂಡು, ಭಂಡವ ಮಾರುತ್ತಿರ್ಪರು ನೋಡಾ. ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು ಗುಹೇಶ್ವರನನರಿಯದ ಭವಭಾರಕರೆಲ್ಲರು.
--------------
ಅಲ್ಲಮಪ್ರಭುದೇವರು
ತತ್ವವಾರಾರರಲಿ ಮುತ್ತಿಪ್ಪ ಸೀಮೆಯನು ಹೊತ್ತಿಪ್ಪುದದು ಒಂದು ಬಿಂಬ ನೋಡಾ. ಮೂರರಂ ಮುಕ್ತಿಯ ಆರರಂ ಸತ್ವದಲಿ ಮೀರಿಪ್ಪುದದು ಭಕ್ತಿಶಕ್ತಿ ನೋಡಾ. ಕ್ರಿಯೆ ಮೂರನು ಮೀರಿ ನಿಃಕ್ರಿಯೆ ಮನೆಯಾಗಿ ಸ್ವಾನುಭಾವವು ಶುದ್ಧಜ್ಯೋಯಾಗಿ ರಂಜನೆಯ ಭೇದದಲಿ ರಂಜಿಸುವ ಪ್ರಕಟದ ಕಂಜಕನ್ನಿಕೆಯ ಸುಮಧ್ಯದಲ್ಲಿ ಅಂಜದೆ ಆನಂದ ಕುಂಜರನ ಮಸ್ತಕದ ರಂಜಿಸುವ ಶುದ್ಧ ಪ್ರಭಾ ಕೋಟೆಯ ಅಜಲೋಕದಾ ಸುದ್ದಿಜಗವ ಮೂರರಲೊಪ್ಪಿ ನಿಜದಿಂದ ಕಂಡೆ ಕಪಿಲಸಿದ್ಧಮಲ್ಲೇಶ್ವರನ
--------------
ಸಿದ್ಧರಾಮೇಶ್ವರ
ಒಂದು ಹುತ್ತಕ್ಕೆ ಒಂಬತ್ತು ಬಾಯಿ, ಅಲ್ಲಿಪ್ಪ ಸರ್ಪನೊಂದೆ. ತಪ್ಪದೆ ಹತ್ತು ಬಾಯಲು ತಲೆಯ ಒಡೆವುದು. ಅಂಜಿ ನೋಡಿದವರಿಗೆ ಸರ್ಪನಾಗಿಪ್ಪುದು. ಅಂಜದೆ ನೋಡಿದವರಿಗೆ ಒಂದೆ ಸರ್ಪನಾಗಿರುವುದು. ಇದು ಕಾರಣವಾಗಿ, ಸಂಜೆ ಮುಂಜಾನೆ ಎಂಬ ಎರಡಳಿದ ಶರಣಂಗೆ ಒಂದಲ್ಲದೆ ಎರಡುಂಟೆ? ಮೂರು ಲಿಂಗ, ಆರು ಲಿಂಗ, ಮೂವತ್ತಾರು ಲಿಂಗ, ಬೇರೆ ಇನ್ನೂರು ಹದಿನಾರು ಲಿಂಗ ಉಂಟೆಂದು ಸಂತೆಯೊಳಗೆ ಕುಳಿತುಕೊಂಡು ಸಾರುತಿಪ್ಪರು. ಇದ ನಾನರಿಯೆ, ನಾನರಿಯೆ. ಹೇಳುವುದಕ್ಕೆ ಎನ್ನ ದೂರ ಕೇಳಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ, ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ. ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ ಕೂಡಲಸಂಗಮದೇವನಲ್ಲದೆ 163
--------------
ಬಸವಣ್ಣ
ಈ ರಿತುಕಾಲ ಹುಟ್ಟಿ ಮುಟ್ಟಿ ಕೆಡುವಡೆ ಒಳಗಡೆ ಬೆಳೆಯಲೇಕಯ್ಯಾ! ಹೋ! ವಾ! ಹೋ! ಅಯ್ಯಾ! ನೀ ಮುಟ್ಟಿ ಕೆಡುವಡೆ ಒಳಗೆ ಬೆಳೆಯಲೇಕಯ್ಯಾ. ಈ ಬಟ್ಟೆ ಹುಸಿಬಟ್ಟೆ. ಕಪಿಲಸಿದ್ಧಮ್ಲನಾಥಯ್ಯನ ಅಂಜದೆ ನೆನೆಯಿರೊ, ನೆನೆಯಿರೊ! ಹೋ! ವಾ! ಹೋ! ಅಯ್ಯಾ!
--------------
ಸಿದ್ಧರಾಮೇಶ್ವರ
-->