ಅಥವಾ

ಒಟ್ಟು 25 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ನಿರಾಕಾರ ಪರವಸ್ತು[ತಾನೆ] ತನ್ನ ವಿನೋದಾರ್ಥಕಾರಣ ನಿಜಜ್ಞಾನವಾಗಿ ತೋರಿತ್ತು ನೋಡಾ. ಆ ಮಹಾಜ್ಞಾನ ಚಿತ್ತೇ ಅಂಗಸ್ಥಲ ಲಿಂಗಸ್ಥಲವೆಂದಾಯಿತ್ತು ನೋಡಾ. ಅಂಗವೇ ಶರಣ; ಲಿಂಗವೇ ಶಿವ. ಅಂಗಲಿಂಗದ ಸಂಗಸಮರಸ ತಾನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ ಪದ ಲಿಂಗವೆಂದರುಹಿ ತ್ವಂ ಪದ ಅಂಗವೆಂದರುಹಿ ಅಸಿ ಪದ ಪ್ರಾಣವೆಂದರುಹಿ ಅಂಗವೇ ಲಿಂಗ, ಲಿಂಗವೇ ಪ್ರಾಣವೆಂದು ಶ್ರೀಗುರು ಇಷ್ಟಲಿಂಗವ ಕೊಟ್ಟು, ದೃಷ್ಟಲಿಂಗವ ತೋರಿದ ಬಳಿಕ ``ತತ್ತ್ವಮಸಿ ಪದ ನಿಮ್ಮ ಶರಣರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಬಾರದಿರು ಬ್ರಹ್ಮನ ಅಂಡದಲ್ಲಿ, ಬೆಳೆಯದಿರು ವಿಷ್ಣುವಿನ ಕುಕ್ಷಿಯಲ್ಲಿ, ಸಾಯದಿರು ರುದ್ರನ ಹೊಡೆಗಿಚ್ಚಿನಲ್ಲಿ. ಹುಟ್ಟಿದ ಅಂಡವನೊಡೆ, ಬೆಳೆದ ಕುಕ್ಷಿಯ ಕುಕ್ಕು, ಹೊಯ್ವ ಹೊಡೆಗಿಚ್ಚ ಕೆಡಿಸು. ಮೂರುಬಟ್ಟೆಯ ಮುದಿಡು, ಒಂದರಲ್ಲಿ ನಿಂದು ನೋಡು. ಆ ಒಂದರಲ್ಲಿ ಸಂದಿಲ್ಲದ ಅಂಗವೇ ನೀನಾಗು ಸದಾಶಿವಮೂರ್ತಿಲಿಂಗಕ್ಕೆ.
--------------
ಅರಿವಿನ ಮಾರಿತಂದೆ
ಅಂಗದ ಮೇಲೆ ಲಿಂಗವುಂಟೆಂದು ಆಗವೆಲ್ಲ ಬೆಬ್ಬನೆ ಬೆರೆತು ಬೀಗಿ ನುಡಿವರು. ಅಂಗವೇ ಲಿಂಗವನರಿಯದು ಲಿಂಗವೇ ಅಂಗವನರಿಯದು. ಅಂಗವಾವುದು, ಲಿಂಗವಾವುದು, ಸಂಗಸಂಬಂಧವಾವುದೆಂದೆರಿಯರು. ಅಂಗಗುಣವಳಿದು ಆಚಾರವಳಪಟ್ಟು ನಿಂದಂಗವೆ ಅಂಗ. ಲಿಂಗವಾವುದೆನಲು, ಪಾಷಾಣಗುಣವಿಡಿದ ಭ್ರಮೆಯಳಿದು, ಭಾವವಳಿದು, ಲಿಂಗಸಂಬಂಧವುಳಿದುದೆ [ಲಿಂಗ] ಲಿಂಗಸಂಬಂಧವಾವುದೆನಲು ಸಂಸಾರವಿಡಿದು ವರ್ತಿಸುವ ಭ್ರಾಂತವಳಿದು ಜ್ಞಾನಸಂಬಂಧವನರಿಯದಿದ್ದಡೆ, ಅಂಗ ಬಿದ್ದು, ಲಿಂಗ ಉಳಿದು, ಸಂಬಂಧಚೈತನ್ಯ ಹಿಂಗಿಹೋದಲ್ಲಿ ಭಂಗ ಹೊದ್ದಿತ್ತು, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ತಂದೆಯ ಸಾಮಥ್ರ್ಯದಿಂದ ಹುಟ್ಟಿದ ಮಗನಿಗೆ ಆ ತಂದೆಯ ಸ್ವರೂಪಲ್ಲದೆ ಬೇರೊಂದೂ ಸ್ವರೂಪೆಂದು ತಿಳಿಯಲುಂಟೇ ಅಯ್ಯ?. ಶಿವ ತಾನೆ ತನ್ನ ಸಾಮಥ್ರ್ಯವೆ ಒಂದೆರಡಾಗಿ, ಗುರುವೆಂದು ಶಿಷ್ಯನೆಂದು ಆಯಿತ್ತೆಂದಡೆ, ಆ ಗುರುವಿಂಗೂ ಶಿಷ್ಯಂಗೂ ಬೇರಿಟ್ಟು ನುಡಿಯಲಾಗದಯ್ಯ. ಗುರುವಿನ ಅಂಗವೇ ಶಿಷ್ಯ; ಶಿಷ್ಯನ ಅಂಗವೇ ಗುರು. ಆ ಗುರುವಿನ ಪ್ರಾಣವೇ ಶಿಷ್ಯ; ಶಿಷ್ಯನ ಪ್ರಾಣವೇ ಗುರು. ಈ ಗುರುಶಿಷ್ಯಸಂಬಂಧ ಒಂದಾದ ಬಳಿಕ ಗುರು ಶಿಷ್ಯರೆಂದು ಬೇರಿಟ್ಟು ನುಡಿವ ಭ್ರಷ್ಟರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಲಿಂಗವೆಂಬರು, ಲಿಂಗ ಅಂಗವೆಂಬರು, ಅದು ಹುಸಿ ಕಾಣಿರೊ, ಅಯ್ಯಾ ! ಅಂಗವೇ ಲಿಂಗವಾದರೆ ಕಾಯದಲ್ಲಿ ಕಳವಳವುಂಟೆ ? ಲಿಂಗವೆ ಅಂಗವಾದರೆ ಪ್ರಳಯಕ್ಕೊಳಗಹುದೆ ? ಅಂಗ ಲಿಂಗವಲ್ಲ, ಲಿಂಗ ಅಂಗವಲ್ಲ. ಅಂಗ-ಲಿಂಗ ಸಂಬಂಧವಳಿದಲ್ಲಿ ಪ್ರಾಣಲಿಂಗಸಂಬಂಧಿ, ಪ್ರಾಣ ನಿಃಪ್ರಾಣವಾದಲ್ಲಿ ಲಿಂಗರೂಪು, ರೂಪು ನಾಸ್ತಿಯಾದಂದು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಅಂಗವೇ ಲಿಂಗವಾಗಿಹೆನೆಂಬವನ ಭಾವ ಇದರಲ್ಲೇ ನಿಶ್ಚಯ ನೋಡಾ, ಮನವೆ. ಸ್ತುತಿ ನಿಂದೆಗಳಲ್ಲಿ ಹರ್ಷರೋಷಗಳಿಲ್ಲದಿರಬೇಕು. ನೀಚಾನೀಚ ಗುಣವ ನೋಡದೆ ನಮ್ಮ ಭಾಷಾವಂತನಾಗಬೇಕು. ಸರ್ವ ಜೀವಿಗಳ ತನ್ನಂತೆ ತಿಳಿದು ನೋಡಬೇಕು. ಸಂಶಯಾಸಂಶಯವಳಿದು ನಿಶ್ಚಿಂತನಾಗಬೇಕು. ಆಕಾಶದ ಬೆಳಗಿನ ಬೆಳಗ ನೋಡಿ ಬೆಳಗುಮಯನಾಗಬೇಕು ನೋಡಾ. ಎಲೆ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
--------------
ಸಿದ್ಧರಾಮೇಶ್ವರ
ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು. ಶಿವಭಕ್ತನಾದ ಬಳಿಕ ಪರಸತಿ, ಪರನಿಂದೆ, ಪರಧನವ ಹಿಡಿಯದಿರಬೇಕು. ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ ಪ್ರಸಾದವ ಮುಟ್ಟದಿರಬೇಕು. ಅಂಗಲಿಂಗವು ಸಮರಸವಾಗಿರಬೇಕು. ದಾರಿದ್ರ್ಯವು ಬಂದರೆ ಅಂಗವೇ ನಿನ್ನದೆಂದರಿಯಬೇಕು. ಸಂಪತ್ತು ಬಂದರೆ ನಿನ್ನದೆಂದು ಭಾವಿಸಬೇಕು. ಲಿಂಗಬಾಹ್ಯರಿಗೆ ನರಕ ತಪ್ಪದು. ಇಷ್ಟಲಿಂಗಮವಿಶ್ವಸ್ಯ ಅನ್ಯಲಿಂಗಮುಪಾಸತೇ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾಚರೇತ್ ಇದು ಕಾರಣ, ಪ್ರಾಣಲಿಂಗದ ಭಕ್ತಿಯ ಮರೆದು ಯಮಪಟ್ಟಣಕ್ಕೆ ಹೋಹರೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಗುರುವಾದಡೂ ಲಿಂಗವ ಪೂಜಿಸಬೇಕು. ಲಿಂಗವಾದಡೂ ದೇವತ್ವವಿರಬೇಕು. ಜಂಗಮವಾದಡೂ ಲಿಂಗವಿಲ್ಲದೆ ಪ್ರಮಾಣವಲ್ಲ. ಆದಿಗೆ ಆಧಾರವಿಲ್ಲದೆ ಜಗವೇನೂ ಇಲ್ಲ. ಅರಿದೆನೆಂದಡೂ ಅಂಗವೇ ಲಿಂಗವಾಗಿರಬೇಕು. ಕಲಿದೇವರದೇವಯ್ಯನ ಅರಿವುದಕ್ಕೆ ಇದೇ ಮಾರ್ಗ, ಚಂದಯ್ಯ.
--------------
ಮಡಿವಾಳ ಮಾಚಿದೇವ
ಮರಕ್ಕೂ ಕೊಂಬಿಗೂ ಭೇದವುಂಟೇ ಅಯ್ಯ? ಅಂಗಕ್ಕೂ ಅವಯವಗಳಿಗೂ ಭೇದವುಂಟೇ ಅಯ್ಯ? ಅಂಗದ ಮೇಲೆ ಲಿಂಗವನಿರಿಸಬಹುದು, ಅವಯವಂಗಳ ಮೇಲೆ ಲಿಂಗನಿರಿಸಬಾರದೇಕೆಂಬಿರಯ್ಯ. ಅಂಗವೇ ಶುದ್ಧ, ಅವಯವಂಗಳು ಅಶುದ್ಧವೇ ಮರುಳುಗಳಿರಾ? ಮುಚ್ಚಿಕೊಂಡಿರಿ ಭೋ. ಲಿಂಗ ಪ್ರಸಾದವ ಕೊಂಬ ಶರಣಂಗೆ ಕೈ, ಬಾಯಿ, ಅವಯವಂಗಳೊಳಗೆಲ್ಲವು ಲಿಂಗವೇ ತುಂಬಿಪ್ಪುದು ಕಾಣಿಭೋ. ಈ ಶರಣ ಲಿಂಗದ ಸಮರಸವನಿವರೆತ್ತ ಬಲ್ಲರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವೇ ಆಧಾರ, ಲಿಂಗವೆ ಜೀವ. ಈ ಅಂಗಲಿಂಗದಿಂದವೆ ಸ್ವರ. ಲಿಂಗವು ಮಹಾಬೇಳಗಾಗಲಿಕ್ಕಾಗಿ, ಅಶ್ವಥರಾಮ ಹಗಲು ಬಯಲು.
--------------
ನಿರಾಲಯ ನಿಜಗುರುಶಾಂತೇಶ್ವರ
ಗಂಧಘ್ರಾಣ ಆಚಾರಲಿಂಗಸಹಿತ ಲಿಂಗಾರ್ಪಿತ, ಜಿಹ್ವೆರಸ ಗುರುಲಿಂಗಸಹಿತ ಲಿಂಗರ್ಪಿತ, ನೇತ್ರರೂಪು ಶಿವಲಿಂಗಸಹಿತ ಲಿಂಗಾರ್ಪಿತ, ತ್ವಕ್ಕುಸ್ವರುಶನ ಜಂಗಮಲಿಂಗಸಹಿತ ಲಿಂಗಾರ್ಪಿತ, ಶ್ರೋತ್ರಶಬ್ದ ಪ್ರಸಾದಲಿಂಗಸಹಿತ ಲಿಂಗಾರ್ಪಿತ, ಆತ್ಮತೃಪ್ತಿ ಮಹಾಲಿಂಗಸಹಿತ ಲಿಂಗಾರ್ಪಿತ. ಇದಕ್ಕೆ ಶ್ರುತಿ: ಲಿಂಗದೃಷ್ಟ್ಯಾ ನಿರೀಕ್ಷರ ಸ್ಯಾತ್ ಲಿಂಗಹಸ್ತೇನ ಸ್ಪರ್ಶನಂ ಲಿಂಗಜಿಹ್ವಾರಸಾಸ್ವಾದೋ ಲಿಂಗಘ್ರಾಣೇನ ಘ್ರಾತಿತೇ ಲಿಂಗಶ್ರೋತ್ರೇಣ ಶ್ರವಣಂ ಲಿಂಗಾಸ್ಯೇನೋಕ್ತಿರುಚ್ಯತೇ ಲಿಂಗೇನಾನುಗತಂ ಸರ್ವಂ ಇತ್ಯೇತತ್ಸಹ ಭಾಜನಂ ಇಂತೆಂದುದಾಗಿ, ಷಡುಸ್ಥಲಬ್ರಹ್ಮ ಲಿಂಗಾಂಗದಿಂ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗ [ಅ]ಗವನೊಳಕೊಂಡಿತ್ತಾಗಿ ಅಂಗವೇ ಲಿಂಗವಾಯಿತ್ತು ನೋಡಾ.
--------------
ಆದಯ್ಯ
ಜಂಗಮವೆ ಪರವೆಂದರಿದಡೇನು, ಆ ಜಂಗಮದಂಗವಲ್ಲವೆ ಲಿಂಗ ? ಆ ಲಿಂಗಚೈತನ್ಯದರಿವೆಲ್ಲವು ಜಂಗಮವಲ್ಲವೆ ? ಅಂಗವಿಲ್ಲದ ಜೀವಕ್ಕೆ, ಆತ್ಮನಿಲ್ಲದ ಅಂಗಕ್ಕೆ, ಸರ್ವಭೋಗದ ಸುಖವುಂಟೆ ? ಮಣ್ಣಿಲ್ಲದೆ ಮರನುಂಟೆ ? ಮರನಿಲ್ಲದೆ ಹಣ್ಣುಂಟೆ? ಹಣ್ಣಿಲ್ಲದೆ ಸ್ವಾದವುಂಟೆ ? ಹೀಂಗರಿವುದಕ್ಕೆ ಕ್ರಮ: ಅಂಗವೇ ಮಣ್ಣು, ಲಿಂಗವೇ ಮರನು, ಜಂಗಮವೇ ಫಲವು, ಪ್ರಸಾದವೆ ರುಚಿಯು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ
--------------
ಚನ್ನಬಸವಣ್ಣ
ಕಾಯದ ಕೈಮುಟ್ಟಿ ಲಿಂಗಕ್ಕರ್ಪಿಸಿದೆನಂದಡೆ ಅನರ್ಪಿತ, ಅಂಗದೊಳಗೆ ಲಿಂಗ ತನ್ಮಯನಾಗಿ ಪ್ರಾಣಾನುಪ್ರಪಂಚ ಮರೆದಿರಲು, ಆ ಅಂಗವೇ ಲಿಂಗಕ್ಕರ್ಪಿತವಾಗಿ ಪ್ರಸಾದಕಾಯವಪ್ಪುದು. ಇಂತಾದ ಬಳಿಕ ಅಂಗ ಸೋಂಕಿಲ್ಲದೆ ಲಿಂಗ ಸೋಂಕಾಗಿರ್ಪುದಾಗಿ ಅರಿದು ಮರೆದು ಅರ್ಪಿತ ಅನರ್ಪಿತವೆಂಬ ಭ್ರಾಂತು ಸೂತಕವಿಲ್ಲ. ನಿಭ್ರಾಂತ, ನಿಸ್ಸಂದೇಹಿ, ಸೌರಾಷ್ಟ್ರರ ಸೋಮೇಶ್ವರ ಲಿಂಗವಲ್ಲದನ್ನ ಸೊಗಸದ ಪ್ರಸಾದಿ.
--------------
ಆದಯ್ಯ
ಇನ್ನಷ್ಟು ... -->