ಅಥವಾ

ಒಟ್ಟು 13 ಕಡೆಗಳಲ್ಲಿ , 5 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಧ ಪುಷ್ಪದಂತೆ, ಚಂದನ ಲೀಲೆಯಂತೆ ಕಂಜ ಕಿರಣದಂತೆ, ಬಿಂದು ಸಸಿಯಂತೆ ಹಿಂಗದಿರಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉರಿದು ಬೇವದು ಉರಿಯೋ, ಮರನೋ ? ಹರಿದು ಕೊರೆವದು ನೆಲನೋ, ನೀರೋ ? ನೆಲ ನೀರಿನಂತಾದುದು ಅಂಗಲಿಂಗಸಂಬಂಧ. ಉರಿ ಮರನಂತಾದುದು ಪ್ರಾಣಲಿಂಗಸಂಬಂಧ. ಈ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲವಳಿಯಂತೆ, ಮಂಜಿನ ರಂಜನೆಯ ಜಂಝಾಮಾರುತನಂತೆ, ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನ ರೂಪಳಿದು ನೀರಾದಂತೆ ಅಂಗಲಿಂಗಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಘಟ ಬಯಲಂತೆ, ಪಟ ವಾಯುವಂತೆ ಸ್ಫುಟಿತ ಸುಟಿಯಂತೆ ಘಟಿತವಾಗಿರಬೇಕು, ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಅಂಗಲಿಂಗಸಂಬಂಧವಾಗಬೇಕೆಂಬ ಭಂಗಿತರ ಮಾತ ಕೇಳಲಾಗದು. ಅಂಗಲಿಂಗಸಂಬಂಧ ಕಾರಣವೇನು ಮನ ಲಿಂಗಸಂಬಂಧವಾಗದನ್ನಕ್ಕ ? ಮನವು ಮಹದಲ್ಲಿ ನಿಂದ ಬಳಿಕ ಲಿಂಗಸಂಬಂಧವೇನು ಹೇಳಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅಂಗಲಿಂಗ ಸಂಬಂಧವಾದಡೆ ವೇದನೆ ಅಂಗದ ನೋವಿನಂತಿರಬೇಕು. ಹೇಮದಂಗ ಅಗ್ನಿಯ ಸಂಗದಲ್ಲಿದ್ದು ರೂಪಳಿದು ನೀರಾದಂತೆ, ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಶಾಖೆಯ ಸುತ್ತಿದ ಲತೆಯಂತೆ, ನೇಕೆಯಲ್ಲಿದ್ದ ಶಿಶುವಿನಂತೆ, ಲೆಪ್ಪದಲ್ಲಿದ್ದ ಬಣ್ಣದಂತೆ ಅಂಗಲಿಂಗಸಂಬಂಧ ಹೀಗಾಗಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಫಲ ತರುವಿನಂತೆ, ತಿಲ ಸಾರದಂತೆ ಮಧುರ ದಂಡದಂತೆ, ಶರಧಿಯಲ್ಲಿರುವ ಲಫುವಿನಂತೆ ಭಿನ್ನಭಾವವಿಲ್ಲದಿರಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಉರಿದು ಬೇವುದು ಉರಿಯೋ, ಮರನೋ? ಹರಿದು ಕೊರೆವುದು ನೆಲನೋ, ನೀರೊ? ನೆಲ ನೀರಂತಾದುದು ಅಂಗಲಿಂಗಸಂಬಂಧ. ಉರಿ ಮರೆದಂತಾದುದು ಪ್ರಾಣಲಿಂಗಸಂಬಂಧ. ಇಂತೀ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲದ ವಳಿಯಂತೆ, ಮಂಜಿನ ರಂಜೆಯ ಝಂಝಾಮಾರುತನಂತೆ. ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುಳಿ ನುಂಗಿದ ಸ್ಥಾಣುವಿನಂತೆ, ಬಲವ ನುಂಗಿದ ರತಿಯಂತೆ ಗತಿಯ ನುಂಗಿದ ನಾದದಂತೆ ರೂಪು ಭಾವಕ್ಕೆ ಎರವಿಲ್ಲದಂತಾಗಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕರ್ದಮ ಕಮಲದಂತೆ, ವೇಣು ದ್ವಾರದಂತೆ ನೇಣು ಬಂಧದಂತೆ ಬಿಡುವಿಲ್ಲದಿರಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ ಸತ್ತು ಹುಟ್ಟಿ ಮಾಡಿದ ಪಾಪಂಗಳಿಗೆ ಕಡೆ ಇಲ್ಲವು ನೋಡಾ ! ಒಬ್ಬ ಶಿವನ ಅಂಗವ ಕಂಡೆನಾಗಿ ಹರಿದುಹೋಹವು ನೋಡಾ ! ಆ ಶಿವನ ತನು ಮನದ ಕೊನೆಯಲ್ಲಿ ನಿರಾಲಂಬಲಿಂಗವಿಪ್ಪದು ನೋಡಾ ! ಆ ಲಿಂಗವು ಒಂದೇ ಮೂರುತೆರನಾಯಿತ್ತು. ಅದು ಹೇಗೆಂದಡೆ : ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಗುರುವಿಡಿದು ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು. ಲಿಂಗವಿಡಿದು ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು. ಜಂಗಮವಿಡಿದು ಶರಣ-ಐಕ್ಯನೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದಾಗಿ ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟಲಿಂಗವಿಡಿದು ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು. ಪ್ರಾಣಲಿಂಗವಿಡಿದು ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು. ಭಾವಲಿಂಗವಿಡಿದು ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ: ಧ್ಯಾನ ಧಾರಣ ಸಮಾಧಿಯೆಂದು ಮೂರುತೆರನಾಯಿತ್ತು. ಈ ಮೂರನೊಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಧ್ಯಾನವಿಡಿದು ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು. ಧಾರಣವಿಡಿದು ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು. ಸಮಾಧಿವಿಡಿದು ಪರಾಶಕ್ತಿ-ಚಿಚ್ಫಕ್ತಿಯೆಂದು ಎರಡುತೆರನಾಯಿತ್ತು. ಇದಕ್ಕೆ ಭಕ್ತಿ ಆರುತೆರನಾಯಿತ್ತು. ಅದು ಹೇಗೆಂದಡೆ: ಸದ್ಭಕ್ತಿ, ನೈಷಿ*ಕಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿಯೆಂದು ಆರುತೆರನಾಯಿತ್ತು. ಒಬ್ಬ ನಿಃಕಲಶಿವನು ಒಂದೇ ಮೂರುತೆರನಾಯಿತ್ತು. ಮೂರೇ ಆರುತೆರನಾಯಿತ್ತು. ಆರೇ ಮೂವತ್ತಾರುತೆರನಾಯಿತ್ತು. ಮೂವತ್ತಾರೇ ಇನ್ನೂರಹದಿನಾರುತೆರನಾಯಿತ್ತು. ಇನ್ನೂರಹದಿನಾರಾದ ಶಿವನು ಮೂವತ್ತಾರಾದ. ಮೂರಾದ ಶಿವನು ಆರಾದ. ಆರಾದ ಶಿವನು ಮೂರಾದ, ಮೂರಾದ ಶಿವನು ಒಂದಾದ, ಒಂದಾದ ಶಿವನು ಅಂಗಲಿಂಗಸಂಬಂಧ ಗರ್ಭೀಕರಿಸಿಕೊಂಡು ತಾನು ತಾನಾಗಿರ್ಪನು ನೋಡಾ. ಇಂತಪ್ಪ ನಿಃಕಲಶಿವನ ಮಹಾಮಹಿಮೆ ಕಂಡು ನೆನೆದ ನೆನಹಿಂಗೆ ತೃಪ್ತಿಯಾಯಿತ್ತು ಕಾಣಾ, ಅಂದವಾಗಿ ಎನ್ನ ಸಲಹಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->