ಅಥವಾ

ಒಟ್ಟು 529 ಕಡೆಗಳಲ್ಲಿ , 75 ವಚನಕಾರರು , 429 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಬ್ರಹ್ಮವೇ ಬಸವಣ್ಣನೆನಗೆ. ಆ ಬಸವಣ್ಣನೆ ನವಲಿಂಗಸ್ವರೂಪವಾಗಿಪ್ಪನಯ್ಯ. ಅದು ಹೇಗೆಂದಡೆ- ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವವೆಂದು ಇಂದ್ರಿಯಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸಿಪ್ಪನಯ್ಯ. ಅದು ಹೇಗೆಂದಡೆ- ನಾಸಿಕದಲ್ಲಿ ಅಂಗಲಿಂಗಸಂಗ ಚತುರ್ವಿಂಶತಿ ಸ್ವರೂಪನೊಳಕೊಂಡು ಆಚಾರಲಿಂಗವಾಗಿ ಎನ್ನ ನಾಸಿಕದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಜಿಹ್ವೆಯಲ್ಲಿ ಅಂಗಲಿಂಗಸಂಗ ಅಷ್ಟಾದಶ ಸ್ವರೂಪನೊಳಕೊಂಡು ಗುರುಲಿಂಗವಾಗಿ ಎನ್ನ ಜಿಹ್ವೆಯಲ್ಲಿ ಇಂಬುಗೊಂಡನಯ್ಯ ಬಸವಣ್ಣ. ನೇತ್ರದಲ್ಲಿ ಅಂಗಲಿಂಗಸಂಗ ಷೋಡಶ ಸ್ವರೂಪನೊಳಕೊಂಡು ಶಿವಲಿಂಗವಾಗಿ ಎನ್ನ ನೇತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ತ್ವಕ್ಕಿನಲ್ಲಿ ಅಂಗಲಿಂಗಸಂಗ ಸಪ್ತಾದಶ ಸ್ವರೂಪನೊಳಕೊಂಡು ಜಂಗಮಲಿಂಗವಾಗಿ ಎನ್ನ ತ್ವಕ್ಕಿನಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಶ್ರೋತ್ರದಲ್ಲಿ ಅಂಗಲಿಂಗಸಂಗ ತ್ರೆ ೈದಶ ಸ್ವರೂಪನೊಳಕೊಂಡು ಪ್ರಸಾದಲಿಂಗವಾಗಿ ಎನ್ನ ಶ್ರೋತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಹೃದಯದಲ್ಲಿ ಅಂಗಲಿಂಗಸಂಗ ತ್ರಯೋದಶ ಸ್ವರೂಪವನೊಳಕೊಂಡು ಮಹಾಲಿಂಗವಾಗಿ ಎನ್ನ ಹೃದಯದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ. ಇಂತಿವನರಿದು ಅರ್ಪಿಸಿದೆನಾಗಿ ಎನ್ನ ತನುವಿನಲ್ಲಿ ಶುದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಮನದಲ್ಲಿ ಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಪ್ರಾಣದಲ್ಲಿ ಪ್ರಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಶುದ್ಧಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಮುಳುಗಿದ್ದ ಭೇದವನರಿದು ಬೋಳಬಸವೇಶ್ವರನ ಅನುಭಾವ ಸಂಪರ್ಕದಿಂದ ಸಿದ್ಧೇಶ್ವರನ ಘನಪ್ರಕಾಶ ಸಾಧ್ಯವಾಯಿತ್ತಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ದಲಿಂಗಪ್ರಭುವಿನಲ್ಲಿ ಎರಡರಿಯದಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಮುನ್ನ ಮಾಡಿದ ದೇಹ ನಿರ್ವಯಲಾದಡೆ, ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ? ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು. ಇವೆಲ್ಲ ಭಾವಸಂಕಲ್ಪವಿಕಲ್ಪವು. ಅಂಗ ಲಿಂಗವೆಂಬುದು ಪಳಮಾತು. `ಲಿಂಗಮಧ್ಯೇ ಜಗತ್ಸರ್ವಂ' ಎಂಬುದು ಅಖಂಡಲಿಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ: ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ. ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ. ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ. ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು ಈ ಐದು ವಾಯುವಿನ ಅಂಶ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ. ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
--------------
ಚನ್ನಬಸವಣ್ಣ
ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ, ಜ್ಞಾನಕ್ರೀಯನೊಳಕೊಂಡು ನಿಂದ ಜಂಗಮವೆ ಅಂಗ ಪ್ರಾಣವಾದ, ಶರಣರನೊಳಕೊಂಡು ಚಿದ್ಘನದೊಳಗೆ ಅವಿರಳೈಕ್ಯವಾದ ಎನ್ನ ಅಜಗಣ್ಣತಂದೆಯನರಿದು ಶರಣೆಂಬಾತ ನೀನಾರು ಹೇಳಯ್ಯಾ ? || 31 ||
--------------
ಮುಕ್ತಾಯಕ್ಕ
ಸುಜಾÕನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ ಅಂಗ ಮನ ಪ್ರಾಣವೆಂದರಿದು, ಕಸಗಳೆದು ವಿಷಯ ಪದಾರ್ಥವನು, ಸುಶೀಲ ಸಾವಧಾನದಿಂದರ್ಪಿಸಿ ಅಸಮಪ್ರಸಾದವಕೊಂಡು, ಪರಮಾನಂದಸುಖಿಮುಖಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹುಸಿಯಿಂದ ಶಿವನ ಮುಕುಟವ ಕಂಡೆನೆಂದು ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ. ಮುಳ್ಳಿನಲ್ಲಿ ತೊನಚಿಯನಿದು ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ. ಸೋಮಸುತನ ಮಗ ಶೂದ್ರಕವೀರಂಗೆ ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು. ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ ಅನಂಗಮುದ್ರೆಯಾಯಿತ್ತು. ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ. ಇಂತಿವರನಂತರು ಕೆಟ್ಟರು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು.
--------------
ಆದಯ್ಯ
ಅಂಗೈಯಲ್ಲಿ ಪೂಜಿಸಿದ ಫಲ ಲಿಂಗಯ್ಯ ಕೊಡನೆಂದು ಮರುಗರಾ ಮನವೆ. ಅಂಗೈಯಲ್ಲಿ ಫಲ ಅಂಗ ಲಿಂಗ ನೋಡಿದಂತೆ ನೋಡಾ ಮನವೆ. ಅಂಗೈಯ ಫಲ ಲಿಂಗಯ್ಯನಾಗರೆ ಪೂಜಿಸುವರೆ ಪ್ರಮಥರು? ನೋಡಾ ಮನವೆ. ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ ಪೂಜಿಸಿ ಬದುಕು ಮನವೆ.
--------------
ಸಿದ್ಧರಾಮೇಶ್ವರ
ಐದು ತತ್ವ, ಐದು ಭೂತ, ಐದು ಅಂಗ, ಐದು ಲಿಂಗ, ಐದು ಸುಗಂಧ, ಐದರಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳು ಕೂಡಿ ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ? ಕಾಯವುಳಿದು ಕೈಲಾಸಕ್ಕೆ ಹೋಗಬೇಕೆಂಬುದು, ಜೀವನ ಉಪಾದ್ಥಿಕೆ. ಘಟಮಟಪಟನ್ಯಾಯ ಇವೆಲ್ಲವು ಬಯಲೊಳಗು. ಅರ್ಕೇಶ್ವರಲಿಂಗವನರಿದು ಕೂಡಿದ ಮತ್ತೆ, ಅಂಗ ಸಿಕ್ಕುವುದಕ್ಕೆ ಠಾವಿಲ್ಲ.
--------------
ಮಧುವಯ್ಯ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು. ಡುಂಡುಕ ಹಸಿದು ಭೇಕನ ನುಂಗಿತ್ತು. ಭೇಕ ಸಾಯದೆ ಡುಂಡುಕನ ಕರುಳ ತಿಂದು, ಡುಂಡುಕ ಸತ್ತು ಒಣಗಲಾಗಿ, ಅಂಗ ಬಿಗಿದು ಭೇಕನಲ್ಲಿಯೆ ಸತ್ತಿತ್ತು. ಎನ್ನ ಬಾವಿ ಕೆಟ್ಟಿತ್ತು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
--------------
ಅರಿವಿನ ಮಾರಿತಂದೆ
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು. ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು. ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು. ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->