ಅಥವಾ

ಒಟ್ಟು 34 ಕಡೆಗಳಲ್ಲಿ , 22 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ, ಆ ಜಂಗಮದರಿವು ಅಪ್ಪುವಾಗಿ, ಆ ಸುಭೂಮಿಯ ಬೀಜದ ಮೇಲೆ ಸುರಿಯೆ, ಆ ಭೂಮಿ ಶೈತ್ಯವಾಗಿ, ಆ ಬೀಜದ ಒಳಗು ಒಡೆದು ಅಂಕುರ ತಲೆದೋರಿ, ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು. ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಹಾಕಿ ಉಭಯದ ಮಧ್ಯದಲ್ಲಿ ನಿಂದ ಸವಿಸಾರವ ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು.
--------------
ಅರಿವಿನ ಮಾರಿತಂದೆ
ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ. ಅದರಂಕುರ ಮೂರು, ಫಲವಿಪ್ಪತ್ತೆ ೈದು ನೋಡಾ. ಪ್ರಥಮಾಂಕುರ ಶಿವ, ದ್ವಿತೀಯಾಂಕುರ ಸದಾಶಿವ, ಮೂರನೆ ಅಂಕುರ ಮಹೇಶ್ವರ. ಫಲವಿಪ್ಪತ್ತೆ ೈದು, ಪಂಚವಿಂಶತಿ ಲೀಲಾವಿಗ್ರಹ ನೋಡಾ. ಫಲವಿಪ್ಪತ್ತೆ ೈದು, ಅಂಕುರ ಮೂರನೊಳಕೊಂಡು ನಿಂದ ನಿರ್ವಯಲ ಪ್ರಾಣಲಿಂಗವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಲಿಂಗವನರಿತು ಅಂಗ ಲಯವಾಗಬೇಕು. ಅಂಕುರ ತೋರಿ ಬೀಜ ನಷ್ಟವಾದಂತೆ, ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ, ಅರ್ಕೇಶ್ವರಲಿಂಗವ ಅರಿದ ಗೊತ್ತಿನ ಒಲುಮೆ.
--------------
ಮಧುವಯ್ಯ
ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು. ಸಸಿಯಿಲ್ಲದ ಫಲವುಂಟೆ ಅಯ್ಯಾ ? ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ ಗೊತ್ತಾವುದು ಹೇಳಯ್ಯಾ ? ಅದು ಮುಟ್ಟಿದ ಮುಟ್ಟಿನಲ್ಲಿ ಒದಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ, ಕುಸುಮ, ಫಲ ಮೈದೋರದಂತೆ, ಕಾಷ್ಠದೊಳಗಣ ಅಗ್ನಿ ಉರಿ ಉಷ್ಣದೋರದಂತೆ, ಪತಂಗನ ಕರದೊಳಗಡಗಿಪ್ಪ ಮರೀಚಿ ಪ್ರವಾಹಿಸದಂತೆ, ಬಿಂದುವಿನೊಳಡಗಿಪ್ಪ ನಾದ ದನಿದೋರದಂತೆ, ಪಿಂಡ ಬ್ರಹ್ಮಾಂಡಗಳ ಕೂಡಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗವನಾರೂ ಬೆರಸಬಾರದಯ್ಯಾ.
--------------
ಆದಯ್ಯ
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ, ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ. ತಿರುಳು ಅಂಕುರ ನಾಸ್ತಿಯಾದಲ್ಲಿ ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು. ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು. ದಗ್ಧವಾದ ಪಟ ಸಾಭ್ರಕ್ಕೊದಗದು. ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು. ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ. ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ. ಆ ವಸ್ತು ಜಗದ ಹಿತಾರ್ಥ ಪೀಠಸಂಬಂಧಿಯಾಗಿ `ಏಕಮೂರ್ತಿಸ್ತ್ರಯೋ ಭಾಗಾಃ' ಆಗಲಾಗಿ ವರ್ತುಳ ಗುರುವಾಗಿ, ಗೋಮುಖ ಜಂಗಮವಾಗಿ ಗೋಳಕಾಕಾರಮೂರ್ತಿ ಲಿಂಗವಾದ ಕಾರಣ, ಲಿಂಗವಾಯಿತ್ತು. ಇಂತೀ ತ್ರಿವಿಧದೊಳಗೆ ಒಂದ ಮೀರಿ ಒಂದ ಕಂಡೆಹೆನೆಂದಡೆ ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ. ಅಂಕುರ ಬೀಜವಿರೆ, ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ ಅಂಕುರಕ್ಕೆ ದೃಷ್ಟವಿಲ್ಲ. ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು.
--------------
ಚನ್ನಬಸವಣ್ಣ
ಭುವನಾಪಸಂಪರ್ಕಶೂನ್ಯವಾದಲ್ಲಿ ಬೀಜದಲ್ಲಿ ಅಂಕುರ ಪಲ್ಲೈಸದು. ತನುಜ್ಞಾನಸಂಗಶೂನ್ಯಶರಣಂಗೆ ಸರ್ವಾಚಾರ ಪಲ್ಲೈಸದು. ಮರಹನಳಿದುಳಿದ ಗುರುನಿರಂಜನ ಚನ್ನಬಸವಲಿಂಗ ಸಮರಸಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಿತ್ತು ಅಂಕುರವ ನುಂಗಿಪ್ಪಾಗ ಅಂಕುರ ಆ ಬಿತ್ತ ತನ್ನಯ ಸಂಕೇತದಲ್ಲಿ ಇರಿಸಿಕೊಂಡು ಇಹಾಗೆ ಉಭಯದ ಭೇದ ಎಲ್ಲಿ ಅಡಗಿತ್ತು ಹೇಳಿರಣ್ಣಾ. ಅರುಹಿಸಿಕೊಂಬ ಕುರುಹು; ಆ ಅರುಹಿನಲ್ಲಿ ಕುರುಹಿನ ಕಳೆ ನಿಂದ ತೆರಪಾವುದು? ಅರುಹಿಸಿಕೊಂಬ ಅರಿವು ತೋರಿಸಿಕೊಂಬ ಕುರುಹಿನ ಕಳೆ ಬೇರೊಂದೆಡೆ ತೆರಪಿಲ್ಲ, ಅದು ತಾನೆ ನಿಶ್ಚಯ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು. ಅಂಕುರ ಬೀಜವೆಂದು ಹೆಸರು ಎರಡಾದಡೇನು ? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ ಬಸವಣ್ಣನೆ ಶಿವನು, ಶಿವನೆ ಬಸವಣ್ಣನು. ಬಸವಣ್ಣ ಶಿವನೆಂಬ ಹೆಸರೆರಡಾದಡೇನು ? ಅಖಂಡವಸ್ತು ಒಂದೇ ಆದಕಾರಣ, ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ ದೇವರದೇವಾ.
--------------
ಷಣ್ಮುಖಸ್ವಾಮಿ
ಪೃಥ್ವಿಯಲ್ಲಿ ಅಪ್ಪುಸಾರವಿಲ್ಲದಿರೆ ಬೀಜವ ತಳಿಯಲಾಗಿ, ಪ್ರತ್ಯಕ್ಷ ಅಂಕುರ ದೃಷ್ಟವಪ್ಪುದೆ? ಶ್ರದ್ಧೆ ಸನ್ಮಾರ್ಗ ಭಕ್ತಿ ವಿಶ್ವಾಸವಿಲ್ಲದಿದ್ದಡೆ ಸದ್ಭಕ್ತನಪ್ಪನೆ ? ಸದ್ಭಕ್ತನಪ್ಪನೆ ? ಇಂತೀ ದೃಷ್ಟ ಸಿದ್ಧಾಂತದಿಂದ ತಪ್ಪು ಕುಳಿತ ಮತ್ತೆ , ದೃಷ್ಟಾಂತರವ ಇದಿರ ಕೈಯಲ್ಲಿ ಕೇಳಲುಂಟೆ ? ನುಂಗಬಾರದ ಘೃತ, ಉಗುಳಬಾರದ ಪ್ರಿಯ, ಬಿಡಬಾರದ ಭಕ್ತಿ , ವಿಶ್ವಾಸವಿಲ್ಲದ ಆ ಭಕ್ತಿಪೂಜೆ, ಘನಸಿಂಧುವಿನಲ್ಲಿ ನಾನಾ ವರ್ಣವ ಕದಡಿದಂತಾಯಿತ್ತು . ಇದನಿನ್ನಾರಿಗುಸುರುವೆ ! ನಿಃಕಳಂಕ ಕೂಡಲಚೆನ್ನಸಂಗಮದೇವಾ, ನೀನೆ ಬಲ್ಲೆ .
--------------
ಹಡಪದ ರೇಚಣ್ಣ
ಸರ್ವಾವಧಾನಿಯ ಇರವು, ಅನಲ ಅನಿಲನ ತೆರದಂತೆ, ಅಂಕುರ ಅಪ್ಪುವಿನ ತೆರದಂತೆ, ಸಾರ ಸವಿಯ ತೆರದಂತೆ, ಆಲಿ ನೂಲಿನ ತೆರದಂತೆ, ಭಾವ ಲಿಂಗೈಕ್ಯವು, ಸ್ವಾನುಭಾವಾತ್ಮಕ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದಗಳೆಂಬ ನಾಲ್ಕು ಶಾಖೆಗಳು, ಅನಂತವೈ ಉಪವೇದಂಗಳೆಂಬ ಉಪಶಾಖೆಗಳು, ಶಾಸ್ತ್ರಂಗಳೆಂಬ ಅಂಕುರ ಪಲ್ಲವ, ಪುರಾಣಂಗಳೆಂಬ ಪುಷ್ಪ ಆಗಮಂಗಳೆಂಬ ಕಾಯಿ ಬಲಿದು, ಶ್ರೀ ಪಂಚಾಕ್ಷರಿ ಎಂಬ ಮಧುರಪಣ್ಣುಗಳು. ಅಗಣಿತಫಲವನೂ ಅನಂತಕಾಲ ಭೋಗಿಸಲು ಮತ್ತಂ ಜಿಹ್ವೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->