ಅಥವಾ

ಒಟ್ಟು 128 ಕಡೆಗಳಲ್ಲಿ , 50 ವಚನಕಾರರು , 121 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಜಗದಗಲದಲಿ ಹಬ್ಬಿ ಲಿವುತೈದುದೆ ಮಾಯೆ. ಅದ ಕೆಡಿಸಿ ಎನ್ನ ಹರುಷಿತನ ಮಾಡಿ ಉರುತರ ಕೈವಲ್ಯ ಪದವನಿತ್ತಾ ಗುರು ನೀನು ಕಪಿಲಸಿದ್ಧಮಲ್ಲಿಕಾರ್ಜುನ ದೇವ ಗುರುವಾದಿಲೈ.
--------------
ಸಿದ್ಧರಾಮೇಶ್ವರ
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು. ಮಾತಿಂಗೆ ವೇಧಿಸಿದ ಮನ ರಾಟಾಳದ ಕುಂಭದಂತೆ. ಅದ ನೇತಿಗಳೆದು ನಿಂದಲ್ಲಿ ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಒಡೆಯರು ಭಕ್ತರಿಗೆ ಸಲುವ ಸಹಪ:ಕ್ತಿಯಲ್ಲಿ ಗುರುವೆಂದು, ಅರಸೆಂದು, ತನ್ನ ಪರಿಸ್ಪಂದದವರೆಂದು, ರಸದ್ರವ್ಯವನೆಸಕದಿಂದ ನೀಡಿದೊಡೆ, ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ ; ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ. ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ, ಶಿವಗಣಪ:ಕ್ತಿಯ ನಡುವೆ ತಾ ಕುಳ್ಳಿರ್ದು ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಎನ್ನ ಮನೋಮಧ್ಯದೊಳಗೊಂದು ಅನುಮಾನ ಅಂಕುರದೋರಿತು ಕೇಳಾ ಎಲೆ ತಂಗಿ. ಲಿಂಗಾಣತಿಯಿಂ ಬಂದ ಪದಾರ್ಥವ ಮನವೊಪ್ಪಿ ಲಿಂಗಕ್ಕೆ ಕೊಟ್ಟುದೇ ಪ್ರಸಾದ. ಆ ಪ್ರಸಾದದೊಳಗಿದ್ದುದೇ ರಸ. ಹೊರಗಿದ್ದುದೇ ಹಿಪ್ಪೆ. ಮತ್ತಂ ಒಳಗಿದ್ದುದೇ ಮಧುರ ಹೊರ ಹೊರಗಿದ್ದುದೇ ಕಠಿಣ. ಕರುಣಿಸಿಕೊಂಬುದೇ ಸುಖಿತ. ಅದ ನುಡಿಯಲಂಜಿ ನಡುಗುತಿಪ್ಪೆನಯ್ಯ. ಅದೇನು ಕಾರಣ ನಡುಗುತಿಪ್ಪೆನೆಂದರೆ ಪ್ರಸಾದವೇ ಪರತತ್ವವೆಂದು ಪ್ರಮಥಗಣಂಗಳ ಸಮ್ಯಜ್ಞಾನದ ನುಡಿ ಉಲಿಯುತ್ತಿದೆ. ಇದು ಕಾರಣ- ಪ್ರಸಾದವೆಂಬ ಪರತತ್ವದಲ್ಲಿ ಜ್ಞಾನ ಅಜ್ಞಾನಗಳೆರಡೂ ಹುದುಗಿಪ್ಪವೆಂದು ನಾನು ನುಡಿಯಲಮ್ಮೆ. ತಥಾಪಿ ನುಡಿದರೆ, ಎನಗೆ ಮತ್ರ್ಯಲೋಕದ ಮಣಿಹವೆಂದಿಗೂ ತೀರದೆಂದು ಕಠಿಣ ಪದಾರ್ಥವ ಲಿಂಗಕ್ಕೆ ಕೊಟ್ಟು ಕೊಳಲಮ್ಮೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎನ್ನ ಆದಿಯನೆತ್ತುವೆನೆ ? ಅದ ನೀನೆ ಬಲ್ಲೆ, ಘನಗಂಬ್ಥೀರದಲ್ಲಿ ಹುಟ್ಟಿದನೆಂಬುದ. ಎನ್ನ ಅನಾದಿಯನೆತ್ತಿ ಹೇಳಿ ತೋರುವೆನೆ ? ಅದು ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದ. ಬಸವಣ್ಣನ ಕಾರಣ ಮತ್ರ್ಯಕ್ಕೆ ಬಂದಡೆ ಒಡಲುಪಾದ್ಥಿಯೆಂಬುದಿಲ್ಲ ನೋಡಾ. ಒಡಲೆ ಬಸವಣ್ಣ, ಪ್ರಾಣವೆ ಚೆನ್ನಬಸವಣ್ಣ, ಎನ್ನ ಮಹಾಜ್ಞಾನವೇ ನೀವು ನೋಡಾ. ಇಂತು ಎರಡಿಲ್ಲದಿಪ್ಪಲ್ಲಿ, ನುಡಿಯಡಗಿದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ. ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ. ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ ! ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ ! ಅದು ಕಾಡಿನಲ್ಲಿ ಉರಿಯದು, ಕಿಚ್ಚಿನಲ್ಲಿ ಬೇಯದು. ಸತ್ತ ಪರಿಯ ನೋಡಾ ! ಕೂಡಲಚೆನ್ನಸಂಗನೆಂಬ ಚಿಂತೆ ಸತ್ತಿತಲ್ಲಾ.
--------------
ಚನ್ನಬಸವಣ್ಣ
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ಮುನ್ನ ಮುನ್ನ-ಶಶಿರವಿಗಳಿಲ್ಲದ ಮುನ್ನ, ಬ್ರಹ್ಮ-ವಿಷ್ಣಾದ್ವಿಗಳುದ್ಭವಿಸದ ಮುನ್ನ ಮುನ್ನ, ಮೂರ್ತಿಗಳೆಂಟು ಒಂದಾಗದ ಮುನ್ನ, ತನುಮಧ್ಯವಳಯದಲ್ಲಿ ಸಕಲ ಬ್ರಹ್ಮಾಂಡ ಜಲಮಯವಾಗಿಲ್ಲಿ ಭಕ್ತಿಕಾರಣ ಬಸವನವಗ್ರಹಿಸಿಪಲ್ಲಿ ಅದೆತ್ತದ್ದೆ? ಅದ ನೀನೆ ಬಲ್ಲೆಯಯ್ಯಾ! ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕುರುಹುಗೆಟ್ಟ ನಿಶ್ಚಂತನು.
--------------
ಸಿದ್ಧರಾಮೇಶ್ವರ
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ. ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು, ಆ ಶಿಶು ತಂಗಿಯನೊಡಗೂಡಿ ಪಂಚಮುಖವುಳ್ಳಾತನ ಪಡೆದು, ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು. ಆ ಮೂವರು ಮೂರುಪುರವ ನಿರ್ಮಿಸಿದರು. ಆ ಮೂರುಪುರ ಈರೈದು ನಾಲ್ಕು ದೇಶ, ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು. ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ ತಾನಳಿದುಳಿದು ಇರ್ಪಾತನೇ ಶರಣ. ಅಂಗಲಿಂಗಸಂಬಂದ್ಥಿ ಸರ್ವಾಂಗಲಿಂಗಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ, ಇಹಪರಂಗಳಿಗೆ ಒಳಗಾದ ವಿಚಾರವೆಂತೆಂದಡೆ ಸತ್ಯಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ ಸತ್ಯನಡೆ ನಡೆಯದೆ, ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ ವರ್ತಿಸುವುದ ಕಂಡು ಅದ ಪರಿಹರಿಸದೆ, ದ್ರವ್ಯದಭಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು ಹುಟ್ಟಂಧಕನೆಂಬೆನಯ್ಯಾ. ಅಂತಪ್ಪ ಪರಮಪಾತಕಂಗೆ ಜಪವ ಹೇಳಿ, ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವ ಕೊಟ್ಟು, ಷಟ್‍ಸ್ಥಲವ ಹೇಳುವನೊಬ್ಬ ಜಂಗಮ ಕೆಟ್ಟಗಣ್ಣವನೆಂಬೆನಯ್ಯಾ. ಇಂತೀ ಅಧಮ ಗುರುಶಿಷ್ಯಜಂಗಮಕ್ಕೆ ಭವಬಂಧನ ತಪ್ಪದು ನೋಡಾ, ಶಂಭುಕೇಶ್ವರದೇವಾ, ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ.
--------------
ಸತ್ಯಕ್ಕ
ಜ ಎಂದಲ್ಲಿ ಜನನ ನಾಸ್ತಿಯಾಗಿ, ಗ ಎಂದಲ್ಲಿ ಗಮನ ನಾಸ್ತಿಯಾಗಿ, ಮ ಎಂದಲ್ಲಿ ಮರಣ ನಾಸ್ತಿಯಾಗಿ, ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ, ಕೂಟಕ್ಕೆ ನೆರೆದ ಅಗುಳಾಸೆಯ ವಿಹಂಗನಂತಾಗಬೇಡ. ತ್ರಿವಿಧಾಕ್ಷರವ ತ್ರಿಗುಣದಲ್ಲಿ ಇರಿಸಿ ತ್ರಿಗುಣಕ್ಕೆ ಹೊರಗಾಗು. ತ್ರಿಗುಣರಹಿತ ಸಗುಣಭರಿತನಾಗು. ಅದ ನಿನ್ನ ನೀನರಿ, ಲಿಂಗ ಜಂಗಮವೆ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪರಂಜ್ಯೋತಿ ಗುರುವಿನಿಂದ ತನಗೆ ಲಿಂಗಾನುಗ್ರಹ ಪ್ರಣವ ಪಂಚಾಕ್ಷರಿ ಅಳವಟ್ಟಿರಲು, ಅದ ಕಂಡು ಮತ್ತೊಬ್ಬ ಗುರುಕರುಣವಾದಾತ ಬರಲು, ಆ ಲಿಂಗಾನುಗ್ರಹ ಪ್ರಣವಪಂಚಾಕ್ಷರಿಯನಾತಂಗೀಯಲು ಆತಂಗೆ ತಾನು ಗುರುವೆನಬಹುದೆ ? ಎನ್ನಬಾರದು. ಆತನೂ ತಾನೂ ಆ ಪರಂಜ್ಯೋತಿಯ ಆಣತಿವಿಡಿದವರಾಗಿ, ಇಬ್ಬರೂ ದಾಯಾದರು. ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ, ಗುರುವಿಂಗೆಯೂ ಶಿಷ್ಯಂಗೆಯೂ ಲಿಂಗಕ್ಕೂ ಭೇದವಿಲ್ಲ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ತರ್ವಾಯಕ್ಕೆ ಸಿಕ್ಕಿದಲ್ಲಿ ವೇದಾಂತಿಯಾದ. ಆಗುಚೇಗೆಯನಾಡೆಹೆನೆಂದು ಆಗಮಿಕನಾದ. ಹಿಂದುಮುಂದಣ ನಿಂದ ಹರಟೆಯ ಹೇಳಿಹೆನೆಂದು ಪುರಾಣಿಕನಾದ. ಇಂತಿವು ಪಂಚವಿಂಶತಿತತ್ವದ ಶಾಖೆಯಲ್ಲಿ ಅದ ಜಾಳಿಸುವ ವಾರ್ದಿಕ ಪರ್ಣ. ಇಂತಿವ ನೇತಿಗಳೆದು ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->