ಅಥವಾ

ಒಟ್ಟು 103 ಕಡೆಗಳಲ್ಲಿ , 36 ವಚನಕಾರರು , 82 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುನ್ನಲಿ ಕಂಡ ವಸ್ತು ಮುನ್ನವೆ ಅಡಗಿತ್ತು. ಮನ್ನಣೆಯ ಶೂಲಕ್ಕೆ ಮುನ್ನವೆ ಹೋದರು. ಚೆನ್ನಬಸವನೆಂಬ ಪರಿಪೂರ್ಣಜ್ಞಾನಿ ಪ್ರಭಾಸಂಪೂಜ್ಯನಾದ. ಕನ್ನೆಯರ ಕೂಟವಳಿಯಿತ್ತು ಚೆನ್ನಬಸವಣ್ಣನಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಇಷ್ಟಲಿಂಗಸಂಬಂದ್ಥಿಗಳು ಭಕ್ತಿಸ್ಥಲವನರಿಯರು. ಪ್ರಾಣಲಿಂಗಸಂಬಂದ್ಥಿಗಳು ಮಾಹೇಶ್ವರಸ್ಥಲವನರಿಯರು. ಪ್ರಸಾದಲಿಂಗಸಂಬಂದ್ಥಿಗಳು ಪ್ರಾಣಲಿಂಗಸ್ಥಲವನರಿಯರು. ಶರಣಸ್ಥಲಭರಿತರು ಪ್ರಾಣಲಿಂಗಸಂಬಂಧವನರಿಯರು. ಐಕ್ಯ ನಿರ್ಲೇಪವಾದಲ್ಲಿ ಶರಣಸ್ಥಲ ನಿಂದಿತ್ತು. ಇಂತೀ ಐದು ಸ್ಥಲವ ಆರೋಪಿಸಿ, ಇದಿರಿಟ್ಟು ಕೂಡಿದಲ್ಲಿ ಆರುಸ್ಥಲವಾಯಿತ್ತು. ಆರುಸ್ಥಲ ವೇದ್ಥಿಸಿ ನಿಂದಲ್ಲಿ, ನೀ ನಾನೆಂಬ ಭಾವ, ಎಲ್ಲಿ ಅಡಗಿತ್ತು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಣ್ಣೆ ಕೆಚ್ಚಲ ನುಂಗಿ, ಕಣ್ಣು ತಲೆಯ ನುಂಗಿ, ತುದಿ ಬೇರಿನಲ್ಲಿ ಅಡಗಿತ್ತು. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಅಡಗಿತ್ತು.
--------------
ಬಿಬ್ಬಿ ಬಾಚಯ್ಯ
ಗುದ ಘ್ರಾಣ ಚಿತ್ತ ಗಂಧ ಪೃಥ್ವಿ ಬ್ರಹ್ಮ ಆ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಧಾತಾ ಧಾತ್ರೀಚ ಗಂಧಂ ಚ ಚಿತ್ತಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮಣಿ ಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಗಕ್ಕೆ ಲಿಂಗ ಸಂಬಂಧ. ಆತ್ಮಂಗೆ ಅರಿವು ಸಂಬಂಧ. ಅರಿವಿಂಗೆ ನಿಶ್ಚಯ ಸಂಬಂಧ. ನಿಶ್ಚಯ ನಿಜದಲ್ಲಿ ನಿಂದಲ್ಲಿ ಇಷ್ಟಲಿಂಗದ ತೃಷೆ ಅಡಗಿತ್ತು, ಏಣಾಂಕಧರ ಸೋಮೇಶ್ವರಲಿಂಗವನರಿಯಲಾಗಿ.
--------------
ಬಿಬ್ಬಿ ಬಾಚಯ್ಯ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಸವಣ್ಣ ಬಸವಣ್ಣ ಭಕ್ತಿ ಬೀಜ ನಷ್ಟ. ಬಸವಣ್ಣ ಬಸವಣ್ಣ ಬಸವಣ್ಣ ಮುಕ್ತಿಬೀಜ ನಷ್ಟ. ಬಸವಣ್ಣ ಮೋಕ್ಷವೆಂಬುದು ಮುನ್ನವೆ ಅಡಗಿತ್ತು. ಬಸವಣ್ಣ ತೋರದೆ ಬೀರದೆ ಹೋದೆಹೆನೆಂಬೆ, ಮಹಾಜ್ಞಾನಿ ಬಸವಣ್ಣಾ, ನೀನೆಲ್ಲಿಯಡಗಿದೆಯೊ ಕಪಿಲಸಿದ್ಧಮಲ್ಲಿನಾಥ ಬಸವಾ?
--------------
ಸಿದ್ಧರಾಮೇಶ್ವರ
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು ! ಆ ನಾಮವನೆಯ್ದಿ ಕುಳವಾಯಿತ್ತು, ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ, ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ, ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ, ಚಿತ್ತದಿಂದಾಯಿತ್ತು ಅಹಂಕಾರ. ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ, ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ, ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ, ಜೀವನ ಗುಣ ಸಂದಾಗ ಶರಣ ಸ್ಥಲ ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು, ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ, ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ, ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು ! ಇಂತು_ಷಡಂಗವಡಗಿದ ಪರಿ ಎಂತೆಂದಡೆ: ``ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ'' _ ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಿದ್ಯೆ ಅವಿದ್ಯೆಯಾದಲ್ಲಿ, ಆ ಅರಿವ ಹೊದ್ದುವ ಬಂಧವಾವುದು ? ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ? ಅದು ಒಡೆದ ಕುಂಭದ ನೀರಿನ ನೆಳಲಿನಂತೆ, ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು, ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ. ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ, ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ.
--------------
ಮಾದಾರ ಧೂಳಯ್ಯ
ಗುರುಲಿಂಗವು ಬಂದೆನ್ನ ಕರಸ್ಥಲಕೈದಿದ ಮೇಲೆ, ಸಿರಿಸಂಪತ್ತು ಸಂಭ್ರಮವಾಯಿತ್ತು ; ಸಕಲ ಗಣತಿಂತಿಣಿ ನೆರೆಯಿತ್ತು. ಅನುಸರಣೆ ಅಡಗಿತ್ತು, ಆಚಾರ ಬೆಳಗಿತ್ತು, ಪುರದರಮನೆ ಪರಿಪರಿ ಶೃಂಗರಿಸಿತ್ತು, ಎನ್ನ ಸುಚಿತ್ತವೆಂಬ ಹಸ್ತ ಸುಬುದ್ಧಿಯನೈದಲು, ಗುರುನಿರಂಜನ ಚನ್ನಬಸವಲಿಂಗದಾಣತಿಗೆ ಮಹೇಶ್ವರತ್ವ ಮುಂದುವರಿಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ, ಹೆಡೆಯೆತ್ತಿ ಆಡುತ್ತಿರಲು, ಆ ಸರ್ಪನ ಕಂಡು, ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು. ಆ ಗುರುಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಜ ಅರ್ಕನ ಕೊಂಬಿನಲ್ಲಿ ನಿಂದು, ಭಜನೆವಂತರ ಕಂಡು, ತ್ರಿಜಗವೆಲ್ಲ ತಾನೆಂದು ಗಜಬಜೆಯಲ್ಲಿ ಅಡಗಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ.
--------------
ಮೋಳಿಗೆ ಮಾರಯ್ಯ
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ! ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ? ಗಗನದ ವಾಯುವ ಬೆಂಬಳಿವಿಡಿದು, ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ! ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ, ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
--------------
ಅಲ್ಲಮಪ್ರಭುದೇವರು
ಇನ್ನು ಅಂತರಾತ್ಮ ಪರಮಾತ್ಮನ ನಿವೃತ್ತಿ ಅದೆಂತೆಂದಡೆ : ಅಂತರಾತ್ಮನೆಂಬ ಮಹಾಗುರು ಪರಮಾತ್ಮನೆಂಬ ಮಹಾಲಿಂಗದಲ್ಲಿ ಅಡಗಿತ್ತು. ಆ ಪರಮಾತ್ಮನೆಂಬ ಮಹಾಲಿಂಗವು ಸರ್ವಾತ್ಮನೆಂಬ ಮಹಾಜಂಗಮದಲ್ಲಿ ಅಡಗಿತ್ತು. ಆ ಸರ್ವಾತ್ಮನೆಂಬ ಮಹಾಜಂಗಮ ತಾನೆ ನಿತ್ಯ ನಿರಂಜನ ನಿರಾಮಯ ನಿರಾಮಯಾತೀತನಾಗಿದ್ದನು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತನ್ನ ತಾನರಿತೆನೆಂಬಲ್ಲಿ ತಾನಾರು ? ಅರಿತುದೇನಯ್ಯಾ ? ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ ಆ ಮರೆದ ಅರಿವಿಂಗೆ ಕುರುಹುಂಟೆ ? ಇಂತೀ ಉಭಯದಲ್ಲಿ ತಿಳಿದು ಮತ್ತೆ ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ ? ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ ? ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯಭಿನ್ನವಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->